ಕೊಡಗು ಜಿಲ್ಲಾಡಳಿತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ
ವಿಜಯ ದರ್ಪಣ ನ್ಯೂಸ್
ಮಡಿಕೇರಿ ಜನವರಿ 28: ಭಾರತೀಯ ಸೇನೆಯ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಂತೆ ಯುವಜನರು ಭಾರತೀಯ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಏರ್ ಮಾರ್ಷಲ್(ನಿ) ಕೆ.ಸಿ.ಕಾರ್ಯಪ್ಪ ಅವರು ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 125 ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಆ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಮೊದಲು ಎಂಬುದು ಮೊಳಗಬೇಕು ಎಂದು ತಿಳಿಸಿದರು.
ಯುವ ಜನರು ದೇಶವನ್ನು ಪ್ರೀತಿಸಬೇಕು. ರಾಷ್ಟ್ರ ಮೊದಲು, ನಂತರ ಉಳಿದವು ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಈ ಬಗ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸದಾ ಹೇಳುತ್ತಿದ್ದರು ಎಂದು ವಿವರಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಎಂದರೆ ಒಂದು ರೀತಿ ಸ್ಪೂರ್ತಿ ಹಾಗೂ ಚಿಲುಮೆ. ಶಿಸ್ತಿನ ಸಿಪಾಯಿ ಆಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸಮಯ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು. ಇಡೀ ವಿಶ್ವದಲ್ಲಿ ಭಾರತವನ್ನು ಅತ್ಯುನ್ನತ ಸೇನಾ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ಪ ಅವರು ಶ್ರಮಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
’ನಾವೆಲ್ಲರೂ ಮೊದಲು ಭಾರತೀಯರಾಗಿ ಬದುಕಬೇಕು ಎಂಬುದನ್ನು ಕಾರ್ಯಪ್ಪ ಅವರು ತೋರಿಸಿಕೊಟ್ಟಿದ್ದಾರೆ. ಅವರ ಸೇನಾ ಕ್ಷೇತ್ರದ ಕೊಡುಗೆ ಅವಿಸ್ಮರಣೀಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಸೇನಾ ಕ್ಷೇತ್ರದಲ್ಲಿ ’ಫೀಲ್ಡ್ ಮಾರ್ಷಲ್’ ಪ್ರಶಸ್ತಿಯು ಅತ್ಯುನ್ನತ ಸ್ಥಾನ ಹೊಂದಿದೆ ಎಂದು ಇದೇ ಸಂದರ್ಭದಲ್ಲಿ ಸಂಸದರು ತಿಳಿಸಿದರು.
ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಶನಿವಾರಸಂತೆಯಲ್ಲಿ ಹುಟ್ಟಿ ಬೆಳೆದ ಕಾರ್ಯಪ್ಪ ಅವರ ಬರಹ ಮತ್ತು ಭಾಷಣಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದರು.
ಪ್ರತಿಯೊಬ್ಬರಿಗೂ ಕರ್ತವ್ಯ ಪ್ರಜ್ಞೆ, ಶಿಸ್ತು ತಿಳಿದುಕೊಳ್ಳಲು ಕಾರ್ಯಪ್ಪ ಅವರ ಸೇನಾ ಕ್ಷೇತ್ರದಲ್ಲಿನ ಸೇವೆಯನ್ನು ಸ್ಮರಿಸುವಂತಾಗಬೇಕು. ಕಾರ್ಯಪ್ಪ ಅವರು ದೇಶಪ್ರೇಮ ಮತ್ತು ದೇಶಭಕ್ತಿಗೆ ಹೆಸರಾದವರು ಎಂದರು.
ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ದೇಶ ಕಂಡ ಅಪ್ರತಿಮ ವೀರ ಸೇನಾನಿ. ಇವರ ಸೇನಾ ಕ್ಷೇತ್ರದಲ್ಲಿನ ಶಿಸ್ತು, ಸಮಯಪ್ರಜ್ಞೆ, ಶ್ರದ್ಧೆ, ಪ್ರಾಮಾಣಿಕತೆ ಹೀಗೆ ಹಲವು ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.
ರಾಷ್ಟ್ರದ ಪ್ರಥಮ ಮಹಾದಂಡನಾಯಕರಾಗಿ ಸೇನಾ ಕ್ಷೇತ್ರಕ್ಕೆ ಕಾರ್ಯಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಭಾರತೀಯ ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ಜಿಲ್ಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕಾರ್ಯಪ್ಪ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜಪ್ರಿನ್ ಅರಾನ್ಹಾ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ರಾಘವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ನ ಆಯುಕ್ತ ಬೇಬಿ ಮ್ಯಾಥಿವ್,ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸದಸ್ಯೆ ಸಬಿತಾ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಿರ್ದೇಶಕ ಮಂಡೀರ ಸದಾಮುದ್ದಪ್ಪ, ಜಾನಪದ ಪರಿಷತ್ತು ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಎಚ್.ಟಿ, ಕೂಡಿಗೆ ಸೈನಿಕ ಶಾಲೆಯ ಕನ್ನಡ ಉಪನ್ಯಾಸಕ ಜಿ.ಕೆ.ಮಂಜಪ್ಪ, ಬಿಪಿನ್ ಅಪ್ಪಚ್ಚು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೂಡಿಗೆ ಸೈನಿಕ ಶಾಲೆ ಹಾಗೂ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
— ಶ್ರೀಧರ್ ನೆಲ್ಲಿತ್ತಾಯ