ಆರ್ಟಿಕಲ್ 370 ಸಿನಿಮಾಗೆ ಬಂದ ಮುಸ್ಲಿಂ ಕುಟುಂಬಗಳು ಮಾಡಿದ್ದೇನು ಗೊತ್ತೇ?
ವಿಜಯ ದರ್ಪಣ ನ್ಯೂಸ್
ಆರ್ಟಿಕಲ್ 370 ಸಿನಿಮಾಗೆ ಬಂದ ಮುಸ್ಲಿಂ ಕುಟುಂಬಗಳು ಮಾಡಿದ್ದೇನು ಗೊತ್ತೇ?
ಮೊನ್ನೆ ಶನಿವಾರ ನಮ್ಮ ತಂಡದೊಂದಿಗೆ ‘ಆರ್ಟಿಕಲ್ 370’ ಸಿನಿಮಾಗೆ ಹೋಗಿದ್ದೆ. ಜಮ್ಮು ಕಾಶ್ಮೀರವನ್ನು ಅಧಿಕೃತವಾಗಿ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ಏಕೀಕರಣ ಮಾಡಿದ ಸಿನಿಮಾವಾದ್ದರಿಂದ ಓರಿಯನ್ ಮಾಲ್ ಮಲ್ಟಿಪ್ಲೆಕ್ಸ್ ಸಮುಚ್ಚಯದ ಸಿನಿಮಾ ಹಾಲ್ ಕಿಕ್ಕಿರಿದಿತ್ತು. ಸಿನಿಮಾ ಆರಂಭಕ್ಕೆ ಮುನ್ನ ಅತ್ತಂದಿತ್ತ ಕಣ್ಣಾಡಿಸುತ್ತಿದ್ದ ನನಗೆ ಸಾಲು ಸಾಲಾಗಿ ಬಂದ ಬುರ್ಖಾಧಾರಿ ಮುಸ್ಲಿಂ ಹೆಣ್ಣು ಮಕ್ಕಳು, ಅವರ ಪತಿಯರು, ಹಿರಿಯ ಮಹಿಳೆಯರು ಅಶ್ಚರ್ಯ ತಂದರು. ಅವರಲ್ಲಿ ಕೆಲವರು ನನ್ನ ಸಾಲಿನತ್ತಲೇ ನಡೆದುಬಂದು ನಮ್ಮ ಪಕ್ಕದ ಆಸನಗಳಲ್ಲಿ ಕುಳಿತರು. ಹಿಂಬದಿ, ಮುಂಬದಿ ಸಾಲಿನ ಆಸನಗಳಲ್ಲೂ ತುಂಬಿದರು. ಅವರು ನಾಗರಿಕತೆಗೆ ತೆರೆದುಕೊಂಡ ಸ್ಥಿತಿವಂತ ಮುಸ್ಲಿಂ ಕುಟುಂಬದವರಂತೆ ಕಾಣುತ್ತಿದ್ದರು. ಹಸುಗೂಸನ್ನು, ಚಿಣ್ಣರನ್ನೂ ಕರೆತಂದಿದ್ದರು. ಅವರ ಆಗಮನದಿಂದಲೇ ಬೆರಗಾಗಿದ್ದ ನನಗೆ ಅವರ ಪ್ರತಿಕ್ರಿಯೆಗಳು ಹೇಗಿರುತ್ತವೆ ಎಂಬ ಬಗ್ಗೆ ಕುತೂಹಲ ಮೂಡಿತು. ಸಿನಿಮಾ ಆರಂಭಕ್ಕೂ ಮುನ್ನವೇ ಹಸುಗೂಸು ತಾಯಿಗೆ ಕಿರಿಕಿರಿ ಕೊಡತೊಡಗಿತು. ಆಕೆ ಹೊರಹೋಗುವುದು ಮತ್ತೆ ಬರುವುದನ್ನು ಎರಡು ಮೂರು ಸಲ ಮಾಡಿದಳು. ಸಿನಿಮಾ ಆರಂಭವಾಯಿತು. ಹಾಲ್ ಮೌನವಾಯಿತು.
