ರೈತ ಹೋರಾಟಕ್ಕೆ ರಾಷ್ಟ್ರೀಯ ರೈತ ನಾಯಕರ ಬೆಂಬಲ: ಚನ್ನರಾಯಪಟ್ಟಣ ಭೂ ಹೋರಾಟದಲ್ಲಿ ಭಾಗಿಯಾಗಲಿರುವ ರಾಕೇಶ್ ಟಿಕಾಯತ್ ಮತ್ತು ಯುದ್ದವೀರಸಿಂಗ್.

 

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಆಗಸ್ಟ್ 31

ರೈತ ಹೋರಾಟಕ್ಕೆ ರಾಷ್ಟ್ರೀಯ ರೈತ ನಾಯಕರ ಬೆಂಬಲ,

ಚನ್ನರಾಯಪಟ್ಟಣ ಭೂ ಹೋರಾಟದಲ್ಲಿ ಭಾಗಿಯಾಗಲಿರುವ ರಾಕೇಶ್ ಟಿಕಾಯತ್ ಮತ್ತು ಯುದ್ದವೀರಸಿಂಗ್.

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ 1777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಾಧಿ ಧರಣಿ 520 ದಿನ ತುಂಬುತ್ತಿರುವ ಹಿನ್ನಲೆಯಲ್ಲಿ ಸೆ.06 ರಂದು ‘ರೈತ ಚೈತನ್ಯ ಸಮಾವೇಶ’ವೂ ಚನ್ನರಾಯಪಟ್ಟಣದ ನಾಡ ಕಚೇರಿಯ ಮುಂದೆ ನಡೆಯಲಿದೆ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ‘ರೈತ ಚೈತನ್ಯ ಸಮಾವೇಶ’ದ ಪೂರ್ವಭಾವಿ ಸಭೆಯ ನಂತರ ಮಾಹಿತಿ ನೀಡಿದ ಅವರು, ‘ರೈತ ಹೋರಾಟವನ್ನು ಬೆಂಬಲಿಸಿ ರಾಷ್ಟ್ರೀಯ ರೈತ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ಯುದ್ದವೀರಸಿಂಗ್ ಸಮಾವೇಶದಲ್ಲಿ ಭಾಗಿಯಾಗಲಿದ್ದು, ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು.

ಹೋರಾಟಗಾರ ಶ್ರೀನಿವಾಸ್‌ ಮಾತನಾಡಿ, ‘ಭೂಮಿಯ ಉಳಿವಿಗೆ ವರ್ಷಾನುಗಟ್ಟಲೇ ಹೋರಾಟ ಮಾಡುತ್ತಿದ್ದೇವೆ. ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ರೈತರ ಸಂಕಷ್ಟದ ಬಗ್ಗೆ ಗಮನ ಹರಿಸಿಲ್ಲ, ಈಗಿನ ಕಾಂಗ್ರೆಸ್‌ ಸರ್ಕಾರವೂ ರೈತ ಪರವಾಗಿಲ್ಲ. ಚುನಾವಣೆಯಲ್ಲಿ ನೀಡದ ಭರವಸೆಗಳು ಹಸಿ ಸುಳ್ಳಾಗಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಧರಣಿ ನಿರತ ರೈತರ ಬಳಿ ಬಂದಿದ್ದ ಸಿದ್ದರಾಮಯ್ಯರವರು ‘ಫಲವತ್ತಾದ ಭೂಮಿ ಕಸಿಯಲು ಬಿಡುವುದಿಲ್ಲ ಎಂದಿದ್ದರು, ವಿರೋಧ ಪಕ್ಷದ ನಾಯಕರಾಗಿದ್ದಾಗ ಬೆಂಬಲಿಸಿದ್ದರು. ಅವರೇ ಆಡಳಿತಕ್ಕೆ ಬಂದಾಗ ಹೊರಗಿಟ್ಟಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆ ಸಿದ್ಧ ಪಡಿಸುವಾಗ ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ‘ನಾವು ರೈತ ಪರವಾಗಿದ್ದೇವೆ. ಅಧಿಕಾರಕ್ಕೆ ಬಂದರೇ ರೈತರ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದು ಇಂದು ಮರೆತಿದ್ದಾರೆ’ ಎಂದು ಟೀಕಿಸದರು.

ಚಿಕ್ಕಬಳ್ಳಾಪುರದ ರೈತ ಮಳ್ಳೂರು ಹರೀಶ್ ಮಾತನಾಡಿ,’ ರಾಷ್ಟ್ರ ರಾಜಧಾನಿ ದೆಹಲಿಯ ರೈತರ ಹೋರಾಟಕ್ಕಿಂತಲೂ ಹೆಚ್ಚು ದಿನಗಳಿಂದ ಇಲ್ಲಿನ ರೈತರು ಧರಣಿ ನಡೆಸುತ್ತಿದ್ದು, ಇದೊಂದು ಐತಿಹಾಸಿಕ ಹೋರಾಟವಾಗಿದೆ. ಸರ್ಕಾರಗಳು ಅವರು ಮಾಡಿದ್ದೇ ಕಾನೂನು ಎಂದು ಬಿಗುತ್ತಿದ್ದು, ರಾಜಕಾರಣಿಗಳ ಗರ್ವಭಂಗ ಮಾಡಿದ್ದು ಇಲ್ಲಿನ ರೈತರ ಪ್ರತಿಭಟನೆಯ ಪ್ರತೀಕವಾಗಿದೆ. ಸೆ.06 ರಂದು ನಡೆಯುವ ಸಮಾವೇಶದಲ್ಲಿ ದೆಹಲಿ ರೈತ ಹೋರಾಟದ ಪ್ರಮುಖರು ಬಂದು ಬೆಂಬಲ ಸೂಚಿಸುತ್ತಿದ್ದಾರೆ’ ಎಮದರು.

ನಲ್ಲಪ್ಪನಹಳ್ಳಿ ನಂಜಪ್ಪ, ತಿಮ್ಮರಾಯಪ್ಪ, ಸಿರಿಮನೆ ನಾಗರಾಜು, ಮರಿಯಪ್ಪ, ಚಿಕ್ಕಬಳ್ಳಾಪುರದ ರೈತಸಂಘ ಮತ್ತು ಹಸಿರು ಸೇನೆಯ ಮುಖಂಡರು, ರಾಜ್ಯ ಪ್ರಾಂತ್ಯ ರೈತ ಸಂಘದ ಮುಖಂಡರು, ದೇವನಹಳ್ಳಿ ರೈತಸಂಘ ಮತ್ತು ಹಸಿರುಸೇನೆ ಮುಖಂಡರು ಜಯಕರ್ನಾಟಕ ಸಂಘಟನೆಯ ಮುಖಂಡರು ಸೇರಿದಂತೆ ರೈತ ದಲಿತ ಕಾರ್ಮಿಕ ಮಹಿಳಾ ಮತ್ತು ಬಾಷಾ ಸಮಘಟನೆಯ ಮುಖಂಡರು ಭಾಗವಹಿಸಿದ್ದರು.