ಹೀಗೊಂದು ಜಿಜ್ಞಾಸೆ…….
ವಿಜಯ ದರ್ಪಣ ನ್ಯೂಸ್
ಹೀಗೊಂದು ಜಿಜ್ಞಾಸೆ…….
ನನ್ನ ಆತ್ಮೀಯ ಮಿತ್ರನೊಬ್ಬ Aeronautical Engineering ನಲ್ಲಿ ಮೊದಲ Rank ಬಂದು ಚಿನ್ನದ ಪದಕ ಪಡೆದ. ಕಾಲೇಜಿನಲ್ಲಿ ಇರುವಾಗಲೇ ವಿಶಿಷ್ಟ ವಿಮಾನದ ಮಾದರಿಯನ್ನು ವಿನ್ಯಾಸಗೊಳಿಸಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವೈಮಾನಿಕ ಉತ್ಸವದಲ್ಲಿ ಬಹುಮಾನ ಗಳಿಸಿದ್ದ….
ಇದನ್ನು ಗುರುತಿಸಿದ ಫ್ರಾನ್ಸಿನ Raffle ವಿಮಾನ ತಯಾರಿಕಾ ಸಂಸ್ಥೆಯ ಸಂಶೋಧನಾ ವಿಭಾಗ ಇವನಿಗೆ ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ( ಪಿ ಎಚ್ ಡಿ ) ಮಾಡಲು ಆಹ್ವಾನ ನೀಡಿತು ಮತ್ತು ಅದು ಮುಗಿದ ನಂತರ ಅಲ್ಲಿಯೇ ದೊಡ್ಡ ಸಂಬಳದ ಸಂಶೋಧನಾ ನಿರ್ದೇಶಕ ಹುದ್ದೆ ನೀಡಲು ಬಯಸಿದ ಒಪ್ಪಂದ ಪತ್ರವನ್ನು ಕಳಿಸಿತು. ಅಲ್ಲಿಯವರೆಗಿನ ಎಲ್ಲಾ ವೆಚ್ಚವನ್ನೂ ಕಂಪನಿಯೇ ನಿರ್ವಹಿಸುವ ಪ್ರಸ್ತಾಪವೂ ಮಾಡಲಾಗಿತ್ತು……
ಸ್ವಲ್ಪ ಸಂಕೋಚ ಸ್ವಭಾವದ ಅವನಿಗೆ ಅತ್ಯಂತ ಆತ್ಮೀಯನೆಂದರೆ ನಾನೇ. ಅದಕ್ಕಾಗಿಯೇ ಸಂದೇಶ ಬಂದ ತಕ್ಷಣ ನನಗೇ ಮೊದಲು ಫೋನ್ ಮಾಡಿದ…..
ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಂತಹ ಪ್ರತಿಷ್ಠಿತ ಸಂಸ್ಥೆಯ ಆಹ್ವಾನ ನನ್ನ ಗೆಳಯನಿಗೆ ಸಿಕ್ಕಿದ್ದು ಬಹಳ ಹೆಮ್ಮೆ ಎನಿಸಿತು. ಮುಂದಿನ ಒಂದೇ ತಿಂಗಳಲ್ಲಿ ಆತ ಎಲ್ಲಾ Formalities ಮುಗಿಸಬೇಕಾಗಿತ್ತು…..
ಒಮ್ಮೆಯೂ ವಿದೇಶ ಯಾತ್ರೆ ಮಾಡದ ಅವನಿಗೆ ಆತಂಕವಾಗಿತ್ತು. ನನ್ನ ತಂದೆಯ ವ್ಯವಹಾರದ ಕಾರಣಕ್ಕಾಗಿ ಆಗಾಗ ವಿದೇಶ ಯಾತ್ರೆ ಮಾಡುವ ನಾನು ಮುಂದೆ ನಿಂತು ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಹೇಳಿದೆ……
ತತ್ಕಾಲ್ ನಲ್ಲಿ Passport ಮಾಡಿಸಿದರೆ ಸಾಕಿತ್ತು. ಹೇಗಿದ್ದರೂ ಫ್ರಾನ್ಸ್ ದೇಶದ ಪ್ರತಿಷ್ಠಿತ ಕಂಪನಿಯ ಆಹ್ವಾನವಿದ್ದುದರಿಂದ ವೀಸಾ ಸಮಸ್ಯೆ ಆಗುತ್ತಿರಲಿಲ್ಲ. ಊಟ ವಸತಿ ಕಂಪನಿಯ ಜವಾಬ್ದಾರಿಯಾಗಿತ್ತು…..
