ವಿಫಲ ಕೊಳವೆ ಬಾವಿ ಮುಚ್ಚದಿದ್ದಲ್ಲಿ ಮಾಲಿಕರ ವಿರುದ್ಧ ಕ್ರಿಮಿನಲ್ ಕೇಸ್: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್

ವಿಫಲ ಕೊಳವೆ ಬಾವಿ ಮುಚ್ಚದಿದ್ದಲ್ಲಿ ಮಾಲಿಕರ ವಿರುದ್ಧ ಕ್ರಿಮಿನಲ್ ಕೇಸ್: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 12 :ರಾಜ್ಯಾದ್ಯಂತ ನೀರಿಗಾಗಿ ಕೊಳವೆಬಾವಿ/ಬೋರ್‌ವೆಲ್‌ಗಳನ್ನು ಕೊರೆದು, ನೀರು ಸಿಗದಿದ್ದ ಸಂದರ್ಭದಲ್ಲಿ ಕೊಳವೆಬಾವಿ/ಬೋರ್‌ವೆಲ್‌ಗಳನ್ನು ಮುಚ್ಚದೇ/ನೆಲಸಮ ಮಾಡದೆ ಇರುವುದರಿಂದ, ಸಣ್ಣ ಮಕ್ಕಳು ಕೊಳವೆಬಾವಿ/ಬೋರ್‌ವೆಲ್‌ಗಳಲ್ಲಿ ಬಿದ್ದು, ಆಗಿಂದಾಗ್ಗೆ ಅವಘಡವಾಗುತ್ತಿರುವ ವಿಷಯವು ಗಮನದಲ್ಲಿರುತ್ತದೆ. ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಈಗಾಗಲೇ ಕೊರೆಯಿಸಿರುವ/ಕೊರೆಯಿಸುತ್ತಿರುವ ಕೊಳವೆಬಾವಿ/ ಬೋರ್‌ವೆಲ್‌ಗಳನ್ನು ನೀರು ಸಿಗದೇ ಇರುವ ಸಂದರ್ಭಗಳಲ್ಲಿ ಅಥವಾ ನೀರು ಬತ್ತಿಹೋಗಿ ಅಳವಡಿಸಿರುವ ಮೋಟರ್, ಪಂಪ್ ಮತ್ತು ಕೇಸಿಂಗ್‌ಗಳನ್ನು ತೆಗೆದಂತಹ ಸಂದರ್ಭಗಳಲ್ಲಿ ಕೂಡಲೇ ಮುಚ್ಚುವಂತೆ/ನೆಲಸಮ ಮಾಡಬೇಕು.

ಒಂದುವೇಳೆ ಕೊಳವೆಬಾವಿ/ಬೋರ್‌ವೆಲ್‌ ಗಳನ್ನು ಕೊರೆಯಿಸಿ, ನೀರು ಸಿಗದಂತಹ ಕೊಳವೆ ಬಾವಿಗಳನ್ನು ಮುಚ್ಚದೇ ಇದ್ದ ಪಕ್ಷದಲ್ಲಿ ಜಮೀನಿನ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬೇಸಿಗೆ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 12  : ಪ್ರಸ್ತುತ ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ತೀವ್ರತೆಗೆ ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಪಕ್ಷಿಗಳಿಗೆ ಕೂಡಾ ಕುಡಿಯುವ ನೀರಿನ ಅಭಾವದಿಂದ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿದ್ದಾಗ ಪಕ್ಷಿಗಳಿಗೆ ಹೆಚ್ಚಿನ ನೀರಿನ ಅಗತ್ಯವಿದ್ದು ಪಕ್ಷಿಗಳನ್ನು ಬಿಸಿಲಿನ ಶಾಖದ ಹೊಡೆತದಿಂದ ರಕ್ಷಿಸಲು ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಪಕ್ಷಿ ಸಂಕುಲದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿ ಕಟ್ಟಡಗಳ ಮೇಲೆ ನೆರಳಿನ ಆಶ್ರಯ ಇರುವಲ್ಲಿ ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವಂತಹ ಮಡಿಕೆ/ಪಾತ್ರೆ/ಟಬ್ ಗಳಲ್ಲಿ ಸಾಕಷ್ಟು ನೀರು ತುಂಬಿಸಿ ನೀರುಣಿಸುವ ಪರಿಸರ ಸ್ನೇಹಿ ಕಾರ್ಯವನ್ನು ರೂಪಿಸಿ. ಅಲ್ಲದೇ ಮಡಿಕೆ/ ಪಾತ್ರೆ/ ಟಬ್ ಗಳಲ್ಲಿ ನಿಯಮಿತವಾಗಿ ನೀರು ಬದಲಾಯಿಸಿಕೊಂಡು, ಸೊಳ್ಳೆಗಳು ನಿಲ್ಲದಂತೆ ಮುಂಜಾಗೃತಾ ಕ್ರಮವಹಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎನ್. ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.