ಕೆಂಗಣ್ಣು (ಮದ್ರಾಸ್ ಐ)

ಕೆಂಗಣ್ಣು
======

ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಕೆಂಪು ಕಣ್ಣು ಎಲ್ಲಾ ಕಡೆ ಈಗ ಮಳೆಗಾಲದಲ್ಲಿ ಶುರುವಾಗಿದ್ದು, ಮಳೆಯ ಬಗ್ಗೆ ಮಾತನಾಡುತ್ತಿರುವವರೆಲ್ಲ ಈ “ಮದ್ರಾಸ್ ಐ” ಬಗ್ಗೆ ಮಾತನಾಡ ತೊಡಗಿದ್ದಾರೆ.

ಈಗ ಇದು ಸಾಧಾರಣವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿ ಕೊಳ್ಳುತ್ತಿದೆ. ಇದು ವೈರಸ್ನಿಂದ ಬರುವ ರೋಗ. ಈ ವೈರಸ್ ಗಳು ಬಹಳ ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಶಾಲೆಗಳಲ್ಲಿ ಮತ್ತು ವಿದ್ಯಾರ್ಥಿಗಳು ಜೊತೆಯಾಗಿರುವ ಹಾಸ್ಟೆಲ್ಗಳಲ್ಲಿ ಬಹಳ ಬೇಗ ಹರಡಿ, ಜನರು ಚಿಂತೆಗೆ ಒಳಗಾಗುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ, ನಂತರ ಕೆಲವೇ ದಿನಗಳಲ್ಲಿ ಎಲ್ಲರಿಗೂ ಕಣ್ಣು ನೋವು ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಈಗ ಕಾಣುತ್ತಿರುವ ಕೆಂಗಣ್ಣನ್ನು ಇಂಗ್ಲೀಷಿನಲ್ಲಿ ವೈರಲ್ ಕಂಜೆಕ್ಟಿವೈಟಿಸ್ ಅಥವಾ ಮದ್ರಾಸ್ ಐ ಎಂದು ಕರೆಯುತ್ತಾರೆ. ಹಿಂದೆ ಮದರಾಸಿನಲ್ಲಿ ಇದು ಹೆಚ್ಚಾಗಿ ಕಂಡು ನಂತರ ,ಬೇರೆ ಕಡೆ ಹಬ್ಬುತ್ತಿದ್ದ ಕಾರಣ ಇದಕ್ಕೆ ಅದೇ ಹೆಸರು ಉಳಿದಿದೆ. ಸಾಧಾರಣ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ನೀರಿನ ಅಂಶ, ತೇವಾಂಶ, ಚಳಿ ಇದ್ದಾಗ ಈ ವೈರಸ್ ಹೆಚ್ಚಾಗಿ ಕಣ್ಣಿನ ಮೇಲೆ ದಾಳಿ ಇಡುತ್ತದೆ. ಸೂರ್ಯನ ಬೆಳಕು ಕಡಿಮೆ ಇದ್ದಾಗ ಇದು ಜಾಸ್ತಿ ಕಾಣಿಸಿ ಕೊಳ್ಳುತ್ತದೆ.
ಕೆಂಪು ಕಣ್ಣು ಬರಲು ಹಲವಾರು ಇತರ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ
ಸಾಂಕ್ರಾಮಿಕ ವೈರಸ್ ಗಳು, ಅಪರೂಪಕ್ಕೆ ಬ್ಯಾಕ್ಟೀರಿಯಾಗಳು (Infectious conjunctivitis) ,ಧೂಳು ಮತ್ತು ಹೂವಿನ ಪರಾಗದಂತಹ ವಸ್ತುಗಳ ಅಲರ್ಜಿಯಿಂದ (Allergic conjunctivitis) , ಒಮ್ಮೊಮ್ಮೆ ರಾಸಾಯನಿಕಗಳು ಕಾರಣ.
ಸೋಂಕಿತ ವ್ಯಕ್ತಿ ಉಪಯೋಗಿಸಿದ ವಸ್ತುಗಳ ಜೊತೆ ಅಥವಾ ಧೂಳಿಗೆ ಸಂಪರ್ಕವಾದ ಕೆಲವೇ ಗಂಟೆಗಳಲ್ಲಿ ಅಥವಾ ಕೆಲ ದಿನಗಳಲ್ಲಿ ಕಣ್ಣು ಕೆಂಪಾಗ ಬಹುದು.
ಆದರೆ ಇದು ಗಾಳಿಯಲ್ಲಿ ಸಾಧಾರಣವಾಗಿ ಹರಡುವುದಿಲ್ಲ. ರೋಗ ಇದ್ದ ವ್ಯಕ್ತಿ ತನ್ನ ಕಣ್ಣನ್ನು ಮುಟ್ಟಿ, ಯಾವುದಾದರೂ ಬೇರೆ ವಸ್ತುಗಳನ್ನು ಮುಟ್ಟಿದಾಗ ನೇರ ಸಂಪರ್ಕದಿಂದ ಮಾತ್ರ ಹರಡುತ್ತದೆ. ಮುಖ್ಯವಾಗಿ ಕಣ್ಣಿನ ತೊಂದರೆ ಗೊಳಗಾದವರು ಬಳಸುವ ಟವೆಲ್, ಬಟ್ಟೆಗಳ ಸಂಪರ್ಕದಿಂದ ಇವು ಹರಡುತ್ತವೆ. ಮನೆಯಲ್ಲಿ ಒಬ್ಬರಿಗೆ ಕೆಂಗಣ್ಣು ಶುರುವಾಗಿದ್ದು ತಮಗೆ ಹರಡ ಬಾರದೆಂದು ಅವರು ಉಪಯೋಗಿಸುತ್ತಿ ರುವ ಔಷಧಿಯನ್ನೇ ಹಾಕಿ ಕೊಳ್ಳುವುದರಿಂದ ಲೂ ಇದು ಇನ್ನೊಬ್ಬರ ಕಣ್ಣನ್ನು ಪ್ರವೇಶಿಸುತ್ತದೆ.


