ಪರೀಕ್ಷೆಯ ಹಬ್ಬ ಸಂಭ್ರಮಿಸಿ : ಜಯಶ್ರೀ .ಜೆ.ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್

ಪರೀಕ್ಷೆಯ ಹಬ್ಬ ಸಂಭ್ರಮಿಸಿ : ಜಯಶ್ರೀ .ಜೆ.ಅಬ್ಬಿಗೇರಿ

ಇನ್ನೇನು ಕೆಲ ದಿನಗಳಲ್ಲಿ ಸಾಲು ಸಾಲು ಪರೀಕ್ಷೆಗಳು ಬರಲಿವೆ. ಅಂದರೆ ಒಂದು ತರಹ ಪರೀಕ್ಷೆಯ ಸುಗ್ಗಿ, ಪರೀಕ್ಷೆ ಹಬ್ಬ ಅನ್ನಿ. ಇದೇನ್ರಿ ನೀವು ಪರೀಕ್ಷೆಯನ್ನು ಹಬ್ಬಕ್ಕೆ ಹೋಲಿಸುತ್ತಿದ್ದೀರಿ ಅನ್ನುವ ಪ್ರಶ್ನೆ ನಿಮ್ಮದು ಅಂತ ನನಗೆ ಖಂಡಿತ ಗೊತ್ತು. ಕಿರಿಕಿರಿ ಎನಿಸುವ ಪರೀಕ್ಷೆಯನ್ನು ಅದ್ಹೇಗೆ ಸಂಭ್ರಮಿಸುವುದು ಅಂತೀರೇನು? ಪರೀಕ್ಷೆಯೆಂಬುದು ನೀವು ಊಹಿಸಿರದ ಯಾವುದೋ ಮೂಲೆಯಿಂದ ಬಂದಿರುವಂತಹದು ಅಲ್ಲ. ಒಮ್ಮೆಲೇ ಬಂದು ಬೀಳುವಂತಹದಲ್ಲ. ಆಕಸ್ಮಿಕವಾದುದು ಅಲ್ಲ. ಮಳೆಯ ಹಾಗೆ ಯಾವಾಗ ಬರುತ್ತದೆಯೋ ಏನೋ ಅನ್ನುವಂತಹದು ಅಲ್ಲ. ಬಂದರೆ ಬಂತು ಹೋದರೆ ಹೋಯ್ತು ಎನ್ನುವ ಅನಿಶ್ಚತೆಯನ್ನೂ ಹೊಂದಿಲ್ಲ.

 

ಯಾವಾಗ ಗೊತ್ತಾಗುತ್ತದೆ?

ತರಗತಿಗಳಿಗೆ ಪ್ರವೇಶಾತಿ ಪಡೆಯುವಾಗಲೇ ಗೊತ್ತಿರುತ್ತದೆ ಮುಂದೊಂದು ದಿನ ವಾರ್ಷಿಕ ಪರೀಕ್ಷೆಯನ್ನು ಎದುರಿಸಲಿದ್ದೇನೆ ಎಂದು ಹೀಗಿದ್ದಾಗಲೂ ಪರೀಕ್ಷಾ ಭಯ ಏಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಅಂದು ಕಲಿಸಿದ್ದನ್ನು ಅಂದಂದೇ ಓದಿ ಅರ್ಥೈಸಿಕೊಳ್ಳುವುದಿಲ್ಲ. ಮೇಲಾಗಿ ಪರೀಕ್ಷೆಯನ್ನು ಎದುರಿಸಲು ಸರಿಯಾದ ಸಿದ್ಧತೆ ಮೊದಲಿನಿಂದಲೂ ಮುಂದೂಡುತ್ತಲೇ ಬರಲಾಗುತ್ತದೆ.
ಭಯ ಬಿಟ್ಟವರಿಗೆ ಜಯ
ಮೊದಲಿನಿಂದ ತಯಾರಿ ಮಾಡುತ್ತ ಬಂದವರಿಗೆ ಪರೀಕ್ಷಾ ಭಯ ಕಾಡುವುದಿಲ್ಲ. ಭಯ ಬಿಟ್ಟವರಿಗೆ ಜಯ ಎಂಬಂತೆ, ಸಿದ್ಧತೆ ಮಾಡಿಕೊಂಡವರು ಟಾಪರ್ ಆಗಿ ಹೊರಹೊಮ್ಮುತ್ತಾರೆ. ರ‍್ಯಾಂಕ್ ಪಡೆಯುತ್ತಾರೆ. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಜೀವನದಲ್ಲಿ ಉತ್ತಮ ಸ್ಥಾನವು ಸಹ ಲಭಿಸುವ ಅವಕಾಶಗಳು ಅಧಿಕ.