1947 ರಲ್ಲಿ ಪಾಕಿಸ್ತಾನ ಕಾಶ್ಮೀರ ಕಬಳಿಸಲು ಬರುತ್ತಿದ್ದಂತೆಯೇ ರಾಜ ಹರಿಸಿಂಗ್ ಭಾರತದ ನೆರವು ಕೋರಿದ್ದು, ಭಾರತದೊಂದಿಗೆ ಷರತ್ತಿನ ಮೇರೆಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ್ದು, ಮಲಗಿದ್ದ ನೆಹರು ಸರ್ಕಾರ ಎಚ್ಚೆತ್ತುಕೊಳ್ಳುವ ವೇಳೆಗೆ ಪಾಕಿಸ್ತಾನ ಕಾಶ್ಮೀರದ ಒಂದು ಭಾಗ ನುಂಗಿಹಾಕಿದ ದೃಶ್ಯಗಳು, ಆ ನಂತರ ನಮ್ಮ ವಶವಾದ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಅಧ್ಯಕ್ಷ, ಪ್ರಧಾನಿ, ಸಂವಿಧಾನ ಸೃಷ್ಟಿಯಾಗಿದ್ದು ನಂತರ ರಾಜ್ಯಪಾಲರ ಹುದ್ದೆ, ಮುಖ್ಯಮಂತ್ರಿ ಹುದ್ದೆಗಳಿಗೆ ಇವರನ್ನು ಇಳಿಸಿದ್ದು ಆರ್ಟಿಕಲ್ 370 ಮೂಲಕ ವಿಶೇಷ ಸ್ಥಾನಮಾನ ನೀಡಿದ ದೃಶ್ಯಗಳು ಬಿಚ್ಚಿಕೊಳ್ಳತೊಡಗಿದವು. ಕಾಶ್ಮೀರದ ರಾಜಕಾರಣಿಗಳು ಕೇಂದ್ರ ಸರ್ಕಾರಗಳನ್ನು ಬೆದರಿಸುತ್ತಾ ಕಣಿವೆಯ ಸಾಮಾನ್ಯ ಜನರನ್ನು ಹೊರಜಗತ್ತಿನಿಂದ ಕತ್ತಲಲ್ಲಿಟ್ಟು, ಯುವಕರ ಕೈಗೆ ಕಲ್ಲು ಕೊಟ್ಟು, ಪ್ರತ್ಯೇಕತಾವಾದಿಗಳನ್ನು ಸಾಕುತ್ತಾ ವಿಶೇಷ ಸ್ಥಾನಮಾನದ ಹಣವನ್ನು ಲೂಟಿ ಮಾಡುತ್ತಾ ತಮ್ಮದೇ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಪಾಕಿಸ್ತಾನದ ಭಯೋತ್ಪಾದಕರನ್ನು ಒಳಬಿಟ್ಟುಕೊಂಡು ಕುಮ್ಮಕ್ಕು ಕೊಟ್ಟು ಹೇಗೆಲ್ಲ ಆರೇಳು ದಶಕ ಭಾರತದ ರಕ್ತ ಬಸಿದರು. ಹೇಗೆ ಕಾಶ್ಮೀರಿ ಯುವಕರನ್ನು ಶಿಕ್ಷಣ, ಜ್ಞಾನ, ಉದ್ಯೋಗ, ಮಾನವ ಹಕ್ಕುಗಳಿಂದ ವಂಚನೆ ಮಾಡಿದರು ಎಂಬ ಬಗೆಗಿನ ದೃಶ್ಯಗಳು ಬಂದಾಗ ಮುಸ್ಲಿಂ ಮಹಿಳೆಯರು ನಿಜಕ್ಕೂ ಕಣ್ಣೀರಾದರು. ಚಿತ್ರದ ನಾಯಕಿ ಎನ್.ಐ.ಎ. ಅಧಿಕಾರಿ ಉಗ್ರರಿಗೆ ಗುಂಡಿಕ್ಕಿದಾಗ ಚಪ್ಪಾಳೆ ಹೊಡೆದರು. ಅಮಿತ್ ಷಾ ಪಾತ್ರಧಾರಿ ಆರ್ಟಿಕಲ್ 370 ರದ್ದು ಮಸೂದೆ ರಾಜ್ಯಸಭೆಯಲ್ಲಿ ಮಂಡಿಸುವಾಗ ಆಡಿದ ಡೈಲಾಗ್ ಗೆ ಇಡೀ ಚಿತ್ರಮಂದಿರವೇ ಹರ್ಷೋದ್ಗಾರ ಮಾಡಿದಾಗ ಮುಸ್ಲಿಂ ಕುಟುಂಬಗಳೂ ಎಲ್ಲರೊಂದಿಗೆ ಭಾರತ ಮಾತೆಗೆ ಘೋಷಣೆ ಹಾಕಿದ್ದು ಕಂಡು ನನ್ನ ಕಣ್ಣಲ್ಲಿ ನೀರಾಡಿತು. ಕಾಶ್ಮೀರವನ್ನು ಕೇವಲ ರಾಜಕೀಯ ಸ್ವಾರ್ಥ, ಸಂಪತ್ತು ಲೂಟಿಗಾಗಿ ನರಕವಾಗಿಸಿದವರ ಬಗ್ಗೆ ಅಸಹನೆ ವ್ಯಕ್ತಪಡಿಸಿದರು.
