ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸಿದ್ದೇನೆ : ನಿಸರ್ಗ ನಾರಾಯಣಸ್ವಾಮಿ
ವಿಜಯ ದರ್ಣಣ ನ್ಯೂಸ್… ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಜಕೀಯದಲ್ಲಿ ಸೋಲು – ಗೆಲುವು ಸಹಜ, ಈ ಸೋಲನ್ನು ನಾನು ನಿರೀಕ್ಷಿಸಿರಲಿಲ್ಲ, ಪಕ್ಷದ ಮುಖಂಡರು ಕಾರ್ಯಕರ್ತರು ಯಾರನ್ನು ನಾನು ದೂಷಣೆ ಮಾಡಲ್ಲ , ಇದನ್ನು ನನ್ನ ಸ್ವಯಂಕೃತ ಅಪರಾಧ ಎಂದು ನಾನೇ ಸ್ವೀಕರಿಸುತ್ತೇನೆ, ನನ್ನ ಕೊನೆ ಉಸಿರು ಇರುವವರೆಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಸೇವೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಹೇಳಿದರು.
ಅವರು ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಗೊಣೂರು ಗೇಟ್ ಬಳಿ ಇರುವ ಪಟೇಲ್ ಪಾರ್ಕ್ ನಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ನಾನು ಶಾಸಕನಾಗಿದ್ದಾಗ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ, ಧಾರ್ಮಿಕ ಕಾರ್ಯಕ್ರಮಗಳಿಗೂ ಸಹಕಾರ ನೀಡಿದ್ದೇನೆ. ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಕೆಲಸಗಳ ಬಗ್ಗೆ ನನಗೆ ಸಂಪೂರ್ಣ ಸಂತೃಪ್ತಿ ಇದೆ . ಮುಂದಿನ ದಿನಗಳಲ್ಲಿಯೂ ಕ್ಷೇತ್ರದಲ್ಲಿ ಜನಸೇವೆಗೆ ಮತ್ತು ಜೆಡಿಎಸ್ ಪಕ್ಷದ ಸಂಘಟನೆಗೆ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ನನಗೆ ಮತ ನೀಡಿದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರ ದೇವರುಗಳಿಗೂ ಪಕ್ಷದ ಎಲ್ಲಾ ಮುಖಂಡರಿಗೂ, ಕಾರ್ಯಕರ್ತರಿಗೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಸಹ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ನಾನು ಮಾನಸಿಕವಾಗಿ ಇನ್ನು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ , ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರ ಆಗಲಿ ಯಾವುದೇ ವೇದಿಕೆ ಕಾರ್ಯಕ್ರಮಕ್ಕೆ ಸ್ವಲ್ಪ ದಿನಗಳ ಕಾಲ ನನ್ನನ್ನು ಕರೆಯಬೇಡಿ ಯಾರು ನನಗೆ ಫೋನ್ ಮಾಡಬೇಡಿ, ಸ್ವಲ್ಪ ದಿನಗಳ ಕಾಲ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ. ಮುಂದಿನ ದಿನಗಳಲ್ಲಿ ನಾನು ನಿಮ್ಮೊಂದಿಗೆ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಕಟ್ಟವ ಕೆಲಸ ಮಾಡುತ್ತೇನೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಭಾವುಕರಾದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಪಾಳ್ಯದ ಬಿ ಮನೆಗೌಡ ಮಾತನಾಡಿ ಹೆಚ್ ಡಿ ಕುಮಾರಸ್ವಾಮಿ ಅವರು ಪಟ್ಟ ಶ್ರಮ, ನೀಡಿದ ಜನತಾ ಜಲಧಾರೆ, ಪಂಚರತ್ನ ಯೋಜನೆಗಳನ್ನು ಮತದಾರರು ಸ್ವೀಕರಿಸಲಿಲ್ಲ . ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯ ನಾನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಮತದಾರರು ಕೊಟ್ಟಂತಹ ತೀರ್ಪನ್ನು ಧೈರ್ಯದಿಂದ ಸವಾಲಾಗಿ ಸ್ವೀಕಾರ ಮಾಡಿದ್ದೇನೆ. ಹಾಗಾಗಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಈ ಸಾಲಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಧೃತಿಗೆಡದೆ ಜೆಡಿಎಸ್ ಪಕ್ಷ ಸಂಘಟನೆ ಮಾಡೋಣ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್ ಮುನೇಗೌಡ ಮಾತನಾಡಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾವು ಈ ಬಾರಿ ಸೋತಿದ್ದೇವೆ ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಈ ಫಲಿತಾಂಶ ಪಕ್ಷ ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ನಾವು ಎಲ್ಲಿ ಎಡವಿದ್ದೇವೋ ಅಲ್ಲೇ ಪುಟಿದೇಳಬೇಕು, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಶಕ್ತಿಯನ್ನು ಸಾಬೀತು ಮಾಡಿಕೊಂಡು ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳೋಣ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಅವರು ಹೇಳಿದರು.
ಸಭೆ ಆರಂಭದಲ್ಲಿ ಮಾತಾನಾಡಿದ ಪಕ್ಷದ ಮುಖಂಡರು, ಕಾರ್ಯಕರ್ತರು ಮಾತನಾಡಿ ಜಾತ್ಯತೀತ ಜನತಾದಳ ಪಕ್ಷ ಪ್ರಾದೇಶಿಕ ಪಕ್ಷ, ಕಾರ್ಯಕರ್ತರ ಪಕ್ಷ,ರೈತರ ಪಕ್ಷ, ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿದಂತಹ ಕೆಲವರು ಮತ್ತು ನಮ್ಮಲ್ಲಿರುವ ಕೆಲವು ಮುಖಂಡರ ಕುತಂತ್ರದಿಂದ ನಾವು ಈ ಬಾರಿ ಸೋತಿದ್ದೇವೆ. ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಇದೆ ಹಾಗಾಗಿ ನೀವು ಒಂದು ಸೋಲಿನಿಂದ ಎದೆಗುಂದಬೇಡಿ ನಾವೆಲ್ಲರೂ ನಿಮ್ಮೊಂದಿಗೆ ಸದಾ ಇದ್ದೇವೆ ಎಂದು ನಿಸರ್ಗ ನಾರಾಯಣಸ್ವಾಮಿ ಅವರಿಗೆ ಧೈರ್ಯ ತುಂಬಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು, ಎಲ್ಲಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.