ನಾನು ಅವನಿಗೆ ಇದನ್ನೆಲ್ಲಾ ವಿವರಿಸಿ ಈ ಸಂಭ್ರಮ ಆಚರಿಸಲು ಸಧ್ಯದಲ್ಲೇ ನಮ್ಮ ಆತ್ಮೀಯ ಗೆಳೆಯರಲ್ಲಾ ಸೇರಿ ಒಂದು ಸಂತೋಷ ಕೂಟ ಆಚರಣೆ ಮಾಡೋಣ ಎಂದು ಹೇಳಿದೆ…..
ಈ ಮಾತುಕತೆಯಾದ ಎರಡು ದಿನವಾದರೂ ಅವನಿಂದ ಕಾಲ್ ಬರಲಿಲ್ಲ. ನಾನೇ ಕಾಲ್ ಮಾಡಿದೆ. ಆತ ತುಂಬಾ Upset ಆಗಿದ್ದ. ಗಲಿಬಿಲಿಗೆ ಒಳಗಾಗಿದ್ದ. ನನ್ನನ್ನು ಕಾಣಲು ಕಾತುರನಾಗಿದ್ದ……
ಯಾವುದೋ ಮದುವೆಗೆ ಕಾರಿನಲ್ಲಿ ಒಬ್ಬನೇ ಹೋಗುತ್ತಿದ್ದ ನಾನು ತಕ್ಷಣ ಕಾರನ್ನು ಅವನ ಮನೆಕಡೆ ತಿರುಗಿಸಿದೆ. ಅವನ ಮನೆಯ ಮುಂದೆ ಕಾರು ನಿಲ್ಲಿಸಿ ಒಳ ಹೋಗಬೇಕೆನ್ನುವಷ್ಟರಲ್ಲಿ ಅವನೇ ಚಕಚಕನೆ ಕಾರ್ ಡೋರ್ ಓಪನ್ ಮಾಡಿ ” ಇಲ್ಲಿ ಬೇಡ ಮೈಸೂರಿನ ಕಡೆಗೆ ಒಂದು Long drive ಹೋಗೋಣ. ಹಾಗೇ ಎಲ್ಲವನ್ನೂ ಮಾತಾನಾಡೋಣ ” ಎಂದು ಕುಳಿತ.
ನಾನು ಮರು ಮಾತನಾಡದೆ ಹೊರಟೆ…..
ನನ್ನ ಸ್ನೇಹಿತ ಅವರ ತಂದೆ ತಾಯಿಗೆ ಒಬ್ಬನೇ ಮಗ. ತನ್ನ ಕಂದನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ತಾಯಿ ಮಗ ತನ್ನಿಂದ ದೂರವಾಗುವುದನ್ನು ಒಪ್ಪಲೇ ಇಲ್ಲ. ಆರ್ಥಿಕವಾಗಿ ಒಂದಷ್ಟು ಉತ್ತಮ ಸ್ಥಿತಿಯಲ್ಲಿ ಇದ್ದ ಅವರಿಗೆ ಮಗನ ವಿದೇಶಯಾತ್ರೆ ಇಷ್ಟವಿರಲಿಲ್ಲ. ತಂದೆಯ ಒಪ್ಪಿಗೆ ಇದ್ದರೂ ತಾಯಿ ಮಾತ್ರ ಬಿಲ್ ಕುಲ್ ಒಪ್ಪಿರಲಿಲ್ಲ……
ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ ಇವನು ಆಕೆಯ ಮಾತಿಗೆ ಪ್ರತಿಯಾಡದೆ ಇಡೀ Project drop ಮಾಡಿದ್ದ.
ವಿಷಯವನ್ನು ಸಂಪೂರ್ಣ ಅರ್ಥಮಾಡಿಕೊಂಡ ನಾನು ಆತನಿಗೆ ಮುಂದಿನ ಭವಿಷ್ಯ – ಸಮಾಜದ ಕಟ್ಟುಪಾಡುಗಳು, ಅಲ್ಲಿಂದಲೇ ಆತ ದಿನನಿತ್ಯ ನೇರ Video call ಮಾಡಬಹುದಾದ ಸೌಲಭ್ಯ, ಕನಿಷ್ಠ ವರ್ಷಕ್ಕೆ ಎರಡು ಬಾರಿ ಅವನು ಇಲ್ಲಿಗೆ – ಇವರು ಅಲ್ಲಿಗೆ ಬಂದು ಹೋಗುವ ವ್ಯವಸ್ಥೆ ಎಲ್ಲದರ ಬಗ್ಗೆ ತಿಳಿ ಹೇಳಿದೆ. ಆದರೂ ಅವನು ತಾಯಿಯ ಒಪ್ಪಿಗೆ ಇಲ್ಲದೆ ಹೋಗುವುದೇ ಇಲ್ಲವೆಂದ…..
