ಮೇ 1….. ನಾಳೆ …..” ಜಗತ್ತಿನ ಎಲ್ಲಾ ಶೋಷಿತರು – ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು “……

ವಿಜಯ ದರ್ಪಣ ನ್ಯೂಸ್

ಮೇ 1….. ನಾಳೆ…..

” ಜಗತ್ತಿನ ಎಲ್ಲಾ ಶೋಷಿತರು – ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು “……

ಚೆಗುವಾರ…………

ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ….

ಎಲ್ಲರಿಗೂ ಶುಭಾಶಯಗಳು……..

ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ………

ಚುಮು ಚುಮು ಚಳಿಯಲ್ಲಿ ನಿಮಗೆ ನಿಮ್ಮ ಪ್ರೇಯಸಿ/ ಪ್ರಿಯಕರ ನೆನಪಾದರೆ ಸಂತೋಷಿಸುವೆವು.
ಹಾಗೆಯೇ,
ಹಿಮಾಲಯದ ತಪ್ಪಲಿನಲ್ಲಿ ಆ ನಡುಗುವ ಚಳಿಯಲ್ಲಿ ನಮಗಾಗಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರೂ ನೆನಪಾಗಲಿ ಎಂದು ಆಶಿಸುವೆ …….

ಅತ್ಯಂತ ತೀವ್ರ ಉಷ್ಣ ತಾಪಮಾನದಲ್ಲಿ ಅನಿರೀಕ್ಷಿತವಾಗಿ ತಣ್ಣನೆಯ ನೀರ ಮಜ್ಜಿಗೆ ಮತ್ತು ಎಳನೀರು ದೊರೆತು ಅದು ಗಂಟಲಲ್ಲಿ ಇಳಿಯುವಾಗ ಆಸ್ವಾದಿಸುವ ನಿಮ್ಮ ಮನಸ್ಥಿತಿಗೆ ಸಂತೋಷಪಡುವೆವು, ಆದರೆ ಅದೇ ಸಮಯದಲ್ಲಿ ಅದು ತಯಾರಾಗಲು ಬೆವರು ಸುರಿಸಿದ ರೈತರು ನೆನಪಾಗಲಿ ಎಂದು ಆಶಿಸುವೆ……

ಮೋಡ ಬಿರಿದಂತೆ ಸುರಿಯುವ ಮಳೆ ಮತ್ತು ಗಡಗಡ ನಡುಗುವ ಚಳಿಯಲ್ಲಿ ಬೆಚ್ಚಗಿನ ಹೊದಿಕೆ – ಆಶ್ರಯ ನಿಮಗೆ ಸಿಕ್ಕರೆ ಸಂತೋಷಿಸುವೆವು,
ಹಾಗೆಯೇ,
ಬೀದಿ ಬದಿಯಲ್ಲಿ ಹೊದಿಕೆ ಇಲ್ಲದೆ ಚಳಿಗೆ ವಿಲವಿಲ ಒದ್ದಾಡುತ್ತಾ ಮಲಗಿರುವ ಅನಾಥ ನಿರ್ಗತಿಕ ಜನರೂ ನೆನಪಾಗಲಿ ಎಂದು ಆಶಿಸುವೆ ………

ಮಾಗಿಯ ಚಳಿಗೆ ನಿಮಗೆ ಬಿಸಿಬಿಸಿ ಕಾಫಿ/ಟೀ ಸಿಕ್ಕರೆ ಸಂತೋಷಿಸುವೆವು.
ಹಾಗೆಯೇ,
ಸುರಿಯುವ ಮಂಜಿನಲ್ಲಿ ಕಾಫಿ/ಟೀ ತೋಟಗಳಲ್ಲಿ ಕೆಲಸ ಮಾಡುವ ಆ ಕೂಲಿ ಕಾರ್ಮಿಕರ ಸ್ಥಿತಿಯೂ ನಿಮಗೆ ನೆನಪಾಗಲಿ ಎಂದು ಆಶಿಸುವೆ …………

