ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ. ಶಿವಶಂಕರ್ ಕರೆ
ವಿಜಯ ದರ್ಪಣ ನ್ಯೂಸ್
ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 11
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತಿದ್ದು, ಸಂವಿಧಾನದ ತತ್ತ್ವ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಆನ್ ಲೈನ್ ನಲ್ಲಿ ನೋಂದಾಯಿಸಿ ಕೊಳ್ಳಲು ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು ಕರೆ ನೀಡಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಮಹತ್ವ ಸಾರಲು ಈ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿದ್ದು ನೋಂದಣಿಗಾಗಿ ಸಮಾಜ ಕಲ್ಯಾಣ ಇಲಾಖೆಯು ವೆಬ್‌ಸೈಟ್ https://thepreamble-swdkar.in ನ್ನು ತೆರೆದಿದ್ದು, ಈ ವೆಬ್ ಸೈಟ್ ಮೂಲಕ ಸೆಪ್ಟೆಂಬರ್ 12 ರೊಳಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಉನ್ನತ ಶಿಕ್ಷಣ/ವೈದ್ಯಕೀಯ ಶಿಕ್ಷಣದ ಅಡಿಯಲ್ಲಿನ ಎಲ್ಲಾ ಕಾಲೇಜುಗಳು, ಎಲ್ಲಾ ಕಾರ್ಪೋರೇಟ್ ಕಂಪನಿಗಳು, ಸಾರ್ವಜನಿಕ ಉದ್ಯಮಗಳು, ಏಜೆನ್ಸಿಗಳು/ಸಂಸ್ಥೆಗಳು/ನೋಂದಾಯಿತ ಸರ್ಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕಲ್ಯಾಣ ಸಂಘಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಸ್ವಸಹಾಯ ಗುಂಪುಗಳು, ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆಪ್ಟೆಂಬರ್ 15 ರಂದು ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಂಡು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಿ, ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದು ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಲು ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯ ಸಂಘಗಳ ಮುಖಂಡರು ಉಪಸ್ಥಿತರಿದ್ದರು.
ಬೆಂ.ಗ್ರಾ.ಜಿಲ್ಲೆ: ಸೆಪ್ಟೆಂಬರ್ 14 ರಂದು ಉದ್ಯೋಗ ನೋಂದಣಿ ಶಿಬಿರ
ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 11
ಬೆಂಗಳೂರು ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಸೆಪ್ಟೆಂಬರ್ 14 ರ ಗುರುವಾರದಂದು ಬೆಳಿಗ್ಗೆ 11 ಗಂಟೆಯಿಂದ 03 ಗಂಟೆಯವರೆಗೆ ಸಂಚಾರಿ ಉದ್ಯೋಗ ನೋಂದಣಿ ಶಿಬಿರವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಕೊಠಡಿ ಸಂಖ್ಯೆ 132, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು” ಇಲ್ಲಿ ಆಯೋಜಿಸಲಾಗಿರುತ್ತದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಡ್, ಡಿ.ಎಡ್, ಬಿ.ಬಿ.ಎ, ಬಿ.ಸಿ.ಎ, ಸೀನಿಯರ್ ಟೈಪಿಂಗ್ ಹಾಗೂ ಶೀಘ್ರಲಿಪಿಗಾರರ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಮೂಲಪ್ರತಿ ಹಾಗೂ ನಕಲು ಪ್ರತಿಗಳೊಂದಿಗೆ ಶಿಬಿರ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಉದ್ಯೋಗ ನೋಂದಣಿಯನ್ನು ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಉದ್ಯೋಗ ನೋಂದಣಿ ಮಾಡಿಸಲು ಬೇಕಿರುವ ದಾಖಲಾತಿಗಳು ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿ, ಪಿ.ಯು.ಸಿ ಮೂಲ ಅಂಕಪಟ್ಟಿ ಹಾಗೂ ನಕಲುಪ್ರತಿ (ಅನ್ವಯಿಸುವವರಿಗೆ), ಪದವಿಯ ಎಲ್ಲಾ ಸೆಮಿಸ್ಟರ್‌ಗಳ ಮೂಲ ಅಂಕಪಟ್ಟಿಗಳು ಹಾಗೂ ನಕಲು ಪ್ರತಿಗಳು (ಅನ್ವಯಿಸುವವರಿಗೆ), ಸೀನಿಯರ್ ಟೈಪಿಂಗ್ ಹಾಗೂ ಶೀಘ್ರಲಿಪಿಗಾರರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವುದಕ್ಕೆ ಸಂಬಂಧಿಸಿದ ಅಂಕಪಟ್ಟಿ ಪ್ರಮಾಣಪತ್ರಗಳು (ಅನ್ವಯಿಸುವವರಿಗೆ), ಜಾತಿ ಪ್ರಮಾಣ ಪತ್ರ (ಅನ್ವಯಿಸುವವರಿಗೆ) ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ ಕಾರ್ಡ್ ಪ್ರತಿ.
