ನಾಗರ ಪಂಚಮಿ ಹಬ್ಬದ ಸಂಭ್ರಮ.

ವಿಜಯ ದರ್ಪಣ ನ್ಯೂಸ್

ಮಡಿಕೇರಿ, ಆಗಸ್ಟ್ 20

ನಾಗರ ಪಂಚಮಿ ಹಬ್ಬದ ಸಂಭ್ರಮ.

ಆಷಾಢ ಕಳೆದು ಎಲ್ಲ ಹಬ್ಬ ಹರಿದಿನಗಳಿಗೆ ಮುನ್ನುಡಿಯಿಡುವುದು ನಾಗರ ಪಂಚಮಿ ಹಬ್ಬ. ಈ ಹಬ್ಬವು ಮುಂದೆ ಬರಲಿರುವ ಸಾಲು ಸಾಲು ಹಬ್ಬಗಳಿಗೆ ಮೊದಲ ಮೆಟ್ಟಿಲು. ಹೆಂಗಳೆಯರು ಮಕ್ಕಳು ಸಂಭ್ರಮದಿಂದ ಸಂಭ್ರಮಿಸುವ ಹಬ್ಬ.

ಹಿಂದೂ ಧರ್ಮದಲ್ಲಿ ನಾಗದೇವರಿಗೆ ವಿಶೇಷ ಮಹತ್ವವಿದೆ. ನಾಗರ ಪಂಚಮಿ ಹಬ್ಬದಂದು ಸಂತೋಷ ಸಮೃದ್ಧಿಯ ಬದುಕಿಗಾಗಿ ಹೊಲಗಳಲ್ಲಿನ ಬೆಳೆಗಳ ರಕ್ಷಣೆಗಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗದೇವರಿಗೂ ಮನುಜರಿಗೂ ಅವಿನಾಭಾವ ಸಂಬಂಧ. ಜಗತ್ತಿನೆಲ್ಲೆಡೆ ಬೇರೆ ಬೇರೆಯ ರೀತಿಯಿಂದ ಆರಾಧನೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಭಿನ್ನ ಚಿಂತನೆಯಿಂದ ದೇವರೆಂದು ಭಕ್ತಿಭಾವದಲ್ಲಿ ಪೂಜಿಸಲಾಗುತ್ತದೆ.

ಶ್ರಾವಣ ಶುದ್ಧ ಪಂಚಮಿಯ ದಿನ ಸೆಗಣಿಯಿಂದ ಅಂಗಳ ಸಾರಿಸಿ, ರಂಗೋಲಿ ಅಥವ ಅರಿಶಿನ ಕುಂಕುಮ ಹುಡಿಯಿಂದ ನಾಗನ ಚಿತ್ರ ಬಿಡಿಸಿ ನೇಮ ನಿಷ್ಟೆಯಿಂದ ಸ್ನಾನ ಮಾಡಿ ಮಡಿಯುಟ್ಟು ಪೂಜೆ ಸಲ್ಲಿಸುತ್ತಾರೆ. ಮನೆಯ ಹತ್ತಿರವಿರುವ ನಾಗನ ಹುತ್ತಕ್ಕೆ ಆರಶಿನ ಕುಂಕುಮ ಹಾಕಿ ಹಾಲು ಎರೆಯುತ್ತಾರೆ ಇದೊಂದು ನಂಬಿಕೆ.
ನಾಗರ ಪಂಚಮಿ ಹಬ್ಬದ ವಿಶೇಷತೆಯೆಂದರೆ ಒಡಹುಟ್ಟಿದವರಿಗೆ ಹಾಲು – ತನಿ ಎರೆಯುವುದು. ಹಾಲನ್ನು ಹೊಟ್ಟೆ ಮತ್ತು ಬೆನ್ನಿಗೆ ಸವರಿ ಹೊಟ್ಟೆ ಬೆನ್ನು ತಂಪಾಗಿರಲಿ ಎಂದು ಹಾರೈಸುತ್ತಾರೆ. ಹೊಟ್ಟೆ ಎಂದರೆ ( ಮುಂದಿನ ಪೀಳಿಗೆ ) ಇನ್ನೂ ಮುಂದಕ್ಕೆ ಹುಟ್ಟುವ ಮಕ್ಕಳು, ಬೆನ್ನು ಎಂದರೆ ( ಹಿಂದಿನ ಪೀಳಿಗೆ ) ನಮ್ಮ ಹಿರಿಯರು ಎಂಬ ಸಂಕೇತ ಹಾಗಾಗಿ ಇದು ಒಡಹುಟ್ಟಿದವರ ಹಬ್ಬ ಎಂದು ಕರೆಯಲ್ಪಡುತ್ತದೆ.

