ಭಗವಂತನ ನೆರಳು
ವಿಜಯ ದರ್ಪಣ ನ್ಯೂಸ್
ಭಗವಂತನ ನೆರಳು.
ಹಿಂದೆ ಒಂದು ಕಾಲದಲ್ಲಿ ಒಬ್ಬ ಮುನಿಗಳಿದ್ದರು. ಆ ಮುನಿಗಳು ಎಷ್ಟು ಪವಿತ್ರರೆಂದರೆ, ನಕ್ಷತ್ರಗಳು ತಮ್ಮಗರಿವಿಲ್ಲದಂತೆ ಬೆಳಕನ್ನು ನೀಡುವಂತೆ, ಹೂಗಳು ತಮಗರಿವಿಲ್ಲದಂತೆ ಸುಗಂಧವನ್ನು
ಸೂಸುವಂತೆ, ಈ ಮುನಿಗಳು, ತಮ್ಮಗರಿವಿಲ್ಲದಂತೆ ಸದ್ಗುಣ , ಸಚ್ಚಾರಿತ್ರ್ಯವನ್ನು ಹರಡುತ್ತಾ ಸಾಗಿದ್ದರು. ಈ ಮುನಿಗಳ ದಿವ್ಯತೆ ಪವಿತ್ರತೆ, ದೇವತೆಗಳನ್ನು ಕೂಡಾ ಆಕರ್ಷಿಸಿ,ಧರೆಗಿಳಿಯುವಂತೆ ಮಾಡಿತು.
ಇವರ ದಿವ್ಯತೆಯನ್ನು ಕಂಡ ದೇವತೆಗಳು, ಪರಮಾತ್ಮನಲ್ಲಿ, ಪ್ರಭೂ ,ಈ ಮುನಿಗಳಿಗೆ ಕೆಲವು ದಿವ್ಯ ಶಕ್ತಿಗಳನ್ನು ನೀವು ವರದಾನವಾಗಿ ಕರುಣಿಸಿ, ಅವರು ಅದನ್ನು ಖಂಡಿತವಾಗಿ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಆಗ ಭಗವಂತ , ಆ ದಿವ್ಯಶಕ್ತಿ, ಆ ಮುನಿಗಳಿಗೆ ಬೇಕಾಗಿದೆಯೋ ಇಲ್ಲವೊ, ಎಂದು ಅವರಲ್ಲಿಗೆ ಹೋಗಿ ಒಮ್ಮೆ ವಿಚಾರಿಸಿ, ನಂತರ ನೋಡೋಣ ಎಂದು ಹೇಳಿದ.
ದೇವತೆಗಳು ಮುನಿಗಳಲ್ಲಿ ಬಂದು, ನಿಮ್ಮ ಸ್ಪರ್ಶ ಮಾತ್ರದಿಂದ ರೋಗಿಗಳನ್ನು ಗುಣಪಡಿಸುವಂತಹ , ದಿವ್ಯ ಹಸ್ತ,ನಿಮ್ಮದಾಗಬೇಕೆ? ಅಂಥಾ ವರ ನಿಮಗೆ ಬೇಕೆ,ಎಂದು ಕೇಳಿದರು. ಆಗ ಮನಿಗಳು, ಅದನ್ನು ಆ ಪರಮಾತ್ಮನೇ ಮಾಡುತ್ತಿದ್ದಾನಲ್ಲಾ, , ಅವನು ಮಾಡುವುದನ್ನೇ ನಾನು ಇಷ್ಟಪಡುತ್ತೇನೆ ,ಎಂದರು.
ಹಾಗಾದರೆ ಕೆಟ್ಟ ಮನಸ್ಸಿನ ಮನುಷ್ಯರನ್ನು ಒಳ್ಳೆಯ ಆತ್ಮಗಳಾಗಿ ಪರಿವರ್ತನೆ ಮಾಡುವ ಚಮತ್ಕಾರಿ ವಿದ್ಯೆ ನಿಮಗೆ ಬೇಕೆ, ಎಂದು ದೇವತೆಗಳು ಕೇಳಿದಾಗ, ಆ ಕೆಲಸವೆಲ್ಲಾ,ನಿಮ್ಮಂಥ ದೇವತೆಗಳದ್ದು ,ಅದು ನನಗೆ ಬೇಡ ಎಂದರು.
ನಿಮ್ಮ ಒಳ್ಳೆಯತನ, ಒಳ್ಳೆಯ ನೆಡವಳಿಕೆಗಳಿಂದ ಜನರು ಪ್ರಭಾವಿತರಾಗಿ, ನಿಮ್ಮನ್ನು ದೇವರಂತೆ ಕೊಂಡಾಡಲು ನೀವು ಬಯಸುವಿರೆಯೇನು? ಎಂದು ದೇವತೆಗಳು ಕೇಳಿದರು.
ಆಗ ಮುನಿಗಳು, ಬೇಡ , ಬೇಡಾ, ಮನುಷ್ಯರು ನನ್ನಿಂದ ಪ್ರಭಾವಿತರಾಗಿ, ಆ ಭಗವಂತನನ್ನೇ ಮರೆಯುವಂತೆ ಆಗಬಾರದು. ಇದೆಲ್ಲಾ ಏನು ಬೇಡ ಎಂದರು.