ಕಣ್ಣು ನೋವಿಗೆ ಒಳಗಾದವರ ಕಣ್ಣನ್ನು ನೋಡುವುದರಿಂದ ಬೇರೆಯವರಿಗೆ ಹರಡುತ್ತದೆ ಎಂಬ ಭಾವನೆ ಜನರಲ್ಲಿ ಸಾಮಾನ್ಯವಾಗಿದೆ. ಕಣ್ಣು ನೋವು ಬಂದವರನ್ನು ಕಂಡ ಕೂಡಲೇ ಅವರತ್ತ ನೋಡದೇ ಬೇರೆ ಕಡೆ ಮುಖ ತಿರುಗಿಸುವವರೇ ಹೆಚ್ಚು. ಒಬ್ಬರ ಕಣ್ಣನ್ನು ಇನ್ನೊಬ್ಬರು ನೋಡಿದರೆ ಇದು ಬರುವುದಿಲ್ಲ.
ಈ ರೋಗದಲ್ಲಿ ಕಣ್ಣಿನ ಬಿಳಿಗುಡ್ಡೆಯ ಹೊರ ಪದರು ಸೋಂಕಿನಿಂದ ಉರಿಯೂತವಾಗಿ ( inflammation ) ಕಣ್ಣು ಕೆಂಪಗಾಗುತ್ತದೆ. ಕಣ್ಣಲ್ಲಿ ನೀರು ಬರುವುದು, ಪಿಚ್ಚು, ಬಿಳಿ ಕೀವು ಬರುವಿಕೆ, ಕಣ್ಣು ಕೊರೆತ, ತುರಿಕೆ, ರೆಪ್ಪೆಯ ಊದು, ಈ ಕಣ್ಣು ನೋವಿನ ಲಕ್ಷಣಗಳು.
ಆರಂಭದಲ್ಲಿ ಒಂದೇ ಕಣ್ಣಿಗೆ ಬಂದರೂ ನಂತರ ಅದು ಎರಡೂ ಕಣ್ಣಿಗೂ ಬರಬಹುದು. ಈ ರೀತಿಯ ಕಣ್ಣು ನೋವು ಕನಿಷ್ಟ ಮೂರ ರಿಂದ ಐದು ದಿನಗಳವರೆಗೆ ಇರುತ್ತದೆ. ಆದರೆ ಕೊಳೆಯಾದ ಬಟ್ಟೆಯಲ್ಲಿ ಕಣ್ಣನ್ನು ಒರೆಸುವುದರಿಂದ ಬೇರೆ ರೀತಿಯ ಬ್ಯಾಕ್ಟೀರಿಯಾ ಅಥವಾ ಫಂಗಸ್ ಸೋಂಕು ಆಗಿ ಬೇಗ ಗುಣವಾಗದೆ ಇರಬಹುದು.

ಈ ಕಣ್ಣು ಬೇನೆಯಿಂದ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಹಾಗೆಂದು ಯಾವುದೇ ಕಾರಣಕ್ಕೆ ಕಣ್ಣು ಕೆಂಪಾದರೂ, ಇದೂ ಮದ್ರಾಸ್ ಐ ಎಂದು ತಾವೇ ನಿರ್ಧರಿಸಿ ಕೊಂಡು ಮನೆಮದ್ದು , ಅಂಗಡಿಗಳಿಂದ ತಂದ ಔಷಧಿ ಹಾಕಿ ಕೊಳ್ಳುವುದು ಸರಿಯಲ್ಲ. ಏಕೆಂದರೆ ಕೆಲವೊಮ್ಮೆ ಬೇರೆ ತೊಂದರೆಗಳಿಂದಲೂ ಈ ರೀತಿ ಕಣ್ಣು ಕೆಂಪಗಾಗುವ ಸಾಧ್ಯತೆ ಇರುತ್ತದೆ. ಜತೆಯಲ್ಲಿ ಕಣ್ಣುಬೇನೆ ಸಾಮಾನ್ಯವಾಗಿ ಬಿಳಿಗುಡ್ಡೆಗೆ ಬರುವಂತದ್ದು. ಅದು ಕಪ್ಪುಗುಡ್ಡೆಗೆ ಹರಡದಂತೆ ಎಚ್ಚರಿಕೆ ವಹಿಸ ಬೇಕು. ಅಲ್ಲಿ ಹಬ್ಬಿದರೆ ಕಾರ್ನಿಯಾದಲ್ಲಿ ಹುಣ್ಣು ಅಥವಾ ಅಲ್ಸರ್ ಆಗ ಬಹುದು.
ಸೋಂಕು ಬರುವ ಮೊದಲೇ ತಡೆಗಟ್ಟಲು ಯಾವುದೇ ಔಷಧಿ ಇರುವುದಿಲ್ಲ. ಇದು ಬರದಂತೆ ತಡೆಯುವುದು ಬಹಳ ಒಳ್ಳೆಯದು. ಈ ಸೋಂಕನ್ನು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಮುಖಾಂತರ ಗುಣಪಡಿಸ ಬಹುದು ಹಾಗೂ ಕಟ್ಟುನಿಟ್ಟಾದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಇದರ ಹರಡುವಿಕೆಯನ್ನು ಕೂಡ ತಡೆಗಟ್ಟಬಹುದು.

