ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ.

 ವಿಜಯ ದರ್ಪಣ ನ್ಯೂಸ್, ಜುಲೈ 01

ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ.

ಇಂದಿನ ಸುದ್ದಿ ನಾಳೆಗೆ ರದ್ದಿಯಾಗದಂತೆ ಬರೆವ ಎಲ್ಲ ಪತ್ರಕರ್ತರ ಸ್ಮರಣೆಯಲ್ಲಿ….!!!

“ಏ ಬದ್ರಿ ಯಾರ್ಲೆ ಆ ಹುಡುಗ ? ಈಶ್ವರಪ್ಪ ಸರ್ ಕಳಿಸಿರೋ ಹುಡುಗ ಆದ್ರೆ ಒಳಗೆ ಬರೋದಕ್ಕೆ ಹೇಳು…ಹಾ !! ಆಮೇಲೆ ಸುರೇಶನ ಹತ್ರ ಫ್ರಂಟ್ ಪೇಜ್ ಕವರ್ ಸ್ಟೋರಿದು ಪ್ರೂಫ್ ಆಯ್ತಾ ಕೇಳಿ ಕಳ್ಸೋದಕ್ ಹೇಳು ಅರ್ಜೆಂಟು…… ಲೆ ಹುಡ್ಗ ಬಾರ್ಲೆ ಇಲ್ಲಿ”

“….”

“ಹೂಂ ಕೂತ್ಕೋ”

“ಏನ್ಲೆ ಹೆಸರು?”

“ರಾಜ್ ಆಚಾರ್ಯ ಅಂತ ಸರ್”

“ಓಹೋ ಮಠದ ಆಚಾರ್ರಾ? ಕುರಿ ಕೋಳಿ ತಿಂತಿಯೇನು?”

“……”

“ಎಲ್ಲಿ ಮನೆ?”

“ವಿನೋಬಾನಗರ ಸರ್”

“ಡಿ ಆರ್ ಎಂ ಕಾಲೇಜಾ?”

“ಹೌದು ಸರ್ ಸೆಕೆಂಡ್ ಪಿ ಯು ಸಿ, ಪಿ ಸಿ ಎಂ ಬಿ ಕಾಂಬಿನೇಶನ್”

“ಮುಂದ ಎನ್ ಮಾಡ್ಬೋಕು ಅಂತದಿ?”

“ಕಂಪ್ಯೂಟರ್ ಇಂಜಿನಿಯರ್ ಆಗ್ಬೇಕು ಅಂತಿದೀನಿ ಸರ್”

“ಅಲ್ಲಲೇ ಓದ್ತಿರೋದು ನೋಡಿದ್ರೆ ಪಿ ಸಿ ಎಂ ಬಿ ಮುಂದೆ ಇಂಜಿನಿಯರ್ ಆಗ್ತೀನಿ ಅಂತಿ, ಇಲ್ಲಿಗ್ಯಾಕ್ ಬಂದೆಲೆ?”

“ಈಶ್ವರಪ್ಪ ಸರ್ ಕಳಿಸ್ಕೊಟ್ಟ್ರು ಸರ್”

“ಅವ್ರು ಕಳುಸ್ತಾರೋ, ನೀನ್ಯಾಕ್ ಬಂದಿ? ತೆಲ್ಯಾಗ ಬುದ್ದಿ ಇಲ್ಲೇನಪ…. ಹಾ? …ಇದು ಪತ್ರಿಕೆ ಕಣ್ಲೆ? ಸುದ್ದಿ ಮಾಡೋದು ಎನ್ ಗೊತ್ತು ನಿಂಗೆ?”

“….”

