ತುಳುನಾಡಿನಲ್ಲಿ ಆಟಿ ಸಂಭ್ರಮ.
ವಿಜಯ ದರ್ಪಣ ನ್ಯೂಸ್, ಮಡಿಕೇರಿ
ಆಟಿ ಸಂಭ್ರಮ
ಆಧುನಿಕತೆಯು ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬದಲಿಸುತಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ, ಆಚರಣೆಯನ್ನು ಉಳಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ.
ನಮ್ಮ ಪೂರ್ವಜರು ವಿವಿಧ ರೀತಿಯ ಸಂಪ್ರದಾಯಗಳನ್ನು ಪಾಲಿಸುತಿದ್ದರು, ಈ ಸಂಪ್ರದಾಯದ ಹಿಂದೆ ವೈಜ್ಞಾನಿಕ ತಾರ್ಕಿಕತೆ ಕೂಡ ಇದೆ.
ತುಳುನಾಡಿನ ಪ್ರಮುಖ ಚಟುವಟಿಕೆ ಕೃಷಿ ಆಧಾರಿತವಾಗಿದೆ ವರ್ಷದ 11ತಿಂಗಳು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜನರು ಯಾವಾಗಲೂ ತೋಟ ಗದ್ದೆಗಳಲ್ಲಿ ತಮ್ಮ ಬದುಕು ಕಂಡುಕೊಂಡವರು. ನೇಗಿಲು ಹೊತ್ತು ವರ್ಷವಿಡಿ ಜೊತೆ ನೀಡಿದ ಎತ್ತುಗಳಿಗೆ ಆರಾಮ ಸಿಗುವುದು ಆಟಿ ( ಆಷಾಢ ) ತಿಂಗಳಿನಲ್ಲಿ.
ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಕೃಷಿ ಆಧಾರಿತ ಕುಟುಂಬಗಳಿಗೆ ಆಟಿ ತಿಂಗಳಿನಲ್ಲಿ ತುಂಬಾ ಕಷ್ಟದ ಕಾಲ. ಬಿಡದೆ ಸುರಿಯುವ ಮಳೆ ಜನರ ಬದುಕಿನಲ್ಲಿ ನೀರಸ ಭಾವ ಉಂಟು ಮಾಡುತ್ತದೆ. ಯಾವುದೇ ಬೆಳೆಯನ್ನು ಬೆಳೆಯಲಾಗದೆ ಮತ್ತು ಖರೀದಿಸಲಾಗದ ಕಷ್ಟದ ಮಾಸವಿದು. ವ್ಯಾವಹಾರಿಕ ದೃಷ್ಟಿಯಿಂದ ನೋಡಿದಾಗ ವರ್ಷ ಪೂರ್ತಿ ಶುಭ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಆಟಿ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದೆ ಎಲ್ಲ ವೃತ್ತಿಯವರಿಗೆ ವಿಶ್ರಾಂತಿಯ ಕಾಲ. ಮಳೆಯ ಕಾರಣ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿಲ್ಲ.
ಈ ಸಮಯದಲ್ಲಿ ಪ್ರಕೃತಿಯೊಡನೆ ಅವಿನಾಭಾವ ಸಂಬಂಧ ಬೆಸೆಯುವ ಸುಸಮಯ ಜನರಿಗೆ ಸಿಗುತ್ತದೆ. ಪೃಕೃತಿಯಿಂದ ದೊರೆಯುವ ಕೆಸುವಿನ ಎಲೆಯಿಂದ ಪತ್ರೋಡೆ, ನುಗ್ಗೆಸೊಪ್ಪಿನ ಪಲ್ಯ, ತಿಮರೆ ( ಒಂದೆಲಗ), ತಜಂಕ್ ( ಚಗಟೆ ಸೊಪ್ಪು ) ಪಲ್ಯ, ದೋಸೆ , ಕಿರಾತ ಕಡ್ಡಿಯ ಕಷಾಯ, ಉಪ್ಪಡಚ್ಚಿಲ್ , ಕಣಿಲೆ, ಹುರಿದ ಹಲಸಿನ ಬೀಜ / ಹುಣಸೆ ಬೀಜ , ಮೆಂತೆಗಂಜಿ, ಇನ್ನೂ ಅನೇಕ ಔಷಧೀಯ ಗುಣವುಳ್ಳ ವೈವಿಧ್ಯಮಯ ತಿನಿಸುಗಳನ್ನು ಚಪ್ಪರಿಸುತ್ತಿದ್ದರು.
ಆಟಿ ಅಮಾವಾಸ್ಯೆಯ ದಿನ ಸೂರ್ಯ ಹುಟ್ಟುವ ಮುನ್ನ ಪಾಲೆದ ಕೆತ್ತೆದ ಪೇರ್ ( ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ಅದರಿಂದ ಬರುವ ಹಾಲು) ಕುಡಿಯುವ ಸಂಭ್ರಮ. ಅಮಾವಾಸ್ಯೆಯ ದಿನ ಈ ಮರದಲ್ಲಿ ಸಾವಿರದ ಒಂದು ಬಗೆಯ ಔಷಧಿಗಳು ಸೇರಿಕೊಂಡಿರುತ್ತವೆ ಎಂದು ನಂಬಿಕೆ. ಆಟಿ ಅಮಾವಾಸ್ಯೆಯ ದಿನ ತೀರ್ಥ ಸ್ನಾನ ಮಾಡುವುದು ಕೂಡ ಪ್ರಸಿದ್ಧ.
