ಹೊಸಕೋಟೆ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿ ಚುರುಕುಗೊಳಿಸಿ: ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸೂಚನೆ.
ವಿಜಯ ದರ್ಪಣ ನ್ಯೂಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 21
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಸಂಬಂಧಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಸಂಬಂಧಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಬಗ್ಗೆ ಸಭೆಯಲ್ಲಿ ವಿಸ್ತ್ರುತ ಚರ್ಚೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಸಚಿವರು ಕಾಮಗಾರಿಗಳ ಪ್ರಗತಿಯ ಬಗ್ಗೆ ಜನಪ್ರತಿನಿಧಿಗಳಿಗೆ ವಿವರಿಸಿದರು.
ಹೊಸಕೋಟೆ ತಾಲ್ಲೂಕಿನ 43 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಭರ್ತಿಗೆ ಗಡುವು.
ಹೊಸಕೋಟೆ ತಾಲ್ಲೂಕಿನ 43 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿಸುವ ಏತ ನೀರಾವರಿಯ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಕಾಮಗಾರಿಗೆ ಇದ್ದಂತಹ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕಾಗಿದೆ. ಮೇಡೇಹಳ್ಳಿ ಮತ್ತು ಕಾಡು ಬೀಸನಹಳ್ಳಿ ಭಾಗದ ಕಾಮಗಾರಿಯನ್ನು ಸೆಪ್ಟೆಂಬರ್ 15 ರ ಒಳಗಾಗಿ ಮುಗಿಸಿ ಟ್ರಯಲ್ ರನ್ ಪ್ರಾರಂಭ ಮಾಡಬೇಕು. ಅಲ್ಲದೇ ಕೆಆರ್ ಪುರಂನ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನ ಅಕ್ಟೋಬರ್ 30 ರೊಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಲುಷಿತ ನೀರು ಕೆರೆಗಳಿಗೆ ಸೇರದಂತೆ ಕ್ರಮವಹಿಸಿ.
ಕಲುಷಿತ ನೀರು ಕೆರೆಗಳಿಗೆ ಸೇರದಂತೆ ಕ್ರಮವನ್ನು ವಹಿಸಬೇಕಾದ ಜವಾಬ್ದಾರಿ ಆಯಾ ಸ್ಥಳೀಯ ಸಂಸ್ಥೆಗಳ ಮೇಲಿದೆ. ಆದರೆ, ಈ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳೂ ಕೂಡಾ ಗಮನ ಹರಿಸಬೇಕಾದ ಅಗತ್ಯವಿದೆ. ಸಂಸ್ಕರಿತ ತ್ಯಾಜ್ಯ ನೀರಿನ ಪರಿಶೀಲನೆ ಮಾಡುವುದು ಮತ್ತು ಕಲುಷಿತ ನೀರು ಕೆರೆ ಸೇರದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಯತೀಶ್ ಚಂದ್ರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.