ಜಾತಿ ಜನಗಣತಿ……
ವಿಜಯ ದರ್ಪಣ ನ್ಯೂಸ್
ಬೆಂಗಳೂರು
ಜಾತಿ ಜನಗಣತಿ……
ಜಾತಿ ಪದ್ದತಿಯ ಶಾಪ ವಿಮೋಚನೆಯೇ ?
ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ?
ಸಾಮಾಜಿಕ ನ್ಯಾಯವೇ ?
ರಾಜಕೀಯ ಪ್ರೇರಿತವೇ ?
ಚುನಾವಣಾ ತಂತ್ರಗಾರಿಕೆಯೇ ?
ಇದು ಸರಿಯೇ ಅಥವಾ ತಪ್ಪೇ ?…..
ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು…..
ಜನರ, ಸಮಾಜದ, ದೇಶದ ಭವಿಷ್ಯದ ದೃಷ್ಟಿಯಿಂದ ಆಳವಾಗಿ ಮತ್ತು ಸಮಗ್ರವಾಗಿ ಯೋಚಿಸಿ ನಂತರ ಈ ಕ್ಷಣದ ವಾಸ್ತವ ಮತ್ತು ಸತ್ಯದ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಮೇಲ್ನೋಟಕ್ಕೆ ಕಾಣುವ ವಿಷಯ ದಾರಿ ತಪ್ಪಿಸಬಹುದು….
ಭಾರತೀಯ ಸಮಾಜದ ಸಾಮಾಜಿಕ ರಚನೆಯೇ ( Social Structure ) ಜಾತಿ ಆಧಾರಿತ. ಜಾತಿ ವರ್ಣಾಶ್ರಮ ವ್ಯವಸ್ಥೆಯಲ್ಲಿ ವೃತ್ತಿ ಆಧಾರಿತವೇ ಆಗಿದ್ದರು ಕ್ರಮೇಣ ಹುಟ್ಟು ಆಧಾರಿತವಾಯಿತು. ಈಗ ಅಸ್ತಿತ್ವದಲ್ಲಿರುವುದು ಹುಟ್ಟು ಆಧಾರಿತ ಮೇಲು ಕೀಳಿನ ಶ್ರೇಣೀಕೃತ ಜಾತಿ ವ್ಯವಸ್ಥೆ….
ಇದರ ಜೊತೆಗೆ ಮುಟ್ಟಿಸಿಕೊಳ್ಳದ ಒಂದು ಅಸ್ಪೃಶ್ಯ ವರ್ಗವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದೆ…..
ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಹಣ ಅಧಿಕಾರ ಆಸ್ತಿ ಅಂತಸ್ತು ಸೇರಿ ಎಲ್ಲಾ ಸಂಪನ್ಮೂಲಗಳು ಮೇಲ್ಜಾತಿಯ ಜನರಲ್ಲಿಯೇ ಕೇಂದ್ರೀಕೃತವಾಗಿದ್ದುದು ಐತಿಹಾಸಿಕ ಸತ್ಯ ಮತ್ತು ವಾಸ್ತವ. ಸ್ವಾತಂತ್ರ್ಯ ನಂತರ ಒಂದಷ್ಟು ಬದಲಾವಣೆ ಆಗುತ್ತಿರುವುದು ಸಹ ಅಷ್ಟೇ ಗಮನಾರ್ಹವಾದುದು. ಆದರೆ ಅದರ ಪ್ರಮಾಣದ ಬಗ್ಗೆ ಮಾತ್ರ ಗೊಂದಲವಿದೆ. ಅದರ ಪರಿಣಾಮವೇ ಜಾತಿ ಗಣತಿಯ ಪರ ವಿರೋಧದ ಚರ್ಚೆಗಳು…..
