ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ: ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್
ವಿಜಯ ದರ್ಪಣ ನ್ಯೂಸ್
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪುಷ್ಪ ಆಂಗ್ಲ ಮಾಧ್ಯಮ ಶಾಲಾ ಅವರಣದಲ್ಲಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಿರಿಯಾಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲೆಯ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ ಯಾರು ಉತ್ತಮ ತರಬೇತಿ ಪಡೆದು ಕ್ರೀಡೆಯಲ್ಲಿ ಪ್ರದರ್ಶನ ಮಾಡುತ್ತರೋ ಅಂತವರು ಗೆಲ್ಲುತ್ತಾರೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹು ಮುಖ್ಯ ನಾನು ಕೂಡ ತಾಲೂಕಿನಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಹಲವಾರು ವರ್ಷಗಳಿಂದ ಹೆಚ್ಚು ಸಹಕಾರ ಕೊಡುತ್ತಾ ಬಂದಿದ್ದೇನೆ ಎಂದರು .
ತಾಲೂಕು ರೋಟರಿ ಮಿಡ್ ಟೌನ್ ಅಧ್ಯಕ್ಷ ತಿರುಮಲಪುರ ರಾಜೇಗೌಡ ಮಾತನಾಡಿ, ಪಿರಿಯಪಟ್ಟಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ತಂಬಾಕು ಮಂಡಳಿ ಮಾಜಿ ಉಪಾಧ್ಯಕ್ಷ ಬಿ. ವಿ.ಜವರೇಗೌಡ ಮಾತನಾಡಿ, ಇಂದು ಪಾಠಕ್ಕಿಂತಲೂ ಆರೋಗ್ಯ ದೃಷ್ಟಿಯಿಂದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಕ್ರೀಡಾ ಮನೋಭಾವನೆಯಿಂದ ಕ್ರೀಡೆಯ ಸೋಲು ಗೆಲುವನ್ನು ಸ್ವೀಕರಿಸಬೇಕು. ಸೋತವರು ಹತಾಶರಾಗದೆ ಮುಂದಿನ ಕ್ರೀಡೆಗಳಿಗೆ ಪ್ರಯತ್ನಿಸಬೇಕು ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮೈಸೂರು ಜಿಲ್ಲೆಯ 9 ವಲಯಗಳಿಂದ 36 ತಂಡಗಳು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಕ್ರೀಡೆಯು ಮನಸ್ಸಿಗೆ ಉಲ್ಲಾಸ ನೀಡುವಂಥದ್ದು. ಸದೃಢವಾದ ದೇಹ ಶಾಂತ ಮನಸ್ಸನ್ನು ಕಾಪಾಡಿಕೊಳ್ಳುವುದಕ್ಕೆ ಕ್ರೀಡೆಯು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಮಿಡ್ ಟೌನ್ ಸಹಾಯಕ ರಾಜ್ಯಪಾಲ ಕೆ. ಎ. ಸತ್ಯನಾರಾಯಣ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಶಿವಮೂರ್ತಿ, ಬಳಕೆದಾರರ ಸಂಘದ ಅಧ್ಯಕ್ಷ ದೇವರಾಜ್, ಸುರೇಶ್, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ರಮೇಶ್, ಅತ್ತಿಗೂಡು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗಶೆಟ್ಟಿ, ದೈಹಿಕ ಶಿಕ್ಷಕರಾದ ರಘುಪತಿ, ಶ್ರೀನಿವಾಸ್, ಭಾಸ್ಕರ್, ಶಿಕ್ಷಣ ಇಲಾಖೆಯ ಎಲ್ಲಾ ಸಂಘ ಸಂಸ್ಥೆಯ ಸದಸ್ಯರುಗಳು ಹಾಗೂ ಬಿ ಆರ್ ಸಿ ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.