ಮದ್ಯದ ಅಂಗಡಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ : ಸಚಿವ ಈಶ್ವರ್ ಖಂಡ್ರೆ.
ವಿಜಯ ದರ್ಪಣ ನ್ಯೂಸ್
ಬೀದರ್ ಆಗಸ್ಟ್ 12
ಭಾಲ್ಕಿಯ ಶಿವಾಜಿ ವೃತ್ತದ ಬಳಿಯ ಮದ್ಯದ ಅಂಗಡಿಗಳನ್ನು ಎರಡು ತಿಂಗಳೊಳಗೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಆದಿತ್ಯ ಹೋಟೆಲ್‍ನಲ್ಲಿ ಶನಿವಾರ ಆಯೋಜಿಸಿದ್ದ ಮರಾಠಾ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿ ವೃತ್ತದ ಬಳಿಯ ಮದ್ಯದ ಅಂಗಡಿ ತೆರವುಗೊಳಿಸುವ ಭರವಸೆ ನೀಡಿದ್ದೇನೆ. ಅದರಂತೆ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೂಡ ಆಗಿದ್ದೇನೆ. ಡಿಸಿ, ಎಸ್‌ಪಿ ಮತ್ತು ಅಬಕಾರಿ ಅಧಿಕಾರಿಗಳನ್ನು ಕರೆಯಿಸಿ, ಇಲ್ಲಿಯ ಮದ್ಯದ ಅಂಗಡಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಕಾನೂನು ಪ್ರಕಾರ ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ಅಕ್ಟೋಬರ್ ಒಳಗೆ ಮದ್ಯದ ಅಂಗಡಿ ತೆರವು ಆಗಲಿದೆ ಎಂದು ತಿಳಿಸಿದರು.
ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಬಿಜೆಪಿ ಮುಖಂಡರು ಮದ್ಯದ ಅಂಗಡಿ ತೆರವುಗೊಳಿಸುವ ಪ್ರಯತ್ನ ಮಾಡಲಿಲ್ಲ. ಕೇಂದ್ರದ ಸಚಿವ ಖೂಬಾ ಅವರು ಶಿವ ಜಯಂತಿ ಸಂದರ್ಭದಲ್ಲಿ ಮದ್ಯದ ಅಂಗಡಿ ತೆರವು ಮಾಡಿಸುವುದಾಗಿ ಹುಸಿ ಭರವಸೆ ನೀಡಿದರು. ಮದ್ಯದ ಅಂಗಡಿ ವಿಷಯವಾಗಿ ಬಿಜೆಪಿ ರಾಜಕೀಯ ಮಾಡಿತೇ ಹೊರತು ಎತ್ತಂಗಡಿ ಮಾಡುವ ಕೆಲಸ ಮಾಡಲಿಲ್ಲ ಎಂದು ದೂರಿದರು.
ಆಗ ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ಮದ್ಯದ ಅಂಗಡಿ ತೆರವಿಗೆ ವಿಧಾನ ಸಭೆ ಕಲಾಪದಲ್ಲಿ ಮಾತನಾಡಿದ್ದೇನೆ. ಇದೀಗ ನಾನು ಪುನಃ 4ನೇ ಬಾರಿಗೆ ಶಾಸಕ, ಸಚಿವನಾದ ಮೇಲೆ ಮದ್ಯದ ಅಂಗಡಿ ತೆರವುಗೊಳಿಸುವ ಕೆಲಸ ಮಾಡಿ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತಿದ್ದೇನೆ ಎಂದರು.
ಬೀದರ್ ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಮುಂದಿನ ಒಂದೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಹೊಸದಾಗಿ ಆಡಳಿತ ತರಲು ಕಾರ್ಯಕರ್ತರು ಸನ್ನದ್ಧರಾಗಬೇಕು. ಸಹಕಾರ ಕ್ಷೇತ್ರದಲ್ಲಿ ನಮ್ಮ ಭಾಗದ ರೈತರ ಕೆಲಸಗಳು ಸುಗಮವಾಗಿ ಆಗಬೇಕಿದ್ದರೆ ಹೊಸ ಆಡಳಿತ ತರುವುದು ಅವಶ್ಯವಿದೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಸದಸ್ಯ ಬಸವರಾಜ ವಂಕೆ, ಪ್ರವೀಣ ಹಣಮಶೆಟ್ಟಿ, ಅಶೋಕರಾವ ಸೋನಜಿ, ಡಾ.ರಾಜೇಂದ್ರ ಜಾಧವ, ಸತೀಶ ಪಾಟೀಲ, ಅನಿಲ ಪಾಟೀಲ, ವೈಜಿನಾಥ ತಗಾರೆ ಇದ್ದರು.