ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ….
ವಿಜಯ ದರ್ಪಣ ನ್ಯೂಸ್
ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ….
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ರಚಿತವಾಗುವ ಶುಭಾಶಯಗಳು – ಸಂದೇಶಗಳು – ಹಿತನುಡಿಗಳು ಅತ್ಯಂತ ಅದ್ಬುತ – ಮನಮೋಹಕ – ರೋಮಾಂಚನಕಾರಿ – ಸ್ಪೂರ್ತಿದಾಯಕ……
ಮೊದಲಿಗೆ ಕೇವಲ ಕೆಲವೇ ಜನರ ಸ್ವತ್ತಾಗಿದ್ದ ಸಾಹಿತ್ಯ ಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್ ಗಳು ಬಂದ ನಂತರ ಸಾಮಾನ್ಯ ಜನರಿಗೂ ಎಟುಕತೊಡಗಿತು. ಅಲ್ಲಿಯವರೆಗೂ ಮನದಲ್ಲೇ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸಲು ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಅವಕಾಶ ಕಲ್ಪಿಸಿದವು.…….
ಕನ್ನಡ ತಾಯಿ ಭಾಷೆಯ ನನಗೆ, ಹಬ್ಬದ ಸಂದೇಶಗಳನ್ನು ಓದುತ್ತಿದ್ದರೆ ಭಾಷಾ ಭಂಡಾರ ವಿಶಾಲವಾಗುತ್ತಾ ಹೋಗುತ್ತಿದೆ. ಯೋಚನೆಗೆ ಹೊಸ ಹೊಸ ಅರ್ಥಗಳು ಹೊಳೆಯುತ್ತಿವೆ….
ಯುಗಾದಿ ಹಬ್ಬವೆಂದರೆ ಬೇಂದ್ರೆಯವರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕಾವ್ಯ ಮತ್ತು ಹಾಡು ಸದಾ ಮನದಲ್ಲಿ ಗುನುಗುತ್ತಿತ್ತು. ಈಗ ಅದರೊಂದಿಗೆ ಹಲವಾರು ಸಾಹಿತ್ಯ ಕೃತಿಗಳು ಆಕರ್ಷಿಸುತ್ತಿವೆ…..
ಹೊಲದಲ್ಲಿ ಬೆವರು ಸುರಿಸುತ್ತಾ ದುಡಿಯುವ ರೈತ, ಅಡುಗೆ ಮನೆಯಲ್ಲಿ ರುಚಿರುಚಿಯಾದ ಊಟ ತಯಾರಿಸುವ ಗೃಹಿಣಿ, ಸಾಪ್ಟ್ ವೇರ್ ಕಂಪನಿಯ ಕೆಲಸದ ಒತ್ತಡದಲ್ಲಿ ಕಳೆದು ಹೋಗುವ ಯುವಕ/ ಯುವತಿಯರು, ಆಟೋ/ಕಾರು/ವಾಹನ ಚಲಾಯಿಸುವ ಚಾಲಕರು, ಲಾಯರ್/ಪೋಲೀಸ್/ಡಾಕ್ಟರ್/ಶಿಕ್ಷಕರು/ವ್ಯಾಪಾರಿಗಳು ಮುಂತಾದ ವೃತ್ತಿನಿರತರು, ಕೂಲಿ ಕಾರ್ಮಿಕರು, ಯುವ ಪ್ರೇಮಿಗಳು/ವಿರಹಿಗಳು, ನಿವೃತ್ತರು ಹೀಗೆ ಸಮಾಜದ ಎಲ್ಲಾ ವರ್ಗದ ಜನರು ಕನಿಷ್ಠ ತಮ್ಮ ಮೊಬೈಲ್ ಗಳಲ್ಲಿ ಹಬ್ಬದ ಮನೋಲ್ಲಾಸ ನೀಡುವ ಸ್ಪೂರ್ತಿದಾಯಕ ಸಂದೇಶಗಳನ್ನು ಬರೆಯುತ್ತಾರೆ ಅಥವಾ ಓದುತ್ತಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತ ಎಂದು ಗುರುತಿಸಬಹುದು…….
