ಗ್ರಾಮ ಪಂಚಾಯತಿಗಳ ಅಭಿವೃದ್ಧಿಯತ್ತ ಅಧ್ಯಕ್ಷರು ಆದ್ಯತೆ ನೀಡಬೇಕು‌:ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿಸೆಂಬರ್  : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ‌ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಗುವಂತಾಗಬೇಕು.
ಪಂಚಾಯತಿಯ ಅಧ್ಯಕ್ಷರು, ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಗ್ರಾಮ ಪಂಚಾಯತಿಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವತಿಯಿಂದ‌ ದೊಡ್ಡಬಳ್ಳಾಪುರದ ಟೌನ್ ನ ಎಲ್ & ಟಿ ಫ್ಯಾಕ್ಟರಿ ಬಳಿಯ ವಿದ್ಯಾದಾನ್ ಶಾಲೆ ಮುಂಭಾಗದಲ್ಲಿರುವ ಲೋಟಸ್ ಅರೇನಾದಲ್ಲಿ ಇಂದು ನಡೆದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಲಭೂತವಾಗಿ ಗ್ರಾಮಗಳು ಅಭಿವೃದ್ಧಿ ಯಾಗಬೇಕಾದರೆ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳ ಪ್ರಮುಖ ಪಾತ್ರವಿದೆ. ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾದ್ಯ. ಸ್ವದೇಶಿ ಉತ್ಪನ್ನಗಳನ್ನು ತಯಾರಿಸಿ ಸ್ವಾವಲಂಬಿಗಳಾಗಿ ಬೇರೆಯವರ ಮೇಲೆ ಅವಲಂಬಿತರಾಗದೆ ಬದುಕಬೇಕು ಎಂದರು. ದೇಶದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಪ್ರಾಣ ಬಲಿದಾನ ನೀಡಿ ಸ್ವಾತಂತ್ರ್ಯ ತಂದುಕೊಟ್ಟರು.

ಸ್ವಾತಂತ್ರ್ಯ ಎಂದರೆ ಯಾರ ಮೇಲು ಅವಲಂಬನೆಯಾಗದೆ ಬದುಕುವುದು. ಗ್ರಾಮಗಳಲ್ಲಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ನರೇಗಾ ಕೆಲಸಗಳು ಪ್ರಾಮಾಣಿಕವಾಗಿ ನಡೆಯಬೇಕು. ಗ್ರಾಮ ಪಂಚಾಯತಿ ನಮ್ಮದೆಂಬ ಭಾವನೆಯಿಂದ ಅದನ್ನು ಅಭಿವೃದ್ಧಿ ಪಡಿಸಲು ಒಗ್ಗೂಡಿ ಚಿಂತನೆ ನಡೆಸಬೇಕು. ಶಾಲೆಗಳ‌ ಅಭಿವೃದ್ಧಿ ಜೊತೆಗೆ ಕೆರೆಗಳ ಅಭಿವೃದ್ಧಿಯು ಬಹಳ ಮುಖ್ಯ. ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮ ವಹಿಸಲಾಗುವುದು. ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಅಭಿವೃದ್ಧಿಯನ್ನು ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳ ಒದಗಿಸುವುದು ಗ್ರಾಮ ಪಂಚಾಯತಿಗಳ ಕರ್ತವ್ಯ. ಗ್ರಾಮದ ಹಿತಾಸಕ್ತಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳ ಪಾತ್ರ ಬಹುಮುಖ್ಯ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಸ್ಯೆ ಬಗೆಹರಿದರೆ ತಾಲ್ಲೂಕು ಮಟ್ಟದಲ್ಲಿ ಜನರ ಅಲೆದಾಟ ತಪ್ಪುತ್ತದೆ. ರೈತರ, ಜನಸಾಮಾನ್ಯರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಜನಸ್ನೇಹಿ ಆಡಳಿತ ನೀಡಿ. ಸಾರ್ವಜನಿಕ ಪರವಾಗಿ ಕೆಲಸ ಮಾಡಿ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಿಂದ ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಸಿಗುತ್ತಿದೆ. ಅಧಿಕಾರಿಗಳು, ಅಧ್ಯಕ್ಷರುಗಳು ಸಮನ್ವಯ ಸಾಧಿಸಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರವನ್ನು ಸರ್ಕಾರ ನೀಡಿದೆ. ಭಾರತದ ನಿಜವಾದ ಶಕ್ತಿ ಗ್ರಾಮಗಳು. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾದ್ಯ. ಇದು ಮಹಾತ್ಮ ಗಾಂಧಿಜೀಯವರ ಕನಸು ಎಂದರು. ಕನ್ನಡ ಶಾಲೆಯ ಉಳಿವಿಗೆ ಶ್ರಮ ವಹಿಸಿ ಕನ್ನಡ ಭಾಷೆಯನ್ನು ಬಳಸಬೇಕು. ಭಾರತದ ಆತ್ಮ ಗ್ರಾಮಗಳು. ಸ್ವಚ್ಚ ಭಾರತಕ್ಕೆ ಒತ್ತು ನೀಡಿ ಗ್ರಾಮದ ಸ್ವಚ್ಚತೆಗೆ ಆಧ್ಯತೆ ನೀಡಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಉಮಾ ಮಹದೇವನ್ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಇಲಾಖೆ, ಪವನ್ ಕುಮಾರ್ ಮಾಲಾಪತಿ ಆಯುಕ್ತರು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌.ಕೆ.ಎನ್ ಅನುರಾಧ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು,ಜಿಲ್ಲಾ ಮಟ್ಟದ ಅಧಿಕಾರಿಗಳು, ಕೊನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳ ಮಂಜುನಾಥ್, ಉಪಾಧ್ಯಕ್ಷೆ ಪುಷ್ಪ ಶಿವಕುಮಾರ್, ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರುಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಉಪಸ್ಥಿತರಿದ್ದರು.