ಇತಿಹಾಸ – ಮಂಗನ ಕೈಯಲ್ಲಿ ಮಾಣಿಕ್ಯ ಎಂದು ಗಾದೆ ಮಾತು………. ನಿಜವಾಗುವ ಮುನ್ನ……
ವಿಜಯ ದರ್ಪಣ ನ್ಯೂಸ್
ಇತಿಹಾಸ – ಮಂಗನ ಕೈಯಲ್ಲಿ ಮಾಣಿಕ್ಯ ಎಂದು ಗಾದೆ ಮಾತು………. ನಿಜವಾಗುವ ಮುನ್ನ……
ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ…….
ದಯವಿಟ್ಟು ಒಂದು ನೆನಪಿಡಿ…..
ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ ಗಾಥೆಯನ್ನು ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ ಹಿಡಿದಿಡುವುದು ಸಾಧ್ಯವಾಗುವುದಿಲ್ಲ ಅಥವಾ ತುಂಬಾ ಕಷ್ಟ. ಅದಕ್ಕೆ ಸಾಕಷ್ಟು ಮಿತಿಗಳಿವೆ.
ಬರಹದ ಮಿತಿ ಒಂದು ವ್ಯಾಪ್ತಿಗೆ ಒಳಪಟ್ಟರೆ, ದೃಶ್ಯ ಮಾಧ್ಯಮದಲ್ಲಿ ಇನ್ನೂ ಹೆಚ್ಚು ಮಿತಿಗಳಿವೆ. ಬರಹದಲ್ಲಿ ಬರಹಗಾರನ ಗ್ರಹಿಕೆ, ಆತನ ಬೌದ್ಧಿಕ ಸಾಮರ್ಥ್ಯ, ಆತನ ದೃಷ್ಟಿಕೋನ ಪ್ರಭಾವ ಬೀರಿದರೆ, ದೃಶ್ಯ ಮಾಧ್ಯಮದಲ್ಲಿ ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ಛಾಯಾಗ್ರಹಣ, ನಿರೂಪಣೆಯ ಶೈಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಟರು ಮತ್ತು ಅವರ ಅಭಿನಯ ಸಾಕಷ್ಟು ಪ್ರಭಾವ ಬೀರುತ್ತದೆ.
ಇಲ್ಲಿ ಎಲ್ಲಾ ಪಾತ್ರಗಳನ್ನು ಚಿತ್ರಕಥೆಗಾರನೇ ನಿಯಂತ್ರಿಸುತ್ತಾನೆ. ಸಂಭಾಷಣೆಯಲ್ಲಿಯೂ ಸಹ ಆತನೇ ಎಲ್ಲಾ ಪಾತ್ರಗಳ ಧ್ವನಿಯಾಗಿರುತ್ತಾನೆ. ಐತಿಹಾಸಿಕ ಘಟನೆಗಳ ಆಧಾರ ಅವರಿಗೆ ಇದ್ದರೂ ನಿರೂಪಣೆ ವಾಸ್ತವತೆಯನ್ನು ಮೀರಿ ಕಲಾತ್ಮಕತೆ ಅಥವಾ ಮನರಂಜನೆ ಅಥವಾ ತಾನು ಹೇಳಬೇಕೆಂದಿರುವ ವಿಷಯವನ್ನು ತನ್ನದೇ ರೀತಿಯಲ್ಲಿ ಹೇಳುತ್ತಾನೆ. ಅದು ಕಲಾವಿದರ ನಟನೆಯಲ್ಲಿ ಮೂಡಿ ಛಾಯಾಗ್ರಹಣ ರೂಪದಲ್ಲಿ ನಮಗೆ ಕಾಣ ಸಿಗುತ್ತದೆ.
