ಕ್ರೋದಿ ನಾಮ ಸಂವತ್ಸರದಲ್ಲಿ ನಿಮ್ಮ ಭವಿಷ್ಯ ಹೇಗಿರಬಹುದು………..

ವಿಜಯ ದರ್ಪಣ ನ್ಯೂಸ್

ವಾರ್ಷಿಕ ಭವಿಷ್ಯ…….

ಕ್ರೋದಿ ನಾಮ ಸಂವತ್ಸರದಲ್ಲಿ ನಿಮ್ಮ ಭವಿಷ್ಯ ಹೇಗಿರಬಹುದು………..

ರಾಹು ಕೇತು ರಾಶಿ ಫಲ ಶನಿ ಗುರು ಚಲನೆಗಳ ಬಗ್ಗೆ ನನಗೆ ಏನು ತಿಳಿದಿಲ್ಲ. ಆದರೆ ಈ ಪ್ರಕೃತಿಯ, ಈ ಸಮಾಜದ, ಜೀವರಾಶಿಗಳ ಚಲನೆಯನ್ನು – ವರ್ತನೆಯನ್ನು ನೋಡಿ ಅನುಭವದ ಅರಿವಿನ ಒಂದು ಸಲಹಾ ರೂಪದ ಅನಿಸಿಕೆ………

ನಿಮ್ಮ ವಯಸ್ಸು 0 ರಿಂದ 10 ರ ವರೆಗೆ ಇದ್ದು ನೀವು ಹುಡುಗನೋ, ಹುಡುಗಿಯೋ ಏನೇ ಆಗಿರಿ ನಿಮ್ಮ ಭವಿಷ್ಯ ನಿಮ್ಮ ಹಿಡಿತದಲ್ಲಿ ಇರುವುದಿಲ್ಲ. ನಿಮ್ಮ ಪೋಷಕರ ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಪ್ರಾದೇಶಿಕ ಒಟ್ಟಾರೆ ಅವರ ಪರಿಸ್ಥಿತಿ ಅವಲಂಬಿಸಿ ಅದು ರೂಪಗೊಳ್ಳುತ್ತದೆ. ನೀವು ತಲೆಕೆಡಿಸಿಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯ ಪೋಷಕರ ಒಡಲಿನಲ್ಲಿ ಜೀವ ತಳೆಯುವ ಸಮಯವದು…..

ನಿಮ್ಮ ವಯಸ್ಸು 1೦ ರಿಂದ 2೦ ಆಗಿದ್ದು, ನೀವು ಯುವಕರಾಗಿದ್ದರೆ ನಿಮ್ಮ ಬದುಕು ಮೊಳಕೆಯೊಡೆಯುವುದು ಈಗಲೇ…..

ನಿಮ್ಮ ದೇಹ ಮತ್ತು ಮನಸ್ಸು ಚಿಗುರುತ್ತಾ ಯೌವ್ವನದೆಡೆಗೆ ಕಾಲಿಡತೊಡಗುತ್ತದೆ‌. ಮೀಸೆ, ಗಡ್ಡ ಬೆಳೆದು ಧ್ವನಿ ಒಡೆದು ಬದಲಾವಣೆಯಾಗತೊಡಗುತ್ತದೆ. ಸಾಮಾನ್ಯವಾಗಿ ಹೊರ ಜಗತ್ತಿಗೆ ಹೆಚ್ಚು ತೆರೆದುಕೊಂಡು ಅಪ್ಪ ಅಮ್ಮನ ಮೇಲೆ ಸ್ವಲ್ಪ ಸ್ವಲ್ಪವೇ ಅಸಹನೆ ಅಸಮಾಧಾನ ಪ್ರಾರಂಭವಾಗುತ್ತದೆ. ಅನೇಕರು ಕೆಟ್ಟ ಚಟಗಳ ದಾಸರಾಗುವ ಸಾಧ್ಯತೆ ಹೆಚ್ಚು. ಅಪರೂಪಕ್ಕೆ ಕೆಲವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಕಡೆ ಮುಖ ಮಾಡುತ್ತಾರೆ. ಅವಕಾಶಗಳ ಆಯ್ಕೆ ನಿಮ್ಮ ಕೈಯಲ್ಲಿರುತ್ತದೆ. ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ……

