ಮಾದಕ ದ್ರವ್ಯ : ಚಕ್ರವ್ಯೂಹದಲ್ಲಿ ಒಳ ಹೊಕ್ಕರೆ ಹೊರ ಬರುವುದು ಅಸಾಧ್ಯ.ಡಾ.ಕೆ.ಬಿ. ಸೂರ್ಯಕುಮಾರ್.

  • ವಿಜಯ ದರ್ಪಣ ನ್ಯೂಸ್

ಮಡಿಕೇರಿ…

ಜೀವನದಲ್ಲಿ ಸುಖ, ದುಃಖ, ನೋವು ನಲಿವು ಸಹಜ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಇರುವವನು ಸ್ಥಿತಪ್ರಜ್ಞ. ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗ ದ್ವೇಷ ರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವನು . ಇದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಪ್ರತಿಯೊಬ್ಬರೂ ಒಂದೊಂದು ತರಹ ಸ್ಪಂದಿಸುತ್ತಾರೆ.

ಕೆಲವು ಭಾವುಕರು ಅತಿಯಾಗಿ ಸ್ಪಂದಿಸುವುದು ನೋವಿಗೆ ಮತ್ತು ದುಃಖಕ್ಕೆ.ಇದರ ಶಮನಕ್ಕೆ ಹೆಚ್ಚಿನವರು ಮೊದಲು ಉಪಯೋಗಿಸುವುದು ಮದ್ಯ ಪಾನ, ಇನ್ನು ಕೆಲವರು ಕಷ್ಟ ಪಟ್ಟು ದೊರಕಿಸಿದ ಮಾದಕ ದ್ರವ್ಯಗಳು. ಮೊದಲು ತತ್ಕಾಲಕ್ಕೆ ಅದನ್ನು ಉಪಯೋಗಿಸುವ ಇವರು ಕೊನೆಗೆ ಅದರ ಹಿಡಿತಕ್ಕೆ ಸಿಲುಕಿ ಹೋಗುವರು. ಕುಡಿತ, ಮಾದಕಗಳಲ್ಲಿ ಮೊದಲು ನೀವು ಅದನ್ನು ಕುಡಿಯುವಿರಿ , ಸೇವಿಸುವಿರಿ. ಆದರೆ ನಂತರದ ದಿನಗಳಲ್ಲಿ ಅದು ನಿಮ್ಮನ್ನೇ ದಾಸನನ್ನಾಗಿಸಿ, ನಿಮ್ಮನ್ನು ಅದರ ಹಿಡಿತದಲ್ಲಿ ಇಟ್ಟು ಕೊಳ್ಳುತ್ತದೆ. ಒಮ್ಮೆ ಆ ಚಕ್ರವ್ಯೂಹದ ಒಳ ಹೊಕ್ಕರೆ,ಅದರಿಂದ ಹೊರ ಬರುವುದು ಬಹಳ ಕಷ್ಟ.

ಶಾಲಾ ಕಾಲೇಜುಗಳಲ್ಲಿ, ಗೆಳೆಯ ಗೆಳತಿಯರಿಂದ, ರುಚಿಗಾಗಿ, ಅನುಭವಕ್ಕಾಗಿ, ಹೇಗಿರಬಹುದೆಂಬ ಕುತೂಹಲದಿಂದ,  ರಾಗಿಂಗ್ ನಂತಹ ಇತರರ ಹೆದರಿಕೆಯಿಂದ, ಚುಡಾಯಿಸುವುದರಿಂದ, ಚಿಂತೆ ದೂರ ಮಾಡಲು, ಮನಸ್ಸಿನ ಗೊಂದಲಗಳ ಪರಿಹಾರಕ್ಕೆ, ನಿದ್ದೆ ಬರಲಿ ಎಂದು ಮಾದಕ ದ್ರವ್ಯ ಸೇವನೆಯನ್ನು ಶುರು ಮಾಡಿದೆ ಎಂದು ಹಲವರು ಕೊಡುವ ಮುಖ್ಯ ಕಾರಣಗಳು. ಕೆಲವೊಮ್ಮೆ ಮಿತ್ರರ ಕಟುನುಡಿಗಳಾದ ನೀನು ಹೆಣ್ಣಿಗ, ನೀನೊಬ್ಬ ‘ಸಿಸ್ಸಿ ‘ , ತಾಯಿಯ ಮಡಿಲಿಂದ ಇನ್ನೂ ಹೊರ ಬರದವನು ಎಂಬಂತಹ ಮಾತುಗಳು ಅವರನ್ನು ಈ ಕೂಪಕ್ಕೆ ತಳ್ಳಿ ಬಿಡ ಬಹುದು.ಇನ್ನೂ ಕೆಲವು ಹದಿಹರೆಯದ ಮಕ್ಕಳಲ್ಲಿ ಪೋಷಕರ ವಿರುದ್ಧ ಹೋಗುವ ಒಂದು ಬಂಡಾಯ ಭಾವನೆ (ರೆಬೆಲ್ ಫೀಲಿಂಗ್)

