ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾತಿಮ ಸೂಚನೆ.

ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ 
ಬೆಂಗಳೂರು ಗ್ರಾ  ಜಿಲ್ಲೆ . ಜುಲೈ 26

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತೆ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಿ ಯೋಜನೆಗಳು ಯಶಸ್ವಿಯಾಗಲು ಕ್ರಮ ಕೈಗೊಳ್ಳಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನ ಸಭೆ ಹಾಗೂ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳನ್ನು ಶೀಘ್ರ ಪ್ರಾರಂಭ ಮಾಡಿ, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಹೇಳಿದರು

ಅನ್ನ ಭಾಗ್ಯ ಯೋಜನೆ ಅಡಿ 231009 ಫಲಾನುಭವಿಗಳಿದ್ದು ಅದರಲ್ಲಿ 170329 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ 9,84,50,910/- ಕೋಟಿ ರೂಗಳು ಜುಲೈ ಮಾಹೆಯಲ್ಲಿ ಜಮೆಯಾಗಿದೆ. ಉಳಿದಂತೆ ವಿವಿಧ ಕಾರಣಗಳಿಂದ ಹಣ ಜಮೆ ಆಗಿರದ ಫಲಾನುಭವಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿ. ಸಮಸ್ಯೆ ಬಗೆಹರಿಸಿಕೊಂಡು ಮುಂದಿನ ಮಾಹೆಯೊಳಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿ. ಬಿ. ಟಿ ಮೂಲಕ ಜಮೆಯಾಗಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಅಡಿ 4,91,028 ಕುಟುಂಬಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿದ್ದಾರೆ ಅವರಲ್ಲಿ 3,41,262 ಕುಟುಂಬಗಳು ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದಾರೆ ಉಳಿದಂತೆ ಇನ್ನೂ ನೊಂದಾಯಿಸಿ ಕೊಳ್ಳದ  ಕುಟುಂಬಗಳಿಗೆ ಮಾಹಿತಿನೀಡಿ ಶೀಘ್ರ ನೋಂದಾಯಿಸುವಂತೆ ಕ್ರಮ ಕೈಗೊಳ್ಳಿ ಎಂದರು.

ಗೃಹಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ ಜುಲೈ 20 ರಿಂದ ಜುಲೈ 24ರ ವರೆಗೆ 46903 ಫಲಾನುಭವಿಗಳು ನೋಂದಣಿ ಆಗಿರುತ್ತಾರೆ. ಬಾಕಿ ಇರುವ ಫಲಾನುಭವಿಗಳಿಗೆ ಗ್ರಾಮಮಟ್ಟದಲ್ಲಿ ಪ್ರಚಾರ ಮಾಡಿ, ಜಾಗೃತಿ ಮೂಡಿಸಿ,ಮಾಹಿತಿ ನೀಡಿ ನೋಂದಾಯಿಸಿಕೊಳ್ಳಲು ಕ್ರಮವಹಿಸಿ ಎಂದರಲ್ಲದೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸುವ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾವಣೆ ಪ್ರಕ್ರಿಯೆಯನ್ನು ಪರಿಶೀಲಿಸಿ ಎಂದು ಹೇಳಿದರು.

ಪೋಡಿ,11-ಇ ಸ್ಕೆಚ್, ಹದ್ದುಬಸ್ತು, ಮೋಜಣಿದಾರರ ಅಳತೆ ಪ್ರಕರಣಗಳ ವಿಲೇವಾರಿ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಿ ಭೂಮಾಪಕರು ಹಾಗೂ ಖಾಸಗಿ ಭೂಮಾಪಕರ ಒಳಗೊಂಡಂತೆ ಶೀಘ್ರ ಕ್ರಮವಹಿಸಿ ನಿರ್ದಿಷ್ಟ ಕಾಲಮಿತಿಯೊಳಗೆ ಸರ್ವೆ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದರು.

ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಮಾಹಿತಿ ಪಡೆದ ಅವರು ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಒಂದು ಘನತ್ಯಾಜ್ಯ ವಿಲೇವಾರಿ ಘಟಕವಿರಬೇಕು ಪ್ರತಿಯೊಂದು ಗ್ರಾಮದಲ್ಲೂ ಸೂಕ್ತ ರೀತಿಯಲ್ಲಿ ತ್ಯಾಜ್ಯ ಸಂಗ್ರಹಿಸಿ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು ಹಾಗೂ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದರಲ್ಲದೆ ಈ ಇಲಾಖೆ ಅಡಿ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ ಸೂಕ್ತ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಬೇಕು. ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಾಗದಂತೆ ಕ್ರಮವಹಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಶಾಲೆ,ಕಾಲೇಜು ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಮರು ನಿರ್ಮಾಣ ಮಾಡಲು ಹಾಗೂ ಹೊಸದಾಗಿ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಕಾರ್ಯಗಳನ್ನು ಶೀಘ್ರ ಪ್ರಾರಂಭಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ, ತೋಟಗಾರಿಕೆ ಇಲಾಖೆಯ ಬೆಳೆಗಳಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ರಸಗೊಬ್ಬರ, ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರಲ್ಲದೆ ರೈತರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ನೀಡಿ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಎಂದರು.ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿ ಬಾಕಿ ಇರುವ ರಸ್ತೆ , ಸೇತುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದರು. ನರೇಗಾ ಯೋಜನೆಯಡಿ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ. ಶೇಕಡಾವಾರು ಪ್ರಗತಿ ಕಡಿಮೆ ಸಾಧಿಸಿರುವ ಇಲಾಖೆಗಳಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿ ವರದಿ ನೀಡಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ ಎಂ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