ಹಾಗೆಯೇ 10 ರಿಂದ 20 ವಯಸ್ಸಿನ ಯುವತಿಯರಾಗಿದ್ದರೆ, ನಿಮ್ಮಲ್ಲೂ ಸಾಕಷ್ಟು ದೈಹಿಕ – ಮಾನಸಿಕ ಬದಲಾವಣೆಗಳಾಗುತ್ತದೆ. ಯುವಕರಿಗಿಂತ ಹೆಚ್ಚಿನ ಒತ್ತಡ ಮತ್ತು ಜವಾಬ್ದಾರಿ ಹೇರಲ್ಪಡುತ್ತದೆ. ಈ ಆಧುನಿಕ ಕಾಲದಲ್ಲೂ ನಿಮ್ಮ ಮೇಲೆ ಒಂದು ಹೆಚ್ಚಿನ ಕಣ್ಗಾವಲು ಮತ್ತು ನಿಯಂತ್ರಣ ಇರುತ್ತದೆ. ಆದರೆ ಈಗ ನಿಮಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಈ ಆಧುನಿಕ ಕಾಲದಲ್ಲಿ ನೀವು ಸಹ ದಾರಿ ತಪ್ಪುವ ಅವಕಾಶ ಮತ್ತು ಸಾಧ್ಯತೆಗಳು ಸಾಕಷ್ಟಿವೆ. ಅದರಿಂದ ನಿಮ್ಮ ಭವಿಷ್ಯ ಕಷ್ಟಕ್ಕೆ ಸಿಲುಕಬಹುದು. ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು….

ನಿಮ್ಮ ವಯಸ್ಸು 20 ರಿಂದ 30ಇದ್ದರೆ, ಗಂಡು ಮತ್ತು ಹೆಣ್ಣು ಇಬ್ಬರಿಗೂ ಬದುಕಿನ ಮುಖ್ಯ ರಸ್ತೆ ಹಿಡಿಯುವ ಸಮಯವಿದು..

ಒಂದಷ್ಟು ಜನ ಶಿಕ್ಷಣ ಮುಂದುವರಿಸುವ ಆಕಾಂಕ್ಷೆ, ಇನ್ನೊಂದಿಷ್ಟು ಜನ ಉದ್ಯೋಗ ಹಿಡಿಯುವ ಒತ್ತಡ, ಮತ್ತೊಂದಷ್ಟು ಜನರಿಗೆ ಅವರ ತಂದೆ ತಾಯಿಯರ ಆರೋಗ್ಯದ ಸಮಸ್ಯೆ, ಮಗದೊಂದಿಷ್ಟು ಜನರಿಗೆ ಮದುವೆಯ ಬಗ್ಗೆ ಯೋಚನೆ ಹೀಗೆ ತುಂಬಾ ಚಟುವಟಿಕೆಗಳ ಕಾಲವಿದು.
ನಿರ್ಧಾರಗಳ ತಾಕಲಾಟದಲ್ಲಿ
ಎಚ್ಚರಿಕೆ ಅಗತ್ಯ. ಹಿತೈಷಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ನಿಮ್ಮ ನಿರ್ಧಾರ ನಿಮ್ಮ ಮುಂದಿನ ಜೀವನ ರೂಪಿಸುತ್ತದೆ, ಅದು ಸದಾ ನೆನಪಿರಲಿ…….

ನೀವು 30 ರಿಂದ 40 ವಯಸ್ಸಿನ ಹೆಂಗಸು ಅಥವಾ ಗಂಡಸು ಆಗಿದ್ದರೆ ಇಬ್ಬರಿಗೂ ಬದುಕು ಚಲಿಸಲು ಪ್ರಾರಂಭವಾದಂತೆ, ಅದರ ಆಳ ಅಗಲಗಳು ಮತ್ತು ವಾಸ್ತವ ಅರಿವಾಗತೊಡಗುತ್ತದೆ. ಕೆಲವರು ನೆಮ್ಮದಿಯ ಬದುಕನ್ನು, ಮತ್ತೆ ಕೆಲವರು ಅತೃಪ್ತಿಯ ಜೀವನವನ್ನು ಅನುಭವಿಸುವ ಕಾಲವಿದು. ಮಕ್ಕಳ ಶಿಕ್ಷಣ ಮತ್ತು ಸ್ವಂತ ಮನೆಯ ಕನಸು, ಜೀವನದಲ್ಲಿ ಸೆಟಲ್ ಆಗುವ ಪ್ರಯತ್ನ ಸಾಗುತ್ತದೆ. ಸಾಂಸಾರಿಕ ಕಲಹಗಳು ಕುಡಿಯೊಡೆಯುವ ಸಾಧ್ಯತೆಯ ಪಕ್ವಕಾಲವಿದು. ವಿವೇಚನೆ ಅಗತ್ಯ ಅಥವಾ ಬಂದದ್ದನ್ನು ಸ್ವೀಕರಿಸಬೇಕು. ನಿಮ್ಮ ಬದುಕಿನ ನಿಮ್ಮ ನಿರ್ಧಾರಗಳು, ಅದರ ಮುಂದಿನ ಪರಿಣಾಮ ಮತ್ತು ಫಲಿತಾಂಶಗಳ ದೃಷ್ಟಿಯಿಂದ ಮಹತ್ವದ ಸಮಯವಿದು. ನಿಮ್ಮ ಜ್ಞಾನ, ಅಜ್ಞಾನ, ಅಹಂಕಾರ, ದೂರದೃಷ್ಟಿಗೆ ಈ ಸಮಯ ಒಂದು ಸವಾಲು…….