ಅವರನ್ನು ಈ ಹಾದಿಯಲ್ಲಿ ತಳ್ಳ ಬಹುದು.
ನೋವಿಗೆ, ಸಂತೋಷಕ್ಕೆ, ಕೆಲವು ಕಡೆ ದೇವರ ಪ್ರಸಾದವೆಂದು ಕೊಡುವ ಗಾಂಜಾ, ಮೈ ಮೇಲೆ ದೇವರನ್ನು ಬರಿಸಿ ಕೊಳ್ಳುವ ಅಥವಾ ಆಹ್ವಾಹನೆ ಮಾಡಿ ಕೊಳ್ಳಲು, ಸಾಮಾಜಿಕ ಮತ್ತು ಸಂಸಾರಿಕ ತುಮಲಗಳು ಇನ್ನಿತರ ಕಾರಣಗಳು. ಕೆಲವು ಕ್ರೂರಿಗಳು ತಮ್ಮ ವ್ಯಾಪಾರಿ ಮನೋಭಾವದಿಂದ ಲಾಭ ಮಾಡಿ ಕೊಳ್ಳಲು ಮಕ್ಕಳಿಗೆ ಕೊಡುವ ಐಸ್ ಕ್ರೀಮ್ ಮತ್ತು ಚಾಕೊಲೇಟ್ ಗಳಿಗೆ ಕೆಲವು ಸಣ್ಣ ಮಟ್ಟಿನ ಮಾದಕ ದ್ರವ್ಯ ಮಿಶ್ರಿತ ಮಾಡಿ , ಮತ್ತೆ ಮತ್ತೆ ಮಕ್ಕಳನ್ನು ಅವುಗಳತ್ತ ತಳ್ಳಿ , ಆ ಮುಗ್ದ ಮಕ್ಕಳು ಅವುಗಳ ದಾಸನನ್ನಾಗುವಂತೆ ಮಾಡುತ್ತದೆ.
ಕಾರಣಗಳು ಏನೇ ಇದ್ದರೂ, ಈ ವ್ಯಕ್ತಿಗಳು ಸ್ವಭಾವತಃ ಮಾನಸಿಕವಾಗಿ ಸ್ವಲ್ಪ ತೊಂದರೆ ಇರುವಂತಹ ಪರ್ಸನಾಲಿಟಿ ದಿಸ್ಆರ್ಡರ್ ಎಂಬ ರೋಗಗ್ರಸ್ತರು. ಗಟ್ಟಿ ಮನಸ್ಸಿಲ್ಲದವರು. ಮಾನಸಿಕವಾಗಿ ಇನ್ನೂ ಪಕ್ವವಾಗದವರು ಅಥವಾ ‘ ಇಮೋಷನಲೀ ಇಮ್ಮೇಚೂರ್’ . ಇನ್ನು ಕೆಲವರು ಅತಿಯಾದ ಭಾವುಕರು.
ಕೆಲವರಿಗೆ ಪೋಷಕರು ಮಾಡುವ ಅತೀ ಮುದ್ದು, ತನ್ನ ಮಕ್ಕಳು ತಪ್ಪನ್ನೇ ಮಾಡುವುದಿಲ್ಲ ಎಂಬ ತಾಯಿಯ ದೃಢ ನಂಬಿಕೆ, ಏನಾದರು ಇದ್ದರೂ, ಕಂಡರೂ ಕಾಣದಂತಿರುವ ಪೋಷಕರು. ಹೆಚ್ಚಾಗಿ ಇತರರು ನಿಮ್ಮ ಮಕ್ಕಳು ದಾರಿ ತಪ್ಪುತ್ತಿರ ಬಹುದು ಎಂದು ಸೂಕ್ಷ್ಮವಾಗಿ ಹೇಳಿದರೂ ಅದನ್ನು ಸಂಪೂರ್ಣ ಕಡೆಗಣಿಸಿ , ಹೇಳಿದವರ ಮೇಲೆ ಹರಿ ಹಾಯುವ ಪೋಷಕರು ಕೂಡ ಇದಕ್ಕೆ ಮುಖ್ಯ ಕಾರಣ. ತಂದೆಯಂದಿರು ತಮ್ಮ ಹೊರಗಿನ ಕೆಲಸದಲ್ಲಿ ತಮ್ಮದೇ ಲೋಕದಲ್ಲಿ ಮಕ್ಕಳನ್ನು ಯಾವತ್ತೂ ಗಮನಿಸುವುದೇ ಇಲ್ಲ. ಮಕ್ಕಳ ಬೇಕು ಬೇಡಗಳ ಬಗ್ಗೆ ಚಿಂತಿಸದೆ ಎಲ್ಲವೂ ತಾಯಿಯ ಜವಾಬ್ದಾರಿ ಎಂದು ಬಿಡುವುದು ಕೂಡ ಇದಕ್ಕೆ ಒಂದು ಕಾರಣ .

ಇನ್ನು ಯಾವ ಮಾದಕ ವಸ್ತುಗಳು, ಎಲ್ಲಿ ಸಾಮಾನ್ಯವಾಗಿ ಸಿಗುತ್ತದೆ ಎಂದು ತಿಳಿದು ಕೊಳ್ಳುವುದು ಒಳ್ಳೆಯದು.
ಅನೇಕ ಶಾಲಾ ಕಾಲೇಜುಗಳ ಪರಿಮಿತಿಯಲ್ಲಿ ಇರುವ ಕೆಲವೊಂದು ಸಣ್ಣ ಗೂಡಂಗಡಿಗಳಲ್ಲಿ, ಪೇಟೆಯ ಹೊರವಲಯದ ಪುಟ್ಟ ಸಿಗರೇಟ್ ಸಿಗುವ ಅಂಗಡಿಗಳಲ್ಲಿ ಗಾಂಜಾ, ಚರಸ್, ಗೊತ್ತಿರುವವರಿಗೆ ಸಿಗುತ್ತದೆ. ಇನ್ನು

ಕೆಲವು ಮಾನಸಿಕ ರೋಗದ ಚಿಕಿತ್ಸೆಗೆಂದು, ನಿದ್ರೆಗೆಂದು ವೈದ್ಯರು ಸೂಚಿಸುವ ಕೆಲವೊಂದು ಮಾತ್ರೆಗಳನ್ನು ( ಅವುಗಳ ಹೆಸರನ್ನು ನಾನು ಇಲ್ಲಿ ಹೇಳುವುದಿಲ್ಲ. ) ವೈದ್ಯರ ಸಲಹಾ ಚೀಟಿ ಇಲ್ಲದೆ ಕೊಡುವ ಅಂಗಡಿಗಳು ಕೂಡಾ ಇದೆ. ಅದೇ ರೀತಿ ದೊಡ್ದ ಪಟ್ಟಣಗಳಲ್ಲಿ ಶ್ರೀಮಂತರ ಕೆಲವೊಂದು ತಾಣಗಳು, ಪಬ್ ಗಳು, ರೇವ್ ಪಾರ್ಟಿಗಳಲ್ಲು ಕೊಕೇನ್, ಎಲ್ಎಸ್ಡಿ, ಎಂಡಿಎಂಎ ನಂತಹ ದುಬಾರಿ ದೃವ್ಯಗಳು ಕೆಲವರಿಗೆ ಮಾತ್ರ ಲಭ್ಯವಾಗುತ್ತದೆ. ಆದರೆ ಇದೆಲ್ಲವೂ ಒಂದು ವ್ಯವಸ್ಥಿತ ಭೂಗತ ಜಾಲ.

ಮಾದಕ ದ್ರವ್ಯ ಸೇವನೆಯ ಕೆಲವು ಮುಖ್ಯ ಲಕ್ಷಣಗಳು ಹೀಗಿವೆ.