ಈ ಯುಗಾದಿ ಹಬ್ಬ ಕೇವಲ ಸಾಹಿತ್ಯದ ಬೆಳವಣಿಗೆಗೆ ಮಾತ್ರವಲ್ಲದೆ, ನಶಿಸುತ್ತಿರುವ ಮಾನವೀಯ ಮೌಲ್ಯಗಳ/ಸಂಬಂಧಗಳ ಪುನರುಜ್ಜೀವನಕ್ಕೆ ವಸಂತ ಋತುವಿನಂತೆ ಚಿಗುರುವ ಚೈತ್ರಕಾಲವಾಗಲಿ ಎಂದು ಮನದುಂಬಿ ಆಶಿಸುತ್ತಾ…..
ಮುಂದಿನ ವರ್ಷದ ಹಬ್ಬದೊಳಗಾಗಿ ನಮ್ಮಲ್ಲಿ ಬದಲಾವಣೆಯ ಹೊಸಗಾಳಿ ಬೀಸಿ ನಮ್ಮ ಜೀವನಮಟ್ಟ ಉತ್ತಮವಾಗಲಿ ಎಂದು ನಿರೀಕ್ಷಿಸುತ್ತಾ…
**************************
ಹಾಗೆಯೇ….
ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ….
ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ.
ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ ನಿರಂತರವಾಗಿ ಮತ್ತು ಅದೇ ಗುಣಮಟ್ಟ ಬಹಳ ಕಾಲ ಉಳಿಸಿಕೊಳ್ಳಲಾಗದೆ ಕ್ರಮೇಣ ಯಾವುದೋ ಒಂದು ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಾಗಿ ನಮ್ಮ ನಿಜ ವ್ಯಕ್ತಿತ್ವ ಬಯಲಾಗುತ್ತದೆ…..
ಇದು ಎಲ್ಲಾ ಕ್ಷೇತ್ರಗಳಿಗು ಮತ್ತು ಎಲ್ಲಾ ಸಂಬಂಧಗಳಿಗೂ ಅನ್ವಯಿಸುತ್ತದೆ…..
ಕ್ರೀಡೆ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ರಾಜಕೀಯ ಸಂಘಟನೆ ಮತ್ಯಾವುದೇ ವಿಭಾಗವಾಗಿರಲಿ ನಮ್ಮ ವ್ಯಕ್ತಿತ್ವದಲ್ಲಿ ನಿಜ ಸಾಮರ್ಥ್ಯ ಇಲ್ಲದಿದ್ದಲ್ಲಿ ನಾವು ಕ್ರಮೇಣ ಕುಸಿಯತೊಡಗುತ್ತೇವೆ. ತಾತ್ಕಾಲಿಕ ಯಶಸ್ಸು ಮರೆಯಾಗುತ್ತದೆ. ಆಗ ನಾವು ಭ್ರಮನಿರಸನ ಹೊಂದಿ ಅಸಹಿಷ್ಣತೆ ಅಥವಾ ಖಿನ್ನತೆಗೆ ಒಳಗಾಗುತ್ತೇವೆ…..
