ಉಳಿದ ಕಾಲು: ಡಾ. ಕೆ. ಬಿ. ಸೂರ್ಯ ಕುಮಾರ್
ವಿಜಯ ದರ್ಪಣ ನ್ಯೂಸ್, ಮಡಿಕೇರಿ
ಉಳಿದ ಕಾಲು
ಡಾ. ಕೆ. ಬಿ. ಸೂರ್ಯ ಕುಮಾರ್
ಮಡಿಕೇರಿಯ ಜಿಲ್ಲಾಸ್ಪತ್ರೆಗೂ ಪಿರಿಯಾ ಪಟ್ಟಣ, ರಾಮನಾಥಪುರ, ಬೆಟ್ಟದಪುರಕ್ಕೂ ಅದೇನೋ ಅವಿಭಾಜ್ಯ ಸಂಬಂಧ. ಅಲ್ಲಿಯೇ ಹತ್ತಿರದಲ್ಲಿ ಆಸ್ಪತ್ರೆಗಳು ಇದ್ದರೂ ಅನೇಕ ರೋಗಿಗಳು ಇತ್ತ ಧಾವಿಸುವುದು ಇಂದಿಗೂ ನಡೆದಿದೆ. ಹಿಂದೆ ಆ ಭಾಗಗಳಲ್ಲಿ ಕ್ಷಯರೋಗ ತುಸು ಹೆಚ್ಚಾಗಿದ್ದು ಇಲ್ಲಿಗೆ ಬಂದು ದಾಖಲಾಗುತ್ತಿದ್ದವರ ಸಂಖ್ಯೆ ತುಂಬಾ ಜಾಸ್ತಿ ಇತ್ತು. ಆಗೆಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯ ರೋಗದ ಇಂಜೆಕ್ಷನ್, ಮಾತ್ರೆ ಮತ್ತು ವಾರ್ಡಿನಲ್ಲಿ ಪುಷ್ಠಿಕರವಾದ ಭೋಜನ, ಮೊಟ್ಟೆ ಫ್ರೀಯಾಗಿ ಸಿಗುತ್ತಿತ್ತು . ಆ ಸಮಯದಲ್ಲಿ ಕ್ಷಯರೋಗ ವಾರ್ಡಿನ ರೋಗಿಗಳನ್ನು ಬಹಳ ವರ್ಷದವರೆಗೆ ನಾನೇ ಸಂಭಾಳಿಸುತ್ತಿದ್ದೆ. ಇಂತಹ ಸಮಯದಲ್ಲಿ ಅಲ್ಲಿದ್ದ ಒಬ್ಬ ರೋಗಿಯನ್ನು ನೋಡಲು ಬಂದ ಅವನ ತಮ್ಮ ಸಿದ್ದಯ್ಯನಿಗೆ ಸ್ವಲ್ಪ ತೊಂದರೆ ಇದೆ ಎಂದು ನನ್ನಲ್ಲಿ ಪರೀಕ್ಷೆ ಮಾಡಿಸಿಕೊಂಡ.
