ಸಾಯೋದಕ್ಕೆ ಒಂದೆರಡು ಕಾರಣಗಳಿದ್ದರೆ ಬದುಕೋಕೆ ಸಾವಿರಾರು ದಾರಿಗಳಿವೆ

ವಿಜಯ ದರ್ಪಣ ನ್ಯೂಸ್

ಕುಣಿಕೆಗೆ ಕೊರಳು ಕೊಡುವ ಮುನ್ನ ಕೊಂಚ ಯೋಚಿಸಿ ಜೀವ ಉಳಿಸಿ…


          ಒಬ್ಬ ವಿಜಯವಂತ ವ್ಯಕ್ತಿಗೂ ಮತ್ತು ಇತರರಿಗೂ ಇರುವ ವ್ಯತ್ಯಾಸವು ಶಕ್ತಿಯ ಕೊರತೆ ಆಗಿರದೆ ಮನೋ ನಿರ್ಧಾರದ ಕೊರತೆ ಆಗಿರುತ್ತದೆ. ಎನ್ನುವ ಅರ್ಥಗರ್ಭಿತ ಮಾತುಗಳು ವಿನ್ಸ್ ಲೋಂಬಾರ್ಡ್ ಹೇಳಿರುವಂತವು. ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಖಾಸಗಿ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳವ ಸಂಪೂರ್ಣ ಹಕ್ಕಿರುತ್ತದೆ. ಹಾಗಂತ ಆನೆ ನಡದದ್ದೇ ದಾರಿ ಎಂಬಂತೆ ಕೆಲವು ನಿರ್ಧಾರಗಳನ್ನು ಅದರಲ್ಲೂ ನಾವು ನಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳಬೇಕೆಂದು ತೆಗೆದುಕೊಳ್ಳುವ ನಿರ್ಧಾರವನ್ನು ಸುತಾರಾಂ ಒಪ್ಪಲಾಗುವದಿಲ್ಲ.