ನನಗೂ ಅವನ ತಾಯಿ ಪರಿಚಯವಿದ್ದುದರಿಂದ ಆ ಕ್ಷಣವೇ ಅವರಿಗೆ ಫೋನ್ ಮಾಡಿದೆ. ಒಂದಷ್ಟು ಹೊತ್ತು ಚರ್ಚೆ ಮಾಡಿದ ಅವರು ಕೊನೆಗೆ ” ನನ್ನ ಪ್ರಾಣ ಅಥವಾ ಆ ಫ್ರಾನ್ಸ್ ನ ಕೆಲಸ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವನಿಗೆ ಹೇಳು ” ಎಂದು ಫೋನ್ ಕಟ್ ಮಾಡಿದರು….
ನನಗೆ ಬೇಸರ ಮತ್ತು ಕೋಪ ಒಟ್ಟಿಗೇ ಆಯಿತು. ಅವರ ತಾಯಿಯ ವಯಸ್ಸು ಬಹುಶಃ 47 ಮತ್ತು ತಂದೆಯ ವಯಸ್ಸು 50 ಇರಬಹುದು. ಇಬ್ಬರು ಆರೋಗ್ಯವಾಗಿದ್ದಾರೆ. ಅವರ ಸಂಬಂಧಿಗಳು ಸುತ್ತಮುತ್ತಲೇ ಇದ್ದಾರೆ. ಇಂತಹ ಸನ್ನಿವೇಶದಲ್ಲಿ ಆಕೆ ಮಗನ ಉಜ್ವಲ ಭವಿಷ್ಯಕ್ಕೆ ಪ್ರೀತಿಯ ಒತ್ತಡದಲ್ಲಿ ನಿರಾಕರಿಸಿದ್ದು ಸರಿ ಕಾಣಲಿಲ್ಲ….
ಎಂದಿನಂತೆ ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿ ಮನುಷ್ಯನ ಅಂತರಂಗವನ್ನು ಬಿಚ್ಚಿ ನೋಡುವ ಪ್ರಯತ್ನದಲ್ಲಿರುವ ನಾನು ಗೆಳೆಯನಿಗೆ ನೇರವಾಗಿ ಹೇಳಿದೆ ” ನೋಡು ಭಾರತೀಯ ಸಮಾಜದ ತಾಯಿಯ ಮನಸ್ಥಿತಿಯಲ್ಲಿ ಅರ್ಧದಷ್ಟು ಪ್ರೀತಿ ಇದ್ದರೆ ಉಳಿದ ಅರ್ಧ ಸ್ವಾರ್ಥ ತುಂಬಿರುತ್ತದೆ. ಮಕ್ಕಳನ್ನು ಬೆಳೆಸುವುದರಿಂದ ಹಿಡಿದು ಮದುವೆ ಮತ್ತೂ ಮುಂದುವರೆದು ಅವರ ಮೇಲೆ ನಿಯಂತ್ರಣದವರೆಗೂ ಹಬ್ಬುತ್ತದೆ. ಈ ತರಹದ ತಾಕಾಲಾಟ ಸದಾ ಇರುತ್ತದೆ. ಕೆಲವೊಮ್ಮೆ ಪ್ರೀತಿ ಹೆಚ್ಚಾದರೆ ಮತ್ತೆ ಕೆಲವೊಮ್ಮೆ ಸ್ವಾರ್ಥ ಹೆಚ್ಚಾಗುತ್ತದೆ….