ಸುಮಾರು ನಲ್ವತ್ತು ವರ್ಷ ವಯಸ್ಸಿನ ಅವನಿಗೆ ನಡೆಯುವಾಗ ಕಾಲುಗಳಲ್ಲಿ ನೋವು ಕಾಣಿಸಿ ಕೊಳ್ಳುತ್ತಿತ್ತು. ಇದು ಹಲವು ದಿವಸಗಳಿಂದ ಇದ್ದು, ಅವನು ಅಲ್ಲೇ ಯಾವುದೋ ಡಾಕ್ಟರಿಗೆ ತೋರಿಸಿ, ಅವರು ನೋವಿನ ಮಾತ್ರೆಗಳನ್ನು ಬರೆದು ಕೊಟ್ಟಿದ್ದರು. ಅದರಿಂದ ನೋವು ತಾತ್ಕಾಲಿಕವಾಗಿ ಕಡಿಮೆಯಾದರೂ ಸಂಪೂರ್ಣ ಗುಣವಾಗಲೇ ಇಲ್ಲ. ಸಕ್ಕರೆ, ಬಿ. ಪಿ. ಯಾವುದು ಇರಲಿಲ್ಲ. ಆದರೆ ಸುದೀರ್ಘ ಪರೀಕ್ಷೆ ಮಾಡಲು ಹತ್ತಿರ ಬಂದಾಗ ಬೀಡಿಯ ವಾಸನೆ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಪರೀಕ್ಷೆ ಮಾಡುತ್ತಾ ಕಾಲಿನ ನಾಡಿ ಮಿಡಿತ ( ಪಲ್ಸ್ ) ನೋಡಿದರೆ ಅದು ಬಹಳ ಕ್ಷೀಣವಾಗಿತ್ತು. ಕಾಲಿನ ಬೆರಳುಗಳು ಸ್ವಲ್ಪ ನೀಲಿ ಬಣ್ಣಕ್ಕೆ ತಿರುಗಿತ್ತು. ಪ್ರಶ್ನೆ ಕೇಳಲಾಗಿ ಸ್ವಲ್ಪ ದೂರ ನಡೆಯುವಾಗ ಕಾಲಲ್ಲಿ ಸಹಿಸಲಾರದ ನೋವು ಬರುತ್ತದೆ, ನೋವು ಬಂದಾಗ ಐದು ನಿಮಿಷ ನಿಂತು ಮತ್ತೆ ನಡೆದರೆ ಅಷ್ಟೇ ದೂರ ಹೋಗುವಾಗ ಪುನಃ ನೋವು ಬರುತ್ತದೆ ಎಂದ. ಇಲ್ಲಿಗೆ ಅವನಿಗೆ ಯಾವ ರೋಗ ಇರಬಹುದು ಎಂಬುದು ನನಗೆ ಅರ್ಥವಾಯಿತು.
ಹೆಚ್ಚು ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಅನ್ನುವುದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಅತಿಯಾಗಿ ತಂಬಾಕು ಸೇವನೆ ಮಾಡುವುದರಿಂದ ಕಾಲು , ಕೈಗಳಿಗೆ ಸಂಬಂದಿಸಿದ ಒಂದು ವಿಶೇಷ ಕಾಯಿಲೆ ಕೂಡಾ ಉಂಟಾಗ ಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ರೋಗ ಪ್ರಪಂಚದಾದ್ಯಂತ ಪ್ರಸ್ತುತವಾಗಿದ್ದರೂ, ಮಧ್ಯಪ್ರಾಚ್ಯ ಮತ್ತು ದೂರ ಪೂರ್ವದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇದು ಕಡಿಮೆ ತಂಬಾಕು ಬಳಕೆ ಹೊಂದಿರುವ ದೇಶಗಳಲ್ಲಿ ಅಪರೂಪವಾಗಿ ಮಾತ್ರ ಕಂಡು ಬರುತ್ತದೆ.
ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಈ ರೋಗದ ಹೆಸರು ಬರ್ಗರ್ಸ್ ಕಾಯಿಲೆ (Burgers Disease). ಇದನ್ನು ಥ್ರಂಬೋಆಂಜಿಟಿಸ್ ಆಬ್ಲಿಟೆರಾನ್ಸ್ ಎಂದೂ ಕರೆಯುತ್ತಾರೆ. ಇದು ಕೈಕಾಲುಗಳಲ್ಲಿ ರಕ್ತನಾಳಗಳು ಊದಿಕೊಂಡು ನಂತರ ರಕ್ತ ತಡೆ ಯಾಗುವ ರೋಗ. ರಕ್ತನಾಳಗಳ ಅಡಚಣೆಯಿಂದಾಗಿ, ಕೈ ಮತ್ತು ಕಾಲ್ಬೆರಳುಗಳಿಗೆ ರಕ್ತ ಪೂರೈಕೆ ನಿಲ್ಲುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕೈ ಮತ್ತು ಪಾದಗಳಲ್ಲಿ ನೀವು ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಅನುಭವಿಸಬಹುದು. ನಿಮ್ಮ ಬೆರಳುಗಳಲ್ಲಿ ನೀಲಿ ಬಣ್ಣ ಉಂಟಾಗುವುದನ್ನು ನೀವು ಗಮನಿಸ ಬಹುದು. ನಂತರ ಬೆರಳುಗಳಲ್ಲಿ ಯಾವುದೇ ಕೆಲಸ ಮಾಡಲು ಸಾದ್ಯವಾಗುವುದಿಲ್ಲ.
