ಜೈ ಶ್ರೀರಾಮ್….

ವಿಜಯ ದರ್ಪಣ ನ್ಯೂಸ್

ದೇಶ ಮೊದಲು ಎಂದು ಹೇಳುತ್ತಿದ್ದ ಬಹಳಷ್ಟು ಜನರು ರಾಮ ಮೊದಲು ಎಂಬ ಭಾವನಾತ್ಮಕ ಸುಳಿಗೆ ಸಿಲುಕಿದ್ದಾರೆ ಎಂದೆನಿಸುವುದಿಲ್ಲವೇ….

ವಿಶ್ವ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಧಾರ್ಮಿಕ ಅಂಧತ್ವ, ಧಾರ್ಮಿಕ ಉದ್ವೇಗ, ಮೂಡ ಭಕ್ತಿ ಕೊನೆ ಕೊನೆಗೆ ಪರಿವರ್ತನೆ ಹೊಂದಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ಅಂತಿಮವಾಗಿ ರಕ್ತಪಾತದ ಮುಖಾಂತರ ವಿನಾಶದ ಅಂಚಿಗೆ ಬಂದು ತಲುಪುತ್ತದೆ…..

ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದುವುದಿಲ್ಲವೇ ಹಾಗೆಯೇ ಭಕ್ತಿ ಅತಿಯಾದರೆ ಉನ್ಮಾದವಾಗುತ್ತದೆ. ಅಲ್ಲಿ ಭಯ ಭಕ್ತಿ ವಿನಯ ಪ್ರೀತಿ ಸಹಕಾರ ಸಂಯಮ ಕ್ಷಮೆ ಕರುಣೆ ಮಾಯವಾಗಿ ಭಾವೋನ್ಮಾದದ ಸಮ್ಮೋಹನಕ್ಕೆ ಸಿಲುಕಿ ಹುಚ್ಚತನವಾಗುತ್ತದೆ. ಈಗ ಅಯೋಧ್ಯೆಯ ರಾಮ ಮಂದಿರದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಕೆಲವರ ವರ್ತನೆ ಅದರ ಪ್ರಾರಂಭಿಕ ಲಕ್ಷಣಗಳನ್ನು ಹೊಮ್ಮಿಸುತ್ತದೆ ಎಂದು ಆತ್ಮಸಾಕ್ಷಿಯಿಂದ ಭಾರತೀಯರಾಗಿ ಪ್ರಾಮಾಣಿಕವಾಗಿ ಯೋಚಿಸಿದರೆ ತಿಳಿಯುವುದಿಲ್ಲವೇ…..

ಗೆಲುವಿನ ಸಂಭ್ರಮದ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಅನವಶ್ಯಕವಾಗಿ ಜೈ ಶ್ರೀರಾಮ್ ಎಂಬ ರಣ ಕಹಳೆ ಅಥವಾ ರಣೋತ್ಸಾಹ ದೇಶಕ್ಕೆ ಮಾರಕವಾಗಬಲ್ಲದು ಎಂಬ ಪ್ರಜ್ಞೆ ಜಾಗೃತವಾಗಿದ್ದರೆ ಉತ್ತಮ ಎಂಬ ಸಲಹೆಯನ್ನು ಸ್ವೀಕರಿಸಬಹುದಲ್ಲವೇ…..

