ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ.

ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ.

ಉತ್ಥಾನ’ ಮಾಸಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದ ದಿನಗಳವು. ತಿಂಗಳಿಗೆ ಸರಿ ಸುಮಾರು ೧೬೦೦ ರೂ ಸಂಬಳದ ನನಗೆ ಬೆಂಗಳೂರು ಮತ್ತು ಬೆಂಗಳೂರಿಗೆ ನಾನು ಅಪ್ಪಟ ಅಪರಿಚಿತರೇ ಬಿಡಿ. ಬೆಂಗಳೂರು ನನ್ನ ಪಾಲಿಗೆ ಅಗಾಧ ವಸ್ತು-ವಿಷಯ-ವ್ಯಕ್ತಿಗಳನ್ನು ಒಡಲೊಳಗಿಟ್ಟು ಕೊಂಡ ಮಾಯಾಗೋಳದಂತೆಯೇ ಭಾಸವಾಗುತ್ತಿದ್ದುದೂ ಕೂಡ ಇದೇ ಬೆಂದಕಾಳೂರು.

ನಿತ್ಯೋತ್ಸವ ಕವಿ ನಿಸಾರ್ ಅಹಮದ್

ಇಂಥಹ ಬೆಂಗಳೂರು ಎಂಬ ಊರು ಹಾಗೆ ಸೂರಿಲ್ಲದ ಎಲ್ಲರನ್ನು ತಳ ಊರಲು ಬಿಡುವುದೂ ಇಲ್ಲ ಎಂಬ ಸತ್ಯದ ನಡುವೆ ಸಿಕ್ಕದ್ದು ಮತ್ತದೇ ಕವಿತೆಗಳು, ಸಾಹಿತ್ಯ ಸಾಂಗತ್ಯ. ಬ್ರಿಗೇಡ್ ರೋಡಿನ ಪಬ್ಬುಗಳಿಗಿಂತ ಹೆಚ್ಚು ಆಕರ್ಶಣೀಯ ಎನಿಸಿದ್ದು ಬಸವನಗುಡಿ. ಅಲ್ಲಿಯ ಪರಿಷೆ, ಮಾಸ್ತಿಯವರ ಮನೆ, ಅನತಿ ದೂರದಲ್ಲಿದ್ದ ಬಿ ಪಿ ವಾಡಿಯ ರೋಡಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಧ್ ಕಲ್ಚರ್, ಗೋಖಲೆ ಸಾರ್ವಜನಿಕ ಸಂಸ್ಥೆ, ನೆಟ್ಟಕಲ್ಲಪ್ಪ ಸರ್ಕಲಿನ ದೋಸೆ ಕ್ಯಾಂಪ್, ಡಿ.ವಿ. ಗುಂಡಪ್ಪನವರ ಮನೆ, ಡಿವಿಜಿ ರೋಡಿನ ಬೆಣ್ಣೆ ಗುಲ್ಕನ್, ವಿದ್ಯಾರ್ಥಿಭವನದ ಗರಿಗರಿ ದೋಸೆ, ಬ್ಯೂಗಲ್ ರಾಕ್ ಪಾರ್ಕಿನ ಬೆಂಚುಗಳಲಿ ಮೈ-ಕೈ ಬೆಸೆದುಕೊಂಡ ಬೆಚ್ಚನೆಯ ನವ-ಯುವ ಪ್ರೇಮಿಗಳು. ಹೀಗೆ ಪಟ್ಟಿಮಾಡುತ್ತಾ ಹೋದರೆ ಪದಗಳಿಗೆ ಬರ ಬರಬಹುದೇನೋ ಎಂಬಷ್ಟು. ಬೆಂಗಳೂರೆಂಬ ಈ ಬೆಂಗಳೂರು ನನ್ನೊಳಗಿನ ಅಲೆಮಾರಿಯನ್ನು ಹುಟ್ಟು ಹಾಕಿದ್ದು, ಕವಿ ಮತ್ತು ಕಾವ್ಯದೊಂದಿಗೆ ಬಹುಮುಖ್ಯವಾಗಿ ನಾನು ಧೇನಿಸುತ್ತಿದ್ದ ಆರಾಧಿಸುತ್ತಿದ್ದ ಕವಿ ನಿಸಾರ್ ಅಹಮದರನ್ನು ಆತ್ಮಾಂತರ್ಗತವಾಗಿ ನನ್ನೊಂದಿಗೆ ಬೆಸೆದದ್ದೇ ಹಾಗೆ.