ಇದು ಇಷ್ಟಕ್ಕೆ ಮಾತ್ರ ಸೀಮಿತವಲ್ಲ. ಭಾರತ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವುದರಿಂದ ಇಲ್ಲಿ ಚುನಾವಣಾ ರಾಜಕೀಯ ಮಹತ್ವದ ಪಾತ್ರ ವಹಿಸುತ್ತದೆ. ಜನರನ್ನು ಹೆಚ್ಚು ತಲುಪಲು ರಾಜಕೀಯ ಪಕ್ಷಗಳು ವಿವಿಧ ದಾಳಗಳನ್ನು ಉರುಳಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಒಂದು ರಾಷ್ಟ್ರೀಯ ಪಕ್ಷ ಧರ್ಮದ ವಿಷಯವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿದರೆ ಮತ್ತೊಂದು ರಾಷ್ಟ್ರೀಯ ಪಕ್ಷ ಜಾತಿಯನ್ನು ಅಸ್ತ್ರವಾಗಿ ಬಳಸುತ್ತದೆ. ಇದರ ಪರಿಣಾಮ ಸಾಮಾಜಿಕ ಸಂಘರ್ಷ ಉಂಟಾಗಿದೆ…….
ನೋಡಿ, ಒಂದು ವೇಳೆ ಒಳ್ಳೆಯ ಉದ್ದೇಶದಿಂದ ಸಮಾಜದಲ್ಲಿ ತುಳಿತಕ್ಕೆ ಒಳಗಾದ, ಅವಕಾಶ ವಂಚಿತ ಸಮುದಾಯಗಳಿಗೆ ಸೌಕರ್ಯ ಒದಗಿಸಿ ಅವರನ್ನು ದೇಶದ ಅಭಿವೃದ್ಧಿಯ ಭಾಗವಾಗಿ ಮಾಡುವುದಕ್ಕಾಗಿ ಇಡೀ ದೇಶದಲ್ಲಿ ಜಾತಿ ಮತ್ತು ಆರ್ಥಿಕ ಗಣತಿ ಮಾಡಿದರೆ ಅದು ಸ್ವಾಗತಾರ್ಹವಲ್ಲವೇ, ಅದರಿಂದ ದೇಶದ ಸಮಗ್ರ ಅಭಿವೃದ್ಧಿ ಮತ್ತು ಸಮಾನ ಅಭಿವೃದ್ಧಿ ಸಾಧ್ಯವಾಗುತ್ತದೆಯಲ್ಲವೇ…..
ಅಥವಾ,
ಒಂದು ವೇಳೆ ಜಾತಿ ಜನಗಣತಿ ಇಲ್ಲದೇ ಜಾತಿ ರಹಿತ, ಧರ್ಮ ರಹಿತ, ಭ್ರಷ್ಟಾಚಾರ ರಹಿತವಾಗಿ ಇಡೀ ವ್ಯವಸ್ಥೆ ಪ್ರತಿಯೊಬ್ಬ ನಾಗರಿಕರ ಸಮ ಸಮಾಜದ ವರ್ಗ ರಹಿತ ಅಭಿವೃದ್ಧಿ ಮಾಡುವುದಾದರೆ ಆಗ ಜಾತಿ ಜನಗಣತಿಯ ಅವಶ್ಯಕತೆಯೇ ಇರುವುದಿಲ್ಲ…..
ಇಷ್ಟು ಪ್ರಾಮಾಣಿಕ ಆಡಳಿತ ಈಗ ಯಾರಿಂದಲಾದರು ನಿರೀಕ್ಷಿಸಲು ಸಾಧ್ಯವೇ, ಜನರಲ್ಲಿ ಅಪನಂಬಿಕೆ ತಮ್ಮ ರಕ್ತ ಉಸಿರಿನಲ್ಲಿಯೇ ಸೇರಿಯಾಗಿದೆ. ಜಗತ್ತಿನಲ್ಲಿಯೇ ಅತಿಹೆಚ್ಚು ಸಮಾನತೆ ಸಾರುವ ಬಸವ ತತ್ವದ ಅನುಯಾಯಿಗಳಲ್ಲಿಯೇ ಜಾತಿ ಅಭಿಮಾನ ತುಂಬಿ ತುಳುಕುತ್ತಿರುವಾಗ ಇನ್ನು ಅನ್ಯರ ಪಾಡೇನು…..