ಮುಂಜಾನೆದ್ದು ಕಣ್ಮುಂದೆ ಪತ್ರಿಕೆ ಹಿಡಿದರೆ ಸಾಕು ಟಿವಿ ಆನ್ ಮಾಡಿದರೆ ಸಾಕು ಆತ್ಮಹತ್ಯೆಯ ಸುದ್ದಿಯ ಸರಮಾಲೆ ಕಣ್ಣು ಕಿವಿಗಳನ್ನು ಆವರಿಸಿಕೊಂಡು ಬಿಡುತ್ತವೆ. ಕಣ್ಣಗಲಿಸಿ ಕಿವಿ ಚೂಪು ಮಾಡಿ ಕಾರಣವೇನೆಂದು ತಿಳಿಯ ಹೋದರೆ ಬೆಚ್ಚಿ ಬೀಳುವ ಪ್ರಸಂಗ. ಎಂಥ ಕ್ಷುಲ್ಲಕ ಕಾರಣಗಳಿಗೆ ನೊಂದುಕೊಂಡು ಜೀವ ತೆತ್ತಿದ್ದಾರೆ. ಎಂದು ನಮ್ಮ ಮನಸ್ಸು ವಿಷಾದಗೊಂಡು ಮಮ್ಮಲ ಮರುಗುವದು. ಇತ್ತೀಚೆಗಂತೂ ನಮಗೆಲ್ಲ ಅನ್ನ ಕೊಟ್ಟು ಜೀವ ರಕ್ಷಿಸುವ ಅನ್ನದಾತರೇ ಸರಣಿ ಆತ್ಮಹತ್ಯೆಗೆ ಶರಣಾಗಿದ್ದುದು ತುಂಬಾ ಕಳವಳಕಾರಿ ವಿಷಯ. ಇದೆಲ್ಲ ಸಾಲದೆಂಬಂತೆ ಇನ್ನು ಮೇಲೆ ಅರಳಬೇಕಾದ ಸಣ್ಣ ಮೊಗ್ಗಿನ ರೂಪದಲ್ಲಿರುವ ಓದುವ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆಯಲಾಗಲಿಲ್ಲವೆಂದು, ಫೇಲಾಗಿದ್ದಕ್ಕೆ ಹೆತ್ತವರು ತಮ್ಮ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಲಿಲ್ಲವೆಂಬ ಕ್ಷುಲ್ಲಕ ಕಾರಣಗಳಿಗೆ, ಯುವಕರು ಪ್ರೇಮ ವೈಫಲ್ಯಗಳನ್ನು ನೆಪವಾಗಿರಿಸಿ ಖಿನ್ನತೆಗೊಳಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ನಮ್ಮನ್ನು ರಕ್ಷಿಸುವ ಹೊಣೆಯನ್ನು ಹೊತ್ತಿರುವ ದಿಟ್ಟತನಕ್ಕೆ ಹೆಸರಾಗಿರುವ ಮತ್ತು ಮನೋಸ್ಥೈರ್ಯವನ್ನು ಮೈಗೂಡಿಸಿಕೊಂಡಂತವರು ಸಹ ಇದೇ ದಾರಿ ಹಿಡಿದಿದ್ದಾರೆ. ಇದು ನಿಜಕ್ಕೂ ಶೋಚನೀಯ.
ಆತ್ಮಹತ್ಯೆ ಮಹಾ ಪಾಪ ಘೋರ ಅಪರಾಧ ಇಂಥ ಘೋರ ಕೃತ್ಯಗಳ ಸುದ್ದಿಗಳನ್ನು ಓದಿದಾಗ ಕೇಳಿದಾಗ ಮನಸ್ಸು ವಿಲ ವಿಲ ಒದ್ದಾಡುತ್ತದೆ. ಅಯ್ಯೋ! ಎಂಥ ಅನಾಹುವಾಯಿತಲ್ಲ ಎಂಥ ಕೆಲಸ ಮಾಡಿಕೊಂಡರಲ್ಲ ಎಂದು ದಿನವಿಡಿ ಅದೇ ಆಲೋಚನೆ ನಮ್ಮ ತಲೆಯಲ್ಲಿ ಗಿರ ಗಿರ ಸುತ್ತುತ್ತಿರುತ್ತದೆ, ತಮ್ಮ ವೈಯುಕ್ತಿಕ ಸಮಸ್ಯೆಗಳ ಬಗ್ಗೆ ಇತರರೊಂದಿಗೆ ಕುಳಿತು ಹಂಚಿಕೊಂಡಿದ್ದರೆ ಅತೀವ ಒತ್ತಡ ಮತ್ತು ಉದ್ವೇಗಕ್ಕೊಳಗಾಗಿ ದಿಕ್ಕು ತೋಚದಂತಾಗಿ ಇಂಥ ತಪ್ಪು ನಿರ್ದಾರ ತೆಗೆದುಕೊಂಡು ಬದುಕನ್ನೇ ಮುಗಿಸಿಕೊಳ್ಳುವ ದುರಂತ ನಡೆಯಿತಲ್ಲ. ಕುಣಿಕೆಗೆ ಕೊರಳು ಕೊಡುವ ಮುನ್ನ ತಾವೇ ತಣ್ಣಗೆ ಕುಳಿತುಕೊಂಡು ಮೆಲ್ಲಗೆ ಯೋಚಿಸಿದ್ದರೂ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಮನಸ್ಸು ರೋಧಿಸುತ್ತದೆ.

ಕಷ್ಟಗಳು ಬದುಕಿನ ಅವಿಭಾಜ್ಯ ಅಂಗಗಳು .

ಕೆಲವು ಕುಟುಂಬಗಳಲ್ಲಿ ಅತೀವ ಖಿನ್ನತೆಗೊಳಗಾಗಿ ನೊಂದು ಜೀವನಕ್ಕೆ ಮುಖ ಮಾಡುವ ಧೈರ್ಯ ತೋರದೇ ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡ ಸಂಗತಿಗಳು ಕಾಣಸಿಗುತ್ತವೆ. ಅಂಥವರು ಬದುಕಿನಲ್ಲಿ ಸುಖ ಸಂತೋಷ ನಲಿವುಗಳು ಮಾತ್ರ ಇರಬೇಕೆಂದು ಅಂದುಕೊಂಡವರು. ಸುಖ ಸಂತಸದಂತೆ ನೋವು ಕಷ್ಟಗಳು ಬದುಕಿನ ಅವಿಭಾಜ್ಯ ಅಂಗಗಳು ಎಂದು ಮನಗಾಣುವದನ್ನು ನಿರಾಕರಿಸುತ್ತಾರೆ. ಜೀವನ ತನ್ನದೊಬ್ಬನದೇ ಅಲ್ಲ. ನಮ್ಮನ್ನು ಆಶ್ರಯಿಸಿ ಬದುಕುವಂತವರು ನಮ್ಮ ಪ್ರೀತಿ ಮತ್ತು ಕಾಳಜಿಗಾಗಿ ಮಿಡಿಯುವ ಜೀವಿಗಳ ಹಕ್ಕೂ ನಮ್ಮ ಮೇಲಿದೆ ಎನ್ನುದನ್ನು ಮರೆತು ಬಿಡುತ್ತಾರೆ. ಪ್ರೀತಿಸುವವರೊಂದಿಗೆ ಕಾಲ ಕಳೆಯುತ್ತಿದ್ದರೆ ಬೆಟ್ಟದಂತ ಕಷ್ಟವು ಚಿಕ್ಕದಾಗಿ ಕಾಣುತ್ತದೆ. ಬದುಕನ್ನು ಖುಷಿಯಾಗಿ ನಡೆಸುವಂತೆ ಕಲಿಸುತ್ತದೆ. ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಾದರೂ ಚುಕ್ಕಾಣಿ ಹಿಡಿಯಬಹುದು. ಆದರೆ ಸಮುದ್ರ ಉಕ್ಕೇರುವಾಗ ಚುಕ್ಕಾಣಿ ಹಿಡಿಯುವದೇ ಮುಖ್ಯ ನೆನಪಿರಲಿ. ಒಳ್ಳೆಯ ಕಾರ್ಯ ಮರೆತುಹೋಗುತ್ತದೆ. ಕೆಟ್ಟ ಕಾರ್ಯ ಜ್ಞಾಪಕದಲ್ಲಿರುತ್ತದೆ.

