ವಿದ್ಯುತ್ ಕಂಬದ ಸಪೋರ್ಟಿಂಗ್ ರಾಡ್​​ ಕದಿಯುವ ಕಳ್ಳರು…

ವಿಜಯ ದರ್ಪಣದ್ ನ್ಯೂಸ್..

ವಿದ್ಯುತ್ ಕಂಬದ ಸಪೋರ್ಟಿಂಗ್ ರಾಡ್​​ ಕದಿಯುವ ಕಳ್ಳರು…

ಪ್ರಾಣ ಭಯದಲ್ಲಿ ಸಂಚರಿಸುವ ಪ್ರಯಾಣಿಕರು!

ಮಂಡ್ಯ, ಮೇ 3: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಆರಂಭದಲ್ಲಿ ಖ್ಯಾತಿ ಪಡೆದಿದ್ದ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ ಇದೀಗ ಮತ್ತೆ ಸುದ್ದಿಯಾಗತೊಡಗಿದೆ. ಈ ಹೆದ್ದಾರಿಯಲ್ಲಿ ವಾಹನ ಸವಾರರು ಭಯದಲ್ಲೇ ಸಂಚರಿಸುವಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಹೆದ್ದಾರಿ ಪಕ್ಕದಲ್ಲಿ ಸ್ಥಾಪಿಸಲಾಗಿರುವ ಹೈಟೆನ್ಷನ್ ವಿದ್ಯುತ್ ಕಂಬಗಳು ಸರ್ವೀಸ್​ ರಸ್ತೆ, ಹೆದ್ದಾರಿ ಮೇಲೆ ಉರಳುತ್ತಿರುವುದೇ ಇದಕ್ಕೆ ಕಾರಣ. ಕಳಪೆ ಕಾಮಗಾರಿ ಹಾಗೂ ಕಳ್ಳರ ಕೈಚಳಕದಿಂದ ವಿದ್ಯುತ್ ಕಂಬಗಳು ಸರ್ವಿಸ್ ರಸ್ತೆ ಹಾಗೂ ಹೆದ್ದಾರಿ ಮೇಲೆ ಉರಳಿ ಬೀಳುತ್ತಿವೆ.

ಇತ್ತೀಚಿಗೆ ಬೈಕ್ ಸವಾರರೊಬ್ಬರ ಮೇಲೆ ವಿದ್ಯುತ್ ಕಂಬ ಬಿದ್ದಿತ್ತು. ಅಲ್ಲದೆ ಜೋರು ಗಾಳಿ ಬೀಸಿದ್ದರಿಂದ ಹೆದ್ದಾರಿ ಮೇಲೆ ಕಂಬ ಬಿದ್ದು ಗಂಟೆಗಟ್ಟಲೇ ಟ್ರಾಫಿಕ್ ಉಂಟಾಗಿತ್ತು. ಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದರು. ಮತ್ತೆ ಜೋರು ಗಾಳಿ ಬಂದರೆ ಅದೇ ಪರಿಸ್ಥಿತಿ ಎದುರಾಗಲಿದೆ. ಪ್ರಾಣ ಹಾನಿ ಕೂಡ ಉಂಟಾಗುವ ಸಾಧ್ಯತೆ ಇದೆ.

*ವಿದ್ಯುತ್ ಕಂಬಗಳು ಬೀಳಲು ಕಾರಣವೇನು?*

ಎಕ್ಸ್​​ಪ್ರೆಸ್​ ವೇ ನಿರ್ಮಾಣದ ಸಮಯದಲ್ಲಿ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೂರಾರು ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಸ್ಥಾಪಿಸಿದೆ. ಆದರೆ ವಿದ್ಯುತ್ ಕಂಬದಲ್ಲಿ ಅಳವಡಿಸಿರುವ ಅಲ್ಯೂಮಿನಿಯಂ ಸಪೋರ್ಟಿಂಗ್ ರಾಡ್​​ಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ನೂರಾರು ಕಂಬಗಳಲ್ಲಿ ಕಳೆದ 9 ತಿಂಗಳಿಂದ ಸಪೋರ್ಟಿಂಗ್ ರಾಡ್​​​ಗಳು ಇಲ್ಲ! ಹೀಗಾಗಿ ಎತ್ತರದ ವಿದ್ಯುತ್ ಕಂಬಗಳು ಗಾಳಿಗೆ ಬಾಗಿವೆ.

ವಿದ್ಯುತ್ ಕಂಬದ ಅಲ್ಯೂಮಿನಿಯಂ ಸಪೋರ್ಟಿಂಗ್ ರಾಡ್​​ಗಳನ್ನು ಕಳ್ಳರು ಕದ್ದೊಯ್ದಿರುವುದು

ಕಳಪೆ ಕಾಮಗಾರಿಯ ಕಾರಣ ಹಾಗೂ ಜೋರು ಗಾಳಿ ಬಂದಾಗ ಕಂಬಗಳು ರಸ್ತೆಗೆ ಬೀಳುತ್ತಿವೆ. ಹೀಗಾಗಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಹುತಗಳು ಸಂಭವಿಸುತ್ತಿವೆ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.
ಈ ಹೆದ್ದಾರಿಯಲ್ಲಿ ಸಾಗುವಾಗ ಕೊಡಗಿನ ವಾಹನ ಚಾಲಕರು ಕೂಡ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ವೀಸ್ ರಸ್ತೆಯಲ್ಲಿ ಅನಾಹುತ ಸಂಭವಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮತ್ತೊಂದು ದುರಂತ ಸಂಭವಿಸುವ ಮೊದಲು ಉಳಿದ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕಿದೆ.