ಅಸಲಿಗೆ ಯಾವುದು “ಬಿಟ್ಟಿ” ….. ಹೇಗೆ “ಬಿಟ್ಟಿ”…..?

ಅಸಲಿಗೆ ಯಾವುದು ‘ ಬಿಟ್ಟಿ’….., ಹೇಗೆ  ‘ಬಿಟ್ಟಿ’…….?                                                     : ಹಿರಿಯೂರು ಪ್ರಕಾಶ್

ಪ್ರಸ್ತುತ ಕಾಲಘಟ್ಟದಲ್ಲಿ ” ಬಿಟ್ಟಿ” ಎಂಬ ಪದಪ್ರಯೋಗ ತೀರಾ ಧಾರಾಳವಾಗಿ, ಸಲೀಸಾಗಿ, ಯಾವುದೇ ಮುಜುಗರವಿಲ್ಲದೆಯೇ ಚಾಲ್ತಿಯಲ್ಲಿರುವುದು ಅನೇಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಕಳೆದ ತಿಂಗಳಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರದ ಗ್ಯಾರಂಟೀ ಯೋಜನೆಗಳ ಘೋಷಣೆ ಮತ್ತವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈ‌ “ಬಿಟ್ಟಿ” ಎಂಬ ಪದ ಸಿಕ್ಕಾಪಟ್ಟೆ ಫ಼್ರೀ ಯಾಗಿಯೇ ಬಳಕೆಯಾಗಿ ಈ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸುವಂತಾಗಿದೆ.

ಗ್ಯಾರಂಟೀ ಸ್ಕೀಮುಗಳನ್ನು ವಿರೋಧಿಸುವವರ ಒಟ್ಟಾರೆ ಮನದಿಂಗಿತದಂತೆ ಸರ್ಕಾರ ಅಥವಾ ಯಾವುದೇ ಸಾರ್ವಜನಿಕ ಸಂಸ್ಥೆ ಜನರಿಗೆ ಉಚಿತವಾಗಿ ಕೊಡುವ ಅನೇಕಾನೇಕ ಸೌಲಭ್ಯ ಸವಲತ್ತುಗಳನ್ನು ಬಿಟ್ಟಿ ಎಂದು ವ್ಯಾಖ್ಯಾನಿಸ ಬಹುದು. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಾಗೂ ನಮ್ಮದೇ ಕರುನಾಡಿನಲ್ಲಿ ಆಳ್ವಿಕೆ ಮಾಡಿದ ವಿವಿಧ ಪಕ್ಷಗಳ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಕಲ್ಯಾಣ ರಾಜ್ಯ ತತ್ವದಡಿಯಲ್ಲಿ ಜನಸಮೂಹಕ್ಕೆ ಜಾರಿ ಮಾಡಿದ್ದನ್ನು , ಜನರು ಅದನ್ನು ಅನುಭವಿಸುತ್ತಿರುವುದನ್ನು ಹಾಗೂ ಅವುಗಳನ್ನು ಈಗಲೂ ಮುಂದುವರೆಸುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ಸರ್ಕಾರೀ ಸಂಸ್ಥೆಗಳು, ಧಾರ್ಮಿಕ ದತ್ತಿ ಸಂಸ್ಥೆಗಳು, ಸರ್ಕಾರದ ಅಂಗ ಸಂಸ್ಥೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಹೀಗೆ ಕೆಲವು ಸಂಸ್ಥೆಗಳು ಸಹಾ ಜನೋಪಕಾರಿ ಕೆಲಸವನ್ನು ಮಾಡುತ್ತಾ ಹಲವು ಉಚಿತ ಸೌಲಭ್ಯಗಳನ್ನು‌ ಜನರಿಗಾಗಿ ಜಾರಿಮಾಡುತ್ತಾ ಬಂದಿವೆ. ಈ ಯಾವುದನ್ನೂ “ಬಿಟ್ಟಿ” ಎಂದು ಇಷ್ಟೊಂದು ಹೀನಾಯವಾಗಿ ಸಂಬೋಧಿಸಿದ್ದನ್ನು ಇಲ್ಲಿಯವರೆಗೂ ಕೇಳಿಲ್ಲ ನೋಡಿಲ್ಲ.‌ ಆದರೆ ಪ್ರಸ್ತುತ ಸರ್ಕಾರದ ಐದು ಗ್ಯಾರಂಟೀ ಸ್ಕೀಮುಗಳ ವಿಚಾರದಲ್ಲಿ ಈ ಪದ ಪ್ರಯೋಗ ತಾರಕಕ್ಕೇರಿ ಅದರ ಬಳಕೆಯ ಕುರಿತಂತೆ ಕೊಂಚ ಚಿಂತಿಸುವಂತೆ ಮಾಡಿದೆ.