ಜಾತಿ ಜನಗಣತಿ ಸರಿಯೂ ಅಲ್ಲ, ತಪ್ಪು ಅಲ್ಲ ಆದರೆ ಉದ್ದೇಶ ಸ್ವಾರ್ಥವಾಗಿರುವುದರಿಂದ ಪರ ವಿರೋಧದ ಎರಡೂ ವಾದಗಳನ್ನು ಅನುಮಾನದಿಂದ ನೋಡಬೇಕಾಗಿದೆ. ಸರ್ಕಾರಗಳ ಯಾವುದೇ ಯೋಜನೆಗಳು ಬಹುತೇಕ ಯಾವುದೇ ಜಾತಿಯ ಕಟ್ಟ ಕಡೆಯ ವ್ಯಕ್ತಿ ಅಥವಾ ಸಮುದಾಯಗಳಿಗೆ ಸೇರದೆ ಕೇವಲ ಕೆಲವೇ ಬಲಿಷ್ಠರು ಮತ್ತು ಪಕ್ಷಗಳ ರಾಜಕೀಯ ಪುಡಾರಿಗಳಿಗೆ ಸೇರುವುದು ಭಾರತದ ಸಾಮಾಜಿಕ ವ್ಯವಸ್ಥೆಯ ದುರಂತ…….
ಆದ್ದರಿಂದ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಮಾನವೀಯ ದೃಷ್ಟಿಯಿಂದ ಸಮ ಸಮಾಜದ ಕನಸು ಕಾಣುವ ನಮ್ಮಂತಹವರಿಗೆ ಕಷ್ಟವಾಗುತ್ತದೆ. ಜಾತಿ ರಹಿತ, ವರ್ಗ ರಹಿತ, ಜಾತ್ಯಾತೀತ, ಧರ್ಮ ನಿರಪೇಕ್ಷ ದೇಶ ನಿರ್ಮಾಣವಾಗ ಬೇಕು ಎಂಬ ಕನಸು ನಮ್ಮದು. ಆ ನಿಟ್ಟಿನಲ್ಲಿ ಜಾತಿ ಗಣತಿ ಒಳ್ಳೆಯದಲ್ಲ. ಹಾಗೆಯೇ ವಾಸ್ತವದಲ್ಲಿ ಜಾತಿ ಗಣತಿ ಆಗದೆ ಸರ್ಕಾರದ ಸೌಲಭ್ಯಗಳನ್ನು ಶೋಷಿತರಿಗೆ ಪ್ರಾಮಾಣಿಕವಾಗಿ ತಲುಪಿಸಲು ಸಾಧ್ಯವಿಲ್ಲ. ಬಲಿಷ್ಠ ಜಾತಿಗಳು ಅದನ್ನು ದೌರ್ಜನ್ಯದಿಂದ ಪಡೆಯುತ್ತವೆ ಎಂಬುದು ಅಷ್ಟೇ ಸತ್ಯ. ಅದಕ್ಕಾಗಿ ಜಾತಿ ಗಣತಿ ಅನಿವಾರ್ಯ ಎಂಬುದನ್ನು ಮನಸ್ಸು ಒಪ್ಪುತ್ತದೆ…..
ಭ್ರಷ್ಟ – ಕಳ್ಳ – ವಂಚಕ – ಶೋಷಕ ಮನಸ್ಸುಗಳ ನಡುವೆ ನಮ್ಮ ಚಿಂತನೆಗಳು ಗೊಂದಲಕ್ಕೆ ಒಳಗಾಗಿವೆ. ಜೊತೆಗೆ ವಿಷಯಗಳು ಸಹ ಗೊಂದಲಮಯವಾಗಿದೆ. ನಾವು ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುವವರು ಎಂದು ಹೇಳಿದರೆ ಅದು ಖಂಡಿತ ಪಕ್ಷಪಾತದ ತೀರ್ಮಾನವೇ ಆಗಿರುತ್ತದೆ ಎಂಬುದು ಸ್ಪಷ್ಟ ಅಭಿಪ್ರಾಯ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಚ್ಚಐ
ವಿವೇಕಾನಂದ ಎಚ್ ಕೆ,
9844013068………