ಕ್ಷಮಿಸು ನೇಹಾ, ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ…….
ವಿಜಯ ದರ್ಪಣ ನ್ಯೂಸ್
ಕ್ಷಮಿಸು ನೇಹಾ,
ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ…….
1950 ರ ನಂತರ ಭಾರತದ ಜೈಲುಗಳಲ್ಲಿರುವ ಕೊಲೆ ಮಾಡಿದ ಕೈದಿಗಳು ಮತ್ತು ಆರೋಪಿಗಳ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಬಹುಶಃ ಈ ರೀತಿ ಅಂಕಿ ಅಂಶಗಳು ಸರಾಸರಿ ಲೆಕ್ಕದಲ್ಲಿ ಸಿಗಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ……
ಸ್ವಾತಂತ್ರ್ಯದ ಪ್ರಾರಂಭಿಕ ಹಂತದಲ್ಲಿ ಭಾರತದ ಜೈಲುಗಳಲ್ಲಿ ಹಣಕಾಸು ಮತ್ತಿತರ ವಸ್ತುಗಳ ಕಾರಣಕ್ಕಾಗಿ ದರೋಡೆ, ಕಳ್ಳತನದ ಸಂದರ್ಭದಲ್ಲಿ ಮಾಡುವ ಕೊಲೆಗಳಿಗಾಗಿಯೇ ಹೆಚ್ಚು ಜನ ಬಂಧಿಗಳಾಗುತ್ತಿದ್ದರು. ತದನಂತರದಲ್ಲಿ, ರಾಜಕೀಯ ಕಾರಣಗಳಿಗಾಗಿ, ಚುನಾವಣಾ ಸಂದರ್ಭದಲ್ಲಿ ಇತರರನ್ನು ಅಂದರೆ ವಿರೋಧಿಗಳನ್ನು ಕೊಲೆ ಮಾಡಿ ಜೈಲು ಸೇರುತ್ತಿರುವವರೇ ಹೆಚ್ಚಾಗಿ ಇರುತ್ತಿದ್ದರು. ಆನಂತರದಲ್ಲಿ ಜಾತಿಯ ಅಸಮಾನತೆಯಿಂದ ಉಂಟಾಗುತ್ತಿದ್ದ ಮೇಲು ಕೀಳಿನ ದ್ವೇಷದಿಂದ ಕೊಲೆಗಳಾಗಿ ಜೈಲು ಸೇರುತ್ತಿದ್ದರು. ಮುಂದೆ ಧರ್ಮದ ಆಧಾರದ ಮೇಲೆ ಅನ್ಯ ಧರ್ಮೀಯರನ್ನು ಕೊಲೆ ಮಾಡಿ ಜೈಲು ಸೇರುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಹಾಗೆಯೇ ರೌಡಿಗಳು, ವಿವಿಧ ಮಾಫಿಯಾದವರು, ಸುಪಾರಿ ಕಿಲ್ಲರ್ ಗಳು, ಕೊಲೆಗಳನ್ನು ಮಾಡಿ ಜೈಲು ಸೇರುತ್ತಿದ್ದರು. ಕೆಲವು ಕಾಲ ವರದಕ್ಷಿಣೆ ಕೊಲೆಗಳು ಹೆಚ್ಚಾಗಿದ್ದವು. ಹೆಣ್ಣುಗಳ ಅತ್ಯಾಚಾರ ಕೊಲೆಗಡುಕರು ಈಗಲೂ ಹೆಚ್ಚಾಗಿದ್ದಾರೆ. ಇತ್ತೀಚೆಗೆ ಭಯೋತ್ಪಾದಕ ಕೃತ್ಯಗಳಿಗಾಗಿ ಹತ್ಯೆ ಮಾಡಿ ಜೈಲು ಸೇರುತ್ತಾರೆ………
ಈ ಎಲ್ಲದರ ನಡುವೆ ಪ್ರೀತಿಗಾಗಿ, ಪ್ರಣಯಕ್ಕಾಗಿ, ಅನೈತಿಕ ಸಂಬಂಧಗಳಿಗಾಗಿ ಕೊಲೆಗಳು ಮಾತ್ರ ಏಕಪ್ರಕಾರವಾಗಿ ನಿರಂತರವಾಗಿ ನಡೆಯುತ್ತಲೇ ಇದೆ……
ಇವುಗಳಲ್ಲಿ ಅತ್ಯಂತ ಬರ್ಬರ ಕೊಲೆಗಳು ನಡೆಯುವುದು ಧರ್ಮ ಮತ್ತು ಪ್ರೀತಿ ವೈಫಲ್ಯದ ಕಾರಣಗಳಿಗಾಗಿ, ಜೊತೆಗೆ ಅನೈತಿಕ ಸಂಬಂಧಗಳಿಗಾಗಿ. ಕಾರಣ ಧರ್ಮ ಮತ್ತು ಪ್ರೀತಿ ಎಷ್ಟು ಶ್ರೇಷ್ಠ – ಪವಿತ್ರ ಎಂದು ಭಾವಿಸುತ್ತಾರೋ ಅಷ್ಟೇ ತೀವ್ರವಾದ, ಆಳವಾದ ದ್ವೇಷವು ಸಹ ಅದರಲ್ಲಿ ಅಡಗಿರುತ್ತದೆ…….
