ಹರೆಯದ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಬಹು ಮುಖ್ಯ: ಜಯಂತಿ ರೈ

ವಿಜಯ ದರ್ಪಣ ನ್ಯೂಸ್.

ಡಿ ಬಾ ಎನ ಕಂದ ಅಂಗಾಲ ತೊಳೆದೆನಾ………..

 ಎಂದು ಪುಟ್ಟ ಕಂದನಿಗೆ ನೆನ್ನೆ ಮೊನ್ನೆವರೆಗೆ ಹೇಳುತಿದ್ದ ಅಮ್ಮ ಈಗೀಗ ಆಡಲು ಬಿಡುತಿಲ್ಲ, ಹೆಚ್ಚಾಗಿ ಹೊರಗೆ ಸ್ನೇಹಿತರೊಂದಿಗೆ ಬೆರೆಯಲು ಬಿಡಲ್ಲ ಯಾಕೆ ಅಮ್ಮ ಈ ರೀತಿ ಬದಲಾದಳು?

ಹೆತ್ತಮ್ಮನ ಮನದಲ್ಲಿ ಯಾರಿಗೂ ಹೇಳಿಕೊಳ್ಳಲಾಗದ ಅವ್ಯಕ್ತ ಭಯ ಆವರಿಸಿದೆ. ತನ್ನ ಕಂದ ಮನೆಯಿಂದ ಶಾಲೆ/ ಕಾಲೇಜಿಗೆ ಹೊರಟಾಗ ಕಣ್ಣಿಗೆ ಕಾಣದ ದೇವರಲ್ಲಿ ಕಣ್ತುಂಬಿಕೊಂಡು ಮೌನವಾಗಿ ಕೇಳಿಕೊಳ್ಳುವುದೊಂದೆ ಮಗು ಸುರಕ್ಷಿತವಾಗಿ ಮನೆಗೆ ಹಿಂತಿರುಗಿ ಬರಲೆಂದು.

ಬಾಲ್ಯದಲ್ಲಿ ಮಕ್ಕಳು ಜೇಡಿಮಣ್ಣಿನ ಹಾಗೆ ನಮಗೆ ಬೇಕಾದ ರೀತಿಯ ಆಕಾರವನ್ನು ಶಿಕ್ಷಣ,ಸಂಸ್ಕಾರ, ಮಾರ್ಗದರ್ಶನ ನೀಡುವ ಮೂಲಕ ನೀಡಬಹುದು. ಮಕ್ಕಳು ಆ ಸಮಯದಲ್ಲಿ ಮಾಡುವ ತುಂಟಾಟ , ತರಲೆ, ಹಠಮಾರಿತನ ಎಲ್ಲವೂ ಅಪ್ಯಾಯಮಾನ. ಪ್ರೌಢವಸ್ಥೆಗೆ ಬಂದಾಗ ಅದೇ ನಡವಳಿಕೆ ಮುಂದುವರಿದರೆ ಮಗುವಿನ ಉಜ್ವಲ ಭವಿಷ್ಯದ ಮೇಲೆ ಕರಿನೆರಳಿನ ಛಾಯೆ ಚೆಲ್ಲುವುದು.

ಮಕ್ಕಳ ಸಂಭ್ರಮದಲ್ಲಿ ತಮ್ಮ ಕಷ್ಟಗಳ ಮರೆಯುವ ತಂದೆತಾಯಿಯರ ಪ್ರೀತಿ ಅಕ್ಕರೆಯನ್ನು ಕೆಲವೊಮ್ಮೆ ಮಕ್ಕಳು ಪೋಷಕರ ಬಲಹೀನತೆ ಎಂದು ತಿಳಿಯುತ್ತಾರೆ. ತಮಗೆ ಬೇಕಾದ ವಸ್ತುಗಳನ್ನು ಜಗಳ ಮಾಡಿಯಾದರೂ ಪಡೆದುಕೊಳ್ಳದೆ ಬಿಡರು. ಕೆಲವೊಮ್ಮೆ ಸ್ನೇಹಿತರ ಸಂಗ ಹೀಗೆ ಮಾಡುವಂತೆ ಪ್ರೇರೆಪಿಸಬಹುದು.

ಮನೆಯಲ್ಲಿ ಮಕ್ಕಳು ತಂದೆ ತಾಯಿಯರ ಪಾಲಿಗೆ ಮುಗ್ಧತೆಯ ಪ್ರತಿರೂಪದಂತೆ ಕಂಡರೂ ಸ್ನೇಹಿತರ ಜೊತೆ ಸೇರಿದಾಗ ಅವರ ಇನ್ನೊಂದು ಮುಖದ ಅನಾವರಣವಾಗುತ್ತದೆ.

ಮಗುವಾಗಿದ್ದಾಗಿನಿಂದ ಅಮ್ಮನನ್ನು ಗೆಳತಿಯಂತ ಆಪ್ತತೆಯನ್ನು ಹೊಂದಿದ ಮಗು 10 ರ ವಯಸ್ಸಿನ ನಂತರ ಮಾನಸಿಕ ಹಾಗೂ ದೈಹಿಕ ಬದಲಾವಣೆಯ ವೇಗಕ್ಕೆ ಸಿಲುಕಿ ಮಾನಸಿಕ ಒತ್ತಡವನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಮಕ್ಕಳ ಯೋಚನ ವಿಧಾನದಲ್ಲಿ , ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಈ ಸೂಕ್ಷತೆಯನ್ನು ಪೋಷಕರು ಅರಿತುಕೊಳ್ಳಬೇಕು.