ಪುಂಡ ಪೋಕರಿಗಳು ಎಂದೇ ಬಿರುದಾಂಕಿತರಾದ ನಾವೊಂದಷ್ಟು ಗೆಳೆಯರು ಬೆಂಗಳೂರನ್ನು ಗೊತ್ತು-ಗುರಿ ಯಾವುದೂ ಇಲ್ಲದೆ ಸುಖಾ ಸುಮ್ಮನೆ ತಿರುಗುವುದನ್ನೇ ಖಯಾಲಿಯಾಗಿಸಿಕೊಂಡಿದ್ದೆವು. ಯಾವುದೋ ಬಸ್ಸನ್ನು ಹತ್ತಿ ಸುಮ್ಮನೆ ಪಡಪೋಷಿಗಳಂತೆ ಹೊರಟರೆ ಎಲ್ಲರೂ ವಾಪಸ್ಸು ರೂಮು ಸೇರುತ್ತಿದ್ದುದೇ ಅರ್ಧ ರಾತ್ರಿಯ ನಂತರ. ಪಾಸಿಗೆ ನೀಡಿದ ಕಾಸಿನ ಸದ್ಬಳಕೆ(ದುರ್ಬಳಕೆ) ಮಾಡಿಕೊಳ್ಳುವುದು ಯಾರಾದರೂ ನಮ್ಮನ್ನು ನೋಡಿ ಕಲಿಯಬೇಕಿತ್ತು. ವಾರದ ಒಂದು ದಿನದ ರಜೆ ಕಳೆಯಲು ನಾವೆಲ್ಲ ಗೆಳೆಯರು ಆರಿಸಿಕೊಳ್ಳುತ್ತಿದ್ದ ಸುಲಭ ಮಾರ್ಗವೇ ಅದಾಗಿತ್ತು. ನೂರು ರೂಪಾಯಲ್ಲಿ ವಾರಾಂತ್ಯ ಮುಗಿದು ಹೋಗುತ್ತಿದ್ದ ದಿನಗಳವು. ಅದರಲ್ಲಿ ಹೆಚ್ಚು ಖರ್ಚಾಗುತ್ತಿದ್ದುದು ಬಿಎಂಟಿಸಿ ಬಸ್ ಪಾಸಿಗೆ. ಆಗಿನ ಕಾಲಕ್ಕೆ ೩೫ ರೂಪಾಯಿಗಳು, ನಮ್ಮ ಪಾಲಿನ ಬಹುದೊಡ್ಡ ಮೊತ್ತವದು. ಬೆಳ್ಳಂಬೆಳಗ್ಗೆ ಶಂಕರಪುರದಲ್ಲಿದ್ದ ರೂಮಿಗೆ ಬೀಗ ಜಡಿದೆವೆಂದರೆ ನಮ್ಮ ಸವಾರಿ ಮೊದಲು ಹೊರಡುತ್ತಿದ್ದುದೇ ಬಸವನಗುಡಿಯ ವಿದ್ಯಾರ್ಥಿ ಭವನದ ಕಡೆ.