ನೆನಪಿರಲಿ… ನಾನು ಈ ಅಂಕಣದಲ್ಲಿ ಕೇವಲ “ಬಿಟ್ಟಿ” ಎಂಬ ಅಗ್ಗದ ಪದ ಪ್ರಯೋಗದ ಔಚಿತ್ಯವನ್ನಷ್ಟೇ ಪ್ರಶ್ನೆ ಮಾಡುತ್ತಿದ್ದೇನೆಯೇ ವಿನಃ ಗ್ಯಾರಂಟೀ ಯೋಜನೆಗಳ ಪರ‌-ವಿರೋಧದ ಚರ್ಚೆಯನ್ನಲ್ಲ.‌ ಆ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸುವ.

ಸರ್ಕಾರೀ ಶಾಲೆಗಳಲ್ಲಿ ಕಲಿತ ಬಹುತೇಕ ನಾವು ನೀವೆಲ್ಲಾ ಅತ್ಯಂತ ರಿಯಾಯಿತಿ ದರದ ಶುಲ್ಕ‌ ತುಂಬಿ ಅಥವಾ ನಯಾಪೈಸೆ ಕೊಡದೇ ಒಂದು ಹಂತದವರೆಗೆ ವಿದ್ಯೆ ಕಲಿತೆವು. ಪ್ರಾಥಮಿಕ- ಮಾಧ್ಯಮಿಕ ಹಂತದವರೆಗೆ ಉಚಿತ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಹೀಗೆ ಶಿಕ್ಷಣ‌ ಕಲಿತ ನಮ್ಮನ್ನು ಸರ್ಕಾರಿ ಶಾಲೆಯಲ್ಲಿ ಓದಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ ಅಥವಾ “ಬಿಟ್ಟಿ” ವಿದ್ಯೆ ಕಲಿತ ಶಾಲೆಯಲ್ಲಿ ಓದಿದವರೆಂದು ಕರೆಸಿಕೊಳ್ಳಲ್ಪಡುತ್ತೀರೋ ? ನಾವ್ಯಾರೂ ಅದನ್ನು‌ “ಬಿಟ್ಟಿ ವಿದ್ಯೆ ಕಲಿತ ಶಾಲೆ ” ಎಂದು ಹೇಳಿಕೊಳ್ಳಲಿಲ್ಲ. ಹೌದಾ..?

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಆಸ್ಪತ್ರೆಗಳನ್ನು ಕಟ್ಟಿಸಿ ಉಚಿತವಾಗಿ ಅಥವಾ ಅತ್ಯಂತ ಕಡಿಮೆ‌ ಹಣದಲ್ಲಿ ಚಿಕಿತ್ಸೆ ಹಾಗೂ ಔಷಧಿಗಳನ್ನು ಕೊಡುವ ವ್ಯವಸ್ಥೆ ಮಾಡುತ್ತಿದೆ. ಈ ಸೇವೆಯನ್ನು ” ಬಿಟ್ಟಿ ಚಿಕಿತ್ಸೆ” ಅಥವಾ “ಬಿಟ್ಟಿ ಸೇವೆ” ಯೆಂದು‌ ಯಾವ ರೋಗಿಯೂ ಅಥವಾ ರೋಗಿ ಕಡೆಯವರೂ ಕರೆಯಲಿಲ್ಲ. ಅಲ್ಲವೇ ?

ಅನೇಕ ಅರ್ಹ‌ ಮಕ್ಕಳಿಗೆ ವಿಧ್ಯಾರ್ಥಿಗಳಿಗೆ ಯೂನಿಫ಼ಾರ್ಮ್, ಶೂ, ಸೈಕಲ್ಲು, ಲ್ಯಾಪ್ ಟಾಪ್‌, ಸ್ಕಾಲರ್ ಶಿಪ್ ಮುಂತಾದವುಗಳನ್ನು ವಿತರಿಸುವ ಯೋಜನೆಗಳನ್ನು ಸರ್ಕಾರ ಅನೇಕ ವರ್ಷಗಳಿಂದ ನಡೆಸುತ್ತಾ ಬಂದಿದೆ. ಅವುಗಳನ್ನು “ಬಿಟ್ಟಿ ಭಾಗ್ಯ” ಎಂದು ಯಾವ ವಿಧ್ಯಾರ್ಥಿಯ ತಂದೆ ತಾಯಿಯೂ ಇಲ್ಲಿಯವರೆಗೆ ಕರೆಯಲಿಲ್ಲ. ರೈಟ್…?

