ಸಕಾರಾತ್ಮಕ ಮನೋಭಾವ ಸ್ವ ಉದ್ಯೋಗಕ್ಕೆ ಅಡಿಪಾಯ: ಸಾಧನಾ ಫೋಟೆ.
ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ, ಬೆಂಗಳೂರು ಗ್ರಾ ಜಿಲ್ಲೆ. ಜುಲೈ 19
ಮನುಷ್ಯನ ಪ್ರತಿ ಬೇಡಿಕೆಗೂ ಮಾರುಕಟ್ಟೆ ಲಭ್ಯವಿದ್ದು, ಕಲೆ ಕೌಶಲ್ಯಗಳನ್ನು ರೂಢಿಸಿಕೊಂಡು, ಕೌಶಲ್ಯಗಳಿಗೆ ಅನುಸಾರವಾಗಿ ಸ್ವಯಂ ಉದ್ಯೋಗ ಆರಂಭಿಸಬೇಕು. ಉದ್ಯಮಶೀಲ ವ್ಯಕ್ತಿಯಾಗಬಯಸುವವರಿಗೆ, ಸ್ವ ಉದ್ಯೋಗಕ್ಕೆ, ಸಕಾರಾತ್ಮಕ ಧೋರಣೆಯೇ ಅಡಿಪಾಯವೆಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉದ್ಯೋಗ ವಿಭಾಗದ ರಾಜ್ಯ ಜಂಟಿ ನಿರ್ದೇಶಕಿ ಶ್ರೀಮತಿ ಸಾಧನಾ ಪೋಟೆ ಅವರು ತಿಳಿಸಿದರು.
ನೆಲಮಂಗಲ ತಾಲ್ಲೂಕು ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಮೊಬೈಲ್ ಫೋನ್ ರಿಪೇರಿ ಮತ್ತು ಸೇವೆ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೆಜ್‌ಮೆಂಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಸಮಾಜದಲ್ಲಿನ ಜನರು ಏನನ್ನುತ್ತಾರೆ ಎಂಬ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸ್ವ ಉದ್ಯೋಗ ಕೈಗೊಳ್ಳುವಂತೆ ತಿಳಿಸಿದರಲ್ಲದೆ, ವೃತ್ತಿಗೌರವ ಮುಖ್ಯವೇ ಹೊರತು, ಸಾಮಾಜಿಕ ಸ್ಥಾನಮಾನವಲ್ಲ. ನಿಜವಾದ ಸ್ವಾಭಿಮಾನದ ಜ್ಞಾನ ದೊರೆಯುವುದು ಸ್ವ ಉದ್ಯೋಗ ದಲ್ಲಿ ಎಂದು ಅಭಿಪ್ರಾಯಪಟ್ಟರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ ಅವರು ಮಾತನಾಡಿ, ಸಂಸ್ಥೆಯಲ್ಲಿ ಪಡೆದ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಕೆಲಸದ ಗುಣಮಟ್ಟದ ಕುರಿತು ಕಾಳಜಿವಹಿಸುವ ಮೂಲಕ ಕಾರ್ಯನಿರ್ವಹಿಸಲು ಸಲಹೆ ನೀಡಿದರಲ್ಲದೆ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ರವೀಂದ್ರ ಅವರು ನಿರೂಪಿಸಿದರು. ಉಪನ್ಯಾಸಕಿ ವಿದ್ಯಾ ಹೊಸಮನಿ ಅವರು ವಂದಾನಾರ್ಪಣೆಯ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪಕರಾದ ಗಂಗಾಧರ ಮೂರ್ತಿ, ಕೃಷ್ಣಪೇಟೆ, ಅಪರ್ಣಾ ವಾಲಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.