ಸಂಧ್ಯಾರಾಗ: ಜಯಂತಿ ರೈ.
ಸಂಧ್ಯಾರಾಗ
ಬದುಕಿನ ಪಯಣದಲ್ಲಿ ಜೀವ ಸಂಕುಲ ವಯಸ್ಸಿನ ಪ್ರಭಾವಕ್ಕೆ ಒಳಗಾಗುವುದು ಸೃಷ್ಟಿಯ ನಿಯಮ. ಹುಟ್ಟು ಸಾವಿನ ಜೀವನ ಚಕ್ರದಲ್ಲಿ ವೃದ್ಧಾಪ್ಯದ ಕಾಲಘಟ್ಟವನ್ನು ದಾಟಿಯೇ ಮುಂದೆ ಸಾಗಬೇಕು. ಮಧ್ಯ ವಯಸ್ಸಿನವರೆಗೂ ಕಾಡದ ಅನೇಕ ಸಮಸ್ಯೆಗಳಾದ ಏಕಾಂಗಿತನ , ಅಭದ್ರತೆ , ಭಯ , ಆಸರೆಯ ಅಗತ್ಯತೆ , ತನ್ನಂತಾನೇ ಹಿರಿಯ ನಾಗರಿಕರಲ್ಲಿ ತಲೆದೋರುತ್ತದೆ.
ಮಕ್ಕಳು ಮುಪ್ಪಿನಲ್ಲಿ ಆಧಾರವಾಗುವರೆಂದು ಪ್ರೀತಿಯಿಂದ ಬೆಳೆಸಿ ತಮ್ಮ ಕಷ್ಟಗಳಿಂದ ಮಕ್ಕಳು ನಲುಗಬಾರದೆಂಬ ದೃಷ್ಟಿಯಿಂದ ಬೆಳೆಸಿದ ಅನೇಕ ತಂದೆ ತಾಯಿಗಳಿಗೆ ಮುಪ್ಪಿನಲ್ಲಿ ಸಿಗುವುದಾದರೂ ಏನು? .
ಬರಿ ನೋವು , ಹಿಂಸೆ , ಅನುಮಾನ ಇನ್ನೂ ಒಂದು ಹೆಜ್ಜೆ ಮುಂದೆಂದರೆ ಅನಾಥಾಶ್ರಮಗಳಿಗೆ ಸೇರ್ಪಡೆ. ಅದಕ್ಕಾಗಿ ಇಷ್ಟೆಲ್ಲಾ ಕಷ್ಟ ಪಡಬೇಕಿತ್ತಾ?.
ತಂದೆ ತಾಯಿಯರ ಪರಿಶ್ರಮದ ಅರಿವು ಇಲ್ಲದೆ ರೆಕ್ಕೆ ಬಲಿತ ಪಕ್ಷಿಯಂತೆ ಸ್ವತಂತ್ರವಾಗಿ ಬದುಕಲು ಶುರು ಮಾಡಿದ ತಕ್ಷಣ ಎಲ್ಲವನ್ನು ಮರೆತು ಬಿಡುತ್ತಾರೆ. ತಮ್ಮದೇ ಆದ ಸಂಸಾರ ಸಾಗರದಲ್ಲಿ ತೇಲುತ್ತಾ ಜೀವನದ ಸುಖವೆಲ್ಲ ಇದರಲ್ಲೆ ಇದೆ ಎಂಬ ಹಾಗೆ ಈ ಸುಂದರ ಜೀವನವನ್ನು ಅನುಭವಿಸಲು ಕಾರಣಕರ್ತರಾದವರನ್ನು ಮರೆತುಬಿಡುತ್ತಾರೆ.
ಹಿರಿಯ ಜೀವಗಳು ಬಯಸುವುದು ಅಕ್ಕರೆ , ಕಾಳಜಿ ತುಂಬಿದ ಪ್ರೀತಿಯ ಮಾತುಗಳನ್ನು , ಅವರಾಡುವ ಮಾತುಗಳನ್ನು ಆಲಿಸುವ ಮನವನ್ನು ಮಾತ್ರ.
ಭುಜದ ಮೇಲೆ ಕೂರಿಸಿ ಜಗವ ತೋರಿದ ಅಪ್ಪ, ತನ್ನೆಲ್ಲ ಬೇಕು ಬೇಡಗಳನ್ನು ನಗುಮೊಗದಿಂದ ಪೂರೈಸಿದ ಅಮ್ಮ ಎಳವೆಯಲ್ಲಿ ನಾಯಕ / ನಾಯಕಿಯಂತೆ ಕಾಣುವ ಮಕ್ಕಳು
ವೃದ್ಧಾಪ್ಯದಲ್ಲಿ ತಮ್ಮ ಸಂತೋಷವನ್ನು ಕಸಿದುಕೊಳ್ಳಲು ಬಂದಿರುವ ಖಳನಾಯಕರಂತೆ ಕಾಣುತ್ತಾರೆ.
