ಮೇ 27 ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ.
ಇಂದು ಮೇ 27.
ಇಂದಿನ ದಿನ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ.
ಮಂಜಬೈದ್ಯ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿ 186 ವರ್ಷಗಳಾದವು. ಮಂಜಬೈದ್ಯನ ನೆನಪಿಗೆ ಒಂದು ರಸ್ತೆ, ಒಂದು ಪ್ರತಿಮೆ ಬಿಡಿ, ಒಂದು ಕಂಬವೂ ಇಲ್ಲ.
ಮೆಚ್ಚಲೇಬೇಕು ನಮ್ಮ ಸರಕಾರಗಳನ್ನು.
ಈ ಮಂಜಬೈದ್ಯ ಯಾರು ? ಇಲ್ಲಿದೆ ಓದಿ.
ಕಲ್ಯಾಣಪ್ಪನ ಕಾಟುಕಾಯಿ ಎಂದು ವಾಡಿಕೆಯಲ್ಲಿ ಕರೆಯಲಾಗುವ ದಕ್ಷಿಣಕನ್ನಡದ ರೈತ ಬಂಡಾಯ ನಡೆದದ್ದು 1837 ರಲ್ಲಿ, ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಪ್ಪತ್ತು ವರ್ಷಗಳಿಗೂ ಮುನ್ನ.
ಬ್ರಿಟಿಷರು ಹೇರಿದ ಅಧಿಕ ಕಂದಾಯ,ಕಂದಾಯವನ್ನು ಹಣದ ರೂಪದಲ್ಲೇ ಕೊಡಬೇಕೆಂಬ ಆದೇಶ, ಬೆಳೆ ತೆರಿಗೆ ಈ ಬಂಡಾಯಕ್ಕೆ ಕಾರಣವಾಗಿತ್ತು.
ಈ ಬಂಡಾಯದ ನಾಯಕರಲ್ಲೊಬ್ಬ ಕೆದಂಬಾಡಿ ರಾಮಗೌಡ.
ಈ ಹೊತ್ತಿನಲ್ಲಿ ಇದೇ ಸಂಗ್ರಾಮದಲ್ಲಿ ಉಪ್ಪಿನಂಗಡಿಯ ಮಂಜ ಬೈದ್ಯ ಅಗ್ರಣಿಯಾಗಿದ್ದ.
ಇಂಗ್ಲಿಷ್ ಭಾಷೆ ಗೊತ್ತಿದ್ದ ಮಂಜ ಬೈದ್ಯ ಉಪ್ಪಿನಂಗಡಿಯಲ್ಲಿ ಖಜಾನೆ ಗುಮಾಸ್ತನಾಗಿದ್ದ. ಕಲ್ಯಾಣಪ್ಪನ ಸೈನ್ಯ ಬಂದ ಸುದ್ದಿ ಕೇಳಿದವನೇ ಉಪ್ಪಿನಂಗಡಿ ತಾಲೂಕು ಕಛೇರಿಯಲ್ಲಿದ್ದವರನ್ನೆಲ್ಲ ಬಂಧಿಸಿದ. ಖಜಾನೆಯ ಬೀಗ ಒಡೆದ. ಅಲ್ಲಿದ್ದ ಸೊತ್ತನ್ನು ಬಾಚಿ, ಸುಮಾರು ಐವತ್ತು ಮಂದಿ ದೇಶಭಕ್ತ ಯುವಕರೊಂದಿಗೆ ಪುತ್ತೂರಿಗೆ ಬಂದು ಕಲ್ಯಾಣಪ್ಪನ ಸೈನ್ಯ ಸೇರಿದ. ತಾನು ತಂದಿದ್ದ ಕಾಣಿಕೆಯನ್ನು ಕಲ್ಯಾಣ ಸ್ವಾಮಿಗೆ ಕೊಟ್ಟ. ಅಲ್ಲಿಯ ತನಕ ದಂಡಿನ ಉಸ್ತುವಾರಿ ರಾಮಗೌಡನದ್ದೇ ಆಗಿತ್ತು. ಯಾವಾಗ ಇಂಗ್ಲೀಷ್ ಬಲ್ಲವನೂ, ಕಟ್ಟಾಳುವೂ, ವೀರನೂ ಆದ ಉಪ್ಪಿನಂಗಡಿ ಮಂಜ ಬೈದ್ಯ ಬಂದನೋ ಆತನನ್ನು ಉಪದಂಡ ನಾಯಕನನ್ನಾಗಿ ನೇಮಿಸಲಾಯಿತು. ಅಲ್ಲಿಗೆ ಕಲ್ಯಾಣಪ್ಪನ ದಂಡಿನ ಬಲ ನೂರ್ಮಡಿಯಾಯಿತು.
ರಾಜನ ಪೋಷಾಕಿನಲ್ಲಿ ಕಲ್ಯಾಣಪ್ಪ, ದಂಡನಾಯಕರ ಪೋಷಾಕಿನಲ್ಲಿ ಮಂಜ ಬೈದ್ಯ ಮತ್ತು ರಾಮಗೌಡ ಕುದುರೆ ಏರಿದರು. ದಂಡು ಮುಂದೆ ಸಾಗಿತು.
1837 ಎಪ್ರಿಲ್ 5 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದ ಕ್ರಾಂತಿವೀರರು,ಬ್ರಿಟಿಷ್ ಧ್ವಜ ಇಳಿಸಿ,ಕ್ರಾಂತಿಕಾರಿ ಧ್ವಜಹಾರಿಸಿ, ಭಾರತಮಾತೆಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸಿದರು.
ಹದಿಮೂರು ದಿನಗಳ ಕಾಲ ದಕ್ಷಿಣಕನ್ನಡ ಬ್ರಿಟಿಷ್ ಮುಕ್ತವಾಗಿತ್ತು. ಮುಂದೆ ಈ “ಕೆನರಾ ದಂಗೆ”ಯನ್ನು ಬ್ರಿಟಿಷ್ ಸೇನೆ ಹತ್ತಿಕ್ಕಿತು. ಯುದ್ಧದಲ್ಲಿ ಹಲವರು ಮಡಿದರು.ಹಲವರು ಸೆರೆ ಸಿಕ್ಕರು.
ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನೂ ಇದ್ದ. ಬ್ರಿಟಿಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜ ಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ ಪುಟ್ಟಬಸಪ್ಪ, ನಂದಾವರ ಲಕ್ಷ್ಮಪ್ಪ ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು.
1837 ಮೇ 27 ರಂದು ಮಂಗಳೂರಿನಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಆ ಶವ ಗಲ್ಲುಗಂಬದಲ್ಲೇ ಕೊಳೆತು ಬೀಳುವಂತೆ ನೋಡಿಕೊಳ್ಳಲಾಯಿತು.
ಇತಿಹಾಸದ ಪುಟದಲ್ಲಿ ದಾಖಲಾಗದೇ ಇರುವ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ
ಕುರಿತು ಎಲ್ಲರೂ ತಿಳಿಯಬೇಕು ಸರಕಾರ ಈ ಕುರಿತು ಗಮನ ಹರಿಸಲಿ..