*ಕರಿಮಣಿ ಮಾಲಿಕ ನೀ… ನಲ್ಲಾ*
ವಿಜಯ ದರ್ಪಣ ನ್ಯೂಸ್
*ಕರಿಮಣಿ ಮಾಲಿಕ ನೀ… ನಲ್ಲಾ*
ಓ ನಲ್ಲಾ ನೀನಲ್ಲಾ, ಕರಿಮಣಿ ಮಾಲಿಕ ನೀನಲ್ಲಾ ‘ ಉಪೇಂದ್ರ’ ಚಿತ್ರದ ಈ ಹಾಡು ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆದರೂ ಈ ಹಾಡಿನ ಬಗ್ಗೆ ಚಿತ್ರ ಪ್ರೇಕ್ಷಕ ರ‍್ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಚಿತ್ರ ಮಾಡುವಾಗ ಉಪೇಂದ್ರರವರಿಗಿದ್ದ ಕನಸು ಗುರುಕಿರಣ್ ಎಂಬ ಸಂಗೀತದ ಮಾಂತ್ರಿಕನಿಂದ ರೂಪುಗೊಂಡ ಈ ಹಾಡು, ಸಂಗೀತ ನಿರ್ದೇಶಕ ಗುರುಕಿರಣ್ ಅವರೇ ಹೇಳುವಂತೆ ಉಪೇಂದ್ರರವರ ಕನಸಿನ ಕೂಸು ಈ ಚಿತ್ರ. ಈ ಹಾಡಿಗೆ ಸಂಬಂಧಿಸಿದಂತೆ ಗುರುಕಿರಣ್ ಹೇಳುವಂತೆ ಹಾಡಿನ ಪ್ರತಿಯೊಂದು ಪದಗಳು ಹೊರಗೊಂದು ಅರ್ಥವಿದ್ದರೂ ಒಳಾರ್ಥವೂ ಇರುತ್ತಿತ್ತು. ಓ ನಲ್ಲಾ ನೀನಲ್ಲಾ ಕರಿಮಣಿ ಮಾಲಿಕ ನೀನಲ್ಲಾ. ಹಾಡಿನ ಅರ್ಥ ನೀನು ನನ್ನ ಗಂಡನಲ್ಲ. ಈ ತಾಳಿಯ ಜೊತೆಗಿನ ಕರಿಮಣಿ ಸರವನ್ನು ಕಟ್ಟಿದ ವ್ಯಕ್ತಿಯೇ ಬೇರೆ ಎಂಬುದು ಹಾಡಿನ ಅರ್ಥವಾದರೂ ಅವರ ಒಳಾರ್ಥ ಓ ನಲ್ಲಾ ನೀ…ನಲ್ಲಾ ಕರಿಮಣಿ ಮಾಲಿಕ ನೀ.. ನಲ್ಲಾ. ಅಂದರೆ ಈ ತಾಳಿಯ ಜೊತೆಗಿರುವ ಕರಿಮಣಿ ಮಾಲಿಕ ನೀನೆ ನಲ್ಲಾ ಎಂದಾಗುತ್ತದೆ. ಇದರಲ್ಲಿ ಉಪೇಂದ್ರರವರ ಜಾಣ್ಮೆ ಮತ್ತು ಕ್ರಿಯೆಟಿವಿಟಿಗೆ ಎಂತಹವರೂ ಒಪ್ಪಲೇಬೇಕು.
ಆದರೆ ಚಾಮರಾಜನಗರದ ಹನೂರಿನ ಈ ದಂಪತಿಗಳ ಬಾಳಲ್ಲಿ ಇದೇ ಹಾಡು ಉಗ್ರರೂಪ ತಾಳಿದ್ದೇಕೆ…? ಕುಮಾರ್ ಪತ್ನಿ ರೂಪ ತವರು ಮನೆಯ ಊರಿನಲ್ಲಿ ತನ್ನ ಸೋದರ ಮಾವನೊಂದಿಗೆ ಇದೇ ಹಾಡನ್ನು ಹಾಡಿ ಕುಣಿದು ರೀಲ್ಸ್ ಮಾಡಿ ಇನ್ಸ್ಟಗ್ರಾಂನಲ್ಲಿ ಹಾಕಿದ್ದಾರೆ. ಕುಮಾರನ ಸ್ನೇಹಿತರು ನೋಡಿ ಕುಮಾರ್‌ನಿಗೆ ತೋರಿಸಿ ಚುಡಾಯಿಸಿದ್ದಾರೆ. ಮುಜುಗರಕ್ಕೆ ಒಳಗಾದ ಕುಮಾರ್ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ್ದಾರೆ.
ಇಲ್ಲಿ ತಪ್ಪು ಯಾರದ್ದು..? ಈ ಹಾಡು ಬರೆದು ಚಿತ್ರೀಕರಿಸಿದ ಉಪೇಂದ್ರರದ್ದಾ….? ಅದಕ್ಕೆ ಉತ್ತಮವಾಗಿ ರಾಗ ಸಂಯೋಜನೆ ಮಾಡಿ ಹಾಡು ಗೆಲ್ಲುವಂತೆ ಮಾಡಿದ ಸಂಗೀತ ನಿರ್ದೇಶಕ ಗುರುಕಿರಣ್‌ರದ್ದಾ…? ಚಿತ್ರ ನೋಡಿ ಅದನ್ನು ಗೆಲ್ಲಿಸಿದ ಪ್ರೇಕ್ಷಕರದ್ದಾ…?
ಅದೇ ಹಾಡನ್ನು ವೈರಲ್ ಮಾಡಿದವರದ್ದಾ…? ಹಾಡಿಗೆ ಸೋದರಮಾವನೊಂದಿಗೆ ಹೆಜ್ಜೆ ಹಾಕಿದ ರೂಪಾರವರದ್ದಾ…?ಅದನ್ನು ಕುಮಾರ್ ಗೆ ತೋರಿಸಿ ಚುಡಾಯಿಸಿದ ಆತನ ಸ್ನೇಹಿತರದ್ದಾ ..? ರೂಪಾರವರ ಹಾಡಿನ ರೀಲ್ಸ್ ನೋಡಿ ಮುಜುಗರಕ್ಕೆ ಒಳಗಾಗಿ ನೇಣಿಗೆ ಶರಣಾದ ಕುಮಾರ್ ಅವರದ್ದಾ…? ಭಗವಂತನೇ ಬಲ್ಲ!
-ಬಿ.ಆರ್.ನರಸಿಂಹಮೂರ್ತಿ
ಮೊ: 94481 74932