ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದ ಅಮಿತ್ ಶಾ.
ವಿಜಯ ದರ್ಪಣ ನ್ಯೂಸ್,
ನವದೆಹಲಿ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಐದನೇ ಪುಣ್ಯತಿಥಿಯ ಅಂಗವಾಗಿ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸದೈವ್ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.
ಅಟಲ್ ಅವರ ಬಗ್ಗೆ ಮಾತನಾಡುತ್ತಾ ಶಾ, ಹಲವು ದಶಕಗಳ ಕಾಲ ಅವರು ಬಿಜೆಪಿಯ ಪ್ರಮುಖ ನೇತಾರರಾಗಿದ್ದರು ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದರು. ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಅಟಲ್ ಅವರು ಯಾವಾಗಲೂ ರಾಷ್ಟ್ರದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಅವರು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಸ್ಫೂರ್ತಿಯಾಗಿದ್ದಾರೆ. ಅಟಲ್ ಅವರ ದೇಶಭಕ್ತಿ, ಸಮರ್ಪಣೆ ಮತ್ತು ಬದ್ಧತೆಯು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಹಲವು ಪೀಳಿಗೆವರೆಗೂ ಸ್ಫೂರ್ತಿ ನೀಡುತ್ತಿರುತ್ತದೆ ಎಂದು ಹೇಳಿದರು.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಅವರ ಜನ್ಮದಿನದ ಗೌರವಾರ್ಥವಾಗಿ ಡಿಸೆಂಬರ್ 25 ಅನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಭಾರತದ ರಾಜಕೀಯದಲ್ಲಿಯೇ ಒಬ್ಬ ಅಪ್ರತಿಮ ವ್ಯಕ್ತಿಯಾಗಿರುವ ಅಟಲ್ ಅವರು ಭಾರತದ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದ ವ್ಯಕ್ತಿ ಎಂಬುದು ಅಮಿತ್ ಶಾರ ಬಲವಾದ ನಂಬಿಕೆ.
ಅಟಲ್ ಅವರು ಹಾಕಿದ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಬುನಾದಿ, ಮತ್ತು ಅವರು ಜನರಲ್ಲಿ ಹುಟ್ಟುಹಾಕಿದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಪ್ರಧಾನಿ ಮೋದಿಯವರು ಮುಂದುವರೆಸಿಕೊಂಡು ಬಂದಿದ್ದಾರೆ. ಇದೇ ಹಾದಿಯಲ್ಲಿ ಮುಂದುವರೆಯುತ್ತಾ ಮೋದಿಯವರ ಮಾರ್ಗದರ್ಶನ ಮತ್ತು ಅಮಿತ್ ಶಾರ ಸಮರ್ಥ ನಾಯಕತ್ವದ ಮೂಲಕ ಕಳೆದ 9 ವರ್ಷಗಳಿಂದ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ.
ಗಮನಾರ್ಹವೆಂಬಂತೆ, ಈ ಸಂದರ್ಭದಲ್ಲಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಲು ಎನ್‌ಡಿಎ ನಾಯಕರನ್ನು ‘ಸದೈವ್ ಅಟಲ್’ಗೆ ಮೊದಲ ಬಾರಿಗೆ ಆಹ್ವಾನಿಸುವ ಮೂಲಕ ಸಮ್ಮಿಶ್ರ ಪಕ್ಷಗಳ ನಡುವಿನ ಏಕತೆಯನ್ನು ಪ್ರದರ್ಶಿಸಲಾಯಿತು. ಬಿಜೆಪಿಯ ಈ ಕ್ರಮ ಮುಂಬರುವ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಹೆಚ್ಚು ಮಹತ್ವವನ್ನು ಪಡೆಯಿತು, ಹಾಗೆ ಇದು ಪ್ರತಿಪಕ್ಷಗಳಿಗೆ ಎನ್‌ಡಿಎದ ಒಗ್ಗಟ್ಟು ಮತ್ತು ಬಲವನ್ನು ಪರಿಚಯಿಸಿತು.