ಹಿಮದ ರಾಶಿಯ ನಡುವೆ ಗರಿಗರಿ ಸುಟ್ಟ ಕೋಳಿ ಮಾಂಸದ ಜೊತೆಗೆ ರಮ್/ವಿಸ್ಕಿ ನಿಮಗೆ ಸಿಕ್ಜರೆ ಸಂತೋಷಿಸುವೆವು.
ಹಾಗೆಯೇ,
ಬೆಳಗಿನ ಅದುರುವ ಚಳಿಯಲ್ಲಿ ಹೊಲ ಉಳುವ ರೈತನೂ ನಿಮಗೆ ನೆನಪಾಗಲಿ ಎಂದು ಆಶಿಸುವೆ…………..

ತಲೆಯಿಂದ ಪಾದದವರೆಗೂ ಬೆಚ್ಚನೆ ಹೊದ್ದು ಮನೆಯ ಬಾಲ್ಕನಿಯಲ್ಲಿ ಕಾಲಮೇಲೆ ಕಾಲುಹಾಕಿ ಕುಳಿತು ಬಿಸಿಬಿಸಿ ಬೆಣ್ಣೆ ದೋಸೆ / ತುಪ್ಪದ ಉಪ್ಪಿಟ್ಟು ತಿನ್ನುತ್ತಾ ಪತ್ರಿಕೆ ಓದುವ ಸುಖ ನಿಮ್ಮದಾದರೆ ಸಂತೋಷಿಸುವೆವು.
ಹಾಗೆಯೇ,
ಹತ್ತರ ಪುಟ್ಟ ಹುಡುಗನೊಬ್ಬ ಆ ಭಯಂಕರ ಚಳಿಯಲ್ಲಿ ಚಡ್ಡಿಹಾಕಿಕೊಂಡು ಬೆಳಗ್ಗೆ 4ಕ್ಕೆ ಎದ್ದು ಮನೆಮನೆಗೆ ಪತ್ರಿಕೆ ಹಾಕುವ ಕಷ್ಟ ನೆನಪಾಗಲಿ ಎಂದು ಆಶಿಸುವೆ……………..

ನಿಮ್ಮ ಸುಖಕ್ಕೆ ಹೊಟ್ಟೆ ಉರಿ ಪಡಲಾರೆವು.
ಆದರೆ ಆ ಶ್ರಮಜೀವಿಗಳ ಸಂಕಷ್ಷಗಳಿಗೆ ಮರುಕವಿದೆ/ ಸಹಾನುಭೂತಿಯಿದೆ.
ಅವರೂ ಶ್ರಮಪಡಲಿ. ಆದರೆ ಅವರ ನೋವು ಕಷ್ಟದ ಪ್ರಮಾಣ ಕಡಿಮೆಯಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರೂ ನೆಮ್ಮದಿ ಬದುಕು ಕಾಣುವಂತಾಗಲಿ ಎಂದು ಆಶಿಸುತ್ತಾ ……………….
**************************

ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು……………

ಇಂಗ್ಲೇಂಡಿನ ಮ್ಯಾಂಚೆಸ್ಟರ್ ನ ಬಟ್ಟೆ ಗಿರಣಿಗಳು,

ದಕ್ಷಿಣ ಆಫ್ರಿಕಾದ ಚಿನ್ನದ ಗಣಿಗಳು,

ಚೀನಾದ ಕಬ್ಬಿಣದ ಅದಿರ ಗಣಿಗಳು,

ಅರೇಬಿಯನ್ ಮರುಭೂಮಿಯ ಕೂಲಿಗಳು,

ಬ್ರೆಜಿಲ್ ಕಾಫಿ ತೋಟದ ಕಾರ್ಮಿಕರು,

ಸುಡಾನ್, ಇಥಿಯೋಪಿಯಾದ ಗುಲಾಮರು,

ಇಟಲಿಯ ಕ್ವಾರಿಯ ಕಲ್ಲುಗಣಿ ಶ್ರಮಿಕರು,

ಅಮೆರಿಕದ ಹಾಲಿವುಡ್‌ನ ಸಿನೆಮಾ ಕೆಲಸಗಾರರು,

ಹಾಂಕಾಂಗ್ ನ ಹೋಟೆಲ್ ಕಾರ್ಮಿಕರು,

ಆಸ್ಟ್ರೇಲಿಯಾ ದ್ವೀಪಗಳ ಮೀನುಗಾರರು,

ಬಾಂಗ್ಲಾದೇಶದ ಬಿರು ಬಿಸಿಲಿನಲ್ಲಿ ನಡೆದಾಡುವ ಟಾಂಗಾವಾಲಾಗಳು,

ಟಿಬೆಟ್ಟಿನ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರು,

ಸಿರಿಯಾದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರು,

ಉತ್ತರ ಕೊರಿಯಾದ ಸರ್ವಾಧಿಕಾರಕ್ಕೆ ನಲುಗಿ ಉಸಿರಾಡಲು ಕಷ್ಟ ಪಡುತ್ತಿರುವ ಸ್ವತಂತ್ರ ಜೀವಿಗಳು,

ಭಾರತದ ಮ್ಯಾನ್ ಹೋಲ್ ಗಳಲ್ಲಿ ಕೆಲಸ ಮಾಡುವ ನನ್ನದೇ ಅಣ್ಣ ತಮ್ಮಂದಿರು,

ಮುಂಬಯಿನ ರೈಲ್ವೆ ಕೂಲಿಗಳು,

ಸೂರತ್ ನ ಬಟ್ಟೆ ಗಿರಣಿಗಳ ಕೆಲಸಗಾರರು,

ವಿಶಾಖಪಟ್ಟಣದ ಮೀನುಗಾರರು,

ಕೊಯಮತ್ತೂರಿನ ಪಟಾಕಿ ತಯಾರಕರು,

ಮಂಗಳೂರಿನ ಬೀಡಿ ಕಟ್ಟುವವರು,

ಕೇರಳದ ಚಹಾ ತೋಟದ ದಿನಗೂಲಿಗಳು,

ದೆಹಲಿಯ ಕಟ್ಟಡ ಕಾರ್ಮಿಕರು,

ಜೈಪುರದ ಕಲ್ಲು ಬಂಡೆ ಹೊಡೆಯುವವರು,

ಇಳಕಲ್ ನ ಸೀರೆ ನೇಯುವವರು,

ಹೋಸಕೋಟೆಯ ಇಟ್ಟಿಗೆ ಕಾರ್ಮಿಕರು,

ಲಕ್ನೋ ಬಸ್ ನಿಲ್ದಾಣದ ಕಸ ಗುಡಿಸುವವರು,

ಅಸ್ಸಾಂನ ನಿರಾಶ್ರಿತರು,

ಮಣಿಪುರದ ಕ್ಷೌರಿಕರು,

ಭುವನೇಶ್ವರದ ಬಟ್ಟೆ ತೊಳೆಯುವವರು,

ಹೀಗೆ ಸಾಕಷ್ಟು ಶ್ರಮ ಜೀವಿಗಳು ನೆನಪಾಗುತ್ತಾರೆ…..

ನೆನಪಿರಲಿ,
ಜಗತ್ತಿನ ಪ್ರತಿ ಜೀವಿಯೂ ಕಾರ್ಮಿಕನೇ….‌‌…….

ಶ್ರೀಮಂತ ರಾಷ್ಟ್ರ ಕತಾರ್,
ಬಲಿಷ್ಠ ರಾಷ್ಟ್ರ ಅಮೆರಿಕ,
ಬಡ ರಾಷ್ಟ್ರ ಇಥಿಯೋಪಿಯ,
ಆಧ್ಯಾತ್ಮಿಕ ರಾಷ್ಟ್ರ ಭಾರತ,
ಧರ್ಮನಿಷ್ಠ ರಾಷ್ಟ್ರ ಇರಾನ್,
ಹಿಂಸಾತ್ಮಕ ರಾಷ್ಟ್ರ ಸಿರಿಯಾ, ಶಾಂತಿಯುತ ರಾಷ್ಟ್ರ ನಾರ್ವೆ,
ಸುಂದರ ರಾಷ್ಟ್ರ ಸ್ವಿಟ್ಜರ್ಲ್ಯಾಂಡ್,
ಯಾವುದೇ ಆಗಿರಲಿ,
ಮಗುವಿನಿಂದ ವೃದ್ಧರವರೆಗೆ,
ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಲೇಬೇಕು…….