ಇಡೀ ಸಿನಿಮಾ ಮುಗಿಯುವವರೆಗೂ ಅವರನ್ನು ಗಮನಿಸಿದ ನನಗೆ ದೇಶಭಕ್ತ ಮುಸ್ಲಿಮರು ನಮ್ಮ ನಡುವೆ ಇದ್ದಾರೆ. ಅವರಿಗೆ ದೇಶದ ಬಗ್ಗೆ ಅಪಾರ ಗೌರವವಿದೆ. ಭಾರತ ಮಾತೆಯ ಬಗ್ಗೆ ಪ್ರೀತಿಯಿದೆ. ಅನಕ್ಷರತೆ, ಅಜ್ಞಾನದ ಕತ್ತಲಲ್ಲಿ ಅವರನ್ನಿಟ್ಟು ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳುತ್ತಿದೆ. ಶಿಕ್ಷಣ, ಜ್ಞಾನ ಪಡೆದು ಮುಖ್ಯವಾಹಿನಿಗೆ ಬಂದ ಮುಸ್ಲಿಮರು ಕಾಂಗ್ರೆಸ್ ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಅನಿಸಿತು.
ಸಿನಿಮಾ ಮುಗಿದಾಗ ಅವರ ಗುಂಪಿನ ಹಿರಿಯರೊಬ್ಬರನ್ನು ಮಾತನಾಡಿಸಿದೆ. ಅವರು ಕಕ್ಕುಲತಿಯಿಂದ ಹೇಳಿದರು ” ನಾವು ಒಬ್ಬ ಮಹಾನುಭವ ಪ್ರಧಾನಿಯನ್ನು ಈಗ ನೋಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದವರು ನಮ್ಮ ಸಮುದಾಯದವರನ್ನು ದಿಕ್ಕು ತಪ್ಪಿಸುತ್ತಾ ಗಮನ ಬೇರೆಡೆಗೆ ಸೆಳೆದು ಸದಾ ನಮ್ಮನ್ನು ಭಯದಲ್ಲಿ ಇರುವಂತೆ ಮಾಡಿ, ನಮ್ಮನ್ನು ರಕ್ಷಿಸುವವರಂತೆ ಸೋಗು ಹಾಕಿಕೊಂಡು ನಮ್ಮವರನ್ನು ಹಾಳು ಗೆಡವಿದವರು. ಒಬ್ಬ ಸಮರ್ಥ ಪ್ರಧಾನಿ ನರೇಂದ್ರ ಮೋದಿಜೀ ನಮ್ಮೆಲ್ಲರ ಕಣ್ಣು ತೆರೆಸುತ್ತಿದ್ದಾರೆ. ಆರ್ಟಿಕಲ್ 370 ಇಂದ ಕಾಶ್ಮೀರ ಜನರಿಗೆ ಯಾವುದೇ ಲಾಭವಿರಲಿಲ್ಲ. ಅದರಿಂದ ಅನೇಕ ತಲೆಮಾರುಗಳೇ ಕಷ್ಟ ನಷ್ಟ ಅನುಭವಿಸಿದವು. ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಯುವಕರಿಗೆ ಉದ್ಯೋಗ ಸಿಗುತ್ತಿದೆ. ಪ್ರವಾಸೋದ್ಯಮ ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂಬುದನ್ನು ಟೀವಿಗಳಲ್ಲಿ ನೋಡಿ ತಿಳಿದು ಈ ಸಿನಿಮಾ ನೋಡಲು ಬಂದೆವು. ಸಾರ್ಥಕವಾಯಿತು. ನಾವಿನ್ನು ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡುತ್ತೇವೆ. ಬಿಜೆಪಿಗೆ ಮತ ಹಾಕುತ್ತೇವೆ” ಎಂದರು. ನಾನೂ ಕೂಡಾ ಸಾರ್ಥಕತೆಯಿಂದಲೇ ಅವರೊಂದಿಗೆ ಹೊರಬಂದೆ. ಹಿಂಬದಿಯಲ್ಲಿ ಬರುತ್ತಿದ್ದ ಅಪ್ಪನ ಹೆಗಲೇರಿ ಕುಳಿತ ಅದೇ ಕುಟುಂಬದ ಪೋರನ ಕಣ್ಣುಗಳಲ್ಲಿ ನಾಳೆಗಳ ಭವಿಷ್ಯ ಕಾಣಿಸಿತು.
ಇವತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡು ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ಜಾರಿ ಮಾಡಿದ್ದಾರೆ. ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನ ಸೇರಿ ವಿವಿಧ ದೇಶಗಳಲ್ಲಿ ಕಿರುಕುಳಕ್ಕಾಗದವರಿಗೆ ಇನ್ನು ಭಾರತೀಯ ಪೌರತ್ವ ಸಿಗಲಿದೆ. ಅವರ ಭವಿಷ್ಯವೂ ಅರಳಲಿದೆ. ಈ ಜೀವಿತಕಾಲದಲ್ಲಿ ಕಾಣಲಾರೆವೇನೋ ಅಂದುಕೊಂಡಿದ್ದನ್ನೆಲ್ಲ ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಕಾರಣರಾದ ನರೇಂದ್ರ ಮೋದಿಯವರಿಗೆ ನಮೋ ನಮಃ.
– ಡಾ.ಚಿ.ನಾ.ರಾಮು
ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್ಸಿ ಮೋರ್ಚಾ