ಉದಾಹರಣೆಗೆ,
ನೀವು ಯಾವುದೇ ಪ್ರಕಾರದ ಬರಹಗಾರರು ಆಗಿರಬಹುದು. ನಿಮ್ಮ ಒಳಗಿನ ವ್ಯಕ್ತಿತ್ವದ ಸಹಜ ಭಾವನೆಗಳ ಅನಾವರಣ ನಿಮ್ಮದಾಗಿರದೆ ಕೇವಲ ಅಕ್ಷರ ಜ್ಞಾನದ ಆಧಾರದಲ್ಲಿ ಪದಗಳ ಚಾಕಚಕ್ಯತೆಯ ಮೇಲೆ ಸಾಹಿತ್ಯ ರಚಿಸುತ್ತಿದ್ದರೆ ಪ್ರಾರಂಭದಲ್ಲಿ ಅದು ಒಂದಷ್ಟು ಯಶಸ್ಸು ತಂದುಕೊಡಬಹುದಾದರು ದೀರ್ಘಕಾಲದಲ್ಲಿ ಅದು ಜೊಳ್ಳು ಎಂದು ನಿಜವಾದ ಕಸುಬುದಾರರಿಗೆ ಅರ್ಥವಾಗುತ್ತದೆ……
ಚಾಲಕರೇ ಇರಬಹುದು, ಸಮಾಜ ಸುಧಾರಕರೇ ಇರಬಹುದು, ಮೆಕ್ಯಾನಿಕ್ ಆಗಿರಬಹುದು, ಅದರ ಬಗ್ಗೆ ಸಂಪೂರ್ಣ ನಿಯಂತ್ರಣ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ವಾಹನ ಚಲಾಯಿಸಿದ ಮಾತ್ರಕ್ಕೆ ಅಥವಾ ಸಂಗೀತದ ಒಂದು ವಾದ್ಯ ನುಡಿಸಿದ ಮಾತ್ರಕ್ಕೆ ನಾನು ಅದರಲ್ಲಿ ಪಂಡಿತ ಎಂದು ಭಾವಿಸಲು ಸಾಧ್ಯವಿಲ್ಲ……
ಹಾಗೆಯೇ,
ಸಂಬಂಧಗಳಲ್ಲಿಯೂ ಸಹ ತೋರಿಕೆಯ ಮನೋಭಾವ ಬಹಳ ದಿನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯೋ, ಸ್ನೇಹವೋ, ಭಕ್ತಿಯೋ, ವಿನಯವೋ, ಧೈರ್ಯವೋ ಅದು ಆಳವಾಗಿ ಸ್ವಾಭಾವಿಕವಾಗಿ ನಮ್ಮ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದಾಗ ಮಾತ್ರ ಅದು ಬೇರೆಯವರಿಗೆ ಅರ್ಥವಾಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಇಲ್ಲದಿದ್ದರೆ ಚಿಕ್ಕ ಮಗುವಿಗೂ ನಮ್ಮ ಕಪಟತನ ತಿಳಿದುಬಿಡುತ್ತದೆ……
ಗೆಳೆಯ ಗೆಳತಿಯರೆ,
ನಮ್ಮ ಬರಹಗಳಲ್ಲಿ ನಿಜವಾದ ಸಾಮರ್ಥ್ಯ ಇದ್ದರೆ ಇಂದಲ್ಲಾ ನಾಳೆ ಅದು ಓದುಗರ ಮನಸ್ಸಿಗೆ ತಲುಪುತ್ತದೆ. ಇಲ್ಲದಿದ್ದರೆ ಹಾಗೆ ಮರೆಯಾಗುತ್ತದೆ……
ಈ ಕ್ಷಣದ ಹೊಗಳಿಗೆ ಅಥವಾ ತೆಗಳಿಕೆ ನಮ್ಮ ಒಟ್ಟು ಸಾಮರ್ಥ್ಯ ಅಥವಾ ಅಸಾಮರ್ಥ್ಯ ನಿರ್ಧರಿಸುವುದಿಲ್ಲ…..
ಈ ಕಾಲಘಟ್ಟದಲ್ಲಿ ಪಂಥಗಳ ಬಲೆಯೊಳಗೆ ಬಂಧಿಯಾಗಿರುವ ಮನಸ್ಸುಗಳ ನಡುವೆ, ಅಪರಿಚಿತ ಮತ್ತು ಪರೋಕ್ಷ ಗೆಳೆತನ ಇನ್ನೂ ಗಟ್ಟಿಯಾಗಿ ಬೇರುಬಿಟ್ಟಿರದ ಸಮಯದಲ್ಲಿ ಇಲ್ಲಿನ ಟೀಕೆ ಮತ್ತು ಪ್ರೋತ್ಸಾಹ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ. ಅಹಂ ಅಥವಾ ನಿರ್ಲಕ್ಷ್ಯ ಎರಡೂ ಬೇಡ……..
