ಪತ್ರಿಕೋದ್ಯಮವು ನಾಲ್ಕನೇ ಅಂಗದ ಘನತೆ ಕಾಪಾಡಲಿ : ಹುಲಿಕಲ್ ನಟರಾಜ್
ವಿಜಯ ದರ್ಪಣ ನ್ಯೂಸ್
ಪತ್ರಿಕೋದ್ಯಮವು ನಾಲ್ಕನೇ ಅಂಗದ ಘನತೆ ಕಾಪಾಡಲಿ : ಹುಲಿಕಲ್ ನಟರಾಜ್.
ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ : ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿದ್ದರಿಂದ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಪವಾಡ ಬಯಲು ತಜ್ಞ ಡಾ.ಹುಲಿಕಲ್ ನಟರಾಜ್ ಅಭಿಪ್ರಾಯಿಸಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯುನ್ಮಾನ್ ಮತ್ತು ಸಾಮಾಜಿಕ ಮಾಧ್ಯಮಗಳ ಪೈಪೋಟಿಯಿಂದ ಪತ್ರಿಕೆಗಳು ತಮ್ಮ ವಿಶ್ವಾಸರ್ಹತೆ ಕಳೆದುಕೊಳ್ಳುತ್ತಿವೆ. ಓದುಗರಲ್ಲಿ ಅಭಿರುಚಿ ಕಡಿಮೆಯಾಗುತ್ತಿದೆ. ಕೇವಲ ಜಾಹೀರಾತು ಮೂಲಗಳ ಹಿಂದೆ ಸಾಗಿವೆ. ರಾಜಕೀಯ ಪಕ್ಷಗಳ ಕೈಗೊಂಬೆಯಾಗಿ ಕಾರ್ಯಾಚರಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಮಾತನಾಡಿ ಪತ್ರಿಕೋದ್ಯಮವು ವಿದ್ಯಾರ್ಥಿಗಳಿಗೆ ಕೌಶಲ್ಯಗಳೊಂದಿಗೆ ಭವಿಷ್ಯ ನಿರೂಪಿಸಿಕೊಳ್ಳುವ ಬಲಾಡ್ಯ ಉದ್ಯಮವಾಗಿ ಬೆಳೆದಿದೆ. ಸ್ವಾವಲಂಬನೆಗಾಗಿ ಸಾಕಷ್ಟು ಅವಕಾಶಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಬದುಕು ನಿರೂಪಿಸಿಕೊಳ್ಳಲು ಸೂಕ್ತ ಭಾಷಾ ಪ್ರಭುತ್ವ ಬೆಳೆಸಿಕೊಳ್ಳಬೇಕಿದೆ. ಹಾಗೂ ಇಂದಿನ ಯುವ ಪೀಳಿಗೆಗೆ ಸಮೂಹ ಮಾಧ್ಯಮ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ನುಡಿದರು.
ನಂತರ ನಡೆದ ಗೋಷ್ಠಿಗಳಲ್ಲಿ ಬೆಂಗಳೂರಿನ ನಿವೃತ್ತ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ಕೆ. ಜಿ. ಹಾಲಸ್ವಾಮಿ ಅವರು ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಹಾಗೂ ದೊಡ್ಡಬಳ್ಳಾಪುರ ಪತ್ರಕರ್ತ ಘನಶ್ಯಾಮ್ ಡಿ.ಎಂ. ಅವರು ಪತ್ರಿಕೋದ್ಯಮದ ಅವಕಾಶಗಳು ಹಾಗೂ ಸವಾಲುಗಳ ಕುರಿತು ವಿಷಯ ಮಂಡಿಸಿದರು.
ಐಕ್ಯೂಎಸಿ ಸಂಯೋಜಕ ಡಾ. ಗಂಗಾಧರಯ್ಯ ಬಿ. ಆರ್. , ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ ನೀರಜಾದೇವಿ ಎಂ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಉಮೇಶ್ ವೈ ಹಾಗೂ ಗೌರಿಬಿದನೂರು ಕಾಲೇಜಿನ ಉಪನ್ಯಾಸಕಿ ತುಳಸಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಸತೀಶ್ ಕೆ ಇಟಗಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ರವಿಚಂದ್ರಕುಮಾರ್ ಎಂ. ಪಿ. ವಂದಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ರಮ್ಯಾ ಮತ್ತು ಮಾನಸ ಪ್ರಾರ್ಥಿಸಿದರು. ಅಪ್ಪುರಾಜ್ ಬಿ. ಕಾರ್ಯಕ್ರಮ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚಿಕ್ಕಬಳ್ಳಾಪುರ ಜಚನಿ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.