ಇದರ ಮುಖ್ಯ ಲಕ್ಷಣವೆಂದರೆ ಸ್ವಲ್ಪ ದೂರ ನಡೆಯುವಾಗ ಕಾಲಿನಲ್ಲಿ ಬರುವ ನೋವು. ಆದರೆ ಈ ನೋವು ನೀವು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದು ಕೊಂಡಾಗ ಕಡಿಮೆಯಾಗಿ, ಪುನಃ ಸ್ವಲ್ಪ ದೂರ ನಡೆಯುವಾಗ ಕಾಣಿಸಿ ಕೊಳ್ಳುತ್ತದೆ. ಇದನ್ನು ಕ್ಲಾಡಿಕೇಶನ್ ನೋವು ಅನ್ನುತ್ತಾರೆ. ರೋಗ ಉಲ್ಬಣವಾದಂತೆ ನೀವು ನೋವಿಲ್ಲದೆ ಸಂಚರಿಸುವ ದೂರ ಕಡಿಮೆಯಾಗುತ್ತಾ ಬರುತ್ತದೆ. ಈ ದೂರವನ್ನು ಕ್ಲಾಡಿಕೇಶನ್ ಡಿಸ್ಟೆನ್ಸ್ ಎನ್ನುತ್ತಾರೆ. ದುರ್ಬಲಗೊಂಡ ರಕ್ತಪರಿಚಲನೆಯು ಶೀತ ವಾತಾವರಣದಲ್ಲಿ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಬಾಹ್ಯನಾಡಿ ( ಪಲ್ಸ್ ) ಮಿಡಿತ ಕಡಿಮೆಯಾಗುತ್ತವೆ ಅಥವಾ ಇರುವುದಿಲ್ಲ. ಬೆರಳಿನ ತುದಿಗಳಲ್ಲಿ ಬಣ್ಣ ಬದಲಾವಣೆಗಳಾಗಿ, ನೀಲಿ ಬಣ್ಣದಿಂದ ಕೆಂಪು ನೀಲಿ ಬಣ್ಣಕ್ಕೆ ಬದಲಾಗಬಹುದು . ಚರ್ಮವು ತೆಳ್ಳಗಾಗಿ ಹೊಳೆಯುತ್ತದೆ. ಕಾಲಿನಲ್ಲಿನ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಕೊನೆಗೆ ಬೆರಳ ತುದಿಗಳಲ್ಲಿ ಹುಣ್ಣುಗಳು ಮತ್ತು ಗ್ಯಾಂಗ್ರೀನ್ ಆಗುವುದೇ ಇದರ ಮುಖ್ಯ ಘಟ್ಟ. ಹೀಗೆ ಆದಾಗ ಒಳಗೊಂಡಿರುವ ತುದಿಯ ಅಂಗಚ್ಛೇದನದ ( ಅಂಪ್ಯೂಟೇಷನ್) ಮಾಡ ಬೇಕಾಗುತ್ತದೆ.
ಸಾಮಾನ್ಯವಾಗಿ ಈ ರೋಗ ಇಪ್ಪತ್ತರಿಂದ ರಿಂದ ಐವತ್ತು ವರ್ಷ ವಯಸ್ಸಿನ ಪುರುಷರಲ್ಲಿ, ಅಪರೂಪಕ್ಕೊಮ್ಮೆ ಮಹಿಳೆಯರಲ್ಲಿ , ಮುಖ್ಯವಾಗಿ ತಂಬಾಕು ಗಾಂಜಾ ಸೇವನೆ ಮಾಡುವವರಲ್ಲಿ ಕಂಡು ಬಂದಿದೆ. ಇದು ಅಪರೂಪದ ರೋಗ.