ಅನೇಕ ಮಠಗಳಿಗೆ ಸರ್ಕಾರ ಉಚಿತವಾಗಿ ಕೋಟ್ಯಾಂತರ ಹಣವನ್ನು ಧಾರಾಳವಾಗಿಯೇ ಕೊಡುತ್ತಾ ಬಂದಿದೆ. ಆದರೆ ಅದನು ಬಿಟ್ಟಿ ಕೊಡುಗೆ ಎಂದು ಯಾರಾದರೂ ಹೇಳುವ ಧೈರ್ಯ ತೋರಿದ್ದರೇ..? ಇಲ್ಲ ಅಲ್ಲವೇ..?

ನಮ್ಮದೇ ರಾಜ್ಯದಲ್ಲಿನ ಅನೇಕಾನೇಕ ಪುಣ್ಯಕ್ಷೇತ್ರಗಳಲ್ಲಿ ಹಾಗೂ ಕೆಲವು ದೇವಾಲಯಗಳಲ್ಲಿ ದೇವರ ದರ್ಶನವಾದ ಮೇಲೆ ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗುವ ಅನ್ನ ಆಹಾರವನ್ನು ‘ಪ್ರಸಾದ’ ಎಂದು ಕಣ್ಣಿಗೊತ್ತಿಕೊಂಡು ಭಕ್ತಿಯಿಂದ ಸೇವಿಸುತ್ತೇವೆ. ಆದರೆ ಯಾರೂ ಅದನ್ನು “ಬಿಟ್ಟಿ ಊಟ ” ಎನ್ನುವುದಿಲ್ಲ. ನಿಜ ತಾನೇ..?

ನಮ್ಮವೇ ಮಠ ಮಾನ್ಯಗಳಲ್ಲಿ ಉಚಿತವಾಗಿ ಕೊಡಲ್ಪಡುವ ಆಹಾರವನ್ನು ಬಹು ಶ್ರೇಷ್ಠತೆಯಿಂದ ” ಅನ್ನ ದಾಸೋಹ ” ಎನ್ನುತ್ತೇವೆಯೇ ಹೊರತು ‘ಬಿಟ್ಟಿ ಊಟ’ ಎಂದು ಹಂಗಿಸೋಲ್ಲ . ಸರೀನಾ..?

ಕೇಂದ್ರ ಸರ್ಕಾರ ನಮ್ಮ ರೈತರ ಖಾತೆಗೆ ವರ್ಷಕ್ಕೆ ಎರಡುಬಾರಿ ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ಜಮೆ ಮಾಡಿದಾಗ ಅದನ್ನು ಬಿಟ್ಟಿ ಹಣ ಎಂದು ಯಾವ ರೈತನೂ ಹಂಗಿಸಲಿಲ್ಲ , ಯಾವ ಮಾದ್ಯಮದವನೂ‌ ಆ‌ ಬಗ್ಗೆ ಸೊಲ್ಲೆತ್ತಲಿಲ್ಲ . ಕರೆಕ್ಟಾ.?

ಶಾಲಾ ಮಕ್ಕಳಿಗೆ ಅಂತಾನೇ ಕೆಲವು ರಾಜ್ಯಗಳು ಮಧ್ಯಾಹ್ನದ ಊಟದ ಜೊತೆಗೆ ಪೌಷ್ಠಿಕ ಆಹಾರವನ್ನು ಉಚಿತವಾಗಿ ನೀಡುತ್ತಾ ಬಂದಿವೆ. ಅದನ್ನು ‘ಬಿಸಿಯೂಟ’ ಎಂದು ನಮ್ರತೆಯಿಂದ ಕರೆಯುತ್ತೇವೆಯೇ ಹೊರತು ” ಬಿಟ್ಟಿ ಊಟ ” ಎಂದು ಯಾವ ಪೋಷಕರೂ ಕರೆಯಲಾರರು. ಬಿಟ್ಟಿ ಊಟ ತಿಂದೆವು ಎಂದು ಯಾವ ವಿಧ್ಯಾರ್ಥಿಯೂ ಹೇಳನು…! ಗೊತ್ತಾ…?