ಉದ್ಯೋಗ ನೋಂದಣಿ ಮಾಡಬಯಸುವ ಅಭ್ಯರ್ಥಿಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿರಬೇಕು ಎಂದು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 11
ರಾಜ್ಯ ಸರ್ಕಾರದ ವತಿಯಿಂದ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 28 ರಂದು ಆಚರಿಸಲಾಗುತ್ತಿದೆ. ಈ ಜಯಂತಿಯ ಪ್ರಯುಕ್ತ ಪರಿಶಿಷ್ಟ ವರ್ಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಲಾಗಿದೆ. ಜಯಂತಿಯ ಪ್ರಯುಕ್ತ ರಾಜ್ಯಮಟ್ಟದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅರ್ಹ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇಲ್ಲಿಗೆ ಸಲ್ಲಿಸತಕ್ಕದ್ದು . ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ:205, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ:080-29787448 ಸಂಪರ್ಕಿಸಿ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿ ಘಟಕಕ್ಕೆ ಸಹಾಯಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ (ಕರ್ನಾಟಕ ವಾರ್ತೆ):
2023-24ನೇ ಸಾಲಿನ ತೋಟಗಾರಿಕಾ ಕಾರ್ಯಕ್ರಮವಾದ ಹನಿ ನೀರಾವರಿ (PMKSY-PDMC) ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕನುಗುಣವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನವನ್ನು ಹಾಗೂ ಇತರೆ ವರ್ಗದ ರೈತರಿಗೆ ಶೇ.75ರಷ್ಟು ಸಹಾಯಧನವನ್ನು ನೀಡಲಾಗುವುದು. ಪ್ರತಿ ಫಲಾನುಭವಿಗೆ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯ ಧನ ನೀಡಲಾಗುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ ಈ ಹಿಂದೆ ಅಳವಡಿಸಿಕೊಂಡಿದ್ದ ಹನಿ ನೀರಾವರಿ ಪದ್ಧತಿ ಹಾಳಾಗಿದ್ದಲ್ಲಿ/ಘಟಕ ಕಾರ್ಯ ನಿರ್ವಹಿಸದೇ ಇದ್ದಲ್ಲಿ 7 ವರ್ಷ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಲ್ಲಿ ಸಹಾಯ ಧನ ಪಡೆಯಲು ಪರಿಗಣಿಸಲಾಗುವುದು.
ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ನೀರಾವರಿ ಮೂಲ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರ/ತಾಲ್ಲೂಕು ಕಛೇರಿಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಹನಿನೀರಾವರಿ ಅಳವಡಿಸಲು ನಿಗದಿತ ಅರ್ಜಿಯನ್ನು ಪಡೆಯುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ) ದೊಡ್ಡಬಳ್ಳಾಪುರ
080-27623770/ 9880210892,
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ದೇವನಹಳ್ಳಿ
080-27681204/ 9480461234,
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಹೊಸಕೋಟೆ
080-27904760/ 8217210320,
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ನೆಲಮಂಗಲ
080-27726213/ 9880461607, ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಲಾಖೆಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.