ಅಲ್ಲಿಗೆ ಹೋಗಲು ಬರೀ ದೋಸೆಯಷ್ಟೇ ಕಾರಣವಾಗಿರಲಿಲ್ಲ. ಕನ್ನಡ ಕಾವ್ಯ ಲೋಕದ ನಿತ್ಯೋತ್ಸವದ ಕವಿ ನಿಸಾರರೂ ಕಾರಣರಾಗಿಸದ್ದರು. ಅದೆಲ್ಲಕ್ಕಿಂತಲೂ ಪರಂಪರಾಗತವಾಗಿ ನಮ್ಮಲ್ಲಿ ಕವಿ ಎಂದ ತಕ್ಷಣ ಮೂಡುತ್ತಿದ್ದ ಜೋಲಾಡುವ ಜೋಳಿಗೆ, ಮಾಸಲು ಜುಬ್ಬದ, ಕೆದರಿದ ಕೂದಲ ಅಸಲಿಗೆ ಬಣ್ಣವನ್ನೇ ಕಳೆದುಕೊಂಡಂತಿರುತ್ತಿದ್ದ ಚಿತ್ರವನ್ನೇ ಬದಲಿಸಿದವರು ನಿಸಾರ್ ಅಹಮದ್. ನಾನು ಕಂಡ ಹಾಗೆ ಬಹುಪಾಲು ನೀಲಿ ಬಣ್ಣದ ಸೂಟು, ಅದಕೊಪ್ಪುವ ನೀಳ ಟೈ, ಕಡುಗಪ್ಪು ಬಣ್ಣದ ಬೂಟು ಧರಿಸಿ, ಎಣ್ಣೆ ಹಾಕಿ ತೀಡಿ ಬಾಚಿದ ಬೈತಲೆ. ಠಾಕುಠೀಕಿನ ಅವರನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಎಂದರೂ ತಪ್ಪಿಲ್ಲ. ನವ್ಯ-ನವ್ಯೋತ್ತರ ಕಾಲದ ಕವಿ ಕಾವ್ಯಲೋಕದ ಕಟ್ಟುಪಾಡುಗಳನ್ನು ತಮ್ಮ ಕವಿತೆಯಿಂದ ಮುರಿದಷ್ಟೇ ಸುಲಭವಾಗಿ ತಮ್ಮ ಉಡುಗೆ-ತೊಡುಗೆಗಳಲ್ಲೂ ಮುರಿದರು.

ಆಗೆಲ್ಲ ನಿಸಾರರಿಗೂ ಇಲ್ಲಿಯ ದೋಸೆ ಫೇವರೆಟ್ಟು ಎಂಬುದನ್ನು ತಿಳಿದು ವಿದ್ಯಾರ್ಥಿಭವನದ ದೋಸೆ ತಿಂದರೆ ನಾವೂ ಕವಿಯಾಗಬಹುದೆನೋ ಎಂಬಂತೆ ದೋಸೆಗಿಂತ ಮನಸಲ್ಲಿ ಮಂಡಿಗೆಯನ್ನೇ ಜಾಸ್ತಿ ತಿಂದದ್ದು ಮರೆಯುವ ಹಾಗೆಯೇ ಇಲ್ಲ.

ಬಸವನ ಗುಡಿಯ ರಾಮಕೃಷ್ಣ ಆಶ್ರಮಕೆ ಸದಾ ಬರುತ್ತಿದ್ದ ನಿಸಾರರನ್ನು ಕಾರ್ಯಕ್ರಮದ ನೆಪದಲ್ಲೋ ಅವರನ್ನು ಸುಮ್ಮನೆ ಮಾತನಾಡಿಸು ಸೋಗಿನಲ್ಲೋ ಅವರ ಮನೆಗೆ ನಾನು ಗೆಳೆಯರಾದ ಶಂಕ್ರ, ರಘು, ನವೀನ, ಗಿರೀಶ ಹೀಗೆ ಹಲವರು ಅವರ ಮನೆಗೆ ದಾಳಿ ಇಟ್ಟರೂ ಕೊಂಚವೂ ಬೇಸರಿಸದೆ ಕರೆದು ಜೊತೆಯಲ್ಲಿ ಕೂಡಿಸಿಕೊಂಡು ಕಾವ್ಯದ ಬಗ್ಗೆ ನಾಲ್ಕು ಮಾತಾಡಿದ ಮಹಾನುಭಾವ ಮರೆಯಾದನೆಂದರೆ ಮನಸ್ಸು ಒಪ್ಪುತ್ತಿಲ್ಲ.

