“ಗುಲಾಮಗಿರಿ ಮನಸ್ಥಿತಿಯಿಂದ ದೇಶಕ್ಕೀಗ ಸ್ವಾತಂತ್ರ್ಯ” ಪ್ರಧಾನಿ ನರೇಂದ್ರ ಮೋದಿ………
ವಿಜಯ ದರ್ಪಣ ನ್ಯೂಸ್
“ಗುಲಾಮಗಿರಿ ಮನಸ್ಥಿತಿಯಿಂದ ದೇಶಕ್ಕೀಗ ಸ್ವಾತಂತ್ರ್ಯ ” ಪ್ರಧಾನಿ ನರೇಂದ್ರ ಮೋದಿ………
ಹೌದು ನಿಜ, ಇಂದಿರಾಗಾಂಧಿ ಆಡಳಿತ ಕಾಲದಲ್ಲಿ ಬಹುತೇಕ ಸಾಮಾಜಿಕ ಮನಸ್ಥಿತಿ ಗುಲಾಮಿತನದಲ್ಲಿಯೇ ಇತ್ತು. ಆಗ ಅನಕ್ಷರಸ್ಥ ಸಂಖ್ಯೆ ಹೆಚ್ಚಾಗಿತ್ತು. ಆಧುನಿಕ ತಂತ್ರಜ್ಞಾನ, ಸಮೂಹ ಸಂಪರ್ಕ ಮಾಧ್ಯಮಗಳು ಅಭಿವೃದ್ಧಿ ಹೊಂದಿರಲಿಲ್ಲ. ಸಾರಿಗೆ, ವಿದ್ಯುತ್, ಊಟ, ವಸತಿಯ ಕೊರತೆ ತುಂಬಾ ಇತ್ತು. ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಸಮಾಜದ ಭಾಗವಾಗಿತ್ತು. ಎಷ್ಟೋ ಕೊಲೆ ಅತ್ಯಾಚಾರಗಳನ್ನು ಹೊರಗೆ ಬಾರದಂತೆ ಮುಚ್ಚಿಹಾಕಲಾಗುತ್ತಿತ್ತು.
ಚುನಾವಣೆಗಳಲ್ಲಿ ಬಹಳಷ್ಟು ಅಕ್ರಮಗಳು ಆಗುತ್ತಿದ್ದವು. ಇಂದಿರಾಗಾಂಧಿಯವರ ಹೆಸರಿನ ಪ್ರಭಾವದಿಂದಲೇ ಎಷ್ಟೋ ಅನರ್ಹ ಅಥವಾ ಯೋಗ್ಯತೆಯಿಲ್ಲದ ಜನ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದರು. ರಾಜಕಾರಣದಲ್ಲಿಯೂ ಜಮೀನ್ದಾರಿ ಪದ್ಧತಿಯ ಸಾಮಂತರ ವಂಶಾಡಳಿತ ವ್ಯವಸ್ಥೆ ಜಾರಿಯಲ್ಲಿತ್ತು. ಜೀತ ಪದ್ಧತಿಯು ಅಸ್ತಿತ್ವದಲ್ಲಿತ್ತು. ಜಾತಿ ತಾರತಮ್ಯಗಳು ಆಳವಾಗಿ ಬೇರೂರಿತ್ತು. ಮೋದಿಯವರು ಹೇಳಿದಂತೆ ಗುಲಾಮಿ ಮನಸ್ಥಿತಿ ಇದ್ದಿದ್ದು ನಿಜ……
ಸುಮಾರು 40 ವರ್ಷಗಳು ಕಳೆದಿವೆ. ಮೋದಿಯವರು ಪ್ರಧಾನಿಯಾಗಿ 10 ವರ್ಷಗಳಾಗುತ್ತಿದೆ. ಈಗ ಗುಲಾಮಿ ಮನಸ್ಥಿತಿ ಹೋಗಿ ಸ್ವಾಭಿಮಾನಿ ಮನಸ್ಥಿತಿ ಭಾರತೀಯರಲ್ಲಿ ಮೂಡಿದೆ ಎಂದು ಭಾವಿಸಬಹುದೇ…..
ಇಲ್ಲ ಅದು ಖಂಡಿತ ಸುಳ್ಳು. ಈಗಲೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಗುಲಾಮಿ ಮನೋಭಾವ ಭಾರತೀಯರಲ್ಲಿದೆ. ಆದರೆ ರೂಪ ಮಾತ್ರ ಬೇರೆ…….