ದುಡಿಮೆಗೆ ವಿರಾಮ ನೀಡುವ ಈ ಸಮಯದಲ್ಲಿ ಜನರು ಮನರಂಜನೆಗಾಗಿ ವಿವಿಧ ರೀತಿಯ ಆಟಗಳ ಕಡೆ ಗಮನ ಹರಿಸುತ್ತಾರೆ. ಮಹಿಳೆಯರು ಚನ್ನಮಣೆ, ಎದರ್ ದೆಸೆ ( ಒಗಟು ) ಮಕ್ಕಳಿಗೆ ತಮಗೆ ತಿಳಿದ ದೈವ ಮತ್ತು ವೀರ ಪುರುಷರ ಕಥೆಗಳನ್ನು , ವಿಷಯಗಳನ್ನು ಪಾರ್ದನ (ಜನಪದ ಪದ್ಯ) ಹಾಡುವ ಮೂಲಕ ತಿಳಿಸಿಕೊಡುತ್ತಾರೆ. ಗಂಡನ ಮನೆಯಿಂದ ಮಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಬರುತ್ತಾಳೆ.
ಮಳೆಗಾಲದಲ್ಲಿ ರೋಗರುಜಿನಗಳು ಹೆಚ್ಚಾಗುವುದರಿಂದ ತೊಂದರೆಗಳನ್ನು ನಿವಾರಿಸಲು ಆಟಿಕಳೆಂಜ ದ ಮೊರೆ ಹೋಗುತ್ತಾರೆ. ಕಳೆಂಜ ಎಂದರೆ ಕಷ್ಟವನ್ನು ಕಳೆಯುವವನು. ದೈವ ನರ್ತಕರು (ನಲಿಕೆಯವರು ) ವೇಷ ಭೂಷಣ ತೊಟ್ಟು ಊರು ಕೇರಿಗಳಲ್ಲಿ ಸಾಗಿ ನೃತ್ಯ ಮಾಡುತ್ತಾ ಆಟಿ ಕಳೆಂಜದ ಸಂದೇಶ ಸಾರುತ್ತಾರೆ.
ಆಟಿ ತಿಂಗಳು ಮುಗಿಯುತ್ತಾ ಬಂದಂತೆ ಮನೆಯನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗುತ್ತಾರೆ ಹಿಂದೆಲ್ಲ ಹುಲ್ಲು ಹಾಸಿದ ಗುಡಿಸಲುಗಳಲ್ಲಿ ಜನರು ಬದುಕುತಿದ್ದರು. ಇಲಿ ಹೆಗ್ಗಣಗಳು ಮಳೆಯಿಂದ ರಕ್ಷಣೆ ಪಡೆಯಲು ಮನೆಯನ್ನು ಆಶ್ರಯಿಸಿಕೊಂಡು ಮನೆಯಲ್ಲಿ ಸಿಗುತಿದ್ದ ಭತ್ತವನ್ನು ತಿಂದು ಮನೆಯನೆಲ್ಲಾ ಗಬ್ಬೆಬ್ಬಿಸಿದನ್ನು ಶುಚಿ ಮಾಡುತ್ತಾರೆ. ಹಿತ್ತಾಳೆ ಕಂಚಿನ ಪಾತ್ರೆಗಳನ್ನು ತಿಕ್ಕಿ ತೊಳೆದು ಪಳ ಪಳ ಹೊಳೆಯುವಂತೆ ಮಾಡಿ , ಮನೆಯ ಒಳಗಿನ ಕಸವನ್ನು ಗುಡಿಸಿ ಸಾರಿಸಿ ಶುಚಿ ಮಾಡುತಿದ್ದರು. ಇದನ್ನು ಆಟಿ ಪಿದಾಯಿ ಪಾಡುನೆ ಎನ್ನುವರು.
ಆಧುನಿಕ ಜೀವನ ಶೈಲಿಯಲ್ಲಿ ನಮ್ಮನ್ನು ನಾವು ಕಳೆದುಕೊಂಡಿರುವಾಗ ನಮ್ಮ ಹಿರಿಯರು ಕಂಡ ಬದುಕಿನ ಬಗೆ ಅರಿವು ಮೂಡಿಸುವ ಇರಾದೆಯಿಂದ ಆಟಿ ತಿಂಗಳಿನಲ್ಲಿ ಆನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಬ್ಬಿಕೊಂಡು ಸಂಭ್ರಮಿಸಲು ವೇದಿಕೆ ಕಲ್ಪಿಸುತಿದ್ದಾರೆ. ಆಟಿಡೊಂಜಿ ದಿನ , ಆಟಿದ ಕೂಟ , ಆಟಿದ ತೆನಸ್ ಎಂದು ಹಬ್ಬದ ಸಂಭ್ರಮವನ್ನು ಸೃಷ್ಟಿ ಮಾಡಿ ನಮ್ಮ ಹಿರಿಯರ ಜೀವನ ಶೈಲಿಯ ಪರಿಚಯ ಮಾಡಿಸುತ್ತಾರೆ. ಇತ್ತೀಚೆಗೆ ಕೆಸರುಗದ್ದೆಯಲ್ಲಿ ಅನೇಕ ಕ್ರೀಡೆಗಳನ್ನು ಆಯೋಜಿಸಿ ಯಾಂತ್ರಿಕ ಬದುಕಿನಿಂದ ಒಂದು ದಿನದ ಮಟ್ಟಿಗಾದರೂ ಪರಿಸರದ ಜೊತೆ ಸಮಯವನ್ನು ಕಳೆಯಲು ಅವಕಾಶ ಕಲ್ಪಿಸಿ ಯುವನಜನತೆಯಲ್ಲಿ ತಮ್ಮ ಸಂಸ್ಕೃತಿ ಆಚರಣೆಯ ಬಗೆ ಅರಿವು ಮೂಡಿಸಿ ಸಂಭ್ರಮಿಸಲು ಸಹಕಾರಿಯಾಗಿದೆ.
ಜಯಂತಿ ರೈ ,ಮಡಿಕೇರಿ