ಅಪ್ಪಟ ಜಾತ್ಯಾತೀತ-ಧರ್ಮಾತೀತ ನೆಲೆಗಟ್ಟಿನ ಕವಿ ತುಸು ತೀಕ್ಷ್ಣವಾಗಿಯೇ “ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ ಈ ನೆಲದಲ್ಲಿ ಬೇರೂರಿದರೂ ಬೀಗಿ ಪರಕೀಯನಾಗುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ…” ಎಂದೇ ನಮ್ಮನೆಲ್ಲ ಕುಟುಕಿದವರು. ಆದರ್ಶಗಳ ಹೆಗಲಿಗೇರಿಸಿ ಹೊರಟ ಪ್ರತೀ ಪಥಿಕರ ಪಾಲಿಗೆ ಸಮಾಜದ ಅಸಮಾನತೆ, ಪಟ್ಟ ಭದ್ರ ಶಕ್ತಿಗಳ ವಿರುದ್ಧ ಹೋರಾಟಕೆ ಒಬ್ಬಂಟಿಯಾಗಿಯೇ ಹೊರಡುವ ನನ್ನಂಥ-ನಿಮ್ಮಂಥಹವರೆಲ್ಲರಿಗೂ ಅತಿ ಆಪ್ತವೆನಿಸುವ ಕವಿತೆ ಕೊಟ್ಟವರು ನಿಸಾರರು.

ಅಭಿನವ ಶರೀಫರೆಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಿತ್ಯೋತ್ಸವದ ಕವಿ, ಆಗಾಗ ನೆನಪಿಸಿಕೊಳ್ಳುತ್ತಿದ್ದದು ಮೈಸೂರು ಅನಂತಸ್ವಾಮಿಯರೊಂದಿಗಿನ ಒಡನಾಟವನ್ನ ಮತ್ತು ಅಂಥಹ ಒಡನಾಟದಿಂದ ಒಡಮೂಡಿದ ಕನ್ನಡದ ಮೊತ್ತ ಮೊದಲ ಭಾವಗೀತೆಗಳ ಧ್ವನಿ ಸುರುಳಿಯನ್ನ. ಅಂಥಹದೊಂದು ಪರಂಪರೆಗೆ ನಾಂದಿ ಹಾಡಿ, ತಮ್ಮ ಕವಿತೆಗಳನ್ನು ಸುಗಮ ಸಂಗೀತ ಕ್ಷೇತ್ರದ ಖ್ಯಾತನಾಮರ ಬಾಯಲ್ಲಿ ಹಾಡಿಸಿ ಕನ್ನಡಿಗರನ್ನು ನಲಿಸಿದವರು ನಿಸಾರರು.