ಅತಿಯಾದ ಆಕಳಿಕೆ, ಹಸಿವಿಲ್ಲದಿರುವಿಕೆ, ಅಥವಾ ಅತಿಯಾದ ಹಸಿವು, ಕಣ್ಣಿನಲ್ಲಿ ಮೂಗಿನಲ್ಲಿ ಸದಾ ನೀರು, ಆಗಾಗ್ಗೆ ಸೀನುವಿಗೆ, ಬೆವರುವಿಕೆ, ಕಣ್ಣಿನ ಪಾಪೆಯ ಹಿಗ್ಗುವಿಕೆ, ಕೈ ಕಾಲು ನಿಮಿರುವಿಕೆ.
ಕೆಲವೊಮ್ಮೆ ಎರಡು ಮೂರು ದಿನ ಮಾದಕ ದ್ರವ್ಯ ಸಿಕ್ಕದೆ ಇದ್ದಾಗ ಅವರಲ್ಲಿ ವಾಪಸಾತಿ ಲಕ್ಷಣ ( Withdrawal Symptoms) ಗಳು ಕಂಡು ಬರುತ್ತದೆ. ಇದರ ಮುಖ್ಯ ಲಕ್ಷಣಗಳು ಸಹಿಸಿ ಕೊಳ್ಳಲಾಗದ ಸ್ನಾಯುವಿನ ಎಳೆತ (Uncontrollable twitching, cramps) ತಳಮಳ,( ರೆಸ್ಟ್ಲೆಸ್ ನೆಸ್), ನಿದ್ರಾಹೀನತೆ, ನಾಡಿ ಬಡಿತದ ಹೆಚ್ಚಳ, ರಕ್ತದ ಒತ್ತಡದ ಏರುವಿಕೆ, ವಾಂತಿ, ಭೇದಿ

,ಕಿರಿಕಿರಿ, ಸುಸ್ತು. ಈ ಸ್ಥಿತಿಯಲ್ಲಿ ಅವರು ಇತರರನ್ನು ಬಯ್ಯುವುದು, ಶಾಪ ಹಾಕುವುದು, ವಸ್ತುಗಳನ್ನು ಧ್ವಂಸ ಮಾಡುವುದು, ಆತ್ಮಹತ್ಯೆಗೆ ಪ್ರಯತ್ನ ಮಾಡಬಹುದು. ಇತರರಿಗೆ ಕಾಣದಿರುವ ಪಂಚ ಪ್ರಜ್ಞೆಗೆ ಅನುಭವವಾಗದಿರುವ ವಿಷಯಗಳು ಇವರ ಕಣ್ಣಿಗೆ ಗೋಚರಿಸಲು ತೊಡಗುತ್ತದೆ. ಇದನ್ನು ಭ್ರಾಂತಿ ಅಥವಾ ಭ್ರಮೆ (ಹ್ಯಾಲ್ಯೂಸಿನೇಷನ್) ಎನ್ನುತ್ತಾರೆ. ಇಲ್ಲದಿರುವ ಹುಲಿ ಬಂದು ತಮ್ಮನ್ನು ಗಾಯಗೊಳಿಸಿದಂತೆ, ಯಾರಿಗೂ ಕೇಳಿಸದೆ ಇರುವ ಶಬ್ಧ ಕೇಳಿಸಿದಂತೆ, ಗಾಳಿಯಲ್ಲಿಯೇ ಇಲ್ಲದ ವಾಸನೆ ಅಥವಾ ಸುವಾಸನೆ ಮೂಸಿದಂತೆ, ಬಾಯಿಯಲ್ಲಿ ಸಿಹಿ, ಕಹಿ, ಒಳ್ಳೆಯ, ಇಲ್ಲ ಕೆಟ್ಟ ರುಚಿ ಬಂದಂತೆ ಅನಿಸುತ್ತ ಇರುತ್ತದೆ. ತನ್ನ ಚರ್ಮದ ಮೇಲೆ, ಮತ್ತು ಕೆಳಗೆ ಇರುವೆ ಅಥವಾ ಜಿರಳೆ ಹರಿದಂತೆ, ಹೊಟ್ಟೆಯಲ್ಲಿ ಚಿಟ್ಟೆ ತಡಪಡಿಸಿದಂತೆ, ಎಲ್ಲಕ್ಕಿಂತ ಮಿಗಿಲಾಗಿ ಯಾವುದೋ ವ್ಯಕ್ತಿ, ದೇವರು, ದೈವ ತನ್ನ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಕೆಲವು ಕೆಟ್ಟ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಿದ ಭಾವನೆಗಳು ಬಂದು ಜನರಿಗೆ ತೊಂದರೆ ಮಾಡಬಹುದು. ಕೊಲೆ ಸುಲಿಗೆ ಅತ್ಯಾಚಾರಕ್ಕೆ ಅವರನ್ನು ತಳ್ಳಬಹುದು.