ಓದಿದರೆ ಸಾಲದು

ಪರೀಕೆಗೆ ಕೇವಲ ಓದಿದರೆ ಸಾಲದು ಅದರಾಚೆಗೂ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಪರೀಕ್ಷೆಗಳನ್ನು ಭಯವಿಲ್ಲದೇ ಬರೆಯುವುದಾದರೂ ಹೇಗೆ? ಎನ್ನುವ ಕಾಡುವ ಪ್ರಶ್ನೆಗೆ ಇಲ್ಲಿವೆ ಕೆಲವು ಸಲಹೆಗಳು. ಜತೆಗೆ ಬೇಕು ಬೇಡಗಳ ಪಟ್ಟಿಯೂ ಇಲ್ಲಿದೆ.

ಓದುವ ಕೊಠಡಿ

ಓದುವ ಕೊಠಡಿಯಲ್ಲಿ ಸಾಕಷ್ಟು ಗಾಳಿ ಬೆಳಕು ಇರಲಿ. ನೀವೇ ತಯಾರಿಸಿದ ನಿಮ್ಮ ಓದಿನ ವೇಳಾಪಟ್ಟಿ ಜತೆಗಿರಲಿ. ಪರೀಕ್ಷಾ ವೇಳಾಪಟ್ಟಿಯನ್ನು ಗೋಡೆಗೆ ಅಂಟಿಸಿಕೊಳ್ಳಿ. ಅಧ್ಯಯನದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿಸದೇ ಕೈಗೆ ಸಿಗುವಂತೆ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ. ಕೊಠಡಿಯಲ್ಲಿ ಬೇಡದ ವಸ್ತುಗಳು ಬೇಡ. ಬೇಡದ ವಿಷಯಗಳು ಬೇಡ. ಮೊಬೈಲ್ ಬಳಕೆಯಂತೂ ಬೇಡವೇ ಬೇಡ. ಸೂತ್ರಗಳು, ಪ್ರಮೇಯಗಳು ನಕ್ಷೆಗಳನ್ನು ಗೋಡೆಗೆ ಹಾಕಿ ಪ್ರತಿದಿನ ಕಣ್ಣಾಡಿಸಿ ಮನನ ಮಾಡಿಕೊಳ್ಳಿ. ಮನೆಯಲ್ಲಿ ಓದುವ ಕೊಠಡಿಯ ಸೌಲಭ್ಯವಿಲ್ಲದಿದ್ದರೆ ಶಾಂತವಿರುವ ಜಾಗವನ್ನು ಆಯ್ದುಕೊಳ್ಳಿ. ದಿನನಿತ್ಯ ಓದು ಅಲ್ಲಿಯೇ ಸಾಗಲಿ.

ಒತ್ತಾಯಕ್ಕೆ ಓದದಿರಿ

ಪಾಲಕರ ಪೋಷಕರ ಒತ್ತಾಯಕ್ಕೆ ಇಲ್ಲವೇ ಒತ್ತಡ ಹಾಕುತ್ತಿದ್ದಾರೆಂದು ಓದದಿರಿ. ನಿರಂತರ ಅಧ್ಯಯನ ನಿಮಗಾಗಿ ಮಾಡಿ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಿಮ್ಮ ಬಾಳ ಶಿಲ್ಪಿಗಳು ನೀವೇ. ನಿಮಗಾಗಿ ಓದಿ. ಕೊನೆಯ ಕೆಲವೇ ಕೆಲವು ದಿನಗಳಲ್ಲಿ ಓದನ್ನು ಹೇಗೆ ಮುಗಿಸುವುದು ಅಂತ ಗಾಬರಿಯಾಗಬೇಡಿ. ಪರೀಕ್ಷಾ ವೇಳಾಪಟ್ಟಿಯನ್ನು ನೋಡಿ, ಅದಕ್ಕೊಂದು ಯೋಜನೆ ಹಾಕಿಕೊಂಡು ಓದಿ. ನಿಮಗಾಗಿ ಓದುವಾಗ ಅಲ್ಲಿ ಭಯದ ಪ್ರಶ್ನೆಯೇ ಇಲ್ಲ. ಏನಿದ್ದರೂ ವಿಶ್ವಾಸವೇ. ಆತ್ಮವಿಶ್ವಾಸವೊಂದಿದ್ದರೆ ಸಾಕು ಅದು ನಿಮ್ಮನ್ನು ಗೆಲ್ಲಿಸುತ್ತದೆ.