“ಏ ಬದ್ರಿ ಪೆನ್ನು, ಪೇಪರ್ರು, ಪ್ಯಾಡು ಕೊಡಲೇ ಇವ್ನಿಗೆ, ಏನೋ ನಿನ್ನ ಹೆಸ್ರು ಮರ್ತೇ ಹೋತ್ ನಡಿ…ನಿನಗೆ ಇಂಟರ್ವ್ಯೂ-ಗಿಂಟರ್ವಿವ್ ಎಲ್ಲ ಏನೂ ಮಾಡಲ್ಲ ಎನು….ನಾ ಹೇಳಿದ್ದು ಬರಿ ಮುಂದೆ ನೋಡನ”

“ಸರಿ ಸರ್”

“ಅವನು ಉದ್ದಿನ ವಡೆಯನ್ನು ತಿಂದನು”

“ಗಾಜು ಬಿದ್ದು ಒಡೆದು ಹೋಯಿತು”

“ಅವನು ಕಲ್ಲಿನಿಂದ ಹೊಡೆದು ಕೊಂದನು”

ಮುಗೀತಾ?

“ಮುಗೀತು ಸರ್”

“ಹೂಂ ಬರ್ದಿದ್ದು ಪೆನ್ನು ಪೇಪರ್ರು ಅಲ್ಲಿಟ್ಟು, ಹೊರಗಿರು ಕರೀತೀನಿ”

ಸುದ್ದಿ ಮನೆಯೊಂದಿಗಿನ ನನ್ನ ಪಯಣ ಶುರು ಆದದ್ದು ಹೀಗೆ. ಹಾ ಅಂದ ಹಾಗೆ ಅಂದು ನನ್ನ ಒಳಗೆ ಕರೆದದ್ದು ‘ *ನಗರವಾಣಿ* ‘ ದಿನ ಪತ್ರಿಕೆಯ ಸಂಪಾದಕರು, ನಾಡಿನ ಹೆಮ್ಮೆಯ ಪತ್ರಕರ್ತರು ಆದ *ಬಿ ಎನ್ ಮಲ್ಲೇಶ್*. ಆಮೇಲೆ ಒಳಗೆ ಕರೆದದ್ದು ಆಯಿತು ಮತ್ತೆ ಮೂರು ವಾಕ್ಯಗಳಲಿ ಎರಡನ್ನು ಮಾತ್ರ ಸರಿ ಬರೆದ ಕಾರಣ ತಿಂಗಳಿಗೆ ೭೦೦ ರೂಪಾಯಿ ಸಂಬಳದ ಡೆಸ್ಕ್ ರೆಪೋರ್ಟರ್ ಕೆಲಸಕ್ಕೆ ನಿಯುಕ್ತಿ ಆಗಿದ್ದು ಆಯಿತು.

ಆಗಿನ ಪರಿಸ್ಥಿತಿಯೇ ಹಾಗಿತ್ತು. ಬದುಕು ಅವಶ್ಯಕತೆ ಹಾಗು ಅನಿವಾರ್ಯತೆಗಳ ಮಧ್ಯ ತೂಗುಯ್ಯಾಲೆ ಆಡುತ್ತಿತ್ತು. ಅಪ್ಪನ ಅಕಾಲಿಕ ಮರಣ ಅಮ್ಮನನ್ನು ನನ್ನನ್ನು ಭಾಗಶಃ ಕೊಂದು ಬಿಟ್ಟಿತ್ತು. ಬದುಕಿನ ಬವಣೆ-ನವಣೆ ಎರೆಡೂ ಕಾಣದ ಇಬ್ಬರೂ ದಿಕ್ಕೇಡಿಗಳಾಗಿಬಿಟ್ಟಿದ್ದೆವು. ಅಮ್ಮ ಉಂಡದ್ದು ಉಟ್ಟದ್ದು ಸ್ವಾಭಿಮಾನವನ್ನಷ್ಟೆ. ಸರೀಕರ ಮನೆಗೆ ಬೆಂಕಿ ಕಡ್ಡಿಗೂ ಕಾಲಿಡದ ಹಾಗೆ ನೋಡಿಕೊಂಡಿದ್ದ ಅಪ್ಪ ಸಾವಿನ ನೆಪದಲ್ಲಿ ನೆನಪಾಗಿ ಹೋಗಿದ್ದ.