ಪ್ರತಿಯೊಬ್ಬ ಪೋಷಕರ ಪಾಲಿಗೆ ಅವರ ಮಕ್ಕಳ ಮೇಲೆ ಅಪರಿಮಿತ ವ್ಯಾಮೋಹ .ತನ್ನ ಕಂದ ಮುಗ್ಧೆ , ಜಾಣೆ , ಪ್ರತಿಭಾವಂತೆ ಎಂಬ ಹೆಮ್ಮೆಯ ಭಾವ. ಮನೆಯಲ್ಲಿ ನೀವೆಷ್ಟೆ ಪ್ರೀತಿ ಕೊಟ್ಟರೂ, ಬೇಕು ಬೇಡಗಳನ್ನು ಪೂರೈಸಿದರು ಒಂದು ಕಾಲಘಟ್ಟದಲ್ಲಿ ನಿಮ್ಮನ್ನು ಖಳನಾಯಕರಂತೆ ಬಿಂಬಿಸುತ್ತಾರೆ. ಅವರಿಗೆ ಮನೆಯ ಹೊರಗಿನ ಸ್ನೇಹಿತರ ಸಂಗ ಈ ರೀತಿಯ ಭಾವ ಮೂಡಿಸಬಹುದು. ನಿಮ್ಮ ಮಕ್ಕಳ ಸ್ನೇಹಿತರ ವ್ಯಕ್ತಿತ್ವ ಎಂತಹುದು ಎಂಬುದರ ಬಗ್ಗೆ ಕೂಡ ಕಾಳಜಿ ವಹಿಸುವುದು ಅಗತ್ಯ. ನಕಾರಾತ್ಮಕ ಚಿಂತನೆಯ ಗೆಳೆಯರ ಸಹವಾಸ ಬಲು ಅಪಾಯಕಾರಿ.

ಇತ್ತಿಚಿನ ದಿನಗಳಲ್ಲಿ ಪೋಷಕರು ಮಕ್ಕಳ ಜೊತೆ ಎತ್ತರದ ಧ್ವನಿಯಲ್ಲಿ ಮಾತಾಡುವಂತಿಲ್ಲ , ಪ್ರಶ್ನಿಸುವ ಹಾಗಿಲ್ಲ ಮನೆ ತೊರೆದು ಹೋಗಲು ಮಕ್ಕಳಿಗೊಂದು ಕಾರಣ ಬೇಕಷ್ಟೆ. ಹೆಣ್ಣಾಗಲಿ ಗಂಡಾಗಲಿ ಹೆತ್ತವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಭಯದ ಮನಸ್ಥಿತಿಯಲ್ಲೆ ಬದುಕುತ್ತಾರೆ.

1) . ಪೋಷಕರು ಕೂಡ ತಮ್ಮ ಕನಸುಗಳನ್ನು ಮಕ್ಕಳು ನನಸಾಗಿಸಬೇಕೆಂದು ಒತ್ತಡ ಹೇರುವ ಪ್ರಯತ್ನ ಮಾಡಬಾರದು.

2) .ಮಕ್ಕಳ ಸ್ನೇಹಿತರ ಬಳಗದ ಪರಿಚಯವಿಟ್ಟುಕೊಳ್ಳಬೇಕು.

3) . ಮಿತಿಮೀರಿದ ರಕ್ಷಣೆಯ ಭಾವ ಮಗುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

4) . ಬೇರೆ ಮಕ್ಕಳಿಗೆ ಹೋಲಿಸಿ ಅವರಲ್ಲಿರುವ ಆತ್ಮವಿಶ್ವಾಸವನ್ನು ಕುಗ್ಗಿಸಬಾರದು.

5) . ಮಕ್ಕಳ ಮನದಲ್ಲಿ ಸಕಾರಾತ್ಮಕ/ ಕ್ರಿಯಾಶೀಲ ಚಿಂತನೆಗಳನ್ನು ತುಂಬಬೇಕು.

6) . ಭಾವನಾತ್ಮಕ ಸಂಬಂಧ ಬೆಸೆಯುವ ಬೆಂಬಲ ನೀಡುವ ಮೂಲಕ ಮಕ್ಕಳ ಮನ ಗೆಲ್ಲುವ ಪ್ರಯತ್ನ ಮಾಡಬೇಕು.

ಇಷ್ಟೆಲ್ಲ ಕಾಳಜಿ ತೋರಿಸಿದ ನಂತರವು ಮಗುವಿನ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿರುವಂತೆ ಅನಿಸಿದರೆ ಮಕ್ಕಳ ನಡೆ ನುಡಿ ಸ್ನೇಹಿತರ ಒಡನಾಟದ ಮೇಲೆ ಗಮನವಿರಿಸಬೇಕು.
ಮಕ್ಕಳ ಮಾನಸಿಕ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ದೃಷ್ಟಿಯಿಂದ ಕಾಳಜಿ ಅವಶ್ಯಕ.

ಹುಚ್ಚುಕೋಡಿ ಮನಸು ಅದು ಹದಿನಾರರ ವಯಸ್ಸು.

ಈ ವಯಸ್ಸಿನಲ್ಲಿ ಮಕ್ಕಳು ಸಮಸ್ಯೆಗಳ ಆಳದ ಅರಿವಿಲ್ಲದೆ ಜಾಲದ ಸುಳಿಯಲ್ಲಿ ಸಿಲುಕಿರುವ ಘಟನೆಗಳು ಹಲವಾರು. ಶಾಲಾ ಕಾಲೇಜಿನಲ್ಲಿ ಆರೋಗ್ಯ ಅರಿವು, ಕಾನೂನು ಅರಿವು, ವ್ಯಕ್ತಿತ್ವ ವಿಕಸನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿರುವ ನಕಾರಾತ್ಮಕ ಭಾವನೆಯನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು.

ಜಯಂತಿ ರೈ.
ಮಡಿಕೇರಿ