ಅಲ್ಟ್ರಾಸೌಂಡ್, ಡಾಪ್ಲರ್ ನಂತಹ ಆಕ್ರಮಣಶೀಲವಲ್ಲದ ನಾಡಿಯ ಪರೀಕ್ಷೆಯಿಂದ ರಕ್ತನಾಳದ ತುದಿಗಳ ರಕ್ತಕೊರತೆಯ ಉಪಸ್ಥಿತಿ ಇದೆಯೇ ಎಂದು ತಿಳಿದು ಕೊಳ್ಳ ಬಹುದು. ಕ್ಲಾಡಿಕೇಶನ್ , ವಿಶ್ರಾಂತಿ ಸಮಯದಲ್ಲಿ ನೋವು, ರಕ್ತಕೊರತೆಯ ಹುಣ್ಣುಗಳು ಅಥವಾ ಗ್ಯಾಂಗ್ರೀನ್‌ನಿಂದ ಈ ರೋಗ ಇದೆ ಎಂದು ದೃಡಿ ಕರಿಸುತ್ತದೆ. ಆಂಜಿಯೋಗ್ರಾಮ್‌ಗಳು ತೋಳುಗಳು ಮತ್ತು ಕಾಲುಗಳೆರಡರ ಅನೇಕ ಪ್ರದೇಶಗಳಲ್ಲಿ ರಕ್ತ ನಾಳದ ಮುಚ್ಚುವಿಕೆ (ತಡೆಗಳು) ಅಥವಾ ಸ್ಟೆನೋಸಿಸ್ (ಕಿರಿದಾದುದನ್ನು) ಸಹ ತೋರಿಸಬಹುದು.
ಈ ರೋಗವನ್ನು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ಧೂಮಪಾನದ ಚಟ ತೊಡೆದು ಹಾಕುವುದು. ಜೊತೆಗೆ ಕೆಲವು ರಕ್ತನಾಳಗಳು ಮತ್ತು ರಕ್ತ ತೆಳುವಾಗಿಸುವ ಔಷದಿಗಳನ್ನು ಕೂಡಾ ಬಳಸಬೇಕು. ಬರ್ಗರ್ಸ್ ಕಾಯಿಲೆ ಚಿಕಿತ್ಸೆಯು ನಿಮ್ಮ ರೋಗ ಲಕ್ಷಣಗಳು, ವಯಸ್ಸು ಮತ್ತು ಆರೋಗ್ಯ ಅವಲಂಬಿಸಿರುತ್ತದೆ. ಇದಲ್ಲದೆ, ರೋಗದ ತೀವ್ರತೆಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ, ಪೀಡಿತ ಪ್ರದೇಶಕ್ಕೆ ರಕ್ತದ ಹರಿವು ಹೆಚ್ಚಿಸಲು ಅಥವಾ ನೋವನ್ನು ಕಡಿಮೆ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಧೂಮ ಪಾನದ ನಿಲುಗಡೆಯು ರೋಗದ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ಹೆಚ್ಚಿನ ರೋಗಿಗಳಲ್ಲಿ ಅಂಗಚ್ಛೇದನದ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ,
ಇಂತಹ ಪ್ರಕರಣಗಳಲ್ಲಿ , ರಕ್ತ ನಾಳಗಳ ಉಬ್ಬುವಿಕೆ (ವಾಸೋಡಿಲೇಷನ್ ) ಅನ್ನು ಉಂಟುಮಾಡುವ ಪ್ರೋಸ್ಟಗ್ಲಾಂಡಿನ್‌ಗಳು ರೋಗಿಯು ಅನುಭವಿಸುವ ನೋವನ್ನು ಕಡಿಮೆ ಮಾಡಿ ನೋವಿನ ಪರಿಹಾರವನ್ನು ನೀಡುತ್ತವೆ.