ಹನ್ನೊಂದನೆಯ ಸೂತಕ ಇನ್ನೂ ಕಳೆದಿರಲಿಲ್ಲ ಅಶೌಚವೂ ಮುಗಿದಿರಲಿಲ್ಲ. ಇನ್ನು ಸಪಿಂಡೀಕರಣ ದೂರದ ಮಾತು.ಅಮ್ಮ ಎಲ್ಲವನ್ನೂ ಅವುಡುಗಚ್ಚಿ ತನ್ನ ಹಿಂದಿನ ಶಿಕ್ಷಕ ವೃತ್ತಿಯನ್ನೇ ಮುಂದುವರಿಸುವುದಕ್ಕಾಗಿ ಸಜ್ಜಾಗಿ ನಿಂತಿದ್ದಳು. ಎದೆಯುದ್ದ ಬೆಳದ ಮಗ ಸಂಸಾರದ ನೊಗಕ್ಕೆ ಕೈ ಜೋಡಿಸಲಿ ಎಂದು ಅಂದು ಆಕೆ ಕೇಳಲಿಲ್ಲ. ನಾನು ಹೇಳಲೂ ಇಲ್ಲ.

ಕೆಟ್ಟ ಕೌಮಾರ್ಯದ ದಿನಗಳವು. ದಿನಬೆಳಗಾದರೆ “ಆಚಾರ್ರ ಮನೆ ಹುಡುಗ ಪೋಲಿ ತಿರುಗ್ತಾನಂತೆ” ಅನ್ನೋ ಮಠದವರ ಗುಸು ಅಪ್ಪನ ಕಿವಿಗಿ ಬಿದ್ದಾಗಲೂ ಅಪ್ಪ ನನ್ನ ಕೈಯಲ್ಲಿ ಆಗಾಗ್ಗೆ ದುಡ್ಡಿಟ್ಟು ಗೆಳೆಯರ ಜೊತೆ ಸಿನಿಮಾಗೋ, ತುಡುಗು ತಿಂಡಿ ತಿನ್ನೋದಕ್ಕೋ ಕಳುಹಿಸುತ್ತಿದ್ದುದ್ಡನ್ನು ಬಿಟ್ಟಿರಲಿಲ್ಲ. ಆದರೆ ಈಗ ಅಪ್ಪ ಇಲ್ಲವಾಗಿದ್ದ. “ಮನೆ ನಡೆಸೊದಿರ್ಲಿ ಮೊದ್ಲು ನಿನ್ನ ಕೈ ಖರ್ಚಿಗಾದರೂ ಒಂದಷ್ಟು ಪಾರ್ಟ್ ಟೈಮ್ ಕೆಲ್ಸ ಮಾಡ್ಕೋಬಾರ್ದ, ನಿಮ್ಮಮ್ಮನಿಗೆ ಅದೆಷ್ಟು ಜೀವ ತಿಂತಿ” ಅಂತ ದೊಡ್ಡಪ್ಪ ಒಂದೇ ಸಮನೆ ವರಾತ ತೆಗೆದಿದ್ದರು.

ಆಗ ನನಗೆ ಗೊತ್ತಿದ್ದಾದರೂ ಏನು? ಏನು ಇಲ್ಲ. ಅತ್ತ ಒಳಗೆ ಪೌರೋಹಿತ್ಯದ ಗಂಧ ಗಾಳಿ ಗೊತ್ತಿರಲಿಲ್ಲ. ಇತ್ತ ಹೊರಗೆ ದುಡಿದು ತಿನ್ನುವ ಯಾವ ಕೆಲಸವೂ ತಿಳಿದಿರಲಿಲ್ಲ. ಆದರೆ ಅಪ್ಪ ನನ್ನನ್ನು ಒಂದಷ್ಟು ಓದಿಗೆಳೆದಿದ್ದ. ಸಂಯುಕ್ತ ಕರ್ನಾಟಕ, ಸುಧಾ, ತರಂಗ, ತುಷಾರ, ಹಾಯ್ ಬೆಂಗಳೂರು ಅಲ್ಲದೆ ಬೇಂದ್ರೆ, ಮಾಸ್ತಿ, ಕುವೆಂಪು, ನಿಸ್ಸಾರ್ ಅಹಮದ್, ಲಂಕೇಶ್,ಎಂಡಮೂರಿ ವೀರೇಂದ್ರನಾಥ್ ಹೀಗೆ ಅದೆಲ್ಲಿಂದಲೋ ಒಂದು ಮಣ ಪುಸ್ತಕ ತಂದು ತಡರಾತ್ರಿಯವರೆಗೂ ಓದಿಸುತ್ತಿದ್ದ. ನನ್ನೊಳಗೊಬ್ಬ ಓದುಗ ಮೈದಳೆದದ್ದು ಹಾಗೆಯೇ ಮತ್ತು ಅಲ್ಲಿಯೆ.