ತುಳುನಾಡಿನಲ್ಲಿ ನಾಗನಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇಲ್ಲಿ ತಿಂಗಳಿಗೊಮ್ಮೆ ಬರುವ ಪಂಚಮಿಯ ದಿನದಂದು ತಂಬಿಲ ಸೇವೆ ಮಾಡುತ್ತಾರೆ. ಅಂತೇಯೇ ವರುಷಕೊಮ್ಮೆ ನಾಗರ ಪಂಚಮಿಯ ಹಬ್ಬದಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ಸೇರಿ ಸಂಭ್ರಮದಿಂದ ಆಚರಿಸುವುದು ರೂಢಿ. ಇಲ್ಲಿ ಪ್ರತಿ ಮನೆ / ಕುಟುಂಬಕ್ಕೊಂದು ನಾಗ ಬನ / ನಾಗಕಟ್ಟೆ ಗಳಿರುವುದನ್ನು ಕಾಣಬಹುದು.

ಪಂಚಮಿಯ ದಿನ ನಾಗಕಟ್ಟೆಯನ್ನು ಶೃಂಗರಿಸಿ ನಾಗನ ಮೂರ್ತಿಯನ್ನು ಶುಚಿಗೊಳಿಸಿ ಹಾಲಾಭಿಷೇಕ , ಸಿಯಾಳಾಭಿಷೇಕ, ಅರಶಿನಾಭಿಷೇಕ ಕೊನೆಗೆ ಕಳಸಾಭಿಷೇಕ ಮಾಡುತ್ತಾರೆ. ನಾಗದೇವರಿಗೆ ಪ್ರಿಯವಾದ ಪಿಂಗಾರ ( ಹಿಂಗಾರ )ದೊಂದಿಗೆ ಅರಶಿನದ ಉಂಡೆಯನ್ನು ನಾಗನ ಪ್ರತಿಮೆಯ ಹೆಡೆಯ ಮೇಲಿರಿಸಿ ಪೂಜಿಸುವುದು ತುಳುನಾಡಿನ ಸಂಪ್ರದಾಯ.

ಪೂಜೆಯ ಬಳಿಕ ಮನೆಯಲ್ಲಿ ವಿವಿಧ ಬಗೆಯ ಖಾಧ್ಯದೊಂದಿಗೆ *ಮಂಜಲ್ದಾ ಇರೆದ ಅಡ್ಯೆ* ( ಅರಶಿನ ಎಲೆಯಿಂದ ತಯಾರಿಸುವ ಹಿಟ್ಟು ) ತುಳುನಾಡಿನ ಈ ಹಬ್ಬದ ವಿಶೇಷ ತಿನಿಸು. ನಾಗರ ಪಂಚಮಿಯ ದಿನ ನಾಗ ದರ್ಶನವಾದರೆ ಸಾಕ್ಷಾತ್ ಭಗವಂತನು ಪ್ರತ್ಯಕ್ಷವಾದರೆಂದು ನಂಬಿಕೆ. ನಾಗ ಸಂತತಿಗಳನ್ನು ನಾಶಮಾಡಿದರೆ ಅವುಗಳ ಶಾಪದಿಂದ ಸಂತಾನ ಪ್ರಾಪ್ತಿಯಾಗದು, ಒಂದು ವೇಳೆ ಸಂತಾನ ಭಾಗ್ಯವಾದರೂ ಅಂಗವಿಕಲತೆಯನ್ನು ಹೊಂದಿದ್ದು, ಕೌಟುಂಬಿಕ ನೆಮ್ಮದಿಯಿಂದ ಶಾಂತಿಯುತ ಜೀವನ ಸಾಗಿಸಲು ಅಸಾಧ್ಯ. ಚರ್ಮ ಸಂಬಂಧಿಸಿದ ಕಾಯಿಲೆಗಳು ಕೂಡ ನಾಗ ಸಂತತಿಗೆ ಕೊಟ್ಟ ತೊಂದರೆಯಿಂದ ಉಂಟಾಗುವ ದೋಷಗಳೆಂಬ ಬಲವಾದ ನಂಬಿಕೆ ಇದೆ.

