ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ
ವಿಜಯ ದರ್ಪಣ ನ್ಯೂಸ್
ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ: ಗ್ರಾಮೀಣ ಬಂದ್ ಗೆ ಬೆಂಬಲಿಸಿದ ಚನ್ನರಾಯಪಟ್ಟಣ ರೈತ ಹೋರಾಟಗಾರರು….
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಧರಣಿ ಸ್ಥಳದಲ್ಲಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಮತ್ತು ಅಲ್ಲಿ ರೈತರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ರೈತರು ಪ್ರತಿಭಟನಾ ಸಭೆ ನಡೆಸಿದರು.
ಒಕ್ಕೂಟ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದು ಕೃಷಿ ಸಂಬಂಧಿತ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿ ಗಡಿಯಲ್ಲಿ ಒಂದು ವರ್ಷಕ್ಕು ಹೆಚ್ಚು ಕಾಲ ಧರಣಿ ನಡೆಸಿದ ರೈತರಿಗೆ ಮೋದಿ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವ ಬರವಸೆ ನೀಡಿದ್ದೂ ಅಲ್ಲದೆ ರೈತರ ಮುಖ್ಯ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ದವಾಗಿಸುವ ಬರವಸೆಯನ್ನೂ ನೀಡಿತ್ತು.
ಇದಲ್ಲದೆ, ಈ ಹಿಂದೆ 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಕೂಡ, ಎಂ ಎಸ್ ಸ್ವಾಮಿನಾಥನ್ ವರದಿಯ ಅನುಸಾರ C2 + 50% ನಂತೆ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಆದರೆ ದೆಹಲಿ ರೈತ ಚಳುವಳಿ ನಡೆದು ಮೂರು ವರ್ಷಗಳಾದರು ಈ ಬಗ್ಗೆ ಕ್ರಮ ಕೈಗೊಳ್ಳಳ್ಳದೆ, ಕನಿಷ್ಠ ಬೆಂಬಲ ಬೆಲೆ ಸಾದ್ಯವೇ ಇಲ್ಲ ಎಂದು ಹೇಳುತ್ತಿರುವುದು ಖಂಡನೀಯ.
ಒಕ್ಕೂಟ ಸರ್ಕಾದ ಈ ಕ್ರಮವನ್ನು ವಿರೋಧಿಸಿ ದೇಶದ ವಿವಿಧ ರೈತರು, ಅದರಲ್ಲೂ ಪಂಜಾಬ್ ಮತ್ತು ಹರಿಯಾಣ ರೈತರು ರಾಷ್ಟ್ರ ರಾಜಧಾನಿಯಲ್ಲಿ ಜಮಾವಣೆ ಗೊಳ್ಳುತ್ತಿರುವಾಗ ಅವರ ಮೇಲೆ ಅಶ್ರುವಾಯು ಸಿಡಿಸಿ, ಬಲಪ್ರಯೋಗದ ಮೂಲಕ ರೈತರ ತಡೆಯಲು ಪ್ರಯತ್ನಿಸುತ್ತಿರುವ ಸರ್ಕಾರಗಳ ವಿರುದ್ಧ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ದೆಹಲಿ ರೈತರ ನ್ಯಾಯಯುತವಾದ ಬೇಡಿಕೆಯನ್ನು ಬೆಂಬಲಿಸಿ ಅವುಗಳ ಈಡೇರಿಸುವಂತೆ ಸಮಿತಿಯು ಒತ್ತಾಯಿಸಿದೆ.
ಇಂದು ದೇಶಾದ್ಯಂತ ಎಸ್ ಕೆ ಎಂ ಕರೆ ಕೊಟ್ಟಿರುವ ಗ್ರಾಮೀಣ ಬಂದಿಗೆ ಬೆಂಬಲಿಸಲು ಧರಣಿ ಸ್ಥಳದಲ್ಲಿ ಇಂದು ಸಭೆ ಸೇರಿದ್ದ ರೈತರ ಜೊತೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚಂದ್ರ ತೇಜಸ್ವಿ ಅವರು “ಭಾರತದಾದ್ಯಂತ ಒಕ್ಕೂಟ ಸರ್ಕಾರ ನಡೆಸುತ್ತಿರುವ ನೀತಿಯ ವಿರುದ್ಧ ರೈತರು ಕಾರ್ಮಿಕರು ದಲಿತರು ಸೇರಿದಂತೆ ದುಡಿಯುವ ಜನ ತಿರುಗಿ ಬಿದ್ದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಸಾವಿರಾರು ಸಂಖ್ಯೆಯಲ್ಲಿ ದೆಹಲಿಯ ಹೊರವಲಯಕ್ಕೆ ಪ್ರವೇಶಿಸುತ್ತಿದ್ದಂತೆ ಒಕ್ಕೂಟ ಸರ್ಕಾರ ಚಿತ್ರಹಿಂಸೆ ನೀಡಿ ಅವರನ್ನು ಬೆದರಿಸಿ ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ.
ಆದರೆ ಅಲ್ಲಿರುವ ರೈತರು ಹಠಕ್ಕೆ ಬಿದ್ದವರಂತೆ ಮುನ್ನುಗ್ಗುತ್ತಿದ್ದಾರೆ. ರೈತರ ಆ ಒಗ್ಗಟ್ಟಿನ ಹೋರಾಟವನ್ನು ಎದುರಿಸುವ ಎದೆಗಾರಿಕೆ ಈ ಸರ್ಕಾರಗಳಿಗೆ ಇರಲು ಸಾದ್ಯವೇ ಇಲ್ಲ. ಇಲ್ಲಿರುವ ನಾವುಗಳು ನೆನಪಿಡಬೇಕಾದ ವಿಷಯವೇನೆಂದರೆ, ಅಲ್ಲಿ ನಡೆಯುತ್ತಿರುವ ಹೋರಾಟ ನಮ್ಮೆಲ್ಲರಿಗಾಗಿ, ಅಲ್ಲಿನ ರೈತರು ಆ ಹಿಂಸೆಯನ್ನು ಅನುಭವಿಸುತ್ತ ನಮಗಾಗಿ ಎದೆಕೊಡುತ್ತಿದ್ದಾರೆ.
ಒಕ್ಕೂಟ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತಂದು ಕಾನೂನು ಬದ್ಧಗೊಳಿಸಿದರೆ ಅದರಿಂದ ನಮ್ಮೆಲ್ಲರಿಗೂ ಲಾಭವಾಗುತ್ತದೆ. ಆದ್ದರಿಂದ ನಾವೆಲ್ಲರೂ ಅಲ್ಲಿನ ರೈತ ಹೋರಾಟವನ್ನು ಬೆಂಬಲಿಸಲೇಬೇಕು. ನಾವು ಮಾತ್ರವಲ್ಲ ಅನ್ನ ತಿನ್ನುವ ಎಲ್ಲರೂ ರೈತರನ್ನು ಬೆಂಬಲಿಸಬೇಕು” ಎಂದರು.
ಸಭೆಯಲ್ಲಿ ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ಥಪ್ಪ, ಚನ್ನರಾಯಪಟ್ಟಣ ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ಮೋಹನ್ ಕುಮಾರ್, ವೆಂಕಟರಮಣಪ್ಪ , ನಾರಾಯಣಮ್ಮ ಸೇರಿದಂತೆ 13 ಹಳ್ಳಿಯ ನೂರಾರು ರೈತರು, ರೈತ ಮುಖಂಡರು, ಯುವಜನರು, ಮಹಿಳೆಯರು ಭಾಗವಹಿಸಿದ್ದರು.