ಹಾಗೆಂದ ಮಾತ್ರಕ್ಕೆ ಸಾಹಿತ್ಯದ ಓದು ದುಡ್ಡು ಹುಟ್ಟಿಸುತ್ತಿರಲಿಲ್ಲ. ಬರವಣಿಗೆ ದುಡ್ಡು ಹುಟ್ಟಿಸುತ್ತದೆ ಎಂದು ತಿಳಿದದ್ದೇ ಕಾಲೇಜಿನ ವರಾಂಡದಲ್ಲಿ ನಿಲ್ಲಿಸಿಕೊಂಡು ಪ್ರೀತಿಯ ಗುರುಗಳಾದ ಎಂ.ಜಿ ಈಶ್ವರಪ್ಪ ಸರ್ ” ನಿನ್ನಲ್ಲಿ ಒಳ್ಳೆ ಸಾಹಿತ್ಯದ ಅಭಿರುಚಿ ಇದೆ. ಸೈನ್ಸ್ ಸ್ಟೂಡೆಂಟ್ ಆದ್ರೇನು ಮುಂದಿನದು ಮುಂದೆ. ಈಗಿನ ಮಟ್ಟಿಗೆ ನನ್ನ ಶಿಷ್ಯ ಬಿ.ಎನ್. ಮಲ್ಲೇಶ್ ಅಂತ ‘ನಗರವಾಣಿ’ ಲಿ ಇದಾನೆ, ಅವನ ಹತ್ರ ಹೋಗಿ ಏನಾದ್ರೂ ಕೆಲ್ಸ ಕೇಳು, ನಾನು ಮಾತಾಡ್ತೀನಿ. ‘ಸಂಬಳ ಕೊಟ್ಟಷ್ಟು ಸಾಕು ಅನ್ನು” ಅಂದಿದ್ದರು. ಅಂದು ಸಂಜೆ ಕಾಲೇಜು ಮುಗಿದ ಕೂಡಲೇ ಪಿ.ಜೆ ಬಡಾವಣೆಯ ‘ನಗರವಾಣಿ’ ದಿನ ಧಾವಂತಕ್ಕೆ ಬಿದ್ದವನಂತೆ ಪತ್ರಿಕೆಯ ಕದ ತಟ್ಟಿದ್ದೆ.

ಮುಂದೆ ಬದುಕಿನ ಜೊತೆ ಬರಹವೂ ತಳುಕು ಹಾಕಿಕೊಂಡಿತು. ಒಂದಷ್ಟು ದಿನದ ಪ್ರೀತಿಗೆ, ಒಂದಷ್ಟು ದಿನದ ವಿರಹಕೆ, ಒಂದಷ್ಟು ದಿನ ಸೋಲಿಗೆ, ಒಂದಷ್ಟು ದಿನ ಒಂಟಿತನಕ್ಕೆ ಹೀಗೆ ಬದುಕಿನ ಎಲ್ಲ ವಿಷಣ್ಣತೆಯಲ್ಲಿ ಬರಹ ಜೊತೆಗಿತ್ತು. ಓದು ಮುಗಿದ ಮೇಲೆ, ಎಲ್ಲೋ ಕಳೆದು ಹೋಗಿದ್ದನ್ನು ಮತ್ತೆಲ್ಲೋ ಹುಡುಕುವ ಪ್ರಯತ್ನದಲ್ಲಿ ಇದ್ದಾಗಲೇ ಈ ಬೆಂಗಳೂರು ಎಂಬ ಬೆಂಗಳೂರು ಕೈಬೀಸಿ ಕರೆಯಿತು.

