ಗುಣಮಟ್ಟದ ಹಾಲು ಉತ್ಪಾದಿಸಿ ಸಂಘ ಸರಬರಾಜು ಮಾಡಿ : ಶಿಮುಲ್ ಉಪಾಧ್ಯಕ್ಷ ಎಚ್ ಕೆ ಬಸಪ್ಪ
ವಿಜಯ ದರ್ಪಣ ನ್ಯೂಸ್, ದಾವಣಗೆರೆ ಜಿಲ್ಲೆ
ಚನ್ನಗಿರಿ: ರೈತರು ಹೆಚ್ಚೆಚ್ಚು ಗುಣಮಟ್ಟದ ಹಾಲು ಉತ್ಪಾದಿಸಿ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಹೇಳಿದರು.
ಅವರು ಚನ್ನಗಿರಿ ತಾಲ್ಲೂಕಿನ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆಯು ಪ್ರತಿಯೊಬ್ಬ ರೈತನ ಅವಿಭಾಜ್ಯ ಅಂಗವಾಗಿದ್ದು, ಹೆಚ್ಚು ಜಾನುವಾರುಗಳನ್ನು ಸಾಕುವ ಮೂಲಕ ಹಾಲನ್ನು ಹೆಚ್ಚು ಉತ್ಪಾದಿಸಿ ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಒಟ್ಟು 120 ಜನರು ಸದಸ್ಯತ್ವ ಹೊಂದಿದ್ದು, 75 ಜನರು ಹಾಜರಾಗಿದ್ದಾರೆ. ಈ ಬಾರಿ ಸಂಘಕ್ಕೆ 1 ಲಕ್ಷ ನಿವ್ವಳ ಲಾಭ ಬಂದಿದೆ. ಹನಿ-ಹನಿ ಸೇರಿದರೆ ಹಳ್ಳ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಸಹಕಾರ ಕ್ಷೇತ್ರ ಮುಂದುವರಿಯಲಿದೆ.
ಆದ್ದರಿಂದ ರೈತರು ಹೆಚ್ಚು ಜಾನುವಾರುಗಳನ್ನು ಸಾಕಿ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ಉತ್ಪಾದಿಸಿ ದಾವಣಗರೆ ಜಿಲ್ಲೆಯಲ್ಲಿ ಮಾದರಿ ಸಹಕಾರ ಸಂಘ ಮಾಡಬೇಕೆನ್ನುವ ಛಲ ಇದೆ. ಇದಕ್ಕಾಗಿ ನಿಮ್ಮ ಸಹಕಾರ ಅಗತ್ಯವಿದ್ದು, ಹಾಲು ಉತ್ಪಾದಕರ ಸಂಘದ ಕೈ ಬಲಪಡಿಸಿ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿದರೆ ಸರಕಾರದಿಂದ ವಿಮೆ ನೀಡಲಾಗುವುದು. ಶಿಮುಲ್‌ನಿಂದ ಹಸುಗಳಿಗೂ ಯಶಸ್ವಿನಿ ವಿಮೆ ಸಿಗಲಿದೆ, ಹಸುಗಳ ಲಾಲನೆ ಪಾಲನೆ ಮಾಡಲು ಒಕ್ಕೂಟದಿಂದ ವೈದ್ಯರನ್ನು ನೇಮಿಸಲಾಗುವುದು. ಹಸುಗಳಿಗೆ ಬೇಕಾಗಿರುವ ಖನಿಜ ಮಿಶ್ರಣ, ಗೋದಾರ್ ಶಕ್ತಿ ರಿಯಾಯಿತಿ ದರದಲ್ಲಿ ನೀಡಲಾಗುವುದು.
ಆದ್ದರಿಂದ ಸಂಘದ ಸದಸ್ಯರು ಒಕ್ಕೂಟ ಮತ್ತು ಸರಕಾರ ನೀಡುವ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಪ್ರಪಂಚದಲ್ಲೇ ಹಾಲು ಉದ್ದಿಮೆ ಪ್ರಸಿದ್ಧಿಯಾಗಿದೆ. ಪರಿಣಾಮ ಹೈನುಗಾರಿಕೆಯು ಜನರ ಪ್ರಮುಖ ಕಸುಬಾಗಿ ಸ್ಥಾನ ಪಡೆದಿದೆ. ಗುಣಮಟ್ಟದ ಹಾಲನ್ನು ರೈತರು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ. ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿ/ಕುರಿ ಸಾಕಣೆಯಂತಹ ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ಆರ್.ಮಂಜಪ್ಪ, ನಿರ್ದೇಶಕರಾದ ರುದ್ರೇಗೌಡ, ಫಿರೋಜಿರಾವ್, ತಿಪ್ಪೇಶಪ್ಪ, ಕೆ.ಎಂ.ಸಿದ್ದಯ್ಯ, ಹಾಲೇಶಪ್ಪ ಸೇರಿದಂತೆ ಇತರರು ಇದ್ದರು.