ಚುನಾವಣಾ ಸಂದರ್ಭದಲ್ಲಿ ನಮಗೆ ಇಷ್ಟವಾದ ವ್ಯಕ್ತಿ ಮತ್ತು ಪಕ್ಷಕ್ಕೆ ಪ್ರಚಾರ ಮಾಡುವ ಮತ್ತು ಮತ ಹಾಕುವ ಸ್ವಾತಂತ್ರ್ಯ ನಮಗಿದ್ದೇ ಇದೆ. ನಂಬಿಕೆ ಭಕ್ತಿ ಇರುವವರು ರಾಮ ಮಂದಿರದ ಅಯೋಧ್ಯೆಗೆ ಭೇಟಿ ನೀಡುವ ಅವಕಾಶಗಳು ಮುಕ್ತವಾಗಿದೆ. ಹಾಗೆಯೇ ಅತಿಯಾದರೆ ಅಮೃತವೂ ವಿಷ ಎಂಬ ಜ್ಞಾನವೂ ಇದೆ. ಇಷ್ಟೆಲ್ಲದರ ನಡುವೆ ಯಾರದೋ ಸ್ವಾರ್ಥಕ್ಕೆ, ಮೂರ್ಖತನಕ್ಕೆ ಅಭಿವೃದ್ಧಿಯ ಪಥದಲ್ಲಿರುವ ವಿಶ್ವದ ಅದ್ಬುತ ವೈವಿಧ್ಯಮಯ ಅತಿಹೆಚ್ಚು ಜನಸಂಖ್ಯೆಯ ಸಂಸದೀಯ ಪ್ರಜಾಪ್ರಭುತ್ವದ ದೇಶದಲ್ಲಿ ಭಯದ ವಾತಾವರಣ ಮೂಡಿಸುವ ಅವಶ್ಯಕತೆ ಇದೆಯೇ……

ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆಗಳು ಕೆಲವರಿಗೆ ಸ್ವಾತಂತ್ರ್ಯದ ಸ್ವಾಭಿಮಾನದ ವಿಜಯಗಳಂತೆ ಕೇಳಿಸುತ್ತಿರಬಹುದು. ಆದರೆ ನಿಜವಾದ ಸೂಕ್ಷ್ಮ ಮನಸ್ಥಿತಿ ಜವಾಬ್ದಾರಿಯುತ ಭಾರತೀಯ ನಾಗರಿಕರಿಗೆ ಇದು ಮುಂದೊಂದು ದಿನ ಸಂಭವಿಸಬಹುದಾದ ಭಾರತದ ವಿಭಜನೆಯ ಮೊಳಕೆಗಳ ನಿಟ್ಟುಸಿರಿನಂತೆ ಪ್ರತಿಧ್ವನಿಸುತ್ತದೆ ಎಂಬುದು ಖಂಡಿತ ವಾಸ್ತವ……..

ಇದು ಈಗಲೇ ಸಂಭವಿಸುತ್ತದೆ ಎಂಬ ಆಂತಕ ಬೇಡ. ಆದರೆ ದೇಶಕ್ಕಿಂತ ಧರ್ಮ ಮೊದಲು ಎಂಬ ಭಾವನೆ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತವಾದರೆ ಭಾರತದಂಥ ಬಹುತ್ವದ ದೇಶದಲ್ಲಿ ಇತರ ಸಮುದಾಯಗಳಿಗೆ ಇದೇ ಪ್ರೇರಣೆಯಾಗಬಹುದು ಎಚ್ಚರವಿರಲಿ…..

ಓ ಒಂದು ಕೈ ನೋಡೇ ಬಿಡೋಣ ನಾವು ಶಕ್ತಿವಂತರೆ ಎಂಬ ಹುಂಬುತನಕ್ಕೆ ಪ್ರೋತ್ಸಾಹ ನೀಡಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಜ್ಞಾನದಂತೆ ಶಕ್ತಿಯೂ ಸಹ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರುತ್ತದೆ…

ಉದಾಹರಣೆಗೆ ಈಗ ಅಯೋಧ್ಯೆ ಪ್ರಕರಣವನ್ನೇ ತೆಗೆದುಕೊಳ್ಳಿ. ಎಲ್ಲರ ಒಂದು ಸಾಮಾನ್ಯ ಅಭಿಪ್ರಾಯದಂತೆ ಸುಮಾರು 500 ವರ್ಷಗಳ ಹಿಂದೆ ಅಲ್ಲಿ ರಾಮ ಮಂದಿರವಿತ್ತು. ಬಾಬರ್ ಎಂಬ ಆಕ್ರಮಣಕಾರ ಅದನ್ನು ನಾಶಗೊಳಿಸಿ ಮಸೀದಿ ನಿರ್ಮಿಸಿದ. ನಂತರ ಎಷ್ಟೋ ವರ್ಷಗಳ ನಂತರ ಮಸೀದಿ ಕೆಡವಲಾಯಿತು. ಈಗ ಅಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತಿದೆ. ಮುಂದೆ ಹಲವಾರು ವರ್ಷಗಳ ನಂತರ ಏನಾಗಬಹುದು……