ಇವೆಲ್ಲಾ‌‌ ಬಿಡಿ , ಸ್ವಲ್ಪ ಲೈಟ್ ಆಗಿ ಹೇಳುವುದಾದರೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಮದುವೆ ಮುಂಜಿ ಮುಂತಾದ ಖಾಸಗೀ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಜನರು ಬಂದು ಉಚಿತವಾಗಿ ಊಟ ಮಾಡಿ ಹೋಗುವುದನ್ನು ಮದುವೆ ಊಟ, ಪಂಕ್ತಿ ಊಟ, ಬೀಗರ ಊಟ ಎನ್ನುತ್ತೇವೆಯೇ ಹೊರತು ಉಚಿತವಾಗಿ ಊಟ ಸಿಕ್ಕಿದ ಮಾತ್ರಕ್ಕೇ ಅದನ್ನು ಬೇಕಾಬಿಟ್ಟಿಯಾಗಿ ” ಬಿಟ್ಟಿ ಊಟ” ಎನ್ನುವುದಿಲ್ಲ.

ಆರ್ಥಿಕ ಉದಾರೀಕರಣದ ನಂತರ ಮಾಹಿತಿ ತಂತ್ರಜ್ಞಾನ ದ ಅನೇಕಾನೇಕ ಉದ್ದಿಮೆಗಳನ್ನು ಉತ್ತೇಜಿಸುವ ಸಲುವಾಗಿ ಈ ದೇಶದಲ್ಲಿ ಸಾವಿರಾರು ಕಂಪನಿಗಳಿಗೆ ಭೂಮಿ, ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಯಲ್ಲಿ ಒದಗಿಸಿದ್ದಾಗ ಅದನ್ನು ಯಾರೂ ಬಿಟ್ಟಿ ಎನ್ನಲಿಲ್ಲ. ಅಲ್ಲದೇ ಅಂದಿನಿಂದ ಇಂದಿನವರೆಗೂ ಆದಾಯ ತೆರಿಗೆ, ಆಮದು ರಫ಼್ತು ತೆರಿಗೆ, ಲಾಭಾಂಶದ ಮೇಲಿನ ತೆರಿಗೆ, ಕಾರ್ಪೊರೇಟ್ ಹಾಗೂ ಸಂಪತ್ತಿನ‌ ತೆರಿಗೆ ಹೀಗೆ ಇನ್ನೂ ಮುಂತಾದ ಶುಲ್ಕಗಳೂ ಸೇರಿದಂತೆ ಸರ್ಕಾರಕ್ಕೆ ಪಾವತಿಯಾಗಬೇಕಾದ ಲಕ್ಷಾಂತರ ಕೋಟಿ ತೆರಿಗೆ ಹಣವನ್ನು ಧಾರಾಳವಾಗಿ ಉದ್ಯಮಿಗಳಿಗೆ ಮನ್ನಾ ಮಾಡಿದ್ದಾರೆ . ಅದರಲ್ಲೂ ವಿಶೇಷ ಆರ್ಥಿಕ ವಲಯ ( Special Economic Zone ) ದಲ್ಲಿ ಸ್ಥಾಪನೆಯಾಗುವ ಉದ್ದಿಮೆಗಳಿಗೆ ಕೊಟ್ಟಿರುವ ಸವಲತ್ತುಗಳನ್ನು ನೋಡಿದರೆ ಮೂರ್ಛೆ ಹೋಗುವುದು ಗ್ಯಾರಂಟೀ. ಉದ್ದಿಮೆಗಳನ್ನು ಉತ್ತೇಜಿಸಲೆಂದೇ ಕೊಟ್ಟಿರುವ ತೆರಿಗೆ ರಿಯಾಯಿತಿ/ ವಿನಾಯಿತಿಯನ್ನು ಲೆಕ್ಕ ಹಾಕಿದರೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟೀ ಸ್ಕೀಮುಗಳನ್ನು ಇಡೀ ದೇಶಕ್ಕೇ ಅನ್ವಯಿಸುವಷ್ಟು ಆರ್ಥಿಕ ಸಂಪತ್ತು ಉಳಿತಾಯವಾಗಬಹುದೇನೋ.?