40 ರಿಂದ 50 ವಯಸ್ಸಿನ ಪುರುಷ ಮತ್ತು ಮಹಿಳೆಯರಾಗಿದ್ದರೆ ಇಬ್ಬರಿಗೂ ಸಣ್ಣದಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳು ಕಾಡತೊಡಗುತ್ತವೆ. ಇಲ್ಲಿ ಮುಖ್ಯವಾಗಿ ನಿಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸ, ಅವರ ಗುಣ ನಡತೆಗಳು ಕೆಲವರಿಗೆ ಸಂತೋಷವನ್ನು, ಮತ್ತೆ ಕೆಲವರಿಗೆ ಆತಂಕವನ್ನು ತಂದೊಡ್ಡುತ್ತದೆ. ತಂದೆ ತಾಯಿ ಮಕ್ಕಳ ನಡುವೆ ಚರ್ಚೆ, ವಾಗ್ವಾದಗಳು, ಕೆಲವು ಕಡೆ ಹೊಡೆದಾಟಗಳು ಸಹ ಆಗುವ ಸಂಭವವಿರುತ್ತದೆ. ಈ ವಯಸ್ಸಿನಲ್ಲಿ ನಿಮ್ಮ ತಂದೆತಾಯಿಯರು ಸಹ ಸುಮಾರು 6೦/7೦ ವಯಸ್ಸು ದಾಟುವುದರಿಂದ ಅವರ ಅನಾರೋಗ್ಯ ಅಥವಾ ಅಗಲುವಿಕೆ ಸಹ ಹೊಡೆತ ಕೊಡುತ್ತದೆ. ಬದುಕಿನ ಬಹುತೇಕ ಅಗ್ನಿ ಪರೀಕ್ಷೆಗಳು ಈ ಹಂತದಲ್ಲಿ ಎದುರಾಗುತ್ತವೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವುದರಲ್ಲಿ ನಿಮ್ಮ ಯಶಸ್ಸು ಅಥವಾ ಸೋಲು ಅಡಗಿದೆ. ನಿಮ್ಮ ಪ್ರಬುದ್ಧತೆಯ ಪ್ರದರ್ಶನಕ್ಕೆ ಬಹು ದೊಡ್ಡ ವೇದಿಕೆಯಿದು…….

50 ರಿಂದ 60 ವಯಸ್ಸಾಗಿದ್ದರೆ ಇಬ್ಬರಿಗೂ ನಿಮ್ಮ ಜವಾಬ್ದಾರಿಗಳನ್ನು ಮಕ್ಕಳಿಗೆ ವರ್ಗಾಯಿಸುವ ಕಾಲ ಅಥವಾ ಮಕ್ಕಳೇ ನಿಮ್ಮ ಜವಾಬ್ದಾರಿ ಇಳಿಸುವ ಸಮಯ. ಮಕ್ಕಳ ಮದುವೆ, ಉದ್ಯೋಗ, ಅವರುಗಳು ನಿಮ್ಮಿಂದ ದೂರವಾಗುವ ಅನಿವಾರ್ಯತೆ, ಆಗಾಗ ಕಾಡುವ ಸಾವಿನ ಭಯ, ಅನಾರೋಗ್ಯದ ಸಂದರ್ಭದಲ್ಲಿ ಹಣದ ಚಿಂತೆ, ಸ್ವಂತದವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ನೋವು, ಎಲ್ಲವೂ ಈ ಹಂತದಲ್ಲಿ ಅನುಭವವಾತೊಡಗುತ್ತದೆ. ಒಟ್ಟು ಕುಟುಂಬ ಬೇರೆ ಬೇರೆಯಾಗುವ ಸಾಧ್ಯತೆ ಹೆಚ್ಚು.
ಬದುಕಿನ ನಿಜವಾದ ಸಾರ್ಥಕತೆ ಅಥವಾ ವಿಫಲತೆಗಳನ್ನು ಲೆಕ್ಕ ಹಾಕುವ ಮನಸ್ಥಿತಿಯಿದು. ಪಾಲಿಗೆ ಬಂದದ್ದನ್ನು ಸ್ವೀಕರಿಸುವ ಮನೋಭಾವ ಒಳ್ಳೆಯದು ಅಥವಾ ಹೊಂದಾಣಿಕೆಯಾಗದೆ ಧೈರ್ಯದಿಂದ ಬದುಕನ್ನು ಎದುರಿಸುವ ಆಯ್ಕೆ ನಿಮ್ಮ ಕೈಯಲ್ಲಿರುತ್ತದೆ……