ಒಂದೆರೆಡು ಕಂಪನಿಗಳಲ್ಲಿ ಇಂಟರ್ವ್ಯೂ ಹೋಗಿ ಬಂದಿದ್ದೆನಷ್ಟೆ. ಎಲ್ಲೋ ನಿರ್ಯಾತದಲ್ಲಿ ಬರಹ ಮತ್ತೆ ಮತ್ತೆ ಸೆಳೆಯುತ್ತಿತ್ತಲ್ಲ. ಪರಿಚಯದವರೊಬ್ಬರ ಪತ್ರ ಮುಖೇನ ಶಂಕರಪುರದ ಕೇಶವ ಕೃಪದಲ್ಲಿದ್ದ ವಾದಿರಾಜರ ಸಾಂಗತ್ಯದಲ್ಲಿ ಮತ್ತೆ ‘ಉತ್ಥಾನ’ ಮಾಸ ಪತ್ರಿಕೆಯ ಮಡಿಲಿಗೆ ಬಿದ್ದೆ. ಬರೆದರೆ ಅದೊಂದು ಅದ್ಭುತ ರೋಚಕ ಸುದ್ದಿ ಮನೆಯ ಕಥಾನಕ. ಬಿಡುವಾದಾಗ ಇನ್ನೊಮ್ಮೆ ನಿಮಗೆ ಹೇಳುತ್ತೇನೆ ಬಿಡಿ.

ಒಂದಷ್ಟು ದಿನ ಮಾತ್ರ ನನಗೆ ಅಲ್ಲಿರಲು ಸಾಧ್ಯವಾಗಿದ್ದು. ಬದುಕೆಂಬ ರಾಸ್ಕಲ್ ಹೇಗೆಲ್ಲಾ ನಮ್ಮನ್ನು ಬದುಕಿಸಿ ಬಿಡುತ್ತದೆ ನೋಡಿ. ಅನಾಮತ್ತಾಗಿ ಅಲ್ಲಿಂದ ಹೊರಟು ಐ ಬಿ ಎಂ ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಂದ ಮತ್ತೊಂದು ಆಯಾಮದ ಬದುಕು ಕೈಹಿಡಿಯಿತು. ವೃತ್ತಿಯಾಗಿದ್ದ ಬರಹ ಪ್ರೌರುತ್ತಿಗಿಳಿಯಿತು, ಪ್ರೌರುತ್ತಿಯಾಗಿಯೇ ಉಳಿಯಿತು.

ಹಾಗೆಂದ ಮಾತ್ರಕ್ಕೆ ಸುದ್ದಿ ಮನೆಯ ನಂಟು ತಪ್ಪಿತು ಎಂದಲ್ಲ. ಅಂದಿನಿಂದ ಇಂದಿನವರೆಗೂ ಅಲ್ಲೊಂದು ಇಲ್ಲೊಂದು ಪತ್ರಿಕೆಗೆ ಕವನ, ಸಣ್ಣ ಲೇಖನ ಬರೆಯಲು ಶುರುವಿಟ್ಟುಕೊಂಡೆ. ಪತ್ರಿಕಾ ರಂಗದ ಹಿರಿಯ ಪರಿಚಯಸ್ಥರು “ತುಂಬಾ ಚನ್ನಾಗಿ ಬರಿತೀಯ ಕಾಲಂ ಕೊಟ್ಟ್ರೆ ಬರಿತೀಯ” ಅಂದಾಗ ಭಯ ಬಿದ್ದು ಎದ್ದು ಓಡಿಹೋಗುತ್ತಿದ್ದೆ. ಕಾರಣ ಇಷ್ಟೇ ನಾನು ಪರಿಪೂರ್ಣ ಬರಹಗಾರನಲ್ಲ. ಪತ್ರಿಕೆಗಳಿಗೋ, ಅಂಕಣಗಳಿಗೊ ಚಕ್ಕಲುಬಕ್ಕಲು ಹಾಕಿ ಕೂತು ಬರೆಯುವ ಕಸುವು ನನ್ನಲ್ಲಿಲ್ಲ. ಬರವಣಿಗೆಯ ಮಟ್ಟಿಗೆ ನಾನು ಶುದ್ಧ ತಾರಾಡಿ.