ಇದು ಕೇವಲ ಅಪರಾಧ ಅಥವಾ ವ್ಯಕ್ತಿಗಳ ಮಾನಸಿಕ ಸಮಸ್ಯೆಯಲ್ಲ. ಇದು ಸಾಮಾಜಿಕ ವ್ಯವಸ್ಥೆಯ ರಚನೆಯಲ್ಲಿ ಆಗಿರಬಹುದಾದ ಕೊರತೆಯ ಪ್ರತಿಬಿಂಬ ಹಾಗೂ ಇಂದಿನ ಸಮಾಜದ ಬದಲಾವಣೆಯ ವಿಧಾನಗಳು ಕಾರಣ. ಇದನ್ನು ಬಿಡಿಬಿಡಿಯಾಗಿ ಚರ್ಚಿಸಲು ಬರುವುದಿಲ್ಲ……
ಇದು ಕೇವಲ ಕಾನೂನಿನ ಸಮಸ್ಯೆಯಲ್ಲ. ಕಠಿಣ ಕಾನೂನುಗಳು ಅಥವಾ ಪೊಲೀಸ್ ವ್ಯವಸ್ಥೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಇಡೀ ಸಮಾಜಕ್ಕೆ ಧರ್ಮ ಮತ್ತು ಪ್ರೀತಿಯ ವಿಷಯದಲ್ಲಿ ಅತಿಯಾದ ಭಾವುಕತೆಗೆ ಒಳಗಾಗದೆ ವಾಸ್ತವ ನೆಲೆಯಲ್ಲಿ ವಿಷಯವನ್ನು ಗ್ರಹಿಸುವ ಪ್ರಬುದ್ಧತೆ ಬರಬೇಕಾಗುತ್ತದೆ. ಏಕೆಂದರೆ ಧರ್ಮ ಮತ್ತು ಪ್ರೀತಿಯ ವಿಷಯದಲ್ಲಿ ಜೀವವೊಂದು ಮುಖ್ಯವಾಗುವುದೇ ಇಲ್ಲ. ತನ್ನ ಜೀವ ತನಗೆ ಮುಖ್ಯವಾಗದಾದಾಗ ಯಾವ ಕಠಿಣ ಕಾನೂನುಗಳು ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಈ ಎರಡರ ವಿಷಯದಲ್ಲಿ ಮನುಷ್ಯ ತನ್ನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ……
ತನ್ನ ಜೀವ ಮತ್ತು ಜೀವನಕ್ಕಿಂತ ಧರ್ಮ ಮತ್ತು ತನ್ನ ಪ್ರೀತಿಸುವವರೇ ಮುಖ್ಯವಾಗಿ ಅದಿಲ್ಲದೇ ತನ್ನ ಬದುಕೇ ನಶ್ವರ ಎನ್ನುವ ಮನಸ್ಥಿತಿ ಇಂತಹ ಕ್ರೌರ್ಯಕ್ಕೆ ಕಾರಣವಾಗುತ್ತದೆ……
ಸುಮಾರು 18/ 20 ರ ಆಸುಪಾಸಿನ ಒಂದು ಹುಡುಗಿಯನ್ನು, ಆತನ ಸಹಪಾಠಿಯೊ, ಪ್ರಿಯಕರನೋ, ಪರಿಚಿತನೋ, ಸಾರ್ವಜನಿಕವಾಗಿಯೇ ಚುಚ್ಚಿ ಚುಚ್ಚಿ ಕೊಲ್ಲುವ ಮನಸ್ಥಿತಿಗೆ ಕೇವಲ ಹಿಂಸಾ ಮನೋಭಾವ ಮಾತ್ರ ಕಾರಣವಲ್ಲ. ಪ್ರೀತಿಯ ವಿಷವಾಗುವ ಪ್ರಕ್ರಿಯೆ ತಲೆಗೇರಿ ಮನಸ್ಸನ್ನೇ ನಿಯಂತ್ರಣ ಪಡೆಯುವಿಕೆ, ಅದರಿಂದಾಗಿ ಏರುವ ಅಮಲು ಎಷ್ಟು ಬಾರಿ ಚುಚ್ಚಿದರೂ ತೃಪ್ತಿ ಸಿಗುವುದಿಲ್ಲ……
