ಜಲ ಜೀವನ್ ಮಿಷನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ

ವಿಜಯ ದರ್ಪಣ ನ್ಯೂಸ್.

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು ,ಬೆಂಗಳೂರು ಗ್ರಾಮಾಂತರ ಜಿಲ್ಲೆ. ಆಗಸ್ಟ್ 31 

ಮನೆ ಮನೆಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದ್ದು, ವಿಳಂಬ ಮಾಡದೇ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮವಹಿಸಿ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು 1192 ಪ್ರದೇಶಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ ಒವರ್ ಹೆಡ್ ಟ್ಯಾಂಕ್ ನಿರ್ಮಿಸಲು, ಕೊಳವೆ ಬಾವಿ ಕೊರೆಸಲು ವಿಳಂಬವಾಗಿದೆ. ಹೀಗಾಗಿ ಕಾಮಗಾರಿ ಪ್ರಗತಿ ವಿಳಂಬವಾಗುತ್ತಿದ್ದು, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಮಾಹಿತಿ ಪಡೆದ ಅವರು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಗುರುತಿಸಿರುವ ಜಾಗಗಳಲ್ಲಿ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದ್ದು, ದೇವನಹಳ್ಳಿ ಹಾಗೂ ವಿಜಯಪುರ ಟೌನ್ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಜಾಗ ಗುರ್ತಿಸಲ್ಪಟ್ಟಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ಅನ್ನ ಭಾಗ್ಯ ಯೋಜನೆ ಅಡಿ 231009 ಫಲಾನುಭವಿಗಳಿದ್ದು ಅದರಲ್ಲಿ 170329 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ 9,84,50,910/- ಕೋಟಿ ರೂಗಳು ಜುಲೈ ಮಾಹೆಯಲ್ಲಿ ಜಮೆಯಾಗಿದೆ. ಆಗಸ್ಟ್ ತಿಂಗಳ ಹಣ ಸಂದಾಯ ಪ್ರಗತಿಯಲ್ಲಿದೆ. ಉಳಿದಂತೆ ವಿವಿಧ ಕಾರಣಗಳಿಂದ ಹಣ ಜಮೆ ಆಗಿರದ ಫಲಾನುಭವಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿ. ಸಮಸ್ಯೆ ಬಗೆಹರಿಸಿಕೊಂಡು ಮುಂದಿನ ಮಾಹೆಯೊಳಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿ. ಬಿ. ಟಿ ಮೂಲಕ ಜಮೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ನಮ್ಮ ಕ್ಲಿನಿಕ್ ಕಟ್ಟಡ ನಿರ್ಮಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಯುಷ್ಮಾನ್ ಕಾರ್ಡ್ ಗಳನ್ನು ಕುಟುಂಬದ ಪ್ರತಿಯೊಬ್ಬರು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಮರು ನಿರ್ಮಾಣ ಮಾಡಲು ಹಾಗೂ ಹೊಸದಾಗಿ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಕಾರ್ಯಗಳನ್ನು ಶೀಘ್ರ ಪ್ರಾರಂಭಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪಶು ವೈದ್ಯಕೀಯ ಆಸ್ಪತ್ರೆ, ಹಾಸ್ಟೆಲ್, ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ , ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

@@@@@@@@@@@@@@@@@@@@@@@@@@@@@@@@@@@@@@@@@@

ಫ್ಯಾಶನ್‌ ಡಿಸೈನಿಂಗ್ (ಟೈಲರಿಂಗ್) ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 31,

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ‌ಫ್ಯಾಶನ್‌ ಡಿಸೈನಿಂಗ್(ಟೈಲರಿಂಗ್) ಕುರಿತ 30 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರಬೇಕು. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಸೆಪ್ಟೆಂಬರ್‌ 05 ಕೊನೆಯ ದಿನವಾಗಿದೆ.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9740982585, 9113880324, 8884554510, 9241482541 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ವಡ್ಡರಪಾಳ್ಯದ ಬೃಹತ್ ಘನ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಹಾಗೂ ವಿವಿಧ ಹಂತಗಳಲ್ಲಿ ಸಂಗ್ರಹಿಸಿದ ಕಸವನ್ನು ಸಂಸ್ಕರಣೆ ಮಾಡುವುದನ್ನು ಪರಿವೀಕ್ಷಿಸಿದರು.


ಜಿಲ್ಲಾಧಿಕಾರಿ ಡಾ. ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ ಕೆ ರಮೇಶ್, ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್ ಹಾಗೂ ಇತರ ಅಧಿಕಾರಿಗಳು
ಉಪಸ್ಥಿತರಿದ್ದರು.

 

&&&&&&&&&&&&&&&&&&&&&&&&&&&&&&&&&&&&&&&&&&&&&&&&

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು
ಜಾಲಿಗೆ ಗ್ರಾಮ ಪಂಚಾಯಿತಿ ಅರದೇಶನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿ ಗ್ರಂಥಾಲಯ, ಕಂಪ್ಯೂಟರ್ ವಿಭಾಗಗಳನ್ನು ವೀಕ್ಷಿಸಿ, ಶಾಲೆ ಗುಣಮಟ್ಟ ಹಾಗೂ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.