ಕೈ ನಾಯಕರ ಕಿವಿಗೆ ಕಮಲದ ಹೂ ಸಿಕ್ಕಿಸಿದ ಶೆಟ್ಟರ್

ವಿಜಯ ದರ್ಪಣ ನ್ಯೂಸ್

ಕೈ ನಾಯಕರ ಕಿವಿಗೆ ಕಮಲದ ಹೂ ಸಿಕ್ಕಿಸಿದ ಶೆಟ್ಟರ್


ಕಾಂಗ್ರೆಸ್‌ಗೆ ಕೈಚಾಚುವ ಭರದಲ್ಲಿ ಬಿಜೆಪಿ ಪಕ್ಷಕ್ಕೆ ಜಾಡಿಸಿ ಒದ್ದು ಮಂತ್ರಿಯಾಗುವ ಹೆಜ್ಜೆ ಇಟ್ಟು ಎಡವಿ ಚುನಾವಣೆಯಲ್ಲಿ ಸೋತು ಮೂಲೆ ಸೇರಿದ್ದ ಉತ್ತರ ಕರ್ನಾಟಕದಲ್ಲಿ ತಾನೇ ಲಿಂಗಾಯತರಿಗೆ ಲೀಡರ್ ಎಂದು ತನ್ನ ಚೇಲಾಗಳು ಕರೆಯುವಂತೆ ಮಾಡುತ್ತಿದ್ದ, ಮುಖ್ಯಮಂತ್ರಿ ಮಾಡಿದ್ದ ಪಕ್ಷವನ್ನೇ “ಹಚಾ” ಎಂದು ಕಾಂಗಿಗಳನ್ನು ಪ್ರೀತಿ ಮಾಡಲು ಹೋಗಿದ್ದ ಜಗದೀಶ್ ಶೆಟ್ಟರ್ ಎಂಬ ಸ್ವಘೋಷಿತ ನಾಯಕ ತಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋದ ದಿನದಿಂದಲೂ ತನ್ನ ಕಾರ್ಯಕರ್ತರು, ನಾಯಕರು, ಮುಖಂಡರು ಮಾತೃ ಪಕ್ಷಕ್ಕೆ ಮರಳಿ ಬನ್ನಿ ಎಂದು ದಂಬಾಲು ಬೀಳುತ್ತಿದ್ದರು.

ಅವರೆಲ್ಲರ ಆಶಯದಂತೆ ಬಿಜೆಪಿಗೆ ಮರಳಿದ್ದೇನೆ. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.
ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬಂತಾಗಿರುವ ಈ ಘರ್ ವಾಪ್ಸಿ ಪ್ರಕ್ರಿಯೆಯನ್ನು ಬಿಜೆಪಿ ಪಕ್ಷದ ರಾಜ್ಯ ನಾಯಕರು, ಹಾಗೂ ರಾಷ್ಟಿಯ ನಾಯಕರು ಉತ್ತರ ಕರ್ನಾಟಕವನ್ನು ಲಿಂಗಾಯತ ಮತಗಳ ಮೇಲೆ ಲಿಂಗಾಯತ ಮೇಲೆ ಹದ್ದಿನ ಕಣ್ಣಿಟ್ಟು ಶೆಟ್ಟರ್ ಅವರನ್ನು ಆಪರೇಷನ್ ಕಮಲದ ಯೋಜನೆಯಡಿ ಘರ್ ವಾಪ್ಸಿ ಮಾಡಿದ್ದಾರೆ. ಇಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಬೀಳಿಸಿದ್ದಾರೆ. ಒಂದು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತದಾರ ಗುಂಪುಗುಂಪಾಗಿ ಬಂದು ಬಿಜೆಪಿಗೆ ಮತ ಹಾಕುವುದು. ಇನ್ನೊಂದು ಅದೇ ಗುಂಪು ಕಾಂಗ್ರೆಸ್ ಕಡೆ ವಾಲದಂತೆ ನೋಡಿಕೊಂಡಿರುವುದು. ಭ್ರಮೆ ಏನೆಂದರೆ ಜಗದೀಶ್ ಶೆಟ್ಟರ್ ಇರುವಲ್ಲಿಗೆ ಮತದಾರ ವಾಲುತ್ತಾನೆ ಎಂದು ನಂಬಿರುವುದು ಬಿಜೆಪಿಯಲ್ಲಿ ಇರುವವರೆಗೆ ಹೊಟ್ಟೆ ತುಂಬಾ ಉಂಡರೂ ಉಪವಾಸ ಇರುವಂತೆ ನಟಿಸುವುದು. ಮೈತುಂಬಾ ಬಟ್ಟೆ ಹಾಕಿದ್ದರೂ ಬೆತ್ತಲೆಯಾಗಿದ್ದೇನೆಂದು ಅಕ್ಕಪಕ್ಕದವರನ್ನು ನಂಬಿಸುವುದು ಶೆಟ್ಟರ್‌ಗೆ ಕರತಲಾಮಲಕವಾಗಿತ್ತೆಂದು ಕೆಲವರ ಅರಿವಿಗೇ ಬರಲಿಲ್ಲ. ಬಿಜೆಪಿಯಲ್ಲಿದ್ದಾಗ ಚುನಾವಣೆಗೆ ನಿಲ್ಲಲು ಟಿಕೆಟ್ ನಿರಾಕರಿಸಿದ ತಕ್ಷಣ ಕೋತಿಗಳು ಮರದಿಂದ ಮರಕ್ಕೆ ಹಾರುವಷ್ಟೇ ಸರಾಗವಾಗಿ ಕಾಂಗ್ರೆಸ್‌ಗೆ ಹಾರಿ ಟಿಕೆಟ್ ಗಿಟ್ಟಿಸಿ ಸೋತು ಮೇಲ್ಮನೆ ಸ್ಥಾನಕ್ಕೆ ಖುಷಿಪಟ್ಟುಕೊಂಡು