ಸಭ್ಯ, ಮಿತ-ಮೃದುಭಾಷಿಯಾದ, ಯಾರೊಂದಿಗೂ ಅಸಲಿಗೆ ಯಾವುದೇ ಜಗಳ-ವಾಗ್ವಾದಗಳಿಲ್ಲದ ಸೌಮ್ಯತೆಯ ಕವಿಯಾದ ನಿಸಾರರು ಅವಶ್ಯಕತೆ ಬಿದ್ದರೆ ಸಾಮಾಜಿಕ ಅರಾಜಕತೆಯ ವಿರುದ್ಧ ಆಳುವ ವರ್ಗದ ವಿರುದ್ಧ ತಿರುಗಿ ಬೀಳುವ ಛಾತಿಯನ್ನು ಉಳಿಸಿಕೊಂಡಿದ್ದರು. ಇದಕ್ಕೆ ಅವರ ‘ಕುರಿಗಳು ಸಾರ್ ಕುರಿಗಳು’ ಕವಿತೆಯೇ ಸಾಕ್ಷಿ. ಕಡುಬೇಸರದ ಘಳಿಗೆಗಳಲ್ಲಿ ನಮಗೆಲ್ಲ ಆಪ್ತವಾದ ಕವಿತೆಯದು. ಅದನ್ನು ಅಶ್ವತ್ಥರ ದನಿಯಲ್ಲಿ ಕೇಳಿ ಸಮಾಜದ ವಿರುದ್ಧ ಅಕಾರಣ ಬಂಡೆದ್ದ ನಾವು ಆ ಹಾಡಿಗೆ ದನಿಗೂಡಿಸಿ ಕಾವಳದ ರಾತ್ರಿಗಳಲಿ ಹೆಜ್ಜೆ ಹಾಕುತ್ತಾ ಕುಣಿದು-ಕುಪ್ಪಳಿಸಿ, ನಾವೆಲ್ಲ ಸಮಾಜದ ಪಾಲಿಗೆ ಥೇಟ್ ಬಂಡಾಯಗಾರರಂತೆ ಫೋಸ್ ಕೊಡುತ್ತಿದ್ದೆವು. ಅಂತಹದೊಂದು ಮನೋಭೂಮಿಕಯನ್ನು ಒದಗಿಸಿದ್ದು ನಿಸಾರ್ ಅಹಮದ್ ಎನ್ನುವ ಜೀವನ ಪ್ರೀತಿಯ ಮೈವೆತ್ತಂದಿದ್ದ ಕಾವ್ಯಮೂರ್ತಿ.
ಧರ್ಮಾಧಾರಿತ ಮೌಢ್ಯ ಕಂದಾಚಾರಗಳಿಗೂ ನಿಸಾರರು “ಅಮ್ಮ ಆಚಾರ ಮತ್ತು ನಾನು”ಎಂಬ ಕವಿತೆಯ ಮೂಲಕ ಪರ್ದಾ ಪದ್ದತಿಯ ಮೇಲಿದ್ದ ಪರೆದೆಯನ್ನೇ ಸರಿಸಿದರು. (ಈ ಕವಿತೆಯನ್ನು ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭವೊಂದರಲ್ಲಿ ತಮಿಳ್ ಸೆಲ್ವಿಯವರು ವೇದಿಕೆಯೊಂದರಲ್ಲಿ ಮನೋಜ್ಞವಾಗಿ ವಾಚಿಸಿದ ನೆನಪು. ಯಾವ ಸಮಾರಂಭ ಎಂಬುದು ಎಂಬುದು ಮಾತ್ರ ಈಗಲೂ ನೆನಪಾಗುತ್ತಿಲ್ಲಇಲ್ಲಿರುವ ನನ್ನ ಗೆಳೆಯರು ನೆನಪಿಸುತ್ತೀರೆಂದು ಭಾವಿಸುತ್ತೇನೆ).