ಮೋದಿಯವರ ಆಡಳಿತದಲ್ಲಿ ಭಾರತೀಯರ ಮನಸ್ಥಿತಿ ಆರ್ಥಿಕ ಗುಲಾಮಿತನದತ್ತ ಮುನ್ನುಗ್ಗುತ್ತಿದೆ. ಆಗ ಅನಕ್ಷರಸ್ಥ ಗುಲಾಮರು ಈಗ ಅಕ್ಷರಸ್ಥ ಗುಲಾಮರು. ಆಗ ಇಲ್ಲದ ಅನೇಕ ಆಧುನಿಕ ತಂತ್ರಜ್ಞಾನ ಈಗ ಬೆಳವಣಿಗೆ ಹೊಂದಿದೆ. ಜನರಿಗೆ ಬಹುತೇಕ ಮಾಹಿತಿಗಳು ಕುಳಿತಲ್ಲೇ ಲಭ್ಯವಾಗುತ್ತವೆ. ಆದರೂ ಮೋದಿಯವರ ಹೆಸರಿನ ಪ್ರಭಾವದಿಂದಲೇ ಎಷ್ಟೋ ಅಯೋಗ್ಯ ಸಂಸದರು ಆಯ್ಕೆಯಾಗುತ್ತಾರೆ. ಅನೇಕ ಭ್ರಮೆಗಳಿಗೆ ಮತದಾರರು ಮರುಳಾಗುತ್ತಾರೆ….
ಹಿಂದೆ ಯುವಕರು ಕನಿಷ್ಠ ಅರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದರು. ಈಗ ಕೇವಲ ಹೆಚ್ಚು ಸಂಬಳಕ್ಕಾಗಿ ಯಾವ ಕೆಲಸ ಮಾಡಲು ಹಿಂಜರಿಯದ ಗುಲಾಮರಾಗಿದ್ದಾರೆ. ಹಣದಿಂದಲೇ ಅಧಿಕಾರ ಪಡೆಯಬಹುದು, ಹಣದಿಂದಲೇ ಮರ್ಯಾದೆ ಗಳಿಸಬಹುದು, ಹಣದಿಂದಲೇ ಪ್ರೀತಿ ಕೊಳ್ಳಬಹುದು, ಹಣದಿಂದಲೇ ಸಂಬಂಧ ಸುಧಾರಿಸಬಹುದು, ಹಣದಿಂದಲೇ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು ಹೀಗೆ ಹಣಕ್ಕೆ ಗುಲಾಮರಾಗುತ್ತಿರುವ ಹೊಸ ಸಂಸ್ಕೃತಿ ಈಗ ಬೆಳವಣಿಗೆ ಹೊಂದಿದೆ…
ಇಷ್ಟೊಂದು ತಿಳಿವಳಿಕೆ ಮೂಡಿದ ನಂತರವೂ ಅನೇಕ ಶಿಕ್ಷಕರು, ಪತ್ರಕರ್ತರು, ವೈದ್ಯರು, ವಿಜ್ಞಾನಿಗಳು, ಎಂಜಿನಿಯರುಗಳು, ಧರ್ಮಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ವೇಶ್ಯವಾಟಿಕೆಗಿಂತ ಅತ್ಯಂತ ನೀಚವಾಗಿ ಹಣ ಅಥವಾ ಧರ್ಮಕ್ಕಾಗಿ ಭ್ರಷ್ಟರಿಗೆ ಮತ ಹಾಕಿ ತಮ್ಮನ್ನು ಮಾರಿಕೊಳ್ಳುವಷ್ಟು ಗುಲಾಮರಾಗಿದ್ದಾರೆ. ಆರ್ಥಿಕ ಗುಲಾಮರಿವರು…
ಮಾನ್ಯ ನರೇಂದ್ರ ಮೋದಿಯವರು ಆರ್ಥಿಕ ಅಭಿವೃದ್ಧಿಯ ಭರದಲ್ಲಿ ಭಾರತೀಯ ಸಂಸ್ಕೃತಿಯ ನಿಜವಾದ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಮೌಲ್ಯವಿಲ್ಲದ ಆರ್ಥಿಕ ಪ್ರಗತಿ ಅತಿ ಕುಡುಕನು ವಾಹನ ಚಲಾಯಿಸಿದಂತೆ. ಯಾವಾಗ ಬೇಕಾದರೂ ಅಪಘಾತ ಸಂಭವಿಸಬಹುದು ಅಥವಾ ದುಶ್ಚಟಗಳ ದಾಸನ ಕೈಗೆ ಮನೆಯ ಜವಾಬ್ದಾರಿ ನೀಡಿದಂತೆ…..