ಮಾದಕ ದ್ರವ್ಯ ಕೊಂಡು ಕೊಳ್ಳಲು ಹಣವಿಲ್ಲದಾಗ ತನ್ನ ಮನೆಯಿಂದಲೇ ಅಥವಾ ಇನ್ನೆಲ್ಲಾದರು ಕಳ್ಳತನ ಮಾಡುವಂತೆ ಅವರನ್ನು ಇದು ಪ್ರೇರೇಪಿಸುತ್ತದೆ.
ಮಾದಕ ದ್ರವ್ಯದಿಂದ ಶರೀರಕ್ಕೆ ಆಗುವ ಹಾನಿಗಳು… ತನ್ನ ಶರೀರದ ಕಾಣುವಿಕೆಯ ಬಗ್ಗೆ ಗೋಚರವಿಲ್ಲದೆ ತಲೆ ಕೂದಲು ಕೆದರಿಕೊಂಡು ಕೊಳೆಯಾದ ಬಟ್ಟೆಯನ್ನು ಧರಿಸುತ್ತಾರೆ. ಸದಾ ಮಂಕು ಭರಿತರಾಗಿ ಮಾತು ತೊದಲುತ್ತಿರುತ್ತದೆ, ತನ್ನ ಕೈಕಾಲಿನ ಚಲನ ವಲನವನ್ನು ಹೊಂದಾಣಿಸಲು ಸಾಧ್ಯವಾಗುವುದಿಲ್ಲ.

ಲಿವರ್ ಸಿರೋಷಿಸ್ ಕಾಯಿಲೆ, ಚುಚ್ಚುವ ದ್ರವ್ಯಗಳಿಂದಾಗಿ ಬ್ಯಾಕ್ಟೀರಿಯಲ್ ಎಂಡೋ ಕಾರ್ಡಿಟಿಸ್, ಹೃದಯದಲ್ಲಿನ ಕೀವುಗಟ್ಟುವಿಕೆ, ಮಿದುಳು ಜ್ವರ, ಮೆನಿಂಜೈಟಿಸ್, ಜ್ಞಾಪಕ ಶಕ್ತಿ ಯ ಕೊರತೆ, ಎಲ್ಲಕ್ಕಿಂತ ಮಿಗಿಲಾಗಿ ನರದ ದೌರ್ಬಲ್ಯತೆ. ಇವರಿಗೆ ಏಕಾಗ್ರತೆಯ ಕೊರತೆ, ತಲೆತಿರುಗವಿಕೆ, ಮಾನಸಿಕ ರೋಗ, ನಿರ್ಜಲೀಕರಣ, ಅಪಸ್ಮಾರ, ಸೂಜಿಯಿಂದ ಹೆಚ್ ಐ ವಿ, ಸಂಸಾರಿಕ ಕಲಹ, ಶೈಕ್ಷಣಿಕ ಏರುಪೇರು ಉಂಟಾಗುತ್ತದೆ.

ಇಂದಿನ ಯುವ ಜನರೇ ….

ಈಗ ಹೇಳಿ ಇದು ನಮಗೆ, ನಿಮಗೆ ಬೇಕಾ. ಇದ್ದುದರಲ್ಲಿ ಸಂತೋಷ ಪಡುವುದನ್ನು ಬಿಟ್ಟು ಕ್ಷಣಿಕ ಸುಖಕ್ಕಾಗಿ ಊರಿನ ಹೊರಗಿರುವ ಹೆಮ್ಮಾರಿಯನ್ನು ನಮ್ಮ ಶರೀರಕ್ಕೆ ತಂದು ಕೊಳ್ಳಬೇಕೇ . ನಮ್ಮ ನಿಮ್ಮ ಸಮಾಜದ ಆರೋಗ್ಯ ನಿಮ್ಮದೇ ಕೈಯಲ್ಲಿದೆ. ಬನ್ನಿ ಮಾದಕ ವ್ಯಸನ ಮುಕ್ತ ಭಾರತ ಮತ್ತು ಪ್ರಪಂಚದ ಒಳಿತಿಗಾಗಿ ಎಲ್ಲರೂ ಕೈಜೋಡಿಸೋಣ…..

ಡಾ.ಕೆ.ಬಿ. ಸೂರ್ಯಕುಮಾರ್, ಮಡಿಕೇರಿ