ಇನ್ನೇನು ಸಿದ್ದರಾಮಯ್ಯನ ಸರಕಾರದಲ್ಲಿ ಪ್ರಭಾವಿ ಮಂತ್ರಿಯಾಗಲು ಹೊಸಬಟ್ಟೆ ಹೊಲಿಸಿ ಕಾದು ಕಾದು ಸುಸ್ತಾಗಿ ಇಲ್ಲಿ ಏನೂ ಗಿಟ್ಟುತ್ತಿಲ್ಲವೆಂದು ನಿರಾಸೆಯಿಂದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡುತ್ತಿದೆಯೆಂಬ ಸೂಕ್ಷö್ಮ ಗಮನಕ್ಕೆ ಬರುತ್ತಲೇ ಬಿಜೆಪಿಗೆ ಮರಳಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಟವೆಲ್ ಹಾಸಿ ನಿಂತಿರುವ ಮಾನ್ಯ ಜಗದೀಶ್ ಶೆಟ್ಟರ್ ಎಂಬ ಮಹನೀಯನನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಅಲ್ಲಿನ ಕಾರ್ಯಕರ್ತರು ಪೆದ್ದರಂತೂ ಅಲ್ಲ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪರ‍್ರಂತಾ ಹಾರಿ ಹೋಗುವ ಇನ್ನೊಬ್ಬ ಉತ್ತರ ಕರ್ನಾಟಕದ ಪಕ್ಷಾಂತರ ಪಕ್ಷಿ ಲಕ್ಷö್ಮಣ ಸವದಿ ಬಿಜೆಪಿ ಕಡೆ ವಾರೆ ನೋಟ ಹಾಕುತ್ತಿದ್ದಾರೆಂದು ಸಣ್ಣ ಸಂಶಯ ಕಾಂಗ್ರೆಸ್‌ಗೆ ಬಂದು ಅವರನ್ನು ಯಾವುದಾದರೂ ಮಂತ್ರಿ ಮಾಡುವ ಅವಸರಕ್ಕೆ ಬಿದ್ದಿದೆ. ಆದರೂ ಸವದಿಯವರ ಕಣ್ಣು ಬಿಜೆಪಿ ಕಡೆಗಿದೆ.

ಜಗದೀಶ್ ಶೆಟ್ಟರು ಬಿಜೆಪಿ ಸರಕಾರವಿದ್ದಾಗ ಪ್ರಮುಖ ಖಾತೆಯ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಡೆದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಇದೆ. ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಟಿಕೆಟ್ ಪಡೆದು ಮಕಾಡೆ ಮಲಗಿ ಉತ್ತರ ಕರ್ನಾಟಕದ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಮೇಲ್ಮನೆಗೆ ರವಾನಿಸಿದರೂ ಕಿತ್ತಾಗಿದ್ದು ಅಷ್ಟರಲ್ಲೇ ಇದೆ. ಮರಳಿಗೂಡಿಗೆ ಬಂದಿರುವ ಶೆಟ್ಟರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಏನಾದರೂ ಕಿತ್ತಾಕುತ್ತಾರೆ ಎನ್ನುವುದು ಭ್ರಮೆ.


-ಬಿ.ಆರ್. ನರಸಿಂಹಮೂರ್ತಿ
ಮೊ. : 9448174932