ಚೋಟಾ ಭೀಮ್, ಚಾಣಕ್ಯ, ಶ್ರೀಕೃಷ್ಣ, ಸಾಮ್ರಾಟ್ ಅಶೋಕ, ಅಕ್ಬರ್, ಟಿಪ್ಪು ಸುಲ್ತಾನ್, ರಾಣಾ ಪ್ರತಾಪ್ ಸಿಂಗ್, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್, ಮೋದಿ, ತೆಂಡೂಲ್ಕರ್, ದೋನಿ, ಮೇರಿಕೋಮ್, ವಾಜಪೇಯಿ, ಸಾರ್ವರ್ಕರ್, ಮುಂತಾದ ಯಾರದೇ ಆಗಿರಲಿ ಅಲ್ಲಿ ವಾಸ್ತವಕ್ಕಿಂತ ಪಾತ್ರದ ವಿಜೃಂಭಣೆ ಇರುತ್ತದೆ. ದೃಶ್ಯ ಮಾಧ್ಯಮದ ಶಕ್ತಿ ಮತ್ತು ಮಿತಿ ಇದೇ ಆಗಿದೆ. ಇಲ್ಲಿ ಅತ್ಯದ್ಭುತ ವ್ಯಕ್ತಿತ್ವಗಳು ಪೇಲವವಾಗುವ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯವಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಇಲ್ಲಿ ಕೆಲವು ಅನುಕೂಲಗಳು ಇವೆ. ಸಾಮಾನ್ಯ ಜನರಿಗೆ, ಓದಲು ಆಸಕ್ತಿ ಇಲ್ಲದ ಅಥವಾ ಓದು ಬರಹವಿಲ್ಲದ ಜನರಿಗೆ ಸಾಧಕರ ಬದುಕನ್ನು ತಿಳಿಸುವ ಒಂದು ಉತ್ತಮ ಮಾಧ್ಯಮ ಮತ್ತು ಪ್ರಯತ್ನ ಎಂದು ಇದನ್ನು ಪರಿಗಣಿಸಬಹುದು. ಇಂದಿನ ಆಧುನಿಕ ಮತ್ತು ವೇಗದ ಸಮಾಜದಲ್ಲಿ ತಂತ್ರಜ್ಞಾನದ ಮೂಲಕ ಜನರನ್ನು ಜಾಗೃತಿ ಮೂಡಿಸುವ ಸಲುವಾಗಿ ಧಾರಾವಾಹಿ ಚಲನಚಿತ್ರದ ಮುಖಾಂತರ ಮಾಡುವ ಪ್ರಯತ್ನ ಅಭಿನಂದನಾರ್ಹ.
ಆದರೆ ಅದೇ ಬುದ್ಧ ಗಾಂಧಿ ಬಸವಣ್ಣ ವಿವೇಕಾನಂದ ಅಂಬೇಡ್ಕರ್ ಮುಂತಾದವರ ಚಿಂತನೆಗಳು ದೃಶ್ಯಗಳಾಗಿ ಮೂಡುವುದು ಅವುಗಳನ್ನು ನೋಡುಗರಿಗೆ ಅರ್ಥ ಮಾಡಿಸುವುದು ಸವಾಲಿನ ಕೆಲಸವೂ ಆಗಿದೆ. ಇಲ್ಲಿ ಘಟನೆಗಳೇ ಪ್ರಾಮುಖ್ಯತೆ ಪಡೆಯುತ್ತದೆ. ಘಟನೆಗಳ ತೀವ್ರತೆ, ನಟರ ಸಾಮಾರ್ಥ್ಯ ಒಟ್ಟು ಸಾರಾಂಶವನ್ನೇ ಏರುಪೇರು ಮಾಡಬಹುದು. ಎಷ್ಟೋ ಸಿನಿಮಾ ಧಾರವಾಹಿಗಳಲ್ಲಿ ಮುಖ್ಯಪಾತ್ರಕ್ಕಿಂತ ಖಳನಟ ಅಥವಾ ಹಾಸ್ಯನಟ ಅಥವಾ ಫೋಷಕ ನಟ ತನ್ನ ಅಭಿನಯ ಚತುರತೆಯಿಂದ ಜನರ ಮನಸ್ಸು ಗೆದ್ದ ಉದಾಹರಣೆಗಳಿವೆ. ಕಾಲ್ಪನಿಕ ಕಥೆಗಳಲ್ಲಿ ಇದು ಸ್ವಾಗತಾರ್ಹ. ಆದರೆ ಐತಿಹಾಸಿಕ ಮಹತ್ವದ ಪಾತ್ರಗಳಲ್ಲಿ ಇದು ವಿರುದ್ಧ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಘಟನೆಗಳು ಮತ್ಯಾರದೋ ಸಹಾನುಭೂತಿಗೆ ಒಳಗಾಗಬಹುದು.