ಅವರ ಆರ್ಥಿಕ ನೀತಿಗಳು ಪಾಶ್ಚಾತ್ಯ ಶೈಲಿಯಲ್ಲಿದ್ದರೆ ಅವರು ಪ್ರತಿಪಾದಿಸುವ ಮೌಲ್ಯಗಳು ಧಾರ್ಮಿಕ ಹಿನ್ನೆಲೆಯಲ್ಲಿವೆ. ಭಾರತದ ಸಂಸ್ಕೃತಿಗೆ ವಾಸ್ತವವಾಗಿ ಅತ್ಯಂತ ಸರಳ ಸರ್ಕಾರಿ ನಿಯಂತ್ರಿತ ವ್ಯವಸ್ಥೆ ತುಂಬಾ ಹೊಂದಾಣಿಕೆಯಾಗುತ್ತದೆ. ಅದರಲ್ಲಿ ಸಾಕಷ್ಟು ಕೊರತೆಗಳು ಇವೆಯಾದರೂ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಅದಕ್ಕೆ ಸಂಪೂರ್ಣ ಖಾಸಗೀಕರಣ ಪರ್ಯಾಯವಲ್ಲ. ಹಾಗೆಯೇ ಭಾರತದ ಸಾಂಸ್ಕೃತಿಕ ಮೌಲ್ಯಗಳು ಈ ಮಣ್ಣಿನ ನಿಜವಾದ ಅಂತಃ ಶಕ್ತಿ. ಅದನ್ನೇ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದು. ಆದರೆ ಧಾರ್ಮಿಕ ಮೌಲ್ಯಗಳು ಈ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಅದು ಮೇಲ್ನೋಟಕ್ಕೆ ಸರಿ ಎನಿಸಿದರು ದೀರ್ಘಕಾಲದಲ್ಲಿ ಸಮಾಜದ ವಿಭಜನೆಗೆ ಕಾರಣವಾಗುತ್ತದೆ…..
ದೇಶದ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಯಲ್ಲಿ ಪರಿಸರ ರಕ್ಷಣೆ, ಗಾಳಿ ನೀರು ಆಹಾರದ ಗುಣಮಟ್ಟ, ಜಾತಿ ಪದ್ದತಿಯ ನಿರ್ಮೂಲನೆ, ಭ್ರಷ್ಟಾಚಾರ ಮುಕ್ತ ಆಡಳಿತ, ಅಧಿಕಾರ ವಿಕೇಂದ್ರೀಕರಣ, ಕ್ರೀಡಾಂಗಣ ಮತ್ತು ಗ್ರಂಥಾಲಯಗಳ ಹೆಚ್ಚಳ ಹೀಗೆ ಹಲವಾರು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳಬೇಕು….
ಈ ಬೆಳವಣಿಗೆಯನ್ನು ಇನ್ನೊಂದು ರೂಪದಲ್ಲಿ ಹೀಗೆ ವಿವರಿಸಬಹುದು……..
ಗುಲಾಮಿ ಸಂತತಿ ಮತ್ತು ಭಜನಾ ಮಂಡಳಿ………..
ಗುಲಾಮಿ ಸಂತತಿ ಜಾಗೃತವಾಗುತ್ತಿರುವಾಗ – ಜಾಗೃತವಾಗಿದ್ದ ಭಕ್ತ ಗಣ ಭಜನಾ ಮಂಡಳಿ ಸ್ಥಾಪಿಸುತ್ತಿದೆ…..
ಹಿಂದೆ ರಾಜ ಮಹಾರಾಜರ ಸಾಮಂತರ ಕಾಲದಲ್ಲಿ ಬಹುತೇಕ ಎಲ್ಲರೂ ಗುಲಾಮರೇ.
ರಾಜ ಪ್ರತ್ಯಕ್ಷ ದೇವತಾ ಎಂದೇ ನಂಬಲಾಗಿತ್ತು. ರಾಜನ ಮಾತೇ ಆದೇಶ. ಅದೇ ಅಂತಿಮ. ಜೀ ಹುಜೂರ್ ಎಂದು ಅದನ್ನು ಪಾಲಿಸಬೇಕಿತ್ತು. ಸ್ವತಂತ್ರ ಚಿಂತನೆ ಮತ್ತು ಅಭಿಪ್ರಾಯಕ್ಕೆ ಅವಕಾಶವೇ ಇರಲಿಲ್ಲ…..
ಬಹುಶಃ ಇಂದಿರಾಗಾಂಧಿಯವರ ಆಡಳಿತದವರೆಗೂ ಭಾರತದಲ್ಲಿ ಇದೇ ವ್ಯವಸ್ಥೆ ಮುಂದುವರಿದಿತ್ತು…….