ಉದ್ದಿಮೆಗಳನ್ನು ಉತ್ತೇಜಿಸುವ ಸಲುವಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಉಚಿತವಾಗಿ ಕೊಟ್ಟ‌ ಭೂಮಿ‌, ವಿದ್ಯುತ್, ನೀರು ಇವುಗಳನ್ನು ಯಾರೂ ಬಿಟ್ಟಿ ಎನ್ನಲಿಲ್ಲ ಅಥವಾ ತೆರಿಗೆ ವಿನಾಯಿತಿ ಕೊಟ್ಟ ಲಕ್ಷಾಂತರ ಕೋಟಿ ಹಣವನ್ನೂ ಬಿಟ್ಟಿ ಎನ್ನಲೂ ಇಲ್ಲ. ಹೌದೋ ಅಲ್ಲವೋ ಯೋಚಿಸಿ..?

ಅಫ಼್ಘಾನಿಸ್ತಾನ, ಭೂತಾನ್, ಮಾಲ್ಡೀವ್ಸ್ ಮುಂತಾದ ಅಕ್ಕ ಪಕ್ಕದ ದಕ್ಷಿಣ ಏಷ್ಯಾದ ದೇಶಗಳ ಆರ್ಥಿಕ ಬಲವರ್ಧನೆಗೆ ಹಾಗೂ ನಮ್ಮ ದೇಶದ ವರ್ಚಸ್ಸು ವೃದ್ದಿಗೆ ಸತತವಾಗಿ ಭಾರತ ನೀಡಿರುವ ಸಾವಿರಾರು ಕೋಟಿ ಹಣದ ನೆರವನ್ನು ಯಾವೊಬ್ಬ ಮಾದ್ಯಮದವನಾಗಲೀ, ಆರ್ಥಿಕ‌ ನೀತಿಜ್ಞನಾಗಲೀ ಬಿಟ್ಟಿ ಎನ್ನಲಿಲ್ಲ…..!

ಹೀಗೆ ನೂರಾರು ಸರ್ಕಾರೀ ಯೋಜನೆಗಳು, ಲಕ್ಷ ಲಕ್ಷ ಕೋಟಿಗಳ ಉಚಿತ ಕಾರ್ಯಕ್ರಮಗಳು, ದಾನ ಧರ್ಮಗಳು, ತೆರಿಗೆ ವಿನಾಯಿತಿಗಳು, ಸಾಲ ಮನ್ನಾಗಳು, ತೆರಿಗೆ ಮನ್ನಾಗಳು, ಲಕ್ಷಾಂತರ ಫಲಾನುಭವಿಗಳು,….. ಎಲ್ಲವೂ- ಎಲ್ಲರೂ ಸತತವಾಗಿ ಸರ್ಕಾರದಿಂದ ಅನುಭವಿಸುತ್ತಲೇ ಬಂದಿದ್ದರೂ ಅದಾವುದನ್ನು‌ ಬಿಟ್ಟಿ ಎನ್ನಲು ಬಾರದ ಅವೇ ನಾಲಿಗೆಗಳು ಇಂದು ಕರ್ನಾಟಕದ ನಾರೀ ಶಕ್ತಿ, ವಿಧ್ಯಾರ್ಥಿಶಕ್ತಿಯ ಸಬಲೀಕರಣಕ್ಕಾಗಿ ಜಾರಿಗೊಳಿಸಲಾಗುತ್ತಿರುವ ಗ್ಯಾರಂಟೀ ಸ್ಕೀಮುಗಳನ್ನು ಮಾತ್ರ ಬಿಟ್ಟಿ ಎಂದು‌ ಹಿಯ್ಯಾಳಿಸಿ, ಗಹಗಹಿಸಿ ಅಸೂಯೆಯಿಂದ ಉರಿದುರಿದು ಬೀಳುತ್ತಿರುವುದರ ಹಿಂದೆ ಬಿಟ್ಟಿ ಕುತಂತ್ರವಿಲ್ಲವೆಂದು ಹೇಗೆ ನಂಬುವುದು ?

ಯೋಚಿಸಬೇಕಾದ ವಿಚಾರವಲ್ಲವೇ.?