ಸಾಮಾನ್ಯ ಜನರಿಗೆ 60 ರ ನಂತರದ ಬದುಕು ಬಹುತೇಕ ನಿವೃತ್ತಿಯ, ವಿಶ್ರಾಂತ ಬಯಸುವ ಕಾಲವಾಗಿರುತ್ತದೆ. ಆದರೆ ಕೆಲವು ಶ್ರಮ ಜೀವಿಗಳಿಗೆ, ಮಹತ್ವಾಕಾಂಕ್ಷಿಗಳಿಗೆ, ಅರಿವಿನ ಅನುಭವದಲ್ಲಿ ಮಿಂದು ಬಂದವರಿಗೆ 60 ರ ನಂತರವೇ ನಿಜವಾದ ಬದುಕು ವೇಗ ಪಡೆದುಕೊಳ್ಳುತ್ತದೆ. ರಾಜಕೀಯ, ಸಾಹಿತ್ಯ, ಸಮಾಜ ಸೇವೆ ಅಥವಾ ಆಧ್ಯಾತ್ಮದ ಚಟುವಟಿಕೆಗಳನ್ನು ಹಾಗೂ ತಮ್ಮ ಹಿಂದಿನ ವ್ಯಾವಹಾರಿಕ ವೃತ್ತಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಬಹುದು. ಇದು ಅವರವರ ಆರೋಗ್ಯವನ್ನು ಮತ್ತು ಮಾನಸಿಕ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ……

ಇದು ಭಾರತದ ಸಾಮಾನ್ಯರ ಜನಜೀವನದ ವಾರ್ಷಿಕ ಭವಿಷ್ಯದ ಒಂದು ಊಹಾತ್ಮಕ ನೋಟ. ಇದು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಇಲ್ಲಿ ಉಲ್ಲೇಖಿಸಿದ ವಿಷಯಗಳಿಗೆ ವಿರುದ್ಧವಾಗಿಯೂ ಕೆಲವು ‌ಘಟನೆಗಳು ನಡೆಯಬಹುದು. ಅಪಘಾತ, ಅನಾರೋಗ್ಯ, ದುರಾದೃಷ್ಟ, ಪ್ರಕೃತಿಯ ವಿಕೋಪ, ಆ ಪ್ರದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಅವಲಂಬಿಸಿ ಬದುಕು ವಿವಿಧ ಅನಿರೀಕ್ಷಿತ ತಿರುವುಗಳನ್ನು ಪಡೆಯಬಹುದು.

ಇದನ್ನೇ ಕೆಲವು ಜ್ಯೋತಿಷಿಗಳು ಆಕರ್ಷಕವಾಗಿ ಮತ್ತು ಜೀವನೋಪಾಯದ ಮಾರ್ಗವಾಗಿ ಹಾಗು ಕ್ರಮಬದ್ಧವಾಗಿ ಹೇಳುತ್ತಾರೆ. ಇದರಲ್ಲಿ ಬಹಳಷ್ಟು ನಿಜವಾಗಬಹುದು. ಆದರೆ ‌ಅವರು ಸೂಚಿಸುವ ಪರಿಹಾರಗಳು ಮಾತ್ರ ಅಗೋಚರ ಶಕ್ತಿಯ ಅಥವಾ ಮೂಡ ನಂಬಿಕೆಗಳ ಮೇಲೆ ಅವಲಂಬಿತವಾಗಿರುವ ಸಾಧ್ಯತೆ ಇರುತ್ತದೆ…….

ಆದ್ದರಿಂದ ಇಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಒಂದು ವೇಳೆ ನಿಮಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇದ್ದರೂ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲಾ ವಿಷಯಗಳನ್ನು ‌360 ಡಿಗ್ರಿ ದೃಷ್ಟಿಕೋನದಿಂದ, ನಿಮ್ಮ ‌ಸ್ವಂತ ಬುದ್ಧಿಶಕ್ತಿಯಿಂದ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಪಶ್ಚಾತ್ತಾಪಕ್ಕೆ ಅತ್ಯಂತ ಕಡಿಮೆ ಅವಕಾಶ ಕೊಡಿ. ಇದು ಅನುಭವದ ಒಂದು ಸಹಜ ಅಭಿವ್ಯಕ್ತಿ ಮಾತ್ರ…….

ಯುಗಾದಿ ಹಬ್ಬದ ಶುಭಾಶಯಗಳು….

ಎಲ್ಲರಿಗೂ ಒಳ್ಳೆಯದಾಗಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್.ಕೆ.
9844013068……..