ಜೀವನ ಹೊಣೆಯಿಂದ ಕೂಡಿದೆ

ಜೀವನದಲ್ಲಿ ಸಮಸ್ಯೆಯಿಲ್ಲದವರು ಇಲ್ಲವೇ ಇಲ್ಲ. ಇದ್ದರೆ ಅವರು ನೆಲದ ಮೂರು ಆರು ಅಡಿಯಲ್ಲಿ ಮಲಗಿದ್ದಾರೆ. ಅಂದರೆ ಸತ್ತವರಿಗೆ ಮಾತ್ರ ಸಮಸ್ಯೆಯಿಲ್ಲ. ಪ್ರತಿದಿನವೂ ಹೊಸದು. ಹೀಗಾಗಿ ಅದು ಹೊಸ ಹೊಸ ಹೊಣೆಗಳ ಸಮಸ್ಯೆಗಳ ಮೂಟೆಯನ್ನು ಹೊತ್ತುಕೊಂಡು ಬರುತ್ತದೆ. ಸಂತಸದ ಮೂಟೆ ಬಂದಾಗ ನಗುತ್ತ ಸ್ವೀಕರಿಸುವಂತೆಯೇ ಹೊಸ ಹೊಣೆಗಳು ಹೆಗಲಿಗೇರಿದಾಗ ಜೀವನದಿಂದಲೇ ಪಲಾಯನಗೈಯದೇ ಅದೇ ನಗು ಮೊಗದಿಂದ ಸ್ವಾಗತಿಸಲು ಕಲಿತುಕೊಳ್ಳಬೇಕು. ಜೀವನ ಚಕ್ರದಲ್ಲಿ ಸುಖ ದುಃಖಗಳು ಬೈಸಿಕಲ್ಲಿನ ಕಡ್ಡಿಗಳಂತೆ ಅವು ಒಂದಾದ ಮೇಲೊಂದು ಬರುತ್ತ ಹೋಗುತ್ತವೆ. ದುಃಖ ದುಮ್ಮಾನಗಳು ಎದುರಾದಾದಾಗ ಹೆದರದೇ ಎದುರಿಸಿ. ಕತ್ತಲೆಯ ಹಿಂದೆಯೇ ಬೆಳಕಿದ್ದಂತೆ ದುಃಖದ ಬೆನ್ನ ಹಿಂದೆಯೇ ಸುಖವಿದೆ. ದುಃಖ ಎನ್ನುವದು ಕೇವಲ ಮನದ ಸ್ಥಿತಿ ಎಂಬುವದನ್ನು ಅರಿಯುವುದು ಮುಖ್ಯ. ದುಃಖ ಬೇರೆ ಯಾರಿಗೂ ಇಲ್ಲ. ನಾನೇ ಪರಮ ದುಃಖಿಯೆಂದುಕೊಳ್ಳಬೇಡಿ. ನಿಮಗೆ ಚಪ್ಪಲಿ ಇಲ್ಲವೆಂದು ದುಃಖಿಸುವಾಗ ಕಾಲಿಲ್ಲದವರವನನ್ನು ನೋಡಿ ನೀವೆಷ್ಟು ಸುಖಿ ಎನ್ನುವುದು ಅರ್ಥವಾಗುತ್ತದೆ. ಕಲ್ಲಿನಂತೆನಿಸಿದ್ದ ಹೊಸ ಹೊಣೆಗಳು ಆಗ ಹೂವಿನಂತೆ ಹಗುರವೆನಿಸುತ್ತವೆ.