ಲಂಬಾರ್ ಸಿಂಪತೆಕ್ಟಮಿ ಎನ್ನುವ ಒಂದು ಶಸ್ತ್ರಚಿಕಿತ್ಸೆಯಲ್ಲಿ ಕಾಲಿಗೆ ಹೋಗುವ ನರಕ್ಕೆ ಇಂಜೆಕ್ಷನ್ ಕೊಡುವುದರ ಮೂಲಕ ಕೆಲವು ತಿಂಗಳು ಇಲ್ಲದಂತೆ ಮಾಡಬಹುದು. ಮುಚ್ಚಿ ಹೋಗಿರುವ ರಕ್ತನಾಳದ ಬೈಪಾಸ್ ಕೆಲವೊಮ್ಮೆ ಹುಣ್ಣುಗಳನ್ನು ಗುಣಪಡಿಸಲು ಮತ್ತು ನೋವು-ಮುಕ್ತ ವಾಕಿಂಗ್ ದೂರವನ್ನು ಸುಧಾರಿಸಲು ಸಹಾಯ ಮಾಡಬಹುದು. ಈ ಅಸ್ವಸ್ಥತೆಯಲ್ಲಿ ಉರಿಯೂತ ( ಇನ್ಫ್ಲಾಮೇಷನ್ ) ಇದ್ದು ಕಡಿಮೆ ಪ್ರಮಾಣದಲ್ಲಿ ಕಾರ್ಟಿಕೊ ಸ್ಟೆರಾಯ್ಡ್ ಗಮನಾರ್ಹವಾದ ಉರಿಯೂತ ಮತ್ತು ನೋವು ನಿವಾರಕ ಗುಣಗಳನ್ನು ಕೊಡ ಬಹುದು. ಕೆಲವು ಪ್ರಕರಣಗಳಲ್ಲಿ ಕೈ ಮತ್ತು ಕಾಲ್ಬೆರಳುಗಳನ್ನು, ತೀವ್ರತರವಾದ ಪರಿಸ್ಥಿತಿಯಲ್ಲಿ ಮೊಣಕಾಲಿನ ಕೆಳಗೆ ಮತ್ತು ಮೊಣಕಾಲಿನ ಮೇಲೆ ಕತ್ತರಿಸುವ ಅಗತ್ಯತೆಯೂ ಅಪರೂಪವಾಗಿ ಉಂಟಾಗುತ್ತದೆ.
ವರದಿಯ ಪ್ರಕಾರ ಇಂಗ್ಲೆಂಡಿನ ಕಿಂಗ್ ಜಾರ್ಜ್ VI ರು ಈ ಕಾಯಿಲೆಯಿಂದ ಬಳಲುತ್ತಿದ್ದರು. ರಾಜನು ಭಾರೀ ಧೂಮಪಾನಿ ಯಾಗಿದ್ದನು ಕೂಡಾ .ಆದರೆ ರೋಗ ಮತ್ತು ಧೂಮಪಾನದ ನಡುವಿನ ಸಂಬಂಧದ ಬಗ್ಗೆ ಆಗ ಅವರಿಗೆ ತಿಳಿದಿರಲಿಲ್ಲ. ಕೊನೆಗೆ ರಾಜನು ಸೊಂಟದ ಸಿಂಪಟೆಕ್ಟಮಿ ಶಸ್ತ್ರ ಚಿಕಿತ್ಸೆಗೆ ಒಳಗಾದನು.
ಇಲ್ಲಿ ನಮ್ಮ ಸಿದ್ದಯ್ಯನಿಗೆ ಎಲ್ಲಾ ವಿವರಗಳನ್ನು ತಿಳಿಸಿ, ಧೂಮಪಾನ ನಿಲ್ಲಿಸಿ ಲಂಬಾರ್ ಸಿಂಪಟೆಕ್ಟಮಿ ಶಸ್ತ್ರ ಚಿಕಿತ್ಸೆಯ ಮೂಲಕ ಅವನ ನೋವನ್ನು ಕಡಿಮೆ ಮಾಡಲಾಯಿತು. ಅದೃಷ್ಟವಶಾತ್ ಮೊದಲೇ ರೋಗದ ವಿವರ ತಿಳಿದಿದ್ದದ್ದರಿಂದ ಅವನ ಕಾಲನ್ನು ಕತ್ತರಿಸುವುದು ಉಳಿಯಿತು.