###############################

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ  ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

ದೇವನಹಳ್ಳಿ , ಬೆಂಗಳೂರು ಗ್ರಾ ಜಿಲ್ಲೆ, ಜುಲೈ 27

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2023-24 ನೇ ಸಾಲಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1, ಎಸ್.ಸಿ & ಎಸ್.ಟಿ ರೂ 2.50 ಲಕ್ಷ ಇರಬೇಕು ಹಾಗೂ ಪ್ರವರ್ಗ-2ಎ, 2ಬಿ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ಗೆ ರೂ 1.00 ಲಕ್ಷ ಆದಾಯ ಮಿತಿ ಇರಬೇಕು.
ವಿದ್ಯಾರ್ಥಿಗಳು https://shp.karnatak.gov.in ಅನ್ನು ಸಂಪರ್ಕಿಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 2023 ರ ಆಗಸ್ಟ್ 16 ಕೊನೆಯ ದಿನವಾಗಿದೆ.
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ
ವೆಬ್‌ಸೈಟ್ https://bcwd.karnataka.gov.in/ ನ್ನು ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bcwd.hostels@karnataka.gov.in ಇಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-29787440 ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

################################################

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಉಚಿತ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ.

ದೇವನಹಳ್ಳಿ ,ಬೆಂಗಳೂರು ಗ್ರಾ ಜಿಲ್ಲೆ  ಜುಲೈ 27

2023-24ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ದೇವನಾಯಕನನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಹ ಶಿಕ್ಷಣ ಪ್ರಥಮ ಪಿ.ಯು.ಸಿ ಪಿ.ಸಿ.ಎಂ.ಬಿ (ವಿಜ್ಞಾನ ವಿಭಾಗ) ಮತ್ತು ಪ್ರಥಮ ಪಿ.ಯು.ಸಿ ಸಿ.ಇ.ಬಿ.ಎ (ವಾಣಿಜ್ಯ ವಿಭಾಗ) ತರಗತಿಗಳಿಗೆ ಉಚಿತ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್) ವಿದ್ಯಾರ್ಥಿಗಳಿಗೆ ಶೇ.75% ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.25% ರಷ್ಟು ಸೀಟುಗಳು ಖಾಲಿ ಇದ್ದು, ಯಾವುದೇ ವಸತಿ ಶಾಲೆ/ ಸರ್ಕಾರಿ/ಅನುದಾನಿತ/ಅನುದಾನ ರಹಿತ/ಇತರೆ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿರುತ್ತಾರೆ. ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಪಠ್ಯ ಪುಸ್ತಕ, ಆಹಾರ, ಸಮವಸ್ತ್ರ ಶುಚಿ ಸಂಭ್ರಮ ಕಿಟ್, ಲೇಖನ ಸಾಮಗ್ರಿ, ಕ್ರೀಡಾ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು.
ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳನ್ನು ಸಂಪರ್ಕಿಸಿ ಪ್ರಥಮ ಪಿ.ಯು.ಸಿ ಪಿ.ಸಿ.ಎಂ.ಬಿ (ವಿಜ್ಞಾನ ವಿಭಾಗ) ಮತ್ತು ಪ್ರಥಮ ಪಿ.ಯು.ಸಿ ಸಿ.ಇ.ಬಿ.ಎ (ವಾಣಿಜ್ಯ ವಿಭಾಗ) ತರಗತಿಗಳಿಗೆ ದಾಖಲಾತಿ ಪ್ರವೇಶಕ್ಕೆ ಅರ್ಜಿ ಪಡೆದು, ಜಿಲ್ಲಾ ಕಛೇರಿ/ವಸತಿ ಶಾಲೆಗೆ ಅರ್ಜಿ ಸಲ್ಲಿಸುವುದು.

ಅರ್ಜಿಗಳಿಗಾಗಿ ಸಂಪರ್ಕಿಸಿ

ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ನಂ.216, 2ನೇ ಮಹಡಿ, ಜಿಲ್ಲಾಧಿಕಾರಿಗಳ ಹೊಸ ಸಂಕೀರ್ಣ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂರವಾಣಿ ಸಂಖ್ಯೆ- 080-29787455.
ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು, ದೂರವಾಣಿ ಸಂಖ್ಯೆ- 9900945262,
9742651522,
8073617143,
9986417499,
9742998287,
9538384846.
ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಮಾಹಿತಿ ಕೇಂದ್ರಗಳು, ವಿಜಯಪುರ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕು. ದೂರವಾಣಿ ಸಂಖ್ಯೆ- 080-27682882,
27627444,
27931899,
27725445,
8317403213.

ಹೆಚ್ಚಿನ ಮಾಹಿತಿಗಾಗಿ

ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ 8277799990 ಗೆ ಸಂಪರ್ಕಿಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.