ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ…… ಜಯಶ್ರೀ. ಜೆ.ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್ ಜೂನ್ 29
ಲಹರಿ ಸಂಗಾತಿ
ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ…
ಜಯಶ್ರೀ.ಜೆ. ಅಬ್ಬಿಗೇರಿ
ನನ್ನ ಪ್ರೀತಿಯ ಹುಡುಗಿ,
ಇನ್ನೇನು ಕನಸು ಕೈಗೂಡಿತು ಬಾಳಿಗೊಂದು ಆಸರೆ ಸಿಕ್ಕಂತಾಯಿತು ಎಂದು ಮನಸ್ಸು ಬಾನಂಗಳದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ಅದೇ ಸಮಯದಲ್ಲಿ ಒಂದೇ ಒಂದು ಸಣ್ಣ ಮುನ್ಸೂಚನೆ ಕೊಡದೆ ನೀನು ಅದೆಲ್ಲಿಗೆ ಹೋದೆ ಗೆಳತಿ? ನಿನ್ನ ಚೆಲುವಾದ ಮೊಗವನ್ನು ನನ್ನ ಬೊಗಸೆಯಲ್ಲಿ ತುಂಬಿಸಿಕೊಳ್ಳಲು ಅರಸುತ್ತಿದ್ದೇನೆ. ಸೂಜಿ ಮಲ್ಲಿಗೆ ಮುಡಿದು ಅಡ್ಡಾಡುವ ಏರು ಯೌವ್ವನದ ಹುಡುಗಿಯರಲ್ಲಿ ನಿನ್ನನ್ನು ಹುಡುಕಿ ಹುಡುಕಿ ಸೋತ ಕಣ್ಣು, ಕಣ್ಣೀರು ಹಾಕುತ್ತಿದೆ. ನಿನ್ನ ಮೋಹಕ ನಗೆಯನ್ನು ಮರೆಯುವದಾದರೂ ಹೇಗೆ? ಗುಳಿ ಬೀಳುವ ನಿನ್ನ ನುಣುಪಾದ ಕೆನ್ನೆಗಳನು ಸ್ಪರ್ಶಿಸುವ ನಿನ್ನ ಮುಂಗುರುಳುಗಳು ಅದೆಷ್ಟು ಪುಣ್ಯ ಮಾಡಿವೆ!. ಸುಳಿದು ಬೀಸುವ ಗಾಳಿಗೆ ಬೆಳ್ಳನೆಯ ಗಲ್ಲದ ಮೇಲೆ ಪದೇ ಪದೇ ಮುತ್ತನ್ನಿಕ್ಕುವಂಥ ಮುಂಗುರುಳುಗಳೇ ನಾನಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ? ನಿನ್ನೆದೆಯ ಮೇಲೆ ವೀಣೆಯಂತೆ ಮೀಟುವ ಹೃದಯ ನಾನಾಗಿದ್ದರೆ ಜೀವದ ಕೊನೆಯುಸಿರಿರುವರೆಗೂ ನಿನ್ನ ಜೊತೆ ಇರಬಹುದತ್ತಲ್ಲವೇ? ನಿನ್ನ ಮುಖ ಮನದಾಳದ ಎಲ್ಲ ಭಾವಗಳನ್ನು ಹೊರ ಸೂಸುವ ಸುಂದರ ಕನ್ನಡಿ. ಆ ಅಂದದ ಮೊಗವೆ ನನ್ನ ಬಾಳಿನ ಸಂತಸಕ್ಕೆ ಮುನ್ನುಡಿ.
ಸಾವಿರಾರು ಸುಂದರ ಲಲನೆಯರು ಮುಖ ಮುಚ್ಚಿಕೊಂಡು ನಿಂತ ಸಾಲಿನಲ್ಲಿ ನಿನ್ನನ್ನು ನಾನು ಗುರುತಿಸಬಲ್ಲೆ. ಅದಕ್ಕೆ ಕಾರಣ ನಿನ್ನ ಮುಗ್ಧತೆಯ ಪ್ರತಿರೂಪ. ನಿನ್ನಂಥ ಮುದ್ದು ಮುಖದ ಮುಗ್ದೆ ಈ ಜಗದಲ್ಲಿ ಇನ್ನೊಬ್ಬಳು ಇರಲಾರಳು ಎಂಬ ಹುಚ್ಚು ವಿಶ್ವಾಸ.