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ತನಗೆ ಎಲ್ಲವೂ ದೊರೆತಾಗಲೂ ಸುಮ್ಮನೆ ಇರಲು ಸಾಧ್ಯವಿಲ್ಲ. ಏನಾದರೂ ಮಾಡಲೇ ಬೇಕು. ಇಲ್ಲದಿದ್ದರೆ ಆತ ನಿರ್ಜೀವಿಯಾಗುತ್ತಾನೆ. ಹಾಗೆಯೇ ಭಿಕ್ಷುಕ ಕೂಡ ತನ್ನ ಮಿತಿಯಲ್ಲಿ ಕೆಲಸ ಮಾಡಲೇಬೇಕು….

ಆದರೆ,
ಕೆಲಸದ ರೂಪಗಳು, ಮಾರ್ಗಗಳು, ಗುರಿಗಳು, ಏರಿಳಿತಗಳು, ಅವಶ್ಯಕತೆಗಳು, ಅನಿವಾರ್ಯಗಳು ಬೇರೆ ಬೇರೆಯಾಗಿರುತ್ತದೆ ಅಷ್ಟೆ.

ಸಾಮಾನ್ಯವಾಗಿ ಮತ್ತು ಸರಳವಾಗಿ ಹೆಚ್ಚು ಶ್ರಮದಾಯಕ ಕೆಲಸ ಮಾಡುವ, ಕಡಿಮೆ ಹಣ ಗಳಿಸುವ, ಹೆಚ್ಚಿನ ಸುರಕ್ಷತೆ ಇಲ್ಲದ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳದ, ಮಾಲೀಕರ ಆಶಯಕ್ಕೆ ಅನುಗುಣವಾಗಿ ದುಡಿಯುವ,
ಬದುಕಿನ ಅನಿವಾರ್ಯತೆಗೆ ಶೋಷಣೆಗೆ ಒಳಗಾಗುವವರನ್ನು ಕಾರ್ಮಿಕರು ಎಂದು ಕರೆಯಲಾಗುತ್ತದೆ.

ಒಂದಷ್ಟು ಹಿಂದೆ ಕೆಲವು ಮನುಷ್ಯರನ್ನು ಗುಲಾಮರೆಂದು ಪರಿಗಣಿಸಿ ಪ್ರಾಣಿಗಳಂತೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಪಾರವೂ ಮಾಡಲಾಗುತ್ತಿತ್ತು. ಅವರ ಯಾವ ಮೂಲಭೂತ ಅಂಶಗಳನ್ನು ಪರಿಗಣಿಸಲಾಗುತ್ತಿರಲಿಲ್ಲ.
ಆದರೆ, ಈಗಿನ ಆಧುನಿಕ ಜಗತ್ತಿನಲ್ಲಿ ಇದು ಇಲ್ಲವಾಗಿದೆ.

ಆದರೂ,
ಕಾರ್ಮಿಕ ಶೋಷಣೆ ಬೇರೆ ಬೇರೆ ರೂಪದಲ್ಲಿ ಈಗಲೂ ಜೀವಂತವಿದೆ.‌ ಈ ಬಗ್ಗೆ ಹಿಂದಿನಿಂದಲೂ ಒಂದಷ್ಟು ಪ್ರತಿಭಟನೆಗಳು ಆಗುತ್ತಿದ್ದರೂ ಸಮಗ್ರವಾಗಿ ಜಗತ್ತಿನ ಗಮನಸೆಳೆದ ಕೀರ್ತಿ ಕಾರ್ಲ್ ಮಾರ್ಕ್ಸ್ ಅವರಿಗೆ ಸಲ್ಲುತ್ತದೆ.