ಬುದ್ದ ಮಹಾವೀರರ ಚಿಂತನೆಗಳು, ಬಸವಣ್ಣನವರ ಕಾಲದ ವಚನ ಚಳವಳಿ, ವಿವೇಕಾನಂದರ ವಿದ್ವತ್ ಪೂರ್ಣ ವಿಚಾರಗಳು, ಗಾಂಧಿಯವರ ಸತ್ಯ ಅಹಿಂಸೆಯ ಹೋರಾಟಗಳು ಅಂಬೇಡ್ಕರ್ ಅವರ ಆಳ ಅಧ್ಯಯನದ ವಿಚಾರಗಳು, ಪೆರಿಯಾರ್, ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಒಂದಷ್ಟು ಪ್ರಭಾವದಿಂದಾಗಿ ಭಾರತೀಯ ಸಮಾಜದಲ್ಲಿ ಜಾಗೃತ ಮನಸ್ಥಿತಿ ಉಂಟಾಯಿತು. ಇದೊಂದು ಸ್ವಾಗತಾರ್ಹ ಬೆಳವಣಿಗೆ.
ಆದರೆ ತೊಂಬತ್ತರ ದಶಕದ ನಂತರ ಈ ಜಾಗೃತ ಮನಸ್ಥಿತಿಗಿಂತ ಭಿನ್ನವಾಗಿ ಸಾಂಪ್ರದಾಯಿಕ ಚಿಂತನೆಯ ಜನರಲ್ಲಿ ಹೊಗಳಿಕೆ ಮತ್ತು ಸಮರ್ಥನೆಯ ಭಜನೆ ರೂಪದ ಹೊಸ ಮನೋಭಾವ ಬೆಳವಣಿಗೆಯಾಗಿದೆ.
ಇವರದು ಗುಲಾಮ ಮನಸ್ಥಿತಿಯಲ್ಲ. ಆರ್ಥಿಕವಾಗಿ ಸ್ವಲ್ಪ ಮುಂದುವರಿದವರು, ಶೈಕ್ಷಣಿಕವಾಗಿ ಮುಂದುವರಿದವರು, ಸಾಮಾಜಿಕ ವ್ಯವಸ್ಥೆಯಲ್ಲಿ ಅನುಕೂಲಕರ ಪರಿಸ್ಥಿತಿಯಲ್ಲಿ ಇರುವವರು. ತಾವು ನಂಬಿದ ಸಿದ್ದಾಂತ ವ್ಯಕ್ತಿ ಧರ್ಮ ದೇವರುಗಳನ್ನು ವಿಶ್ವದಲ್ಲೇ ಶ್ರೇಷ್ಠ ಎಂದು ಬಿಂಬಿಸುವ ಮನೋಭಾವ…
( We are best then rest of the world )
ವ್ಯಕ್ತಿ ಅಥವಾ ವಿಚಾರಗಳಲ್ಲಿ ಇರಬಹುದಾದ ಕುಂದು ಕೊರತೆಗಳನ್ನು ಗಮನಿಸದೆ ಅಥವಾ ಗಮನಿಸಿಯೂ ಗಮನಿಸದಂತಿದ್ದು ಎಲ್ಲವನ್ನೂ ಕಣ್ಣು ಮುಚ್ಚಿಕೊಂಡು ಪ್ರೋತ್ಸಾಹಿಸುವ ಮತ್ತು ಸಮರ್ಥಿಸುವ ಹಠಮಾರಿತನ. ಈ ನಿಟ್ಟಿನಲ್ಲಿ ವಿರೋಧಿಗಳನ್ನು ಹಣಿಯುವ ಪ್ರಯತ್ನಗಳು….
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಭಜನಾ ಮಂಡಳಿ ಹೆಚ್ಚು ರೆಕ್ಕೆ ಬಿಚ್ಚಿ ಹರಿದಾಡತೊಡಗಿದೆ. ಪುರಾಣಗಳನ್ನು ಇತಿಹಾಸವಾಗಿಸುತ್ತಾ, ಇತಿಹಾಸವನ್ನು ಅಲ್ಲಗಳೆಯುತ್ತಾ, ವರ್ತಮಾನವನ್ನು ನಿರ್ಲಕ್ಷಿಸುತ್ತಾ,
ಹಿಂದಿನ ಶ್ರೇಷ್ಠತೆ, ಭವಿಷ್ಯದ ಭರವಸೆಗಳನ್ನೇ ಎತ್ತಿಹಿಡಿಯುತ್ತಾ, ವ್ಯಕ್ತಿ ನಿಂದನೆ ಮಾಡುತ್ತಾ ಸಾಗುತ್ತಿದೆ.
