ಜಾನಪದವೆಂಬ ತಾಯಿ ಬೇರಿನ ನೀರು ಜೀವವಾಹಿನಿ
ವಿಜಯ ದರ್ಪಣ ನ್ಯೂಸ್ ಮಂಡ್ಯ
ಜಾನಪದ ಜಗತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿಬೇರು ಎಂಬುದು ಕ್ಲೀಷೆಯ ವಿಚಾರವಾಗಿದ್ದರೂ ಪದೇ ಪದೇ ಅದೇ ವಿಚಾರವನ್ನು ನೆನಪಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ತಾಯಿಬೇರಿನ ನೀರು ಕುಡಿದೇ ನಲಿಯುತ್ತಿರುವ ನಾವು ಮರಳಿ ಆ ಮೂಲಕ್ಕೆ ಹೋಗಿಯೇ ಅನುಭವಿಸಬೇಕು ಎಂದು ಜಾನದಪ ವಿದ್ವಾಂಸ ಎಂ. ಬೈರೇಗೌಡ ನುಡಿದರು.
ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಗರದ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಓದಿನರಮನೆಯಲ್ಲಿ ತಿಂಗಳ ಒನಪು ಎಂಬ ವಿಶಿಷ್ಟ ಕಾರ್ಯಕ್ರಮ ಸರಣಿಯ 179ನೇ ಗಾದೆಗೊಂದು ಪುಸ್ತಕ, ಒಗಟಿಗೊಂದು ಪುಸ್ತಕ ಬಹುಮಾನ ಎಂಬ ವಿನೂತನ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗಾದೆ ಒಗಟುಗಳ ಮಹತ್ವ ತಿಳಿಸಿದರು.
ಓದುವ ಗೀಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಸಮಾಜವನ್ನು ಸರಿಮಾರ್ಗದಲ್ಲಿ ಕೊಂಡೊಯ್ಯುವ ಶಕ್ತಿ ಪುಸ್ತಕಗಳಿಗಿದೆ. ಪುಸ್ತಕ ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಇಂಥದ್ದೂ ಒಂದು ಕಾರ್ಯಕ್ರಮ ಮಾಡಿ ಯಶಸ್ವಿಯಾಗಬಹುದೆಂದು ಬೈರೇಗೌಡರು ತೋರಿಸಿಕೊಟ್ಟಿದ್ದಾರೆ. ನಿಜಕ್ಕೂ ಪುಸ್ತಕ ಪ್ರೇಮಿಗಳು ಹೆಮ್ಮೆಪಡುವ ವಿಚಾರವಿದು. ಪುಸ್ತಕಗಳ ಒಳಹೂರಣ ಮಸ್ತಕಕ್ಕೆ ಇಳಿಯುವ ಕೆಲಸವಾದರೆ ಸಮಾಜ ಒಳ್ಳೇ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿನಗರ ನಗರಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಸಿ. ಪಾರ್ವತಮ್ಮ ಶ್ಲಾಘಿಸಿದರು
ತಾವೇ ಸಂಗ್ರಹಿಸಿಕೊಂಡು ಬಂದ ಗಾದೆ, ಒಗಟುಗಳನ್ನು ಕೇಳುತ್ತ, ಉತ್ತರಿಸಿದವರಿಗೆ ಒಂದೊAದು ಅಮೂಲ್ಯ ಗ್ರಂಥಗಳನ್ನು ನೀಡುವ ಕೆಲಸವನ್ನು ಕ್ವಿಜ್ ಮಾಸ್ಟರ್ ಜಿ.ಪಿ. ರಾಮಣ್ಣ ನಿರ್ವಹಿಸಿದರು. ಜಗತ್ತಿನ ಸಾವಿರಾರು ಬಗೆಯ ನಾಣ್ಯಗಳೂ, ನೋಟುಗಳು, ಸ್ಟಾಂಪುಗಳ ಸಂಗ್ರಾಹಕ ಕೆ. ವಿಶ್ವನಾಥ್ ನಿರ್ಣಾಯಕರಾಗಿದ್ದರು. ವಿದುಷಿ ವಿನುತಾ ಬೂದಿಹಾಲ್ ಅವರ ಶಿಷ್ಯವೃಂದ ಸುಗಮ ಸಂಗೀಯ ಕಾರ್ಯಕ್ರಮ ನಡೆಸಿಕೊಟ್ಟರು. ಮುನ್ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂರೈವತ್ತಕ್ಕು ಹೆಚ್ಚು ಪುಸ್ತಕಗಳನ್ನು ಪಡೆದರು.