ನನ್ನ ಈ ಪುಟ್ಟ ಹೃದಯಕ್ಕೆ. ನೀನಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದೆ ಕಣೆ. ನೀನಿಲ್ಲದ ಬದುಕು ಅಕ್ಷರಗಳಿಲ್ಲದ ಪುಸ್ತಕದಂತೆ ಅರ್ಥ ಹೀನ. ನಿನಗೆ ಸಾವಿರ ಸಾವಿರ ಸಲ ಹೇಳಿದಿನಿ ನೀನಿಲ್ಲದೇ ನಾನಿಲ್ಲ ನೀನೇ ನನ್ನ ಪ್ರಾಣದ ಉಸಿರು ಅಂತ. ನಿನಗೂ ಗೊತ್ತು ನಿನ್ನ ಹಿಡಿ ಪ್ರೀತಿಗಾಗಿ ನನ್ನ ಹೃದಯ ಸದಾ ಬಡಿದುಕೊಳ್ಳುತ್ತಿದೆ ಅಂತ. ಇಷ್ಟೆಲ್ಲ ಗೊತ್ತಿದ್ದಾಗಲೂ ಅದ್ಹೇಗೆ ನೀನು ಮೌನದ ಪರದೆಯ ಹಿಂದೆ ಸರಿದೆ.?
ರಾತ್ರಿ ಹೊತ್ತೆಲ್ಲ ಒಂದನ್ನೊಂದು ತಬ್ಬಿಕೊಂಡೇ ಮಲಗುವ ಕಣ್ರೆಪ್ಪೆಗಳ ಮೇಲಾಣೆ ಕಣೆ, ನೀನಲ್ಲದೇ ಬೇರೆ ಯಾರೂ ನನ್ನ ಎದೆಯ ಅಂಗಳದಲ್ಲಿ ಕಾಲಿಡಲು ನಾ ಬಿಡುವುದಿಲ್ಲ. ನೀ ಜೊತೆಗಿದ್ದರೆ ಜಗವನ್ನೇ ಗೆಲ್ಲಬಲ್ಲೆ ಎನ್ನುವ ಹುಮ್ಮಸ್ಸು ನನಗೆ. ನೀ ಹೀಗೆ ದೂರ ಸರಿದರೆ ಮನದಲ್ಲಿ ಭಯ ಆತಂಕ ನನ್ನನ್ನು ಬಿಟ್ಟು ದೂರ ಸರಿಯುವುದೇ ಇಲ್ಲ. ನಮ್ಮೀರ್ವರ ಕಣ್ಣುಗಳು ಕಲೆತು ಮನಗಳೆರಡು ಬೆರೆತ ಆ ಸವಿಗಳಿಗೆಯ ಸವಿನೆನಪನು ನಾ ಬೇಡ ಬೇಡವೆಂದರೂ ಮನಸ್ಸು ಹೆಕ್ಕಿ ತಂದು ಕಣ್ಮುಂದೆ ನಿಲ್ಲಿಸುತ್ತಿದೆ. ಈ ಮಧುರ ಯಾತನೆಗೆ ಮದ್ದು ನೀಡುವ ತಾಕತ್ತು ಹುಟ್ಟಿಸಿದ ಆ ದೇವರಿಗೂ ಇಲ್ಲ ಕಣೆ. ನಿನ್ನ ತುಟಿಯಂಚಿನಲ್ಲಿರುವ ಜೇನಿಗೆ ಎಂಥ ಹಳೆಯ ಗಾಯವನ್ನೂ ಮಾಯವಾಗಿಸುವ ತಾಕತ್ತಿದೆ.