ಮಾದರಿ ತಿಳಿದುಕೊಳ್ಳಿ

ಪ್ರಶ್ನೆ ಪತ್ರಿಕೆಯ ಮಾದರಿಯನ್ನು ತಿಳಿದುಕೊಳ್ಳಿ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ತೆಗೆಯಿರಿ. ಒಂದೆಡೆ ಮೂರು ಗಂಟೆಗಳವರೆಗೆ ಕುಳಿತು ಪ್ರ್ಯಾಕ್ಟಿಸ್‌ಗಾಗಿ ಉತ್ತರ ಪತ್ರಿಕೆಯನ್ನು ಬಿಡಿಸಿ. ಪರೀಕ್ಷೆಯಲ್ಲಿ ಸಮಯ ಪಾಲನೆ ಮುಖ್ಯ. ಯಾವ ಪ್ರಶ್ನೆಗೆ ಎಷ್ಟು ಸಮಯ ನೀಡಬೇಕು ಎನ್ನುವುದು ತಿಳಿಯುತ್ತದೆ. ನೀವು ಬರೆದ ಉತ್ತರ ಪತ್ರಿಕೆಯನ್ನು ಶಿಕ್ಷಕರಿಗೆ ಮಾರ್ಗದರ್ಶಕರಿಗೆ ತೋರಿಸಿ. ಉತ್ತರ ಬರೆಯುವ ವಿಧಾನ ತಿಳಿದುಕೊಳ್ಳಿ. ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

ಬಾಯಿಪಾಠ ಬೇಡ

ಉತ್ತರಗಳನ್ನು ಬಾಯಿಪಾಠ ಮಾಡುವ ವಿಧಾನವನ್ನು ಕೈಬಿಡಿ. ಬದಲಾಗಿ ಪಠ್ಯವನ್ನು ಚೆನ್ನಾಗಿ ಓದಿ ನೆನಪಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ. ಎಂಟ್ಹತ್ತು ಸಲ ಓದಿ ಓದಿ ಬಾಯಿಪಾಠ ಮಾಡುವುದಕ್ಕಿಂತ ಒಂದೆರಡು ಸಲ ಬರೆದು ತೆಗೆಯುವುದು ಒಳ್ಳೆಯದು. ಬರೆದು ತೆಗೆಯುವ ಈ ವಿಧಾನದಿಂದ ಯಾವುದೇ ಪ್ರಶ್ನೆ ಕೇಳಿದರೂ ನೀವು ಉತ್ತರಿಸಲು ಸಮರ್ಥರಾಗಿರುತ್ತೀರಿ. ನಮ್ಮ ನಿಜವಾದ ಸಂಪತ್ತು ತಲೆ ಸಂಪತ್ತು ಎಂಬುದನ್ನು ಮರೆಯದಿರಿ.

ಆರಂಭಶೂರತನ ಬೇಡ

ಪರೀಕ್ಷೆ ಸಮೀಪಿಸುತ್ತಿದೆ ಎಂದು ನಡುವೆ ವಿಶ್ರಾಂತಿಯಿಲ್ಲದೇ ಸತತ ಐದಾರು ಗಂಟೆ ಓದುವುದು ಶುದ್ಧ ತಪ್ಪು. ಒಂದು ದಿನ ಬಹಳಷ್ಟು ಓದಿ ಆರಂಭಶೂರರಾಗಿ ಮರುದಿನ ಮಲಗಿಬಿಡುತ್ತೀರಿ. ಈ ರೀತಿಯ ಓದು ಗೋರ್ಕಲ್ಲಿನ ಮೇಲೆ ನೀರು ಸುರಿದಂತೆ ವ್ಯರ್ಥವಾಗುವುದು. ಎಲ್ಲಿದ್ದೆ ಸಂಗಯ್ಯ ಅಂದರೆ ಅಲ್ಲೇ ಇದ್ದೆ ಅನ್ನುವಂತೆ ಆಗುತ್ತದೆ. ಅಷ್ಟೇ ಅಲ್ಲ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದು. ಒಂದು ಗಂಟೆ ಓದಿದ ನಂತರ ಐದ್ಹತ್ತು ನಿಮಿಷಗಳ ಬ್ರೇಕ್ ಇರಲಿ. ಅಂದಾಗ ನಿಮ್ಮ ಚಿತ್ತ ಓದಿನತ್ತ ಕೇಂದ್ರೀಕೃತವಾಗುತ್ತದೆ. ಆರಂಭಶೂರತನ ಬಿಟ್ಟು ಅಂತಿಮ ವೀರರಾಗುವುದನ್ನು ಕಲಿತುಕೊಳ್ಳಿ. ಉದಾಸೀನತೆಯನ್ನು ತೊಡೆದು ನಿರಂತರತೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿರಂತರ ಶ್ರಮವಹಿಸಿದರೆ ಮಾತ್ರ ಗೆಲುವು ಒಲಿಯುವುದು.

ಯೋಗ ಧ್ಯಾನ ಬೇಕು

ಪರೀಕ್ಷೆಗಳು ಸಮೀಪಿಸುತ್ತಿವೆ ಎನ್ನುವ ಕಾರಣಕ್ಕೆ ಸಮಯವನ್ನು ಕೇವಲ ಓದಿಗೆಂದೇ ಮೀಸಲಿಟ್ಟು ಆಟೊಟಗಳಿಗೆ ದೈಹಿಕ ಕಸರತ್ತುಗಳಿಗೆ ನಿಷೇಧ ಬೇಡ. ಮಾನಸಿಕ ಒತ್ತಡದ ನಿವಾರಣೆಗಾಗಿ ವ್ಯಾಯಾಮ ಮುಖ್ಯ. ಯಾವಾಗಲೂ ಒಂದು ವಿಷಯದ ಕೇಂದ್ರಕ್ಕೆ ಲಗ್ಗೆ ಇಡಬೇಕೆಂದರೆ ಪ್ರಾಣಾಯಾಮ ಧ್ಯಾನ ರೂಢಿಸಿಕೊಳ್ಳಬೇಕು. ಪುಸ್ತಕವನ್ನು ಖರೀದಿಸಿ ನಮ್ಮದಾಗಿಸಿಕೊಳ್ಳಬಹುದು. ಆದರೆ ಅದರಲ್ಲಿಯ ಜ್ಞಾನ ನಮ್ಮದಾಗಿಸಿಕೊಳ್ಳಲು ಅದರತ್ತ ಚಿತ್ತ ಹರಿಸಲೇಬೇಕು. ಮನೋನಿಯಂತ್ರಣಕ್ಕೆ ಧ್ಯಾನದ ಅಗತ್ಯವಿದೆ. ಪರೀಕ್ಷೆಗಳು ಸನಿಹದಲ್ಲಿರುವಾಗ ದೈಹಿಕ ಆರೋಗ್ಯ ಕಾಪಿಟ್ಟುಕೊಳ್ಳಲು ಪ್ರತಿದಿನ ಸಮಯ ಮೀಸಲಿಟ್ಟು ಯೋಗ,ಧ್ಯಾನ,ನಡಿಗೆ ವ್ಯಾಯಾಮ ಮಾಡಲೇಬೇಕು ಮರೆಯುವಂತಿಲ್ಲ. ಏಕಾಗ್ರತೆಯಿಂದ ಓದಿನಲ್ಲಿ ಮನಸ್ಸನ್ನು ಮಗ್ನಗೊಳಿಸಲು ಇವು ಸಹಕಾರಿ.

ಆಹಾರ ಹೀಗಿರಲಿ

ಕರಿದ ಪದಾರ್ಥಗಳನ್ನು ಬಿಡಿ. ಹೊರಗಿನ ಕುರುಕಲು ತಿಂಡಿ ಬಿಡಿ. ಮನೆಯಲ್ಲಿ ತಯಾರಿಸಿದ ಸಾತ್ವಿಕ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಮೊಸರು ಮಜ್ಜಿಗೆಯೂ ಇರಲಿ.

ಕೊನೆ ಹನಿ

ನೀವು ಯಾವ ವಿಷಯದ ಬಗ್ಗೆ ಸತತವಾಗಿ ಯೋಚಿಸುತ್ತೀರೋ ಅದೇ ನೀವಾಗುತ್ತ ಹೋಗುತ್ತೀರಿ. ಸತತ ಅಭ್ಯಾಸದಿಂದ ಮಾತ್ರವೇ ಜ್ಞಾನ ಸಿದ್ಧಿಸುತ್ತದೆ. ದಿನಂಪ್ರತಿ ಐದಾರು ಗಂಟೆಯಷ್ಟು ಓದಿಗಾಗಿ ಎತ್ತಿಡಿ. ನಿರಂತರವಾಗಿ ಅಭ್ಯಾಸ ಮಾಡಿ ಇಲ್ಲದಿದ್ದರೆ ಪರೀಕ್ಷೆ ನಿಮ್ಮ ಹಿಡಿತಕ್ಕೆ ಸಿಗುವುದಿಲ್ಲ. ಬೆಂಬತ್ತಿದ ಭಯವೂ ಬೆನ್ನು ಬಿಡುವುದಿಲ್ಲ. ಇವೆಲ್ಲವನ್ನೂ ತಪ್ಪದೇ ಪಾಲಿಸಿದಾಗ ಪರೀಕ್ಷೆಯೆಂಬ ಹಬ್ಬವನ್ನು ಸಂಭ್ರಮಿಸಬಹುದು ಅಲ್ಲವೇ?..

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