** ಮರೆಯುವ ಮುನ್ನ **

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿಸಲ್ಪಟ್ಟ ಯಾವುದೇ ಸರ್ಕಾರ ನಡೆಯುವುದು ಜನರ ತೆರಿಗೆ ಹಣದಿಂದಲೇ ಹೊರತು ಆಳುವವರ ಜೇಬಿನಲ್ಲಿರುವ ದುಡ್ಡಿನಿಂದಾಗಲೀ ಅಥವಾ ಅವರ ಸ್ವಂತ ಆಸ್ತಿ -ಸಂಪತ್ತಿನಿಂದಾಗಲೀ ಅಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆ ” ಬಿಟ್ಟಿ” ಪದ‌ಬಳಕೆ ಮಾಡುವ ಮಹಾನುಭಾವರಿಗೆ ಇರುವುದು ಅವಶ್ಯಕ. ಈ ನಾಡಿನ‌ ಕಟ್ಟ ಕಡೆಯ ವ್ಯಕ್ತಿ ಕೂಡಾ ಒಂದಲ್ಲಾ ಒಂದು ರೂಪದಲ್ಲಿ ಸರ್ಕಾರಕ್ಕೆ ತನ್ನ ಇತಿ ಮಿತಿ ಹಾಗೂ ಆರ್ಥಿಕ ಯೋಗ್ಯತೆಗನುಸಾರವಾಗಿ ಸರ್ಕಾರಕ್ಕೆ ಪರೋಕ್ಷವಾಗಿ ತೆರಿಗೆ ಕಟ್ಟುತ್ತಲೇ ಬಂದಿದ್ದಾನೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಯಾವುದೇ ರೂಪದ ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ.

“ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬಂತೆ ಜನರ ತೆರಿಗೆ ಹಣವನ್ನು ಜನರಿಗಾಗಿಯೇ ಖರ್ಚು ಮಾಡಬೇಕಾಗಿರುವುದು ಕಲ್ಯಾಣ ರಾಜ್ಯಗಳ ಮೂಲಭೂತ ಕರ್ತವ್ಯ ಹಾಗೂ ಜವಾಬ್ದಾರಿ. ಅದನ್ನೇ ಈಗಿನ ಸರ್ಕಾರ ಮಾಡುತ್ತಿರುವುದು.‌ ಅವರೇನೂ ಬಿಟ್ಟಿ ಕೊಡುತ್ತಿಲ್ಲ. ನಮ್ಮ ತೆರಿಗೆ ಹಣದ ಪಾಲಿನಿಂದ ನಮ್ಮ ಜನಸಮುದಾಯಕ್ಕೆ ಸವಲತ್ತು ಕೊಡುತ್ತಿದ್ದಾರೆಂದ ಮೇಲೆ‌ ಅದನ್ನು‌ ಬಿಟ್ಟಿ ಎನ್ನುವುದು ಹೇಗೆ ಸರಿ ? ಈ ಯೋಜನೆಗಳು ಜನಪ್ರಿಯ ಹಾಗೂ ವೆಚ್ಚದಾಯಕ ವಾಗಿದ್ದಿರಬಹುದು. ಅದನ್ನು ಚರ್ಚಿಸುವ ಬೇರೆಯದ್ದೇ ಆದ ಕ್ರಮಬದ್ಧ ವಿಧಾನಗಳಿವೆ , ಪ್ರಶ್ನಿಸುವ ಕ್ರಮಗಳಿವೆ. ಆದರೆ ಬಿಟ್ಟಿ ಎಂದು ಆ ಸೌಲಭ್ಯಗಳನ್ನು ಅನುಭವಿಸುವವರನ್ನು ಹಂಗಿಸುವ ಹಿಯ್ಯಾಳಿಸುವ ಮನೋಭಾವ ತರವೂ ಅಲ್ಲ…ಸಂಸ್ಕಾರವೂ ಅಲ್ಲ.

ಲಾಸ್ಟ್ ಪಂಚ್…

ಸಾಧ್ಯವಾದರೆ ಮತ್ತೊಬ್ಬರಿಗೆ ಸಹಾಯ ಮಾಡಿ, ಅದು ಸಂಸ್ಕಾರ. ಆದರೆ ಮತ್ತೊಬ್ಬರ ಹಸಿವು, ಅಸಹಾಯಕತೆ, ಅನಕ್ಷರತೆ, ಅಗತ್ಯತೆಗಳ ಬಗೆಗೆ ಹಂಗಿಸಬೇಡಿ, ಹಿಯ್ಯಾಳಿಸಬೇಡಿ….. ಏಕೆಂದರೆ ಅದು ವಿಕಾರ.!

ಪ್ರೀತಿಯಿಂದ….

         ಹಿರಿಯೂರು ಪ್ರಕಾಶ್.