ಅಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ: ಜಿಲ್ಲಾಧಿಕಾರಿ ಡಾ.ಶಿವಶಂಕರ
ವಿಜಯ ದರ್ಪಣ ನ್ಯೂಸ್
ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 12
ಸಾರ್ವಜನಿಕರು ಅನಾರೋಗ್ಯಗೊಂಡ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಸಹಕಾರಿ ಯಾಗಿರುವ ಆಯುಷ್ಮಾನ್‌ಭವ 3.0 ಗೆ ಸೆಪ್ಟೆಂಬರ್ 13 ರಂದು ರಾಷ್ಟ್ರಮಟ್ಟದಲ್ಲಿ ರಾಷ್ಟ್ರಪತಿ ಗಳು ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಸಾಮಾನ್ಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಅಯುಷ್ಮಾನ್ಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಆಯುಷ್ಮಾನ್ ಭವ 3.0 ಅನುಷ್ಠಾನ ಸಂಬಂಧ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆ-ಮನೆ ಪ್ರಚಾರ:
ಆಯುಷ್ಮಾನ್ ಆರೋಗ್ಯ ಕಾರ್ಡ್ ನ ಉಪಯುಕ್ತತೆ ಕುರಿತಂತೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಂಘ ಸಂಸ್ಥೆಗಳು ಸದಸ್ಯರು, ಸ್ಥಳೀಯ ಸಂಸ್ಥೆಗಳು ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಆಯುಷ್ಮಾನ್ ಕಾರ್ಡ್ ಮಾಡಿಸದೇ ಇರುವಂತಹ ಸಾರ್ವಜನಿಕರಿಗೆ ಆಯುಷ್ಮಾನ್ ಕಾರ್ಡ್ ನ ಮಹತ್ವದ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಹೆಚ್ಚಿನ ಜನರು ಆಯುಷ್ಮಾನ್ ಆರೋಗ್ಯ ಕಾರ್ಡ್ ಪಡೆದುಕೊಳ್ಳುವಂತೆ ಕ್ರಮ ವಹಿಸಿ ಎಂದರು.
ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಅಭಿಯಾನದಲ್ಲಿ ಭಾಗಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲು ಕ್ರಮವಹಿಸಿ ಎಂದರು.
ಪ್ರತಿ ಶನಿವಾರ ಶಿಬಿರ:
ಪ್ರಾಥಮಿಕ ಆರೋಗ್ಯ ಕೇಂದ್ರ , ತಾಲ್ಲೂಕು ಆರೋಗ್ಯ ಕೇಂದ್ರ ಗಳಲ್ಲಿ ಪ್ರತಿ ಶನಿವಾರ ವಿಷಯಾಧಾರಿತ ಶಿಬಿರಗಳನ್ನು ನಡೆಸಿ, ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು. ಸಾಂಕ್ರಾಮಿಕವಾಗಿ ಹರಡದೆ ಇರುವ ರೋಗಗಳು (ಮಧುಮೇಹ, ರಕ್ತದ ಒತ್ತಡ ಇತ್ಯಾದಿ) ಗರ್ಭಿಣಿಯರು ಮತ್ತು ಪೌಷ್ಟಿಕ ಆಹಾರ, ಈ ರೀತಿ ವಿವಿಧ ಶಿಬಿರಗಳನ್ನು ಡಿಸೆಂಬರ್ ಅಂತ್ಯದ ವರೆಗೆ ಆಯೋಜಿಸಲಾಗುವುದು. ಜಿಲ್ಲೆಯಲ್ಲಿರುವ ಆಕಾಶ್ ವೈದ್ಯಕೀಯ ಶಿಕ್ಷಣ ಸಂಸ್ಥೆ, ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ, ಎಂ.ವಿ.ಜೆ ಶಿಕ್ಷಣ ಸಂಸ್ಥೆಗಳು ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಸೀಮಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 12 : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ) ಯಡಿಯಲ್ಲಿ 2023-24ನೇ ಸಾಲಿನಲ್ಲಿ ಸಾಲ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗೃಹ/ಸಣ್ಣ ಕೈಗಾರಿಕೆ ಸ್ಥಾಪಿಸಲು ಯೋಜನಾ ವೆಚ್ಚ ಮಿತಿ ಸೇವಾ ವಲಯಕ್ಕೆ ರೂ. 20.00 ಲಕ್ಷ ಮತ್ತು ಉತ್ಪಾದನಾ ವಲಯಕ್ಕೆ ಗರಿಷ್ಠ ರೂ.50.00 ಲಕ್ಷದವರೆಗೆ ಯೋಜನೆ ಅನುಷ್ಠಾನಗೊಳಿಸಲು, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ವತಿಯಿಂದ ಆರ್ಥಿಕ ನೆರವು ಪಡೆದು ಘಟಕ ಅನುಷ್ಠಾನ ಗೊಳಿಸಬಹುದಾಗಿದೆ.
ಅದರಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ/ಗ್ರಾಮೀಣ ಪ್ರದೇಶದಲ್ಲಿ ಘಟಕ ಸ್ಥಾಪಿಸಬೇಕಾಗಿರುತ್ತದೆ. ಇಚ್ಛೆಯುಳ್ಳ ವಿದ್ಯಾವಂತ ನಿರುದ್ಯೋಗಿಗಳಿಂದ ಸ್ವಯಂ ಉದ್ಯೋಗ ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
ಅರ್ಜಿಗಳನ್ನು ಆನ್ ಲೈನ್ ವೆಬ್ ಸೈಟ್ www.kviconline.gov.in ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು, ಜಿಲ್ಲಾ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, “ಖಾದಿ ಭವನ” ನಂ.10, ಜಸ್ಮಾ ಭವನ ರಸ್ತೆ. ಬೆಂಗಳೂರು-01, ದೂರವಾಣಿ ಸಂಖ್ಯೆ 9480825612, 9481485110, 9113995113 ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.