ಚೋಟಾ ಭೀಮ್ ಧಾರವಾಹಿ ಮಹಾಭಾರತದಲ್ಲಿ ಕೆಲವೇ ಅಧ್ಯಾಯಗಳ ಪಾತ್ರ ಅತಿ ಮಹತ್ವ ಪಡೆಯುತ್ತದೆ. ಮಹಾಭಾರತ ಧಾರವಾಹಿ ಭೀಷ್ಮನ ದೃಷ್ಟಿಕೋನದಿಂದ ನೋಡಲ್ಪಡುತ್ತದೆ. ಸಂಗೊಳ್ಳಿ ರಾಯಣ್ಣ ದರ್ಶನ್ ಅಭಿನಯದಲ್ಲಿ ವೀಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುತ್ತದೆ. ಮಹೇಂದ್ರ ಸಿಂಗ್ ಧೋನಿ ಎಂಬ ಅತ್ಯಂತ ಪ್ರಬುದ್ಧ ಆಟಗಾರ ಸುಶಾಂತ್ ಸಿಂಗ್ ರಜಪೂತ್ ಎಂಬ ಪಾತ್ರದಾರಿಯಾಗಿ ಬದಲಾಗುವುದನ್ನು ಆತನ ಆಟದ ನಿಜವಾದ ಕೌಶಲ್ಯವನ್ನು ಮರೆಸುತ್ತದೆ.
ಹಾಗೆಂದು ಮಹತ್ವದ ಪಾತ್ರಗಳ ದೃಶ್ಯ ರೂಪಕಗಳನ್ನು ತಿರಸ್ಕರಿಸಬೇಕು ಎಂದು ಹೇಳಲಾಗುವುದಿಲ್ಲ. ಅದೊಂದು ಕಲಾ ಪ್ರಕಾರ. ಸಂಗೀತ ಸಾಹಿತ್ಯ ಹಾಡು ಸಿನಿಮಾ ನಾಟಕ ಎಲ್ಲವೂ ಅದರಲ್ಲಿ ಸೇರಿದೆ. ಆದರೆ ಐತಿಹಾಸಿಕ ಪಾತ್ರಗಳ ಅಥವಾ ಘಟನೆಗಳ ಪುನರ್ ಸೃಷ್ಟಿಯಲ್ಲಿ ಸಾಕಷ್ಟು ಮಿತಿಗಳಿವೆ ಎಂಬ ಎಚ್ಚರಿಕೆಯು ಇರಬೇಕಾಗುತ್ತದೆ.
ಇಲ್ಲದಿದ್ದರೆ ಇತಿಹಾಸದ ಖಳ ನಾಯಕರನ್ನು ಮುಂದೊಂದು ದಿನ ಹಣ ಬಲದಿಂದ ಹೀರೋಗಳಾಗಿ ಸಹ ಚಿತ್ರಿಸಬಹುದು. ಇತಿಹಾಸ ಎಂದೂ ಯಾವುದೇ ಭ್ರಮೆ ಅಥವಾ ತಮ್ಮ ತತ್ವ ಸಿದ್ದಾಂತಗಳ ಪ್ರಚಾರಕ್ಕಾಗಿ ಮನ ಬಂದಂತೆ ತಿರುಚುವ ಕೆಲಸ ಆಗಬಾರದು. ಅದು ತನ್ನ ನೈಜ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು.