ಹೀಗೆ ಇಡೀ ವಿಶ್ವ ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು ಸಾಕಷ್ಟು ಏರಿಳಿತಗಳನ್ನು ಅನುಭವಿಸಿವೆ. ಆ ಎಲ್ಲಾ ಅನುಭವಗಳಿಂದ ವರ್ತಮಾನದಲ್ಲಿ ಒಂದಷ್ಟು ಸಂಯಮದ ಪಾಠವನ್ನು ಕಲಿತರೆ ಹೆಚ್ಚು ನೆಮ್ಮದಿಯ ಬದುಕು ನಮ್ಮದಾಗಬಹುದು….

ಭಕ್ತಿ ಎಂಬುದು ಒಂದು ಮನೋಸ್ಥಿತಿ. ಅದು ಅಮಲಾಗದಂತೆ ಸದಾ ಎಚ್ಚರಿಕೆ ಮತ್ತು ನಿಯಂತ್ರಣ ಹೊಂದಿರಬೇಕು. ‌ಇಲ್ಲದಿದ್ದರೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತವೆ. ಉದಾಹರಣೆಗೆ ಇಡೀ ದೇಶದ ಬಹುತೇಕ ಎಲ್ಲಾ ಟಿವಿ ಸುದ್ದಿ ಮಾಧ್ಯಮಗಳು ಈ ಅತಿರೇಕಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿವೆಯೇ ಹೊರತು ನೇರವಾಗಿ ಸಂಯಮವನ್ನು ಪಾಲಿಸಲು ಹೇಳುತ್ತಿಲ್ಲ. ವಿವಾದ ಹೆಚ್ಚು ಹೆಚ್ಚು ಉಗ್ರವಾದಷ್ಟು ಅವರಿಗೆ ಲಾಭ ಎಂಬಂತೆ ವರ್ತಿಸುತ್ತಿವೆ. ಕನ್ನಡದ ಸುದ್ದಿ ಸಂಪಾದಕರು ಮತ್ತು ನಿರೂಪಕರು ಅತ್ಯಂತ ಬಾಲಿಶವಾಗಿ ಮತ್ತು ಅಮಾನವೀಯವಾಗಿ ತಮ್ಮ ಅಪ್ರಬುದ್ದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೋಡಿದರೆ ಅವರ ಬಗ್ಗೆ ಹೇಸಿಗೆಯಾಗುತ್ತದೆ….

ಅವರು ಯಾವುದೋ ಧರ್ಮದ ಬಗ್ಗೆ ಪ್ರಚೋದಿಸುತ್ತ ತಾವು ಪಾಲಿಸಬೇಕಾದ ಪತ್ರಿಕಾ ಧರ್ಮವನ್ನೇ ನಗೆಪಾಟಲಿಗೆ ಈಡು ಮಾಡುತ್ತಿದ್ದಾರೆ. ಧಾರ್ಮಿಕ ಉನ್ಮಾದ ಹೇಗೆ ಒಂದು ದೇಶದಲ್ಲಿ ಅರಾಜಕತೆ ಉಂಟುಮಾಡಬಹುದು ಎಂಬುದನ್ನು ಸಾರ್ವಜನಿಕರಿಗೆ ಉದಾಹರಣೆ ಸಹಿತ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವುದನ್ನು ಮರೆತು ಅವರು ಸಹ ವಿಕೃತವಾಗಿ ಕುಣಿಯುವುದನ್ನು ನೋಡಿ ಅಸಹ್ಯವಾಗುತ್ತದೆ.

