ಪ್ರಸಾದ ಸೇವನೆ: ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು
ವಿಜಯ ದರ್ಪಣ ನ್ಯೂಸ್
ಬೆಂಗಳೂರು ಗ್ರಾಮಾಂತರ, ಡಿಸೆಂಬರ್ 26)- ಎಲ್ಲಾ ನಾಗರಿಕರಿಗೂ ಉಚಿತ ಚಿಕಿತ್ಸೆಯನ್ನು ನೀಡಿ ಅವರ ಜೀವವನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಅವರು ಹೇಳಿದರು.
ಹೊಸಕೋಟೆ ತಾಲ್ಲೂಕಿನಲ್ಲಿ ವೈಕುಂಠ ಏಕಾದಶಿ ಮತ್ತು ಹನುಮ ಜಯಂತಿ ಹಿನ್ನೆಲೆಯಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ನಾಗರಿಕರನ್ನು
ಎಂವಿಜೆ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದರು. ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ ನಾಗರಿಕರಿಗೆ
ನಗರದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆಯನ್ನು ಮಾಡಲಾಗಿದೆ
ಮುನ್ನೆಚ್ಚರಿಕೆಯಿಂದ 30 ಹೆಚ್ಚುವರಿ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು . ವೈದ್ಯಾಧಿಕಾರಿಗಳಿಂದ ಪರಿಸ್ಥಿತಿಯ ಮಾಹಿತಿ ಪಡೆದ ಸಚಿವರು ದಾಖಲಾಗಿರುವ ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ನೀಡಿ, ಶೀಘ್ರ ಗುಣಮುಖರಾಗಲು ಸಹಕರಿಸುವಂತೆ ಸೂಚಿಸಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನಿಲ್ ಕುಮಾರ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.