ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ದಸರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ .

ವಿಜಯ ದರ್ಪಣ ನ್ಯೂಸ್

ಶ್ರೀರಂಗಪಟ್ಟಣ :- ಪಾರಂಪರಿಕ ನಗರಿ ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ದೊರೆದಿದ್ದು, ಜನಾಕರ್ಷಣೀಯ ಜಂಬೂ ಸವಾರಿ ಮೆರವಣಿಗೆ ವೈಭವದಿಂದ ನಡೆಯಿತು.

ದಸರಾದ ಮೂಲ ನೆಲೆ ಶ್ರೀರಂಗಪಟ್ಟಣದಲ್ಲಿ ಜಂಬೂಸವಾರಿ ಮೆರವಣಿಗೆ ವೈಭವ ಕಣ್ತುಂಬಿ ಕೊಂಡ ಜನತೆ ಪಾರಂಪರಿಕ ಉತ್ಸವಕ್ಕೆ ಮನಸೋತರು.

ಬೆಂಗಳೂರು-ಮೈಸೂರು ಹೆದ್ದಾರಿಯ ಕಿರಗಸೂರು ವೃತ್ತದಲ್ಲಿರುವ ಬನ್ನಿ ಮಂಟಪದಲ್ಲಿ ಬನ್ನಿ ಪೂಜೆ ನೆರವೇರಿದ ನಂತರ ಅಲಂಕೃತ ವೇದಿಕೆಯಲ್ಲಿ ದಸರಾ ಉತ್ಸವಕ್ಕೆ ರಾಜಾ ವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ರಾಜ ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದರೆ ವರಲಕ್ಷ್ಮಿ ಮತ್ತು ವಿಜಯಾ ಜೊತೆಯಲ್ಲಿ ಹೆಜ್ಜೆ ಹಾಕಿ ಮನ ಸೆಳೆದವು.

ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಶ್ರೀರಂಗ ನಾಥ ದೇವಾಲಯದವರೆಗೆ ನಡೆದ ಮೆರವಣಿಗೆಯನ್ನು ರಸ್ತೆ ಬದಿಯಲ್ಲಿ ನಿಂತ ಸಾವಿರಾರು ಜನತೆ ಕಣ್ತುಂಬಿ ಕೊಂಡರು.

ಮೈಸೂರು ದಸರಾ ಮಾದರಿಯಲ್ಲಿ ಆಕರ್ಷಕ ಕಲಾತಂಡಗಳು ಮೆರಗು ನೀಡಿದವು.ಪೊಲೀಸ್ ಬ್ಯಾಂಡ್, ಅಶ್ವದಳ, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಒನಕೆ ಕುಣಿತ, ರಂಗದ ಕುಣಿತ, ಕೋಳಿ ನೃತ್ಯ, ಕಹಳೆ, ನಾಸಿಕ್ ಡೋಲ್, ದೊಡ್ಡ ಆಂಜನೇಯ, ಪಟ್ಟದ ಕುಣಿತ, ಯಕ್ಷಗಾನ ನೃತ್ಯ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ಕೇರಳ ಚಂಡೆ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಜನಾಕರ್ಶಿಸಿ ದಸರಾ ಮೆರವಣಿಗೆಗೆ ವಿಶೇಷ ಮೆರಗು ತಂದುಕೊಟ್ಟವು.

ಸರ್ಕಾರದ ಸಾಧನೆ ಬಿಂಬಿಸುವ ಸ್ಥಬ್ದ ಚಿತ್ರಗಳು ನೋಡುಗರ ಗಮನ ಸೆಳೆದವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷಿ ಯೋಜನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸ್ಥಬ್ದ ಚಿತ್ರ, ಅರೋಗ್ಯ ಇಲಾಖೆ ವತಿಯಿಂದ ಹೃದಯಘಾತ ತ್ವರಿತ ಚಿಕಿತ್ಸೆಗೆ ಸ್ಟೆಮಿ ಯೋಜನೆ ಕುರಿತು ಸ್ಥಬ್ದ ಚಿತ್ರ, ರೇಷ್ಮೆ ಇಲಾಖೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸ್ಥಬ್ದ ಚಿತ್ರ ಪ್ರದರ್ಶಿಸಲಾಯಿತು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಇತರರಿದ್ದರು.