ಭಾರತದ ಇತಿಹಾಸವನ್ನು ರೇಷ್ಮೆಯ ಶಾಲು ಸುತ್ತಿದ ಚಪ್ಪಲಿಯಲ್ಲಿ ಪಟ್ ಪಟ್ ಎಂದು ಬಾರಿಸುತ್ತಾ ಜನರನ್ನು ಹಿತಾನುಭವದ ಭ್ರಮೆಯಲ್ಲಿ ತೇಲುಸುತ್ತಿರುವ ಸಿನಿಮಾ ಧಾರವಾಹಿ ಎಂಬ ಬಣ್ಣದ ಮನರಂಜನಾ ಉದ್ಯಮ, ರಾಜಕಾರಣಿಗಳೆಂಬ ಅತ್ಯಂತ ಸ್ವಾರ್ಥಿಗಳು ಮತ್ತು ಸೋಷಿಯಲ್ ಮೀಡಿಯಾಗಳ ಅರೆಬೆಂದ ಬೇಜವಾಬ್ದಾರಿ ಹಾಗು ಉಡಾಫೆ ಮನೋಭಾವದ ಒಂದು ವರ್ಗ.
ಹೌದು,
ಅಶೋಕ, ಚಾಣಕ್ಯ, ಅಕ್ಬರ್, ಮಂಗಲ್ ಪಾಂಡೆ, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ಪದ್ಮಾವತಿ ಇನ್ನೂ ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಮನರಂಜನೆಗಾಗಿ – ರಾಜಕೀಯಕ್ಕಾಗಿ – ತಮ್ಮ ವಾದದ ಸಮರ್ಥನೆಗಾಗಿ ಉಪಯೋಗಿಸಿಕೊಂಡರೆ ನೈಜ ಇತಿಹಾಸದ ಗತಿಯೇನು.
ವಿಶ್ವದಲ್ಲೇ ಅತ್ಯಂತ ಪ್ರಾಚೀನ ವಿಭಿನ್ನ ವೈವಿಧ್ಯಮಯ ನಾಗರಿಕತೆಯ ಇತಿಹಾಸ ನಮ್ಮದು. ಇನ್ನೂ ಅನೇಕ ಆಳ ಅಧ್ಯಯನದ ಸಂಶೋಧಕರಿಗೆ ಸವಾಲಾಗಿ ಬಗೆದಷ್ಟೂ ಹೊಸ ಹೊಸ ಅರ್ಥಗಳನ್ನು ಹೊಮ್ಮಿಸುತ್ತಿರುವ ಸಾಮಾನ್ಯರ ತಿಳುವಳಿಕೆಗೆ ನಿಲುಕಲಾರದಷ್ಟು ಎತ್ತರದ ಇತಿಹಾಸ ಸಿಂಧೂ ನದಿ ತೀರದ ಭಾರತೀಯ ನಾಗರಿಕತೆ.
ಇತಿಹಾಸ ಗತಿಸಿದ ಘಟನೆಗಳ ದಾಖಲಾತಿ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದೊಂದು ಆ ಕಾಲದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮುಂತಾದ ಎಲ್ಲಾ ಕ್ಷೇತ್ರಗಳ ಒಟ್ಟು ಜೀವನ ಕ್ರಮದ ಮೊತ್ತ ಮತ್ತು ಇತಿಹಾಸಕಾರನ ದೃಷ್ಟಿಕೋನ ಸಹ ಮುಖ್ಯವಾಗಿರುತ್ತದೆ.
ಅಂಕಿ ಸಂಖ್ಯೆಗಳು ಮತ್ತು ಕಾಲ ನಿರ್ಣಯ ಹೊರತುಪಡಿಸಿದರೆ ಇತರ ವಿಷಯಗಳಲ್ಲಿ ವಿಭಿನ್ನ ವಾದ ಮಂಡನೆಗೆ ಸದಾ ಅವಕಾಶವಿರುತ್ತದೆ.
ಇದನ್ನೆಲ್ಲಾ ಮೀರಿ ಸಮಷ್ಟಿ ಪ್ರಜ್ಞೆಯಿಂದ ಮತ್ತು ಮುಕ್ತ ಮನೋಭಾವದಿಂದ ಆಳ ಮತ್ತು ದೀರ್ಘ ಅಧ್ಯಯನದಿಂದ ಮಾತ್ರ ನೀವು ಇತಿಹಾಸದ ಸತ್ಯದ ಹತ್ತಿರಕ್ಕೆ ಹೋಗಬಹುದು.