ಹೇ! ನನ್ನ ಪ್ರೀತಿಯ ಹುಡುಗಿ, ನೀನು ಕೊಂಚ ಕೈ ಚಾಚಿದರೂ ಸಾಕು ಬದುಕಿನ ಹಾದಿಯುದ್ದಕ್ಕೂ ಹಿಡಿದ ಕೈಯನು ಬಿಡದೇ ನಡೆಯುತ್ತಲೇ ಇರ್ತಿನಿ. ಕತ್ತಲು ತುಂಬಿದ ಇರುಳೆಲ್ಲ ನಿನ್ನೊಂದಿಗೆ ಕಳೆದ ರಸ ನಿಮಿಷಗಳ ಚಾದರ ಹೊದ್ದುಕೊಂಡು ಹೊರಳಾಡುತ್ತೇನೆ. ಹೇಳು ಗೆಳತಿ, ಹೊಸ ಜೀವನದ ಆರಂಭದಲ್ಲೇ ಹೀಗೆ ನಡುರಸ್ತೆಯಲ್ಲಿ ನನ್ನೊಬ್ಬನನ್ನೇ ಬಿಟ್ಟು ಹೋಗುವುದು ಅದೆಷ್ಟು ಸರಿ? ನೀ ನನ್ನ ಬಾಳ ಸಂಗಾತಿ ಆಗುವೆ ಎಂದುಕೊಂಡರೆ ಸಾಕು ಹೃದಯ ಹುಚ್ಚೆದ್ದು ಕುಣಿಯುತ್ತದೆ. ಮನಸ್ಸು ಕಲ್ಯಾಣ ಮಂಟಪದೊಳಗೆ ನನ್ನ ಪಕ್ಕ ಸಿಂಗರಿಸಿಕೊಂಡ ಮದುಮಗಳು ನೀನೇ ಅಂತ ಕನಸು ಕಾಣುತ್ತಿದೆ. ಹಿಂದೊಮ್ಮೆ ಜೊತೆಯಾಗಿ ನಡೆದ ದಾರಿಯುದ್ದಕ್ಕೂ ಮತ್ತೆ ಮತ್ತೆ ನಡೆಯುತ್ತ ಒಲವಿನ ಹೊಸ ಪಲ್ಲವಿ ಹಾಡೋಣ ಬಾ.
ನಿನ್ನ ಆಪ್ತ ಗೆಳತಿ ಮೊನ್ನೆ ಹೂವಿನ ಸಂತೆಯಲ್ಲಿ ಅಚಾನಕ್ಕಾಗಿ ಸಿಕ್ಕಿಳು. ನಾನಿನ್ನೂ ಹೆತ್ತವರ ಮೇಲೆ ಅವಲಂಬಿತನಾಗಿರುವುದಕ್ಕೆ ನೀನು ನನ್ನ ತೊರೆದು ಹೋದೆ ಎಂದು ಕಾರಣ ನುಡಿದಳು. ಸಿಹಿ ಸುದ್ದಿ ಗೆಳತಿ ನಾನೀಗ ಹಿಂದಿನಂತಿಲ್ಲ. ಕೈಲಾಗದು ಎಂದು ಕೈ ಕಟ್ಟಿ ಕುಳಿತಿಲ್ಲ. ಮೈ ಮುರಿದು ದುಡಿಯುತಿರುವೆ. ನಿನ್ನನ್ನಷ್ಟೇ ಅಲ್ಲ ನನ್ನಪ್ಪ ಅವ್ವನನ್ನು ಸಾಕುವ ತಾಕತ್ತು ನನಗಿದೆ. ನಂಗೊತ್ತು ನಾನೇ ನಿನಗೆ ಜೀವನ ಪೂರ್ತಿ ಜೀವದ ಗೆಳೆಯನಾಗಿ ಬೇಕು ಅಂತ. ನನ್ನ ಬಿಟ್ಟು ಬಾಳುವ ಶಕ್ತಿ ನಿನ್ನಲ್ಲೂ ಇಲ್ಲ. ನಾನು ಇದುವರೆಗೂ ಜೀವನದಲ್ಲಿ ಸೋಲೇ ಕಂಡಿರಲಿಲ್ಲ. ನಿನಗೆ ಸೋತಿರುವೆ. ನನ್ನ ಕೈ ಹಿಡಿಯುವ ನೀನು ಗೆದ್ದಿದ್ದಿಯಾ ಕಣೆ.
ಯಾರಿಗೂ ಕಾಣದಂತೆ ಬಂದು ಬಿಡು..ಹೂವಿನ ಸಂತೆಯಲ್ಲಿ ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ ಮತ್ತೆ ಮತ್ತೆ ಒಲವಿನ ಪಲ್ಲವಿ ಹಾಡಲು ನಿನಗಾಗಿ ಕಾದಿರುವೆ.
ಹಟದ ಮೌನವ ಮುರಿದು ಬಂದೇ ಬರ್ತಿಯಾ ಅನ್ನೋ ನಂಬಿಕೆಯಲ್ಲಿ
ಇಂತಿ ನಿನ್ನ ಪ್ರೀತಿಯ ಹುಡುಗ
— ಜಯಶ್ರೀ ಜೆ. ಅಬ್ಬಿಗೇರಿ