ಕನಸುಗಳ ಕೈಫಿಯತ್ತನ್ನೇ ಕವಿತೆಯಾಗಿಸಿ ಕೈಗಿಡುತ್ತೇನೆ ನಿನಗದು ಒಪ್ಪಿಗೆಯಾ ಹೇಳು ಕಾಫಿರನು ಕಯಾಮತ್ತಲಿ ಬರೆದ ರುಬಾಯತ್ತಿಗೆ ನೀನು ಕರ್ತನೆಂಬಹಂಕಾರ ಕಳೆದು ಕಾರ್ಯ-ಕಾರಣಗಳನು ಬಿಟ್ಟು ಕೇಳುವೆನೆಂಬ ವಾಗ್ದಾನವಿತ್ತರೆ ಮಾತ್ರ ನಿನ್ನೆದುರು ನಿಂತು ನನ್ನದೊಂದು ಚಿಕ್ಕ ಕವಿತೆ ಓದುತ್ತೇನೆ
*****
ಗೌರವವೂ ಬೇಕಿಲ್ಲ ಧನವನಂತೂ ಮೊದಲೇ ಕೇಳುವುದಿಲ್ಲ ಹಾಗಾಗಿ ನಿನಗೆ ಚಿಂತೆ ಬೇಕಿಲ್ಲ ಪ್ರಭುವೇ ಕವಿಯ ಬಗೆಗಿನ ನಿನ್ನ ನಿಲುವೇನೆಂಬುದನು ಶುಭ್ರ ನಿಲುವಂಗಿಯಲಿರುವ ನೀನು ಹೇಳದಿದ್ದರೂ ಸರಿಯೆ ನಿನ್ನ ಸಂಗಮರಮರಿನ ದರಬಾರಿನಲ್ಲಿ ನನ್ನ ಕವಿತೆ ಓದಿ ಮುಗಿಸುವವರೆಗೂ ನಿನ್ನ ಸಭೆ ಬರಖಾಸ್ತಾಗಬಾರದು ಅಷ್ಟೇ
*****
ನಿನ್ನ ಜನ್ನತಿನ ಅಷ್ಟೂ ಜನರಿಗಿಲ್ಲಿ ಜಾಗ ಸಾಕಾಗಬಹುದೇ? ಇಲ್ಲಿ ಶರಾಬು ನಿಶಿದ್ಧವಂತೆ ಪ್ರವಾದಿಯೊಬ್ಬ ಹಾಗಂತ ಪ್ರಲಾಪಿಸುತ್ತಿದ್ದ ನಾನಿಲ್ಲಿಗೆ ಬರುವುದಕೆ ಮೊದಲೇ ಸಿಗರೇಟನು ಸೇದುವುದಿರಲಿ ಅದರ ಹೆಸರು ಹೇಳುವುದು ಹರಾಮು ಎಂದ ಮೇಲೆ ಹೇಗಿಡಲೋ ಮಾರಾಯ ನನ್ನ ಕವಿತ್ವದ ಸರಂಜಾಮು ಅಮಲಗಡಲಲಿ ಮುಳುಗೇಳದೆ ಕಾವ್ಯದ ಮುತ್ತು ದೊರಕದೆಂಬ ಕನಿಷ್ಠ ಸತ್ಯದರಿವು ನಿನಗೇಕಿಲ್ಲವೋ ನಾ ಕಾಣೆ
*****
ಓ ದೇವರೆ ನಿನ್ನನು ಆ ದೇವರೇ ಕಾಪಾಡಬೇಕು ಬೋರಾದಾಗಲೆಲ್ಲ ಅಕಾರಣದಲಿ ದುಃಖಿಸುವುದರಲೇ ಸುಖಿಸುವ ಆಸ್ಪದವಿಲ್ಲ ಇಲ್ಲಿ ಎಂದರೆ ಹೇಗೆ ಯಾವ ಸೀಮೆಯ ಸ್ವರ್ಗವಯ್ಯ ನಿನ್ನದು ನಿನಗೆ ನಾನು ನಿನ್ನ ಹಾಗೆ ದೇವರಲ್ಲ ಆಗಲೂ ಒಲ್ಲ-ದವ ನಾನು ಬರಿಯ ಕವಿಯಷ್ಟೇ ಇಷ್ಟೇ ಅಫಿಡವಿಟ್ಟು ನಿನ್ನ ಮುಂದಿಟ್ಟು ಮುಂಗೈ ಮುದ್ದಿಸಿ ಮಂಡಿಯೂರುವ ಜರೂರತ್ತಿರಲಾರದು ಅಲ್ಲ-ವೇನಯ್ಯ
*****
ನಿನಗೆ ನನ್ನ ಮೊಹೊಬ್ಬತ್ತಿನ ಕರಾರಿದೆ ನೀನಾರನೂ ಪ್ರೀತಿಸಲಿಲ್ಲ ಎಂಬ ಹಸಿ ತಕರಾರಿದೆ ಸುಮ್ಮನೆ ಅವಳನೊಮ್ಮೆ ನೀನು ಮನಸಾರೆ ಪ್ರೀತಿಸಬೇಕು ಕಾಯಬೇಕು ನೋಯಬೇಕು ಆಗಾಗ ವಿರಹದಲಿ ಬೇಯಬೇಕು ನಗುನಗುತಲೆ ಅಳುತ ಕಣ್ಣೀರಿಡಬೇಕು ಸಾಯುತ್ತಲೇ ಹುಟ್ಟಿಬರಬೇಕು ಸಾಧ್ಯವಿದೇಯೇನು ಸರ್ವಶಕ್ತ ಆಗ ನೋಡು ಎಲ್ಲವೂ ತಕ್ತ
*****
ಇಲ್ಲವೆಂದರೆ ಸೋಲೊಪ್ಪಿಕೊ ಕವಿ ಕವಿತ್ವಕೆ ದೈವತ್ವ ಮಣಿಯಲಿ ಇಲ್ಲಿಂದ ಸೀದ ನರಕಕ್ಕೆ ನೇರ ನನ್ನನು ರವಾನಿಸಿ ಬಿಡು ನಿನಗೊಂದಷ್ಟು ಪುಣ್ಯವಾದರೂ ಸಿಗಲಿ ಸತ್ತ ಮೇಲೆ ಸಿಗುವ ನೆಮ್ಮದಿಯ ಮೇಲೆ ಎಂದಿಗೂ ನನ್ನದೇ ಹಕ್ಕಿರಲಿ
✍🏻ರಾಜ್ ಆಚಾರ್ಯ ೧೧-೦೯-೨೦೨೩
ಒಕ್ಕಣೆ : _ಪ್ರೀತಿ ಭೂಮಿಯ ಮೇಲಿಲ್ಲ ಭೂಮಿಯೇ ಪ್ರೀತಿ ಮೇಲಿದೆ. ಅನುಮಾನವೇ ಬೇಡ ಬಾನಿನ ಭಗವಂತನೂ ಪ್ರೀತಿಗೆ ಅತೀತ-ನಲ್ಲ. ಪ್ರೀತಿಯನು ಧಿಕ್ಕರಿಸಿ ಉಳಿದವರಂತೂ ಇಲ್ಲ. ಪ್ರೀತಿಯಲಿ ಎಲ್ಲವೂ ಸಲ್ಲ_