“ಬಿಟ್ಟೆನೆಂದರೂ ಬಿಡದಿ ಮಾಯೆ” ಎಂಬಂತೆ ಮತ್ತೆ ಸುದ್ದಿ ಮನೆ ನನ್ನ ಜೀವನದಲ್ಲಿಸದ್ದು ಮಾಡುತ್ತಲಿದೆ.ಬರೆಯದೇ ಇದ್ದರೂ ಭಾವಿಸದೇ ಇರಲಾರೆ ಎಂಬುವಷ್ಟರ ಮಟ್ಟಿಗೆ ಕವಿತೆ ನನ್ನಾವರಿಸಲು ಕಾರಣರು ನೀವೆಲ್ಲ. ಸಮಷ್ಟಿ ಚಿಂತನೆ ಅದಕ್ಕೆ ಬೇಕಾದ ಸ್ಪಂದನೆ, ಅಗಾಧ ಅಧ್ಯಯನಶೀಲತೆ, ಬರವಣಿಗೆಯಲ್ಲಿ ಅಚ್ಚುಕಟ್ಟುತನ, ಕಾವ್ಯದ ಮಟ್ಟಿಗೆ ವೈಯಕ್ತಿಕ ಬದ್ಧತೆಯಲ್ಲಿ ಎಳ್ಳಷ್ಟೂ ದೋಷವಿಲ್ಲದೆ ಇರುವಂತೆ ಬರೆಯಬಲ್ಲೆನಾದರೆ ಮಾತ್ರ ನಾನು ಬದುಕಿದಂತೆ. ಮತ್ತೆ ಸುದ್ದಿ ಮನೆಯ ಕದ ತಟ್ಟಿದರೂ ಆಶ್ಚರ್ಯವಿಲ್ಲ. ಹಾಗಾಗಿ ಮತ್ತೆ ಮತ್ತೆ ಬದುಕುವ ಬರಯುವ ಪ್ರಯತ್ನಶೀಲನಿಗೆ ನಿಮ್ಮ ಹಾರೈಕೆ ಇರಲಿ.

ಮೇಲೋಗರ: _ಸುದ್ದಿ ಮನೆಯ ಮಾತು ಬಂದಾಗಲೆಲ್ಲ ವೈಎನ್ಕೆ ಯವರನ್ನು ನೆನಪು ಮಾಡಿಕೊಳ್ಳುವ ಪತ್ರಕರ್ತ ಮಿತ್ರ ರವಿ ಕುಮಾರ್ ಒಂದು ಜೋಕ್ ನೆನಪಿಸುತ್ತಿರುತ್ತಾರೆ. ಅದನ್ನು ನಿಮ್ಮೊಂದಿಗೆ ಅದೇಕೋ ಹಂಚಿಕ್ಕೊಳಬೇಕೆನಿಸಿದೆ. ಎಲ್ಲ ಮರೆತು ಸುಮ್ಮನೆ ನಕ್ಕು ಹಗುರಾಗಿ_

_ಸುದ್ದಿಮನೆಯಲ್ಲಿ ಆಗ ವೈ ಎನ್ಕೆ ಇದ್ದ ಕಾಲ. ಲೇಡಿ ಟೈಪಿಸ್ಟು ಒಬ್ಬರು ‘ಬ್ರಾಹ್ಮಣ’ ಪದವನ್ನು ‘ಭ್ರಾಹ್ಮಣ’ ಎಂದು ಟೈಪಿಸಿದ್ದರು. ಅದನ್ನು ಗಮನಿಸಿದ ವೈ ಎನ್ಕೆ ಹೇಳಿದ್ದು_ :

” _ದೊಡ್ಡ ಭ್ರಾ ತೆಗೆದು ಸಣ್ಣ ಬ್ರಾ ಹಾಕಮ್ಮ_ “

 

✍ರಾಜ್ ಆಚಾರ್ಯ.
(ನೆನಪಿಗೆ ತಳಕು ಹಾಕಿದ್ದ ಬರವಣಿಗೆಯ ಮೆಲಕು)