ಈಗ ನಿನ್ನ ವಿಷಯದಲ್ಲಿ ಆಕೆಯ ಸ್ವಾರ್ಥ ಜಾಸ್ತಿಯಾಗಿದೆ. ಆಕೆ ಸಂಪೂರ್ಣ ನಿಸ್ವಾರ್ಥಿಯಾಗಿದ್ದಿದ್ದರೆ ನಿನ್ನ ಓದಿಗೆ ಒಪ್ಪಿಗೆ ಕೊಡಲೇಬೇಕಾಗಿತ್ತು. ಯಾವ ಸಕಾರಣವೂ ಇಲ್ಲದೆ ನಿರಾಕರಿಸುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಭಾವನಾತ್ಮಕವಾಗಿ ಯೋಚಿಸುವುದನ್ನು ಬಿಟ್ಟು ಫ್ರಾನ್ಸ್ ಗೆ ಹೋಗುವ ದೃಡ ನಿರ್ಧಾರ ತೆಗೆದುಕೊ. ಒಳ್ಳೆಯದಾಗುತ್ತದೆ ” ಎಂದು ಒತ್ತಾಯಿಸಿದೆ. …
ಅಲ್ಲಿಯವರೆಗೂ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ ಅವನು ನಿನ್ನ ತಾಯಿ ಸ್ವಾರ್ಥಿ ಎಂದು ಹೇಳಿದ್ದಕ್ಕೆ ಕೆಂಡಮಂಡಲವಾದ. ” ನೀನೊಬ್ಬ ಹೃದಯಹೀನ. ತಾಯಿ ಪ್ರೀತಿ ಗ್ರಹಿಸಲಾರದ ದುರಾತ್ಮ. ನಿನ್ನಂತಹವರಿಂದಲೇ ಈ ಸಮಾಜ ಹಾಳಾಗಿರುವುದು. ನಿನ್ನ ಉಪದೇಶ ನನಗೆ ಬೇಡ ” ಎಂದು ನನ್ನ ಮೇಲೆ ಸಿಕ್ಕಾಪಟ್ಟೆ ಕೂಗಾಡಿ ತಕ್ಷಣವೇ ಕಾರು ತಿರುಗಿಸಿ ನನ್ನನ್ನು ಮನೆಯ ಬಳಿ ಬಿಡು ಎಂದು ಒತ್ತಾಯಿಸಿದ. ಎಷ್ಟೇ ಸಮಾಧಾನ ಮಾಡಿದರೂ ಕೇಳಲಿಲ್ಲ….
ಕೊನೆಗೆ ನಾನೇ ಕಾರು ತಿರುಗಿಸಿದೆ. ಅಲ್ಲಿಂದ ಅವನ ಮನೆ ತಲುಪುವವರೆಗೂ ಅಂತರಂಗದ ಮೌನ ತಾಕಲಾಟವೇ ನಮ್ಮ ಮಾತಾಗಿತ್ತು.
ಕಾರು ನಿಲ್ಲಿಸಿದ ತಕ್ಷಣ ಆತ ಇಳಿದು ನನ್ನ ಮುಖ ಕೂಡ ನೋಡದೆ ಮನೆ ಸೇರಿದ. ಭಾರವಾದ ಹೃದಯದಿಂದ ನಾನು ಕಾರು ಚಲಾಯಿಸುತ್ತಾ…….
ಭಾರತದ ಸಾಮಾಜಿಕ ವ್ಯವಸ್ಥೆ, ಇಲ್ಲಿನ ಜನರ ಮಾನಸಿಕ ಸ್ಥಿತಿ ಗತಿ ಯೋಚಿಸಲಾರಂಬಿಸಿದೆ. ಬಹುಶಃ ಇದೇ ತಾಯ ಒಡಲಿನ ” ಪ್ರೀತಿ ಮತ್ತು ಸ್ವಾರ್ಥದ ಕಕ್ಕುಲಾತಿ ” ಈ ದೇಶದ ಸದ್ಯದ ಎರಡು ಪ್ರಬಲ ಪಂಥಗಳಾದ ಎಡ ಮತ್ತು ಬಲಗಳ ನಿಲುವುಗಳು ಜನರ ಮತ್ತು ದೇಶದ ಬಗ್ಗೆ ಇರಬಹುದೇ ?
ಇಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರೀತಿ ಮತ್ತು ಸ್ವಾರ್ಥವನ್ನು ಬಳಸುತ್ತಿರಬಹುದೇ ? ಇಬ್ಬರ ನಡುವೆ ಹೊಂದಾಣಿಕೆ ಮೂಡಿಸಿ ವಾಸ್ತವ ಹಾಗೂ ಸತ್ಯದ ನೆಲೆಯಲ್ಲಿ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಮೂಡಿಸುವುದು ಹೇಗೆ ಎಂಬ ಯೋಚನೆಯಲ್ಲಿ ನಿಮ್ಮೊಂದಿಗೆ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……….