ಕಾಲನ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದ್ದರೆ ಯಶಸ್ಸು ನಮ್ಮದಾಗುತ್ತದೆ. ಒಂದು ವೇಳೆ ವಿಫಲವಾದರೆ ಅದು ಕೂಡ ನಮ್ಮ ಸಾಮರ್ಥ್ಯದ ಇತಿಮಿತಿ ಎಂದು ಭಾವಿಸೋಣ. ಸಾಧ್ಯವಾದಷ್ಟು ಸ್ಥಿತಪ್ರಜ್ಞ ಮನೋಭಾವ ಬೆಳೆಸಿಕೊಳ್ಳೋಣ……..
ಈಗಿನ ವೇಗದ ಮತ್ತು ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನಮ್ಮ ನೆಮ್ಮದಿಗಾಗಿ ಇದು ಅತ್ಯಂತ ಅವಶ್ಯ. ನೀವು ಆತುರಕ್ಕೆ ಬಿದ್ದರೆ ಈ ಸೋಷಿಯಲ್ ಮೀಡಿಯಾ ಬಹುಬೇಗ ನಿಮ್ಮನ್ನು ನಿರಾಸೆಗೆ ತಳ್ಳಿ ನೀವು ಭ್ರಮನಿರಸನ ಆಗುವಂತೆ ಮಾಡುತ್ತದೆ…..
ಆದ್ದರಿಂದ ಇದೊಂದು ಅದ್ಬುತ ಮಾಯಾ ಜಾಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿದ್ದರೆ ನಿಧಾನವಾಗಿ ಮತ್ತು ನಿರಂತರವಾಗಿ ಇದರ ಉಪಯೋಗ ಪಡೆಯಬಹುದು…..
ದ್ವೇಷಕಾರುವ, ಅಸೂಯೆಪಡುವ, ಉಡಾಫೆ ಅಭಿಪ್ರಾಯ ವ್ಯಕ್ತಪಡಿಸಿ ಮಜಾ ನೋಡುವ, ನಿಮ್ಮನ್ನು ಕೆಣಕುವ, ಇಲ್ಲದ ತಪ್ಪುಗಳನ್ನು ಹುಡುಕುವ, ಸರಿಯನ್ನು ತಪ್ಪು ಮಾಡುವ ವ್ಯಕ್ತಿಗಳು ಅಥವಾ ಗುಂಪುಗಳ ಅನೇಕ ಗುಣಗಳನ್ನು ಆದಷ್ಟೂ ಗುರುತಿಸಿ ಅವರಿಂದ ದೂರ ಇರಲು ಪ್ರಯತ್ನಿಸಿ……
ಕೇವಲ ಬರಹಗಳ, ಅಭಿಪ್ರಾಯಗಳ, ಪದಗಳ ಆಧಾರದ ಮೇಲೆ ಯಾರ ತನವನ್ನೂ ನಿರ್ಧರಿಸಬೇಡಿ. ಅವರ ಇಡೀ ವ್ಯಕ್ತಿತ್ವ ನಿಮಗೆ ಪರಿಚಯವಾಗಿ ಅದು ನಿಮಗೆ ಇಷ್ಟವಾದರೆ ಮಾತ್ರ ಗೆಳೆತನದ ಆಳಕ್ಕೆ ಹೋಗಿ…..
ಇದು ಸೂಕ್ಷ್ಮ ಮನಸ್ಸಿನ ಗೆಳೆಯ ಗೆಳೆತಿಯರಿಗೆ ಮಾತ್ರ. ಭಂಡ ಸ್ವಭಾವದರು ಎಲ್ಲಿದ್ದರೂ – ಹೇಗಿದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ….
ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……….