ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ವಿಜಯ ದರ್ಪಣ ನ್ಯೂಸ್ 

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 13,: ರಾಜ್ಯ ಸರ್ಕಾರದ ವತಿಯಿಂದ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 28 ರಂದು ಆಚರಿಸಲಾಗುತ್ತಿದೆ. ಈ ಜಯಂತಿಯ ಪ್ರಯುಕ್ತ ಪರಿಶಿಷ್ಟ ವರ್ಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಲಾಗಿದೆ. ಜಯಂತಿಯ ಪ್ರಯುಕ್ತ ರಾಜ್ಯಮಟ್ಟದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅರ್ಹ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್‌ 30ರ ಒಳಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇಲ್ಲಿಗೆ ಸಲ್ಲಿಸತಕ್ಕದ್ದು . ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ:205, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ:080-29787448 ಸಂಪರ್ಕಿಸಿ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ‌‌‌ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಇಂದು ಸಂಚಾರಿ ಉದ್ಯೋಗ ನೋಂದಣಿ ಶಿಬಿರ

ಬಿಜಿಎಸ್ ನಗರ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 13  : ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಬೆಂಗಳೂರು ವತಿಯಿಂದ ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11.00 ರಿಂದ ಅಪರಾಹ್ನ 3.00 ರವರೆಗೆ ಸಂಚಾರಿ ಉದ್ಯೋಗ ನೋಂದಣಿ ಶಿಬಿರವನ್ನು “ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಕೊಠಡಿ ಸಂಖ್ಯೆ: 132, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಇಲ್ಲಿ ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಎ, ಬಿ.ಕಾಂ, ಬಿಎಸ್ಸಿ, ಬಿ.ಎಡ್, ಡಿ.ಎಡ್, ಬಿ.ಬಿ.ಎ, ಬಿ.ಸಿ.ಎ, ಸೀನಿಯರ್ ಟೈಪಿಂಗ್ ಹಾಗೂ ಶೀಘ್ರಲಿಪಿಗಾರರ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ದಾಖಲಾತಿಗಳ ಮೂಲಪ್ರತಿ ಹಾಗೂ ನಕಲು, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ನ ಪ್ರತಿಗಳು ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಶಿಬಿರ ನಡೆಯುವ ಸ್ಥಳದಲ್ಲಿ ಹಾಜರಿದ್ದು, ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ .

ಉದ್ಯೋಗ ನೋಂದಣಿ ಮಾಡಬಯಸುವ ಅಭ್ಯರ್ಥಿಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಏಷ್ಯಾಟಿಕ ಕಟ್ಟಡ, 2ನೇ ಮಹಡಿ, ಕೆಂಪೇಗೌಡ ರಸ್ತೆ, ಬೆಂಗಳೂರು-09 ಅಥವಾ ದೂರವಾಣಿ ಸಂಖ್ಯೆ: 080-22374582, 9448220647 ಗೆ ಸಂಪರ್ಕಿಸಬಹುದು ಎಂದು ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**********

ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, (ಕರ್ನಾಟಕ ವಾರ್ತೆ) ಸೆಪ್ಟೆಂಬರ್‌ 13: ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದೆ.

*ಜಿಲ್ಲಾ ಮಟ್ಟದಲ್ಲಿ* ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಹಾಗೂ ಕ್ರಮವಾಗಿ ತಲಾ 3 ಸಾವಿರ ರೂ, 2 ಸಾವಿರ ರೂ. ಹಾಗೂ 1 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಹಾಗೂ ಕ್ರಮವಾಗಿ ತಲಾ 31 ಸಾವಿರ ರೂ, 21 ಸಾವಿರ ರೂ. ಹಾಗೂ 11 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.

*ಪ್ರೌಢ ಶಾಲಾ ವಿಭಾಗ* :-

1) ನನಗೇಕೆ ಗಾಂಧೀಜಿ ಇಷ್ಟವಾಗುತ್ತಾರೆ.

2) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ.

3) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ. ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ರಚಿಸಬೇಕು

*ಪದವಿ ಪೂರ್ವ ಶಿಕ್ಷಣ ವಿಭಾಗ* :-

1) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು.

2) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ.

3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ. ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ರಚಿಸಬೇಕು.

*ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ* :-

1) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು.

2) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು.

3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ.

4) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು. ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧಗಳನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ರಚಿಸಬೇಕು.

ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತಾವು ರಚಿಸಿದ ಪ್ರಬಂಧಗಳನ್ನು ತಮ್ಮ ಸಂಸ್ಥೆಗಳ ಮುಖ್ಯಸ್ಥರಿಗೆ ಗುರುತಿನ ಚೀಟಿ ಹಾಗೂ ಸಂಪರ್ಕ ವಿವರಗಳನ್ನು ಲಗತ್ತಿಸಿ ಸಲ್ಲಿಸಬೇಕು. ಪ್ರತಿ ಶಾಲೆ / ಕಾಲೇಜು / ಸ್ನಾತಕೋತ್ತರ ಪದವಿ ವಿಭಾಗಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿನ ಆಯ್ದ ಅತ್ಯುತ್ತಮವಾದ ಮೂರು ಪ್ರಬಂಧಗಳನ್ನು ದಿನಾಂಕ : 26-09-2023 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಪ ನಿರ್ದೇಶಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ , ನಂ 17, ವಾರ್ತಾ ಸೌಧ, ಎರಡನೇ ನೇ ಮಹಡಿ, ಇನ್ ಫೆಂಟ್ರಿ ರಸ್ತೆ, ಬೆಂಗಳೂರು-560091 ಕಚೇರಿಗೆ ತಲುಪಿಸಬೇಕು.

ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವೆನಿಸಿದ ಪ್ರತಿ ವಿಭಾಗದಲ್ಲಿನ ಮೂರು (3) ಪ್ರಬಂಧಗಳನ್ನು ಆಯ್ಕೆ ಮಾಡಿ ಜಿಲ್ಲಾ ವಾರ್ತಾಧಿಕಾರಿಗಳು ದಿನಾಂಕ : 29-09-2023 ರೊಳಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು, ಇವರಿಗೆ ಸಲ್ಲಿಸುವರು. ಅವುಗಳಲ್ಲಿ ಅತ್ಯುತ್ತಮವಾದ ಪ್ರಬಂಧಗಳಿಗೆ ರಾಜ್ಯಮಟ್ಟದಲ್ಲಿ ಬಹುಮಾನ ನೀಡಲಾಗುವುದು.

*ಪ್ರಬಂಧ ರಚಿಸಲು ಮಾರ್ಗಸೂಚಿಗಳು :-*

ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಪ್ರಬಂಧವು ಕನ್ನಡದಲ್ಲಿ ಶುದ್ಧ ಕೈಬರಹ ಅಥವಾ ನುಡಿ ಇಲ್ಲವೇ ಯೂನಿಕೋಡ್‍ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿರಬೇಕು. ಆಕರವಾಗಿ ಬಳಸಿದ ಪರಾಮರ್ಶನ / ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು. ಶಾಲೆ / ಕಾಲೇಜುಗಳ ಮುಖ್ಯಸ್ಥರುಗಳ ಮೂಲಕವೇ ಜಿಲ್ಲಾ ವಾರ್ತಾಧಿಕಾರಿಗಳಿಗೆ ಪ್ರಬಂಧಗಳನ್ನು ತಲುಪಿಸಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ.
*******************