ಇಲ್ಲಿ ಮನರಂಜನೆ – ರಾಜಕೀಯ – ಸಂಕುಚಿತ ಮನೋಭಾವಕ್ಕೆ ಜಾಗವೇ ಇಲ್ಲ.
ಅಂತಹುದರಲ್ಲಿ ಓಟುಗಳೇ ಮುಖ್ಯವಾಗಿರುವ – ಮನರಂಜನೆಯ ಮುಖಾಂತರ ಹಣ ಮಾಡುವ ಉದ್ದೇಶದ ಈ ರಾಜಕೀಯ ಮತ್ತು ಸಿನಿಮಾ ಮಾಧ್ಯಮದ ಅತ್ಯಂತ Busy ಇರುವ ಮಂದಿಯ ಅರಿವಿಗೆ ಇತಿಹಾಸ ನಿಲುಕುವುದೇ ?
ಇತಿಹಾಸದ ಘಟನೆಗಳಿಂದ ಸ್ಪೂರ್ತಿ ಹೊಂದಿ ಅದಕ್ಕೆ ಕಥೆಯ ರೂಪ ನೀಡಿ ಕ್ರಿಯಾತ್ಮಕವಾಗಿ ಮನರಂಜಿಸಿದರೆ ಯಾವುದೇ ಅಭ್ಯಂತರವಿಲ್ಲ. ಅದರ ಅರ್ಥ ಸಾಮಾನ್ಯ ಜನ ಅದನ್ನು ಇತಿಹಾಸ ಎಂದು ಭ್ರಮಿಸಬಾರದು ಮತ್ತು ಅದಕ್ಕೆ ವಿರೋಧವನ್ನೂ ವ್ಯಕ್ತಪಡಿಸಬಾರದು. ಏಕೆಂದರೆ ಅದು ಕಥೆಯೆ ಹೊರತು ಇತಿಹಾಸವೂ ಅಲ್ಲ – ವಾಸ್ತವವೂ ಅಲ್ಲ.
ಸದ್ಯಕ್ಕೆ ಅಷ್ಟೊಂದು ಪ್ರಬುದ್ದತೆ ನಮ್ಮ ಜನರಲ್ಲಿ ಇನ್ನೂ ಬಂದಿಲ್ಲವಾದ್ದರಿಂದ ಎಂದಿನಂತೆ ಗಲಭೆ ಗೊಂದಲ ರಾಜಕೀಯ ಸೇರಿ ವ್ಯವಸ್ಥೆ ಹದಗೆಡುತ್ತಿದೆ.
ದೇವರೆಂಬ ಕಲ್ಪನೆಗೆ ಹೇಗೆ ಮನುಷ್ಯ ರೂಪದ ಹಲವಾರು ಆಕಾರಗಳನ್ನು ಗುಣಗಳನ್ನು ನೀಡಿ ಅವನನ್ನು ಮಿತಿಗೊಳಿಸಿದೆವೋ ಹಾಗೆ ಇತಿಹಾಸಕ್ಕೂ ಅದೇ ರೀತಿಯ ಕಲ್ಪಿತ ಭಾವನೆಗಳನ್ನು ತುಂಬಿ ಅದನ್ನೂ ದಾರಿತಪ್ಪಿಸುತ್ತಿದ್ದೇವೆ.
ಇದಕ್ಕೆಲ್ಲಾ ಪರಿಹಾರವೆಂದರೆ ನಮ್ಮ ಯೋಚನಾ ಕ್ರಮಗಳನ್ನು ವಿಶಾಲ ಗೊಳಿಸಿಕೊಂಡು ಬುದ್ದಿ ಮಟ್ಟವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ಆಗ ಇತಿಹಾಸ ಯಾವುದು, ಕಲ್ಪನೆ ಯಾವುದು, ಭ್ರಮೆ ಯಾವುದು, ಸುಳ್ಳು ಯಾವುದು, ಮೋಸ ಯಾವುದು ಎಂಬ ಅರಿವು ಮೂಡುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……