ರೇಷ್ಮೆ ಹುಳುವಿನಂತೆ ಗೂಡು ಕಟ್ಟಿಕೊಳ್ಳಬೇಡಿ .

ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ ಎನ್ನುವ ವಾಡಿಕೆಯ ಮಾತೊಂದಿದೆ. ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಗೋಳಾಡುವುದನ್ನು ಬಿಟ್ಟು ನಿಮ್ಮ ಕಂಗಳಲ್ಲಿ ಅರಳುತ್ತಿರುವ ಕನಸುಗಳನ್ನು ನನಸಾಗುವದರ ಕುರಿತು ಯೋಚಿಸಿ. ಜೀವನವೆಂದರೆ ಎಲ್ಲ ನಾವಂದುಕೊಂಡಂತೆ ನಡೆಯಲ್ಲ. ರಾಶಿ ರಾಶಿ ಅನಿರೀಕ್ಷಿತ ತಿರುವುಗಳು ದಿಢೀರನೆ ಎದುರಿಗೆ ಬಂದು ನಮ್ಮನ್ನು ದಿಕ್ಕು ಕಾಣದ ಗಾವಿಲರಂತೆ ನಡೆದುಕೊಳ್ಳುವ ಹಾಗೆ ಮಾಡುತ್ತವೆ. ಆಗ ರೇಷ್ಮೆ ಹುಳುವಿನಂತೆ ನಿಮ್ಮ ಸುತ್ತಲೂ ಗೂಡು ಕಟ್ಟಿಕೊಳ್ಳದೇ ಜೀವನದ ವಾಸ್ತವ ಸತ್ಯಗಳನ್ನು ಮತ್ತು ನೈಜತೆಯನ್ನು ಹಿರಿಯ ಅನುಭವಿಕರೊಂದಿಗೆ ಚರ್ಚಿಸಿ ಅನಿರೀಕ್ಷಿತ ತಿರುವು ನಿಮ್ಮ ಜೀವನಕ್ಕೆ ಮಹತ್ವದ ತಿರುವು ಆಗುವಂತೆ ಮಾಡಿಕೊಳ್ಳಿ. ಕನಸುಗಳಿಗೆ ರೆಕ್ಕೆ ಕಟ್ಟಿ ನೋಡಿ ಮಾರ್ಗದರ್ಶಕರಿಂದ ಬಲ ಪಡೆದು ನೋಡಿ ಆತ್ಮಹತ್ಯೆಯಂಥ ಹುಚ್ಚು ಕಲ್ಪನೆಗಳು ಹತ್ತಿರವೂ ಸುಳಿಯುವದಿಲ್ಲ. ನೂರಾರು ಕನಸುಗಳನ್ನು ಕಾಣಿ. ಕನಸುಗಳನ್ನು ಕಾಣಲು ಹಣ ತೆರಬೇಕಾಗಿಲ್ಲ ಅಲ್ಲವೆ? ಕಾಣುವ ಕನಸುಗಳೇ ಗುರಿಗಳಾಗಿ ಬದಲಾಗುತ್ತವೆ. ಗುರಿ ಹೊಂದಿದ ಬದುಕು ಜೀವ ಕಳೆದುಕೊಳ್ಳಲು ಮನಸ್ಸು ಮಾಡುವದಿಲ್ಲ ನೆನಪಿನಲ್ಲಿಡಿ.

ದೊಡ್ಡವರಾರು ಹುಟ್ಟಿನಿಂದಲೇ ದೊಡ್ಡವರಾಗಿಲ್ಲ .