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಹೆಚ್ಚಿನ ಸ್ಥಾನವಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಆಕೆಯ ಅಣ್ಣ/ ತಮ್ಮ ಬಂದು ಅತ್ತೆಮನೆಯಿಂದ ತವರುಮನೆಗೆ ಕರೆದುಕೊಂಡು ಹೋಗುವ ಭಾವನಾತ್ಮಕ ಪದ್ದತಿ ಇದೆ. ಅದಕ್ಕೊಪ್ಪುವಂತೆ ಒಂದು ಹಾಡು ಕೂಡ ಜನಪ್ರಿಯವಾಗಿದೆ. *ಪಂಚಮಿ ಹಬ್ಬಕುಳಿದೈತೆ ದಿನ ನಾಕ ಅಣ್ಣ ಬರಲಿಲ್ಲ ಯಾಕಾ ಕರಿಯಾಕಾ* ತವರು ಮನೆಗೆ ಸಂತೋಷದಿಂದ ಬರಲು ಸಡಗರದಿಂದ ಕಾಯುವ ಹೆಣ್ಣು ಮಗಳ ಕಾತರದ ಭಾವ ಎದ್ದು ಕಾಣುತ್ತದೆ .ಹೆಣ್ಣುಮಕ್ಕಳು ಈ ಹಬ್ಬವನ್ನು ತಮ್ಮ ಒಡಹುಟ್ಟಿದವರ ಜೊತೆ ಸಂಭ್ರಮದಿಂದ ಆಚರಿಸುತ್ತಾರೆ. ವಿಶೇಷ ಅಡುಗೆಗಳಾದ ರೊಟ್ಟಿ , ಬದನೆ ಎಣೆಗಾಯಿ, ಕಾಳು ಪಲ್ಯ, ತಂಬಿಟ್ಟು, ಲಾಡು ಮುಂತಾದವುಗಳನ್ನು ಸಡಗರದಿಂದ ತಯಾರಿಸಿ ಪೂಜೆ ಮಾಡುತ್ತಾರೆ.


ಯಾರದೇ ತೊಂದರೆಗೆ ಸಿಲುಕದೆ ತನ್ನ ಸಂತಾನವನ್ನು ವೃಧ್ಧಿಸಲು ಕಾಡಿನ ನಡುವೆ ಮರಗಳ ನೆರಳಿನಲ್ಲಿ ನಾಗಬನಗಳು ಪ್ರಕೃತಿಯ ಮಡಿಲಿನಲ್ಲಿ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ನಾಗಬನಗಳನ್ನು ಸಿಮೆಂಟ್ / ಕಾಂಕ್ರೀಟ್ ನಿಂದ ನಿರ್ಮಿಸುತ್ತಿರುವ ಕಾರಣ ಹಾವುಗಳಿಗೆ ನೆಲೆ ನಿಲ್ಲಲು ಮತ್ತು ತಮ್ಮ ಸಂತಾನಾಭಿವೃಧ್ಧಿಯನ್ನು ಮಾಡಲು ನೆಲೆ ಇಲ್ಲದಂತಾಗಿದೆ. ಸ್ವಚಂದವಾಗಿ ಜೀವಿಸುತ್ತಿದ್ದ ನಾಗರಗಳಿಗೆ ಮನೆ ಇಲ್ಲದಂತಾಗಿದೆ. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಬೆಸೆದಿರುವ ನಾಗರಗಳಿಗೆ ಪರಿಸರಯುಕ್ತ ನಾಗಬನವು ಅವಶ್ಯಕವಾಗಿದೆ.

ಆಚರಿಸುವ ಸ್ಥಳ ಆಚಾರ ವಿಚಾರಗಳು ಭಿನ್ನವಾಗಿದ್ದರೂ ಎಲ್ಲರ ಮನಸಿನ ಭಕ್ತಿಯೊಂದೆ .ಸರ್ವರಿಗೂ ನಾಗದೇವರ ಕೃಪೆಯಿರಲಿ.

ಜಯಂತಿ ರೈ
ಮಡಿಕೇರಿ