ಹೊರಗಿನಿಂದ ನಿಂತು ನೋಡುವ ನಮಗೆ ಇದು ಬೇರೆ ಬೇರೆ ರೀತಿಯಲ್ಲಿ ಕಾಣುತ್ತದೆ. ಆದರೆ ಒಳಗಿನಿಂದ ಈ ಸಮಾಜ ಪೋಷಿಸಿಕೊಂಡು ಬರುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳು ಇದಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ. ಎಲ್ಲಾ ಧರ್ಮ ವಿರೋಧಿ ಅಥವಾ ಪ್ರೀತಿಯ ವೈಫಲ್ಯಗಳು ಇಷ್ಟೊಂದು ಕ್ರೌರ್ಯ ಉಂಟು ಮಾಡುವುದಿಲ್ಲ ಎಂಬುದೇನೋ ನಿಜ. ಆದರೆ ಅದು ಬೇರೆ ಬೇರೆ ರೂಪದಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಅದನ್ನು ನಿಗ್ರಹಿಸಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ತವ್ಯ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ……
ಧರ್ಮದ ಬಗ್ಗೆ, ಪ್ರೀತಿಯ ಬಗ್ಗೆ ಬದಲಾದ ಆಧುನಿಕ ಸಮಾಜದಲ್ಲಿ ವಾಸ್ತವಿಕ ಪ್ರಜ್ಞೆ ಬೆಳಸಿಕೊಳ್ಳಬೇಕು. ಹೆಣ್ಣು – ಗಂಡು ಅಥವಾ ತನ್ನ ಮನೆಯ ಹುಡುಗ – ಹುಡುಗಿ ತಮ್ಮ ಆಸ್ತಿ, ತಾವು ಹೇಳಿದಂತೆ ಕೇಳಬೇಕು ಮತ್ತು ಅವರ ಭವಿಷ್ಯಗಳ ಬಗ್ಗೆ ಅತಿಯಾಗಿ ಚಿಂತಾಕ್ರಾಂತರಾಗುವುದು, ಸಮಾಜದ ಮೇಲೆ, ಯುವಕ ಯುವತಿಯರ ಮೇಲೆ ತೀರ ಒತ್ತಡ ಇರುತ್ತದೆ. ಯುವ ಮನಸ್ಸುಗಳ ಪ್ರೀತಿಯನ್ನು ಅತಿಯಾಗಿ ದ್ವೇಷಿಸುವುದನ್ನು ಬಿಡಬೇಕು……
ಈ ಘಟನೆಗಳನ್ನು ಸಹಜವಾಗಿಯೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ವಾಸ್ತವದ ಅರಿವು ನಮಗಾಗುವುದಿಲ್ಲ. ರಾಜಕೀಯ ನಾಯಕರು, ಮಾಧ್ಯಮಗಳವರು ಮತ್ತು ಪೋಷಕರು ಇದನ್ನು ಭ್ರಮಾತ್ಮಕವಾಗಿ ವಿಮರ್ಶಿಸಿದರೆ ಈ ರೀತಿಯ ಘಟನೆಗಳು ಎಂದಿಗೂ ಕೊನೆಯಾಗುವುದಿಲ್ಲ. ಧೈರ್ಯವಾಗಿ, ನೇರವಾಗಿ ಸಮಾಜಶಾಸ್ತ್ರೀಯ ಅಧ್ಯಯನದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಆದರೆ, ಆ ವಿವೇಚನೆ, ಆ ತಾಳ್ಮೆ, ಆ ಪ್ರಬುದ್ಧತೆ ಆಡಳಿತಗಾರರಿಗೆ ಇದೆಯೇ……..