ಗುಲಾಮಿ ಸಂತತಿ ಬೆಳೆಯಲು ಮುಖ್ಯ ಕಾರಣ ನಮ್ಮ ಸಮಾಜದ ಅಸಮಾನತೆ, ಅಜ್ಞಾನ, ಬಡತನ ಮುಂತಾದವು.
ಅದರ ವಿರುದ್ಧದ ಹೋರಾಟವೇ ಜಾಗೃತ ಮನಸ್ಥಿತಿಯ ಹುಟ್ಟು.
ಈ ಜಾಗೃತ ಮನಸ್ಥಿತಿಯ ಅಬ್ಬರ ಹೆಚ್ಚಾದಂತೆ ಅದಕ್ಕೆ ಪ್ರತಿಕ್ರಿಯೆಯಾಗಿ ಭಜನಾ ಮಂಡಳಿ ಹೆಚ್ಚು ಕ್ರಿಯಾಶೀಲವಾಯಿತು. ಇದೀಗ ಭಜನಾ ಮಂಡಳಿಯೇ ಸಂಖ್ಯೆಯ ದೃಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯಾಗಿದೆ.
ಈ ಎರಡೂ ಬಣಗಳ ಸಂಘರ್ಷವೇ ಇಂದಿನ ಸಾಮಾಜಿಕ ರಾಜಕೀಯ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.
ಗುಲಾಮಿ ಸಂತತಿಯಿಂದ ಜಾಗೃತರಾದವರಿಗೆ ಈ ವ್ಯವಸ್ಥೆಯ ಬಗ್ಗೆ ಆಕ್ರೋಶವಿದೆ. ಅವರಿಗೆ ಅನೇಕ ಅನಾನುಕೂಲಗಳು ಇರುವುದರಿಂದ ಇದರ ಬದಲಾವಣೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಜಾಗೃತ ಸ್ಥಿತಿಯಿಂದ ಭಜನೆ ಮಂಡಳಿ ಸ್ಥಾಪಿಸಿರುವವರಿಗೆ ಈ ವ್ಯವಸ್ಥೆಯಲ್ಲಿ ಸಾಕಷ್ಟು ಅನುಕೂಲಗಳು ಇರುವುದರಿಂದ ಅವರು ಯಥಾಸ್ಥಿತಿ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ.
ಗುಲಾಮಿ ಸಂತತಿಯವರು ವೈಚಾರಿಕ ಪ್ರಜ್ಞೆಯತ್ತ ಮುಖ ಮಾಡಿದ್ದರೆ, ಭಜನಾ ಮಂಡಳಿಯವರು ಧಾರ್ಮಿಕ, ಸಾಂಪ್ರದಾಯಿಕ ಮತ್ತು ಭಾವನಾತ್ಮಕ ಪ್ರಜ್ಞೆಯತ್ತ ಮುಖ ಮಾಡಿದ್ದಾರೆ.
ಈ ಘರ್ಷಣೆಯ ಮಧ್ಯೆ ಹೊಂದಾಣಿಕೆ ಮಾಡುವ ಮತ್ತು ಸಮನ್ವಯ ಸಾಧಿಸುವ ಅವಶ್ಯಕತೆ ಇದೆ. ಎರಡೂ ಪ್ರಜ್ಞೆಯವರು ಮತ್ತಷ್ಟು ಜಾಗೃತರಾಗಬೇಕಿದೆ.
ಜಾಗೃತಿ ಎಂದರೆ, ಕೇವಲ ಆಕ್ರೋಶವಲ್ಲ,
ಪ್ರತಿಭಟನೆಯಲ್ಲ, ಇನ್ನೊಬ್ಬರ ವಿರುದ್ಧದ ಹೋರಾಟ ಮಾತ್ರವಲ್ಲ. ಅದೊಂದು ಅರಿವು, ಅದೊಂದು ತಿಳಿವಳಿಕೆ, ಅದೊಂದು ನಡವಳಿಕೆ.
ಅದನ್ನು ಮೈಗೂಡಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸೋಣ……..
ಜೊತೆಗೆ ರಾಜ್ಯ ಮತ್ತು ಕೇಂದ್ರದ ಆಡಳಿತ ಮಾಡುವವರ ಮೇಲೆ ಒತ್ತಡ ಹೇರಿ ಆರ್ಥಿಕ ಪ್ರಗತಿಗೆ ಭಾರತೀಯ ಮತ್ತು ಮಾನವೀಯ ಮೌಲ್ಯಗಳ ಮುಖವಿರುವಂತೆ ಆಗ್ರಹಿಸೋಣ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068…………..