ಭೂಪದರಗಳ ಒಳಹೊಕ್ಕು ಅಧ್ಯಯನ ಮಾಡಿದ ಭೂಗರ್ಭ ಶಾಸ್ತ್ರದ ಪ್ರಾಧ್ಯಾಪಕರೊಬ್ಬರಿಗೆ ಕನ್ನಡ ಕಾವ್ಯದ ಒಳ-ಹೊರ ಪದರುಗಳ ಆಳ-ಅರಿವು ದೊರೆತದ್ದು ಕನ್ನಡ ಕಾವ್ಯ ಲೋಕದ ಮಟ್ಟಿಗೆ ಸೌಭಾಗ್ಯವೆಂದೇ ತಿಳಿಯಬೇಕು. ಕನ್ನಡ ಓದುಗರಿಗೆ ಪ್ಯಾಬ್ಲೋ ನರೋಡನನ್ನು ಪರಿಚಯಿಸಿದ ಕವಿ ನಿಸಾರ್ ಅಹಮದ್. ಯಾವುದೋ ಸಮಾರಂಭದಲ್ಲಿ ಅತಿಥಿಗಳಾಗಿದ್ದವರೊಬ್ಬರು ಪ್ಯಾಬ್ಲೋನ ಉಕ್ತಿಯನ್ನು ತಪ್ಪಾಗಿ ಉದಾಹರಿಸದವರನ್ನು ನಿಸಾರರು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡಿದ್ದರಂತೆ.

ಯಾವತ್ತೂ ಪ್ರಶಸ್ತಿ-ಪುರಸ್ಕಾರಗಳಿಗೆ ಲಾಬಿಗಿಳಿಯದ ಈ ಕನ್ನಡ ಕಾವ್ಯದ ಸ್ವಯಂ ಸೇವೆಯ ಗಿಳಿ ಉಲಿದ ಕಾವ್ಯಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಕುರುಹುಗಳು. ಅದೇಕೋ ಅವರನ್ನು ಯಾವ ಕನ್ನಡದ ಕವಿಯನ್ನೂ ನನಗೆ ಸಮೀಕರಿಸಲು ಸಾಧ್ಯವಾಗುತ್ತಲೇ ಇಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಹಿಂದೊಮ್ಮೆ ನಿಸಾರರ ಕವಿತೆಯಾದ “ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಬೆಣ್ಣೆ ಕದ್ದನೋ” ಹಾಡನ್ನು ಕೇಳುತ್ತದ್ದ ಅಮ್ಮಮ್ಮ (ತಾಯಿಯ ತಾಯಿ) “ಅಪ್ಪಣ್ಣ ಇದು ಯಾವ ದಾಸರ ಕೃತಿನೋ?” ಎಂದು ಕೇಳಿದ್ದಕ್ಕೆ “ಇಲ್ಲಬೆ, ಇದು ನಿಸಾರ್ ಅಹಮದ್ ಅಂತ, ಕವಿಗಳು. ಅವ್ರು ಬರ್ದದ್ದು” ಅಂದಿದ್ದೆ. ಅದಕ್ಕೆ ಮುದುಕಿ “ಹೌದೆನೋ … ಮುಸಲ್ಮಾನ್ರನಾ ….ಎಂಥಾ ಚಲೋ ಬರ್ದಾನ ನೋಡು..ಗೊತ್ತೇ ಆಗದುಲ್ಲ….” ಅಂದಿತ್ತು. ಈ ನೆಲದ ಮಹತ್ತಿಗೆ, ಈ ನೆಲದಲ್ಲಿ ಹುಟ್ಟಿದ ಕವಿಗೆ ಅದಕಿಂತ ದೊಡ್ಧ ಸಾರ್ಥಕ್ಯವೇನಿದೆ.

“ನಾನು ಕನ್ನಡದ ಒಂದೊಂದು ಅಕ್ಷರವನ್ನೂ ಬೆವರು ಹರಿಸಿ ಕಲಿತಿದ್ದೇನೆ” ಎನ್ನುತ್ತಿದ್ದ ಕವಿ ನಮಗೆ ಕಲಿಸಿಹೋದ್ದದ್ದು ಕಲಿಯಾಲಾಗದೇ ಹೋಗುತ್ತಿದ್ದ ಅಗಾಧ ಕಾವ್ಯವನ್ನ. ಅದೆಷ್ಟೋ ಬೆಸರದ ಘಳಿಗೆಗಳಲ್ಲಿ ನಮ್ಮ ಒಂಟಿತನವನ್ನು ನೀಗಿ ಅದನ್ನು ದಿವ್ಯ ಏಕಾಂತವಾಗಿಸಿದ ನಿಸಾರರ ಋಣ ನಾಡಿಗೆ ದೊಡ್ಡದು.