ಕಣ್ಣು ನೋವು ಬಂದವರು ಕಣ್ಣನ್ನು ಉಜ್ಜಿ ಕೊಂಡ ಕೈಯನ್ನು ಆಗಾಗ ಸೋಪಿನಿಂದ ತೊಳೆದು ಕೊಳ್ಳುವುದು, ಬಟ್ಟೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು, ಜನನಿಬಿಡ ಪ್ರದೇಶಕ್ಕೆ , ಶಾಲೆಗಳಿಗೆ ಹೋಗದೆ ಇರುವುದರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸ ಬಹುದು. ಇತರರು ಸೋಂಕಿತ ವ್ಯಕ್ತಿಯ ಜೊತೆ ಕನಿಷ್ಠವಾದ ಸಂಪರ್ಕವನ್ನು ಪಾಲಿಸಬೇಕು ಹಾಗು ಸೋಂಕಿತ ವ್ಯಕ್ತಿ ಉಪಯೋಗಿಸಿದ ಕರವಸ್ತ್ರ,ಟವಲ್, ಹಾಸಿಗೆ ಇತ್ಯಾದಿ ವಸ್ತುಗಳನ್ನು ಸ್ಪಲ್ಪ ಸಮಯ ಹಂಚಿ ಕೊಳ್ಳ ಬಾರದು. ನಾವೂ ಆಗಾಗ ನಮ್ಮ ಕೈಗಳನ್ನು ಸೋಪಿನಿಂದ ತೊಳೆದು ಕೊಳ್ಳಬೇಕು ಮತ್ತು ಅನವಶ್ಯಕವಾಗಿ ನಮ್ಮ ಮುಖವನ್ನು ಅಥವಾ ಕಣ್ಣುಗಳನ್ನು ಪದೇ ಪದೇ ಮುಟ್ಟಿ ಕೊಳ್ಳ ಬಾರದು. ಒಬ್ಬರ ಔಷಧಿಗಳನ್ನು ಯಾವ ಕಾರಣಕ್ಕೂ ಮತ್ತೊಬ್ಬರು ಹಂಚಿ ಕೊಳ್ಳ ಬಾರದು. ಸೋಂಕಿನ ಲಕ್ಷಣ ಇದ್ದವರು ಸಾರ್ವಜನಿಕ ಸಾರಿಗೆ ಮತ್ತು ಸಭೆ ಸಮಾರಂಭಗಳಿಂದ ದೂರವಿರುವುದು ಸೂಕ್ತ. ಬೇರೆಯವರಿಗೆ ಹರಡದಂತೆ ಮತ್ತು ಧೂಳು ಬೀಳದಂತೆ ಸೂಕ್ತ ಕನ್ನಡಕವನ್ನು ಧರಿಸಬೇಕು. ಕಾಲೇಜು, ಕಚೇರಿಗಳಲ್ಲಿ ಕೈ ಕುಲುಕುವುದು, ಪೆನ್ನು ಇತ್ಯಾದಿ ವಸ್ತುಗಳನ್ನು ವಿನಿಮಯ ಮಾಡಿ ಕೊಳ್ಳುವುದನ್ನು ಆದಷ್ಟು ತಪ್ಪಿಸಬೇಕು

ಈ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಅಲಕ್ಷ್ಯ ಮಾಡದೆ ಹಾಗೂ ಮೌಢ್ಯ ಪದ್ಧತಿಗಳನ್ನು ಅನುಸರಿಸದೇ ತಕ್ಷಣವೇ ಹತ್ತಿರದ ನೇತ್ರ ತಜ್ಞರನ್ನು ಸಂಪರ್ಕಿಸಬೇಕು. ಅವರ ಸೂಕ್ತ ಪರೀಕ್ಷೆ ಮತ್ತು ಸಲಹೆ ಇಲ್ಲದೇ ಸ್ವಯಂ ಚಿಕಿತ್ಸೆ ಅಪಾಯಕ್ಕೆ ದಾರಿ ಮಾಡಿ ಕೊಡ ಬಹುದು.

ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ

94484 48615
******************