ಕಾರ್ಮಿಕರ ಶೋಷಣೆ ನಿಲ್ಲಬೇಕು ನಿಜ, ಆದರೆ ಅದಕ್ಕಾಗಿ ಶ್ರೀಮಂತ ಉದ್ಯಮಿಗಳನ್ನು ದ್ವೇಷಿಸಬಾರದು. ಸಂಘರ್ಷಕ್ಕಿಂತ ಸಮನ್ವಯತೆಗೆ ಹೆಚ್ಚಿನ ಮಹತ್ವ ಕೊಡಬೇಕು.

ಅದರಲ್ಲೂ ಬದಲಾದ ಈ ಆಧುನಿಕ ಕಾಲ ಘಟ್ಟದಲ್ಲಿ ಬಂಡವಾಳ ಶಾಹಿಗಳು ಕೂಡ ಮುಖ್ಯರಾಗುತ್ತಾರೆ. ಶೋಷಣೆ ತಪ್ಪಿಸುವ ಮಾರ್ಗಗಳು ಮುಖ್ಯವಾಗಬೇಕೆ ಹೊರತು ಸೇಡಿನ ಕ್ರಮಗಳು ಮೇಲುಗೈ ಪಡೆಯಬಾರದು. ಅದು ನಕ್ಸಲಿಸಂ ಎಂಬ ಹಿಂಸಾತ್ಮಕ ಸಿದ್ದಾಂತಕ್ಕೆ ದಾರಿ ಮಾಡಿಕೊಡುತ್ತದೆ. ಅದು ತುಂಬಾ ಅಪಾಯಕಾರಿ.

ಈಗಲೂ ನಿಕೃಷ್ಟವಾಗಿ ಬದುಕುತ್ತಿರುವ ಕಾರ್ಮಿಕರು, ಅತ್ಯಂತ ಕಠಿಣ ಕೆಲಸಗಳಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಕಾರ್ಮಿಕರು, ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಮಹಿಳಾ ಕಾರ್ಮಿಕರು,
ಹೋಟೆಲ್ ಮುಂತಾದ ಕಡೆ ಅಸಹನೀಯ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರು ಮುಂತಾದವರ ಜೀವನಮಟ್ಟ ಸುಧಾರಿಸದೆ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ.

ಈ ಕಾರ್ಮಿಕ ದಿನದ ಸಂದರ್ಭದಲ್ಲಿ ನಮ್ಮ ವ್ಯವಸ್ಥೆಯಲ್ಲಿ, ಕಾರ್ಮಿಕರು, ಬಂಡವಾಳ ಶಾಹಿಗಳು, ವ್ಯಾಪಾರೋಧ್ಯಮಿಗಳ ಮಧ್ಯೆ ಒಂದು ಸಮಾನತೆಯ ಮಾನವೀಯತೆಯ ಸಮನ್ವಯ ಸಾಧ್ಯವಾಗಲಿ ಮತ್ತು ಒಬ್ಬರಿಗೊಬ್ಬರು ಪ್ರೀತಿಸುವ ಗೌರವಿಸುವ ವ್ಯವಸ್ಥೆ ನಿರ್ಮಾಣವಾಗಲಿ ಎಂದು ಆಶಿಸುತ್ತಾ…….
**************************

ನಿನ್ನೆ, ದಿನಾಂಕ 29/04/2024 ರ ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದ ಕುರುಬರಹಳ್ಳಿಯಲ್ಲಿ ಯೋಗ ಮತ್ತು ಆಧ್ಯಾತ್ಮ ಆಶ್ರಮ ಮಕ್ಕಳ ಬೇಸಿಗೆ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳು, ಪಾಲಕರು, ಅವರ ತಂದೆ ತಾಯಿಗಳು, ಸಂಬಂಧಿಕರ ಸಮಾಗಮದಲ್ಲಿ, ಎಲ್ಲರಲ್ಲೂ ಸಂಸ್ಕಾರ, ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದೆನು. ಅಲ್ಲಿನ ಆಶ್ರಮದ ಯೋಗ ಗುರುಗಳಾದ ರಾಮು ಗುರೂಜಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು…..
**************************

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್.ಕೆ.
9844013068…….