ತನ್ನ ದುಡಿಮೆಯ ಸಮಯದಲ್ಲಿ ಹಗಲು ಇರುಳೆನ್ನದೆ ಮನೆ ಮಕ್ಕಳು ಎಂಬ ಸದಾಶಯದಿಂದ ಸ್ವಲ್ಪವೂ ವಿರಮಿಸದೆ ತಮ್ಮ ಸಂತೋಷವನ್ನು ತ್ಯಾಗ ಮಾಡಿ ಮಕ್ಕಳ ಸಂತೋವನ್ನು ಕಂಡು ಸಂಭ್ರಮಿಸಿದ ಹಿರಿಯ ಜೀವಗಳು ಮನೆಯ ಆಧಾರಸ್ತಂಭಗಳು.
ಹೊರೆಯಾಗುವರೆಂಬ ಕಾರಣ ನೀಡಿ ಅನಾಥಾಶ್ರಮ/ ವೃದ್ಧಾಶ್ರಮಗಳಲ್ಲಿ ಪೋಷಕರನ್ನು ಬಿಡುವ ಮುನ್ನ ಅರಿತಿರಬೇಕಾದ ವಿಷಯ “ನಾಳೆ ನಮಗೂ ವೃದ್ಧಾಪ್ಯ ಅನಾರೋಗ್ಯ ಕಾಡುತ್ತದೆ ನಮ್ಮ ಮಕ್ಕಳು ನಮ್ಮನ್ನೂ ಇದೇ ರೀತಿಯಿಂದ ಕಾಣತೊಡಗಿದರೆ ನಮ್ಮ ಬದುಕಿನ ಅರ್ಥವೇನೆಂದು ” ಆತ್ಮಾವಲೋಕನ ಮಾಡಿಕೊಳ್ಳಬೇಕು.
ಜನ್ಮದಾತರಿಗೆ ಅವರ ವಿಶ್ರಾಂತಿಯ ದಿನಗಳಲ್ಲಿ ಅಲ್ಪ ಪ್ರಮಾಣದ ಸಂತೋಷವನ್ನು ನೀಡಲು ಕಾರಣರಾಗಬೇಕು.
ಇಂದಿನ ದಿನಗಳಲ್ಲಿ ಮಕ್ಕಳಿಗೂ ಹೆತ್ತವರ ಹಾಗೂ ಹಿರಿಯರ ಮೇಲಿನ ಪ್ರೀತಿ ಮಾಯವಾಗುತಿದೆ. ತಮ್ಮ ಮಕ್ಕಳ ಬೇಕು ಬೇಡಗಳ ಬಗ್ಗೆ ಹಗಲಿರುಳು ಚಿಂತಿಸಿ , ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟು ಉಳಿಸಿದ ಹಣದಲ್ಲಿ ಉನ್ನತ ಶಿಕ್ಷಣ ನೀಡಿ ವಿದೇಶಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಬಿತ್ತುವುದು ಇದೇ ಅಪ್ಪ ಅಮ್ಮನೇ. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲಿದರೂ ಮಾನವೀಯತೆಯ ಅಂಶಗಳನ್ನು ತಮ್ಮ ಬದುಕಿನಿಂದ ಕಿತ್ತುಹಾಕುವಷ್ಟರವರೆಗೆ ಮಕ್ಕಳು ಸ್ವತಂತ್ರರಾಗಬಾರದು.
ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ನಮ್ಮ ಯೋಗಕ್ಷೇಮ ನೋಡಿಕೊಂಡು ಆರೈಕೆ ಮಾಡುವರೆಂಬ ಆಶಾಗೋಪುರವನ್ನು ಕಟ್ಟಿಕೊಳ್ಳದೆ ತಮ್ಮ ಆದಾಯದ ಚಿಕ್ಕ ಪಾಲನ್ನು ತಮಗಾಗಿ ತಮ್ಮ ಸಂಧ್ಯಾಕಾಲದ ಬದುಕಿಗಾಗಿ ಉಳಿಸಿಕೊಳ್ಳಬೇಕು. ಹಣವಿದ್ದರೆ ಯಾರಾದರೂ ಕೆಲಸ ಮಾಡುವ ಜನರು ಸಿಗುತ್ತಾರೆ.
ವಯಸ್ಸಾದಂತೆ ಹಿರಿಯರು ಕೂಡ ಮಕ್ಕಳ ಎಲ್ಲ ಕಾರ್ಯಗಳು ತಮ್ಮ ಇಚ್ಚೆಯಂತೆ ನಡೆಯಬೇಕೆಂಬ ಮನಸ್ಥಿತಿಯನ್ನು ಕಡಿಮೆಮಾಡಿಕೊಳ್ಳಬೇಕು.
ಜಯಂತಿ .ರೈ
ಮಡಿಕೇರಿ