ನೇಹ ಎಂಬ ಹೆಣ್ಣು ಮಗುವಿನ ಹತ್ಯೆಯ ಘಟನೆಯ ಹಿನ್ನೆಲೆಯಲ್ಲಿ ಮೂಡಿದ ಭಾವವಿದು. ಒಂದು ಕ್ಷಣ, ಹರೆಯದ ಹೆಣ್ಣಿಗೆ 9 ಬಾರಿ ಚಾಕು ಆಕೆಯ ದೇಹದಲ್ಲಿ ಪ್ರವೇಶಿಸಿದರೆ ಆಕೆ ಅನುಭವಿಸಬಹುದಾದ ದೈಹಿಕ ಮತ್ತು ಮಾನಸಿಕ ನೋವು ಹೇಗಿರಬಹುದೆಂದು ಒಮ್ಮೆ ಊಹಿಸಿಕೊಳ್ಳಿ. ಖಂಡಿತ ಮುಂದೆಂದೂ ನೀವು ಆ ರೀತಿಯ ಘಟನೆಗಳಲ್ಲಿ ಭಾಗವಹಿಸುವುದಿಲ್ಲ……
ಮನುಷ್ಯನಿಗೆ ಧೈರ್ಯ ಎಷ್ಟು ಮುಖ್ಯವೋ, ಭಯವೂ ಅಷ್ಟೇ ಮುಖ್ಯ. ಭಯವಿಲ್ಲದಿದ್ದರೆ ಈ ರೀತಿಯ ಕೃತ್ಯಗಳು ನಿರಂತರವಾಗಿರುತ್ತದೆ. ಧೈರ್ಯ ಮತ್ತು ಭಯ ಸಮಾನಾಂತರವಾಗಿ ಸಾಗುತ್ತಿರಬೇಕು. ಕೆಲವು ಪಾಸಿಟಿವ್ ವಿಷಯಗಳಿಗೆ ಧೈರ್ಯ ಬೇಕಾದರೆ, ನೆಗೆಟಿವ್ ವಿಷಯಗಳಿಗೆ ಭಯವು ಬೇಕಾಗುತ್ತದೆ. ಧೈರ್ಯ ಮತ್ತು ಭಯದ ನಡುವಿನ ವ್ಯತ್ಯಾಸ – ಅವಶ್ಯಕತೆ ನಮಗೆ ಅರಿವಾಗದಿದ್ದರೆ ಈ ಸಮಾಜದ ಹಿಂಸೆ, ಕಪಟತೆ ಹೀಗೆಯೇ ಮುಂದುವರೆಯುತ್ತದೆ……
ದಯವಿಟ್ಟು ಸಮಯ ಮಾಡಿಕೊಂಡು ಆಳವಾಗಿ ಯೋಚಿಸಿ. ಕೇವಲ ಭ್ರಮೆಗೆ ಒಳಗಾಗಿ ದ್ವೇಷ – ಅಸೂಯೆಗಳಿಂದ ಈ ಸಮಾಜದ ಹಿಂಸೆಯನ್ನು ಮತ್ತಷ್ಟು ಹೆಚ್ಚಿಸಬೇಡಿ…..
ನೇಹಾ ನಿನ್ನನ್ನು ಉಳಿಸಿಕೊಳ್ಳಲಾಗದಿದ್ದಕ್ಕೆ ದಯವಿಟ್ಟು ಕ್ಷಮಿಸು. ನಿನ್ನ ಹತ್ಯೆಯಲ್ಲಿ ನಮ್ಮದೂ ಪರೋಕ್ಷ ಪಾಲಿದೆ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….