ಮಹಾಪುರುಷರ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುವ ಸಾಲು ಸಾಲು ಮಹನೀಯರೆಲ್ಲ ದೊಡ್ಡವರೆ. ಈ ದೊಡ್ಡವರೆಲ್ಲ ಹುಟ್ಟಿನಿಂದಲೇ ದೊಡ್ಡವರಾಗಿಲ್ಲ. ದೊಡ್ಡದನ್ನು ಸಾಧಿಸಬೇಕಾದರೆ ಕಲ್ಲು ಮುಳ್ಳುಗಳು ತುಂಬಿದ ಹಾದಿಯಲ್ಲಿ ಪಾದರಕ್ಷೆಗಳಿಲ್ಲದೆ ನಡೆದದ್ದು ಮನೋಬಲದಿಂದ ಕಷ್ಟಗಳ ಬಂಡೆಗಳನ್ನು ಪುಡಿ ಪುಡಿ ಮಾಡಿದ್ದು ಅವರ ಜೀವನ ಚರಿತ್ರೆ ಒದಿದಾಗ ನಮ್ಮ ಅರಿವಿಗೆ ಬರುತ್ತದೆ. ಕಷ್ಟಗಳ ಆಯಸ್ಸು ಅಲ್ಪ. ಮತ್ತು ತಾತ್ಕಾಲಿಕ ಎನ್ನುವದು ಇಂಥವರ ಜೀವನದಿಂದ ಅರ್ಥವಾಗುವದು. ಕಷ್ಟದ ಪರ್ವತಗಳನ್ನೇ ಕರಗಿಸಿ ಸಾಧಿಸಿದವರ ಪಟ್ಟಿಯಲ್ಲಿ ಅಬ್ರಾಹಂ ಲಿಂಕನ್, ಲಾಲ್ ಬಹದ್ದೂರ ಶಾಸ್ತ್ರೀ ಅಂಬೇಡ್ಕರ್, ಹೆಲೆನ್ ಕೆಲ್ಲರ್‌ಂತವರು ಮಿಂಚುತ್ತ ಎಲ್ಲೆಲ್ಲೂ ಕಂಗೊಳಿಸುತ್ತಿರುವಾಗ ಎಳ್ಳಿನಷ್ಟು ಕಷ್ಟವನ್ನು ಸಹಿಸಿಕೊಳ್ಳಲಾಗದೇ ಜೀವನವನ್ನು ಕೊನೆಗೊಳಿಸಿಕೊಳ್ಳುವದು ಎಷ್ಟು ಉಚಿತ? ಒಬ್ಬ ವ್ಯಕ್ತಿ ಸೋಲಿಸಲ್ಪಟ್ಟಾಗ ಅವನ ಮುಕ್ತಾಯವಾಗುದಿಲ್ಲ. ಆದರೆ ಅವನು ಕೈ ಚೆಲ್ಲಿ ಕುಳಿತಾಗ ಮುಕ್ತಾಯವಾಗುತ್ತಾನೆ. ಯಾವನೂ ಪ್ರಯತ್ನ ಮಾಡುವದನ್ನು ನಿಲ್ಲಿಸುವವರೆಗೆ ವಿಫಲನಾಗುವದಿಲ್ಲ. ಸೋಲೇ ಗೆಲುವಿನ ಅವಿಭಾಜ್ಯದ ಅಂಗ. ಛಲವೇ ಬಲವೆಂಬ ಮಾತಿನಂತೆ ಕನಸಿಗೆ ಕಂಕಣ ಬದ್ಧರಾಗಿ ನಿಂತರೆ ಕಷ್ಟಗಳೆಲ್ಲ ಇಷ್ಟಗಳಾಗಿ ಬದಲಾಗುತ್ತವೆ. ಕಹಿಯೆಲ್ಲ ಸಿಹಿಯಾಗಿ ಸಂಭ್ರಮಿಸುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ.

ಅವಕಾಶಗಳಿಗೆ ಬರವಿಲ್ಲ..

ವಿಶಾಲವಾದ ವಿಶ್ವದಲ್ಲಿ ಅವಕಾಶಗಳಿಗೆ ಬರವಿಲ್ಲ. ಆವಕಾಶಗಳ ಮಹಾಪೂರವೇ ನಿಮ್ಮ ಕಾಲಡಿಯಲ್ಲಿ ಕಾದು ಕುಳಿತಿದೆ. ಕಣ್ತೆರೆದು ನೋಡುವ ಅರಿವು ಇರಬೇಕಷ್ಟೆ. ಹುಟ್ಟಿದ ಪ್ರತಿಯೊಂದು ಜೀವಿಗೂ ಜೀವಿಸುವ ಅವಕಾಶ ಇರುವಾಗ ನಮಗೆಲ್ಲ ಸುಂದರವಾಗಿ ಬದುಕುವ ಅವಕಾಶ ಇದ್ದೇ ಇದೆ ಎನ್ನುವದನ್ನು ಮರೆಯದಿರಿ. ಹಿಂದಿನದೆಲ್ಲ ತೆಗೆದು ಹಿತ್ತಲಲ್ಲಿ ಅಳುವದನ್ನು ಬಿಟ್ಟು ಒಂಚೂರು ಮನಸ್ಸನ್ನು ಹಗುರಗೊಳಿಸಿಕೊಂಡು ನಿಮ್ಮ ಬದುಕಿನ ಬಾಗಿಲನ್ನು ತಟ್ಟುವ ಅವಕಾಶಗಳೆಡೆಗೆ ದೃಷ್ಟಿ ಹರಿಸಿ. ಆಗ ಸುವರ್ಣ ಆವಕಾಶಗಳು ನಿಮ್ಮ ಕೈ ಹಿಡಿಯುತ್ತವೆ. ಸುಖದ ದಡ ಸೇರಿಸುತ್ತವೆ. ದಡ ಸೇರುವ ಮುನ್ನವೇ ಅಧೈರ್ಯದಿಂದ ಹೀನ ನಡೆತೆಯಿಂದ ಹೊರ ಬಂದು ಮುಳುಗಿ ಸಾಯುವ ವಿಚಾರದಿಂದ ಆಚೆ ಬರಲು ಸಾಧ್ಯವಾಗುತ್ತದೆ.