ಆಗ ದೇವತೆಗಳು, ಹಾಗಾದರೆ ನೀವೇನು ಬಯಸುವಿರಿ? ಎಂದರು.
ಮುನಿಗಳು ನಗುತ್ತಾ, ನಾನು ಏನನ್ನು ತಾನೇ ಬಯಸಲಿ?, ಆ ಪರಮಾತ್ಮನ ಅನುಗ್ರಹ ಸದಾ ,ನನ್ನ ಮೇಲಿರುವಾಗ, ಎಲ್ಲವೂ ನನ್ನ ಬಳಿಯೇ, ಇದ್ದಹಾಗೆ ಅಲ್ಲವೇ? ಎಂದರು.
ನೀವು ಏನಾದರೊಂದನ್ನು, ಪಡೆದುಕೊಳ್ಳಲೇಬೇಕು, ಇಲ್ಲದಿದ್ದರೆ ನಾವು ನಿಮಗೆ ಬಲವಂತದಿಂದ ಏನನ್ನಾದರೂ ನೀಡಲೇಬೇಕಾಗ ಬಹುದು, ಎಂದರು ದೇವತೆಗಳು.
ಸರಿ ಹಾಗಿದ್ದರೆ, ನನ್ನ ಅರಿವಿಗೇ ಬಾರದಂತೆ, ನಾನು ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡುವಂತ ಶಕ್ತಿ ನನಗೆ ಕರುಣಿಸಿ ,ಯಾವುದೇ ಕಾರಣಕ್ಕೂ ಅದು ನನಗೆ ತಿಳಿಯಬಾರದು, ಅಂಥಾ ಒಂದು ವರವನ್ನು ನೀಡಿ ಎಂದರು ಮುನಿಗಳು.
ಅವರ ಮಾತು ಕೇಳಿ ದೇವತೆಗಳಿಗೆ ಆಶ್ಚರ್ಯವಾಯಿತು.
ಮುನಿಗಳಿಗೇ, ಕಾಣದಂತೆ, ಅವರಿಗೆ ಗೊತ್ತಿಲ್ಲದಂತೆ,ಅವರ ನೆರಳು, ಅವರ ಹಿಂದೆಯೊ, ಅಥವಾ ಅಕ್ಕಪಕ್ಕದಲ್ಲೊ ಬಿದ್ದಾಗ, ಆ ನೆರಳಿಗೆ, ರೋಗವನ್ನು ಗುಣಪಡಿಸುವ, ನೋವನ್ನು ಶಮನ ಮಾಡುವ, ದುಃಖವನ್ನು ನೀಗಿಸುವ ಚಮತ್ಕಾರಿ ಶಕ್ತಿಯನ್ನು ದೇವತೆಗಳು ನೀಡಿದರು.
ಅವರ ನೆರಳಿನಿಂದ ಶುಷ್ಕ ಪ್ರದೇಶಗಳು ಹಸಿರಾದವು, ಒಣಗಿದ ಸಸ್ಯಗಳು ಚಿಗುರಿ ಹೂ ಬಿಟ್ಟವು. ಬತ್ತಿದ ಹಳ್ಳ,ಕೊಳ್ಳಗಳು ನೀರಿನಿಂದ ತುಂಬಿದವು. ಬಿಳುಚಿಕೊಂಡಿದ್ದ ಹಾಲು ಹಸುಳೆಗಳ ಮುಖದಲ್ಲಿ ರಂಗು ತುಂಬಿತು. ಅಸಂತುಷ್ಟ, ಪುರುಷ ,ಮಹಿಳೆಯರು ಸಂತುಷ್ಟರಾದರು.
ತಮಗರಿವಿಲ್ಲದಂತೆ ಮುನಿಗಳು, ಸದ್ಗುಣ ಸಚ್ಚಾರಿತ್ಯವನ್ನು ಎಲ್ಲೆಡೆ ಪಸರಿಸುತ್ತಿದ್ದರು. ಜನರೆಲ್ಲ ಅವರ ಸದ್ಗುಣವನ್ನು, ಸನ್ನಡತೆಯನ್ನು, ಗೌರವಿಸುತ್ತಾ, ಮೌನದಿಂದ ಅವರನ್ನೇ ಹಿಂಬಾಲಿಸುತ್ತಿದ್ದರು.
ಕ್ರಮೇಣ ಜನರು ಮುನಿಗಳ ಹೆಸರನ್ನು ಕೂಡಾ ಮರೆತು, ಅವರನ್ನು “ಪವಿತ್ರ ಛಾಯೆ: ಎಂದು ಗುರುತಿಸಿಕೊಂಡರು.
. ನಾವು ಮಾಡಿದ ಒಳ್ಳೆಯ ಕೆಲಸಗಳು ನಮಗೇ ತಿಳಿಯದಂತಿದ್ದರೆ, ಅಲ್ಲಿ ಅಹಂಭಾವ ತಲೆಎತ್ತುವುದಿಲ್ಲ ಅದು ತಿಳಿಯುತ್ತಾ ಹೋದಂತೆ, ನಾನು , ಎಂಬುದು ತಲೆ ಎತ್ತಿ ಅಹಂಭಾವ ಹೆಚ್ಚಾಗುತ್ತಾ ಹೋಗುತ್ತದೆ.