ಮಾರಾಟವಾದ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ ಎಂಬ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ.‌ ಯಾವ ಸುದ್ದಿ ವಾಹಿನಿಯಲ್ಲಿ ಯಾರು ಯಾವ ಸಂದರ್ಭದಲ್ಲಿ ಎಷ್ಟು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಉದಾಹರಣೆ ಸಮೇತ ಗುರುತಿಸಬಹುದು. ಅಷ್ಟು ಅದ್ವಾನವಾಗಿ ಅವರು ಬಹಿರಂಗವಾಗಿ ತಮ್ಮ ದುಷ್ಟತನ ಪ್ರದರ್ಶಿಸುತ್ತಿದ್ದಾರೆ.

ಆದ್ದರಿಂದ ಜನ ಮೊದಲೋ, ದೇಶ ಮೊದಲೋ, ಧರ್ಮ ಮೊದಲೋ ಎಂದು ನಿರ್ಧಿರಿಸಬೇಕಾದ ಜವಾಬ್ದಾರಿ ಸಾಮಾನ್ಯ ನಾಗರಿಕರಾದ ನಮ್ಮ ಮೇಲಿದೆ. ಅತಿಯಾದ ತರ್ಕ ಚರ್ಚೆ ವಿತಂಡವಾದಗಳಿಗೆ ಬಲಿಯಾಗದೆ ದಯವಿಟ್ಟು ಸಹಜವಾಗಿ ಭಾರತ ಮಾತೆಯ ಹಿತಾಸಕ್ತಿಯಿಂದ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ ಮತ್ತು ಅದೇ ರೀತಿ ಸಂಯಮದಿಂದ ವರ್ತಿಸಿ.

ಭಾರತದ ಐಕ್ಯತೆ, ಸಮಗ್ರತೆ, ಸಾಮರಸ್ಯ ಕಾಪಾಡಿ. ಯಾರದೋ ಸ್ವಾರ್ಥಕ್ಕೆ ಅಜ್ಞಾನದಿಂದ ನಮ್ಮ ತಾಯಿ ದೇಶವನ್ನು ಕಷ್ಟಕ್ಕೆ, ರಕ್ತಪಾತಕ್ಕೆ ದೂಡಬೇಡಿ. ವಿಶ್ವದಲ್ಲಿ ನಮ್ಮ ದೇಶ ಮಾತ್ರ ಅಸ್ತಿತ್ವದಲ್ಲಿಲ್ಲ. ನಮ್ಮ ಶತ್ರು ದೇಶಗಳು ಸಹ ನಮ್ಮನ್ನು ನಾಶಪಡಿಸಲು ಕಾಯುತ್ತಿವೆ. ಅದಕ್ಕೆ ಅವಕಾಶ ಕೊಡಬಾರದು ಎಂಬ ಸೂಕ್ಷ್ಮ ಪ್ರಜ್ಞೆ ಸದಾ ಜಾಗೃತವಾಗಿರಲಿ ಎಂದು ಎಚ್ಚರಿಸುತ್ತ……
*****”***************


ನಿನ್ನೆ ದಿನಾಂಕ 12/01/2024 ಶುಕ್ರವಾರ ಸ್ವಾಮಿ ವಿವೇಕಾನಂದರ ಜನ್ಮ ದಿನ ಮತ್ತು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಬೆಂಗಳೂರಿನ ಹೆಸರುಘಟ್ಟ ರಸ್ತೆಯ ಮಲೆನಾಡು ಕೊಚಿಂಗ್ ಸೆಂಟರ್ ನಲ್ಲಿ ವಿವಿಧ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದಷ್ಟು ವಿಷಯಗಳನ್ನು ಕುರಿತು ಮಾತನಾಡಿದೆನು.
**************************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

 

   ವಿವೇಕಾನಂದ ಎಚ್ ಕೆ

9844013068………