ಸವಾಲಿನ ಸರಪಳಿ ಕತ್ತರಿಸಲು ಅನುಭವದ ಕತ್ತರಿ ಬಳಸಿ
ಜೀವನವೆಂಬುದು ಸವಾಲುಗಳ ಸರಪಳಿಯಿದ್ದಂತೆ. ಈ ಸರಪಳಿಯನ್ನು ಕತ್ತರಿಸಲು ಅನುಭವದ ಕತ್ತರಿ ಬಳಸಿ. ತಲೆ ಇದ್ದವರು ಎಲೆ ಮಾರಿ ಜೀವನ ಮಾಡುವರಂತೆ. ತಲೆ ಬಳಸಿದರೆ ಬದುಕಿನ ಕಲೆ ಸಲೀಸಾಗಿ ಗೊತ್ತಾಗುತ್ತದೆ. ಒಮ್ಮೆ ಸಂತಸದ ಕಲೆ ಗೊತ್ತಾದ ಮೇಲೆ ಅದರಾಚೆ ಬಂದು ಹೇಡಿಗಳೆಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಮನಸ್ಸು ಬರುವುದೇ ಇಲ್ಲ. ಸಾಯುವದಕ್ಕೆ ಒಂದೆರಡು ಕಾರಣಗಳಿದ್ದರೆ ಬದುಕೋಕೆ ನೂರಾರು ದಾರಿಗಳಿವೆ. ಅವುಗಳನ್ನು ಕಂಡುಕೊಳ್ಳುವ ವ್ಯವಧಾನ ಬೇಕಷ್ಟೆ. ಪ್ರತಿಯೊಬ್ಬರಿಗೂ ಪ್ರತಿಭೆಯನ್ನು ಕೊಟ್ಟ ದೇವರು ನಿಮಗೂ ಒಂದು ಪ್ರತಿಭೆಯನ್ನು ಕರುಣಿಸಿದ್ದಾನೆ. ಅದನ್ನು ಧಾರಾಳವಾಗಿ ಬಳಸಿ. ಆಗ ನೋಡಿ ಚಮತ್ಕಾರ. ನೀವು ಹೋದಲೆಲ್ಲ ನಿಮಗೆ ಮಣೆ ಮನ್ನಣೆ. ಇಂಥ ಮನ್ನಣೆ ದೊರೆತಾಗ ಅಯ್ಯೋ! ಎಂಥ ತಪ್ಪು ನಡೆದು ಹೋಗುತ್ತಿತ್ತು. ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದೆ, ಆತುರಕ್ಕೆ ಹುಟ್ಟಿದವರ ಹಾಗೆ ನಡೆದುಕೊಂಡು ಬಿಟ್ಟಿದ್ದರೆ ಇಷ್ಟೊಂದು ಅಮೂಲ್ಯವಾದ ಜೀವನ ಕಳೆದುಕೊಂಡು ಬಿಡುತಿದ್ದೆನಲ್ಲ ಎಂಬ ಪಶ್ಚಾತ್ತಾಪ ಮೂಡದೇ ಇರದು. ಜೀವನದ ಪ್ರತಿ ಪ್ರೀತಿ ಮೂಡದೇ ಇರದು.

ಹೊಂದಿಕೊಳ್ಳುವದೇ ಜಾಣ್ಮೆ .

ಇತರರೊಂದಿಗೆ ಚೆನ್ನಾಗಿ ವ್ಯವಹರಿಸಿ ನಡುವಳಿಕೆಯಲ್ಲಿ ಪ್ರಾಮಾಣಿಕತೆಯನ್ನು ನಿರ್ಲಕ್ಷಿದೆ ವಾಸ್ತವಿಕತೆಗೆ ಒತ್ತು ನೀಡಿದರೆ ಜನ ನಿಮ್ಮೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತಾರೆ. ಕೆಲವೊಮ್ಮೆ ಬಿಕ್ಕಟ್ಟಿನ ಪರಿಸ್ಥಿತಿ ಬಂದಾಗ ಹೊಂದಿಕೊಳ್ಳುವದೇ ಒಳಿತು. ಹೊಂದಿಕೊಳ್ಳುವದು ಅನೇಕ ಬಾರಿ ಜಾಣ್ಮೆ ಎಂದು ಕರೆಸಿಕೊಳ್ಳುತ್ತದೆ. ಹಾಗಂತ ಬಲಹೀನರಾಗಿ ಹೊಂದಿಕೊಳ್ಳುವದಲ್ಲ. ಬಲಹೀನತೆಯಿಂದ ಹೊಂದಿಕೊಂಡರೆ ನಿಮ್ಮ ಮೇಲೆ ಅಸಹ್ಯ ಭಾವನೆ ಉಂಟಾಗಿ ಆತ್ಮಹತ್ಯೆಯಂಥ ವಿಚಾರಗಳು ಒಳ ಹೊಕ್ಕುಬಿಡುತ್ತವೆ. ಹೊಂದಾಣಿಕೆ ಎಂದರೆ ಪ್ರತಿಯೊಂದಕ್ಕೂ ತಲೆ ಅಲ್ಲಾಡಿಸುವದಲ್ಲ. ಅತಿಯಾಗಿ ಪ್ರತಿಕ್ರಿಯಿಸದಿರುವದು. ಏಕ ಪಕ್ಷೀಯವಾಗಿ ಮಾತನಾಡದಿರುವದು. ಅತಿಯೆನ್ನಿಸುವಷ್ಟು ಕಟ್ಟಳೆಗಳನ್ನು ನಿಮ್ಮ ಮೇಲೆ ನೀವೇ ಹಾಕಿಕೊಳ್ಲಬೇಡಿ. ಕಟ್ಟಳೆಗಳಿರುವದು ನೀವು ಉಳಿದು ಬೆಳೆಯಲೇ ಹೊರತು ಕಳೆಗುಂದಿಸಿ ಕಳೆದುಕೊಳ್ಳುವದಕ್ಕಲ್ಲ.

ಜೀವನ ನಮ್ಮ ಕೈಯಲ್ಲಿದೆ.

ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ ನಡುವಿನ ಜೀವನ ನಮ್ಮ ಕೈಯಲ್ಲಿಯೇ ಇದೆ. ದೇವರು ಕೊಟ್ಟ ಆಯುಸ್ಸನ್ನು ಸಂಪೂರ್ಣವಾಗಿ ನಿಮಗಾಗಿ ಅಷ್ಟೆ ಅಲ್ಲ ಇತರರಿಗಾಗಿ ಬದುಕಲಿಚ್ಛಿಸಬೇಕು. ಪದೇ ಪದೇ ಆತ್ಮಹತ್ಯೆಯ ವಿಚಾರ ಮನಸ್ಸನ್ನು ಬಾಧಿಸುತ್ತಿದ್ದರೆ ತಜ್ಞ ರನ್ನು ಮನೋವೈದ್ಯರನ್ನು ಭೇಟಿಯಾಗಿ ಅವರು ನೀಡಿದ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿ ಮಾನಸಿಕ ಶಕ್ತಿ ವೃದ್ಧಿಸುತ್ತದೆ. ಜೊತೆಯಲ್ಲಿರುವವರು ಅವರ ನೋವಿಗೆ ಸ್ಪಂದಿಸಿ ಪ್ರೀತಿ ಕಾಳಜಿಯನ್ನು ವಹಿಸಿ ಅಕಾಲ ಮರಣವನ್ನು ತಡೆಯಬಹುದು. ಪ್ರೀತಿ ಎಂಬ ದಿವ್ಯ ಔ಼ಷಧಿಗೆ ಎಲ್ಲ ಕಾಯಿಲೆಗಳನ್ನು ವಾಸಿ ಮಾಡುವ ಮಹಾ ಶಕ್ತಿಯಿದೆ. ಜೀವನದಲ್ಲಿ ತುಂಬಾ ಬಳಲಿದ್ದೇನೆ ಹಿಂಸೆ ಅನುಭವಿಸಿದ್ದೇನೆ ಎಂಬ ಅವರ ನೋವು ನರಳಿಕೆಗೆ ಸಂಪೂರ್ಣ ಒಳ್ಳೆಯ ಕಿವಿಗಳಾಗಿ ಮನದಲ್ಲಿಯೇ ಮರುಗುತ್ತ ನಲುಗುತ್ತ ಬಾಡಿ ಹೋಗದಂತೆ ಎಲ್ಲ ಭಾವಗಳಿಗೆ ಸ್ಪಂದಿಸುವದು ಅಗತ್ಯವಿದೆ ಎನ್ನುವುದು ಮನಶಾಸ್ತ್ರಜ್ಞರ ಅಭಿಮತ. ಮಾನಸಿಕ ಪ್ರಶಾಂತತೆಗಾಗಿ ಯೋಗ ಧ್ಯಾನ ರೂಢಿಸಿಕೊಂಡರೆ ಅತ್ಯದ್ಭುತವಾದ ಪ್ರಭಾವ ಕಂಡು ಬರುತ್ತದೆ. ಚುರುಕಾಗಿ ಚಟುವಟಿಕೆಯಿಂದಿರಲು ಲಘು ವ್ಯಾಯಾಮ ಮಾಡಿ, ಪ್ರಪಂಚದ ಎಲ್ಲ ಕಾರ‍್ಯಗಳೂ ಮಂದಹಾಸ ನೀಡಿ ಎನ್ನುತ್ತವೆ. ಹಾಗಾಗಿ ಉಲ್ಲಸಿತವಾಗಿರಲು ಹಾಸ್ಯಕ್ಕೆ ಮೊರೆಹೋಗಿ.

ಒಮ್ಮೆ ಮುಗ್ಗರಿಸುವಿಕೆ ಒಂದು ಬೀಳುವಿಕೆಯನ್ನು ತಡೆಯುತ್ತದೆ ಎನ್ನುತ್ತಾರೆ. ಬೀಳುವಿಕೆಯನ್ನು ಜ್ಞಾನದಿಂದ ತಡೆಯಬಹುದು. ಅಂಧಕಾರದಿಂದ ಜೀವ ಕಳೆದುಕೊಳ್ಳುವುದಕ್ಕಿಂತ ಪ್ರಬುದ್ಧತೆಯ ದೃಷ್ಟಿಕೋನದಲ್ಲಿ ಪ್ರಪಂಚದಲ್ಲಾಗುವ ದಿನನಿತ್ಯದ ಬದಲಾವಣೆಗಳನ್ನು ವಾಸ್ತವಿಕತೆಯ ಚಿತ್ರಣದತ್ತ ಗಮನ ಹರಿಸಿ ತಿಳಿದುಕೊಂಡರೆ, ಇವತ್ತಿನ ಪ್ರಮಾಣದಲ್ಲಿ ಸಂಭವಿಸುತ್ತಿರುವ ಆತ್ಮಹತ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ನಗರ ಪ್ರದೇಶ, ಗಾಮೀಣ ಪ್ರದೇಶ, ಹದಿಹರೆಯದವರು, ಮಕ್ಕಳು, ವಯಸ್ಸಾದವರು ಎಂಬ ಭೇದ-ಭಾವವಿಲ್ಲದೇ ಆತ್ಮಹತ್ಯೆಗಳತ್ತ ಮನಸ್ಸು ಮಾಡುವ ಮನಸ್ಸುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗಾಯವಾದ ನಂತರದ ಬುದ್ಧಿವಾದ ಸಾವಿನ ನಂತರ ಔಷಧಿ ನೀಡಿದಂತೆ ಎಂಬ ಮಾತನ್ನು ಅರ್ಥೈಸಿಕೊಂಡು ನೈತಿಕ ಶಿಕ್ಷಣ, ಜೀವನದ ಮೌಲ್ಯಗಳು, ಸಾಕಷ್ಟು ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಒದಗಿಸಿದರೆ ಬದುಕು ಕುಣಿಕೆಗೆ ಕೊರಳು ಕೊಡುವುದನ್ನು ತಪ್ಪಿಸಬಹುದಲ್ಲವೇ..

ಜಯಶ್ರೀ ಜೆ ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜ್ ಹಿರೇಬಾಗೇವಾಡಿ, ಜಿ:ಬೆಳಗಾವಿ ೯೪೪೯೨೩೪೧೪೨