ಮುನಿದ ಪ್ರಕೃತಿ ಸಾವನ್ನು ಅಗ್ಗವಾಗಿಸಿ ಬದುಕು ತುಟ್ಟಿಯಾಗಿಸಿದೆ. ಬದುಕಿನ ಬಗೆಗಿನ ಭರವಸೆಗಳೇ ಕಳೆದುಹೋದಾಗ ಅವನ್ನು ಹೆಕ್ಕಿ ತರುತ್ತಿದ್ದ ಕವಿ ನಿಸಾರರು ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ ಮರೆಯಾದದು ನಿಜಕ್ಕೂ ದುಃಖಕರ. ಇನ್ನಷ್ಟು ದಿನ ಅವರು ನಮ್ಮೊಡನೆ ಇರಬೇಕಿತ್ತು ರಾಮನ್ ಸತ್ತ ಸುದ್ದಿಯನ್ನು ತಲುಪಿಸಿ ಹೋದ ನಿಸಾರ್ ಅವರು ಸತ್ತ ಸುದ್ದಿ ನಮಗೆ ಇಂದು ತಲುಪಿದ ಕ್ಷಣವಿದೆಯಲ್ಲಾ ಅದು ಸಿಡಿಲಿನಾಘಾತ. ಇಷ್ಟು ಅವಸರ ಎನಿತ್ತು ಸರ್? ಎಂದು ಕೇಳಬಹುದೇ? ಉತ್ತರ ಅವರಿಂದ ಸಿಕ್ಕೀತೆ ಗೊತ್ತಿಲ್ಲ???.

ಮೇಲೋಗರ: ಕನ್ನಡದ ಹೆಸರಾಂತ ಕವಿಯೊಬ್ಬರ ಹೆಸರಿನ ಪ್ರಕಾಶನ ಸಂಸ್ಥೆಯೊಂದು ಇತ್ತೀಚೆಗೆ ಉದಯ+ಉನ್ಮುಖರೊಬ್ಬರ ಚೊಚ್ಚಲ ಕವನ ಸಂಕಲನವನ್ನು ತ್ವರಿತಗತಿಯಲ್ಲಿ ತಂದಿತು. ಪುಸ್ತಕವನ್ನು ಲೋಕಕ್ಕೆ ಅರ್ಪಿಸಿದ್ದೂ ಆಯಿತು. ವಿಡಂಬನೆಯೆಂದರೆ ಮೊದಲ ಕವನ ಸಂಕಲನದ ಮೊದಲ ಪುಟ ತಿರುಗಿಸಿದರೆ ಕಂಡದ್ದು ‘ಕೃತಜ್ಞತೆ’ ಯ ಬದಲಾಗಿ ‘ಕೃತಘ್ನತೆ’ ಎಂಬ ಪದ. ಮರ್ಜಿಗೆ ಬಿದ್ದ ಹಿರಿಯರೊಬ್ಬರು ಕೊಂಡು ತಂದ ಆ ಕವನ ಸಂಕಲನ ತೋರಿಸಿ ಹೇಳಿದ್ದಿಷ್ಟೇ “ಆಚಾರ್ರೆ ನೀವೇ ಹೇಳಿ ಈಗ ನಾವು ಯಾರಿಗೆ ಕೃತಘ್ನರಾಗಿರೋಣ ಮತ್ತು ಯಾರಿಗೆ ಕೃತಜ್ಞರಾಗಿರೋಣ?. ನಮ್ಮ ಪ್ರಾಬ್ಲಮ್ಮು ಯಾರಿಗೆ ಹೇಳೋಣ?

✍️ರಾಜ